ದೇವನಹಳ್ಳಿ: ಹೈದರಾಬಾದ್‌ಗೆ ಪ್ರಯಾಣಿಸಬೇಕಿದ್ದ ರಾಜ್ಯಪಾಲ  ಥಾವರಚಂದ್ ಗೆಹಲೋಟ್ ಅವರನ್ನು  ಬಿಟ್ಟು ಏರ್‌ ಏಷ್ಯಾ ವಿಮಾನವು ಪ್ರಯಾಣ ಬೆಳೆಸಿದ ಘಟನೆ ಇಲ್ಲಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ವರದಿಯಾಗಿದೆ. ಗುರುವಾರ ಮಧ್ಯಾಹ್ನ 2 ಗಂಟೆಗೆ ಹೊರಡುವ ಏರ್‌ ಏಷ್ಯಾ ವಿಮಾನದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್ ಅವರಿಗೆ ಟಿಕೆಟ್‌ ಬುಕ್‌ ಆಗಿತ್ತು. ಆದರೆ ರಾಜ್ಯಪಾಲರು ವಿಮಾನ ನಿಲ್ದಾಣಕ್ಕೆ ತುಸು ತಡವಾಗಿ ಆಗಮಿಸಿದರು ಎಂಬ ಕಾರಣಕ್ಕೆ ಅವರನ್ನು ಬಿಟ್ಟು ಏರ್‌ ಏಷ್ಯಾ ವಿಮಾನವು ಹಾರಾಟ ನಡೆಸಿದೆ. ಇದಾದ ಬಳಿಕ ಹೈದರಾಬಾದ್‌ಗೆ ತೆರಳಲು ರಾಜ್ಯಪಾಲರು ಮಧ್ಯಾಹ್ನ 3.30ಕ್ಕೆ ಏರ್‌ ಏಷ್ಯಾ ಸಂಸ್ಥೆಗೆ ಸೇರಿದ ಬೇರೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏರ್ ಏಷ್ಯಾ ಸಂಸ್ಥೆ ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರಾಜಭವನದ ವಿಶೇಷ ಕರ್ತವ್ಯಾಧಿಕಾರಿಗಳಿಗೆ ರಾಜ್ಯಪಾಲರು ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಹಿರಿಯ ಅಧಿಕಾರಿಗಳು ಘಟನೆ ಕುರಿತು ಮಾಹಿತಿ ಕೇಳಿದ್ದಾರೆ.