ಬೆಂಗಳೂರು, ಜು.27: ಸಸ್ಯಾಹಾರ ಹಾಗೂ ಮಾಂಸಾಹಾರದ ಅಡುಗೆಗೆ ಒಂದೇ ಚಮಚ ಬಳಸುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೇಳಿಕೆಯನ್ನು ನಟ ಚೇತನ್ ಅಹಿಂಸಾ ಟೀಕಿಸಿದ್ದಾರೆ.ಗುರುವಾರ ಟ್ವೀಟ್ ಮಾಡಿರುವ ಅವರು, ‘ಸುಧಾಮೂರ್ತಿಯವರು ನಮ್ಮ ಬ್ರಾಹ್ಮಣ್ಯ-ಬಂಡವಾಳಶಾಹಿ ಸಮಾಜದಿಂದ ಅತಿಯಾದ ಬಿಲ್ಡಪ್‍ನಿಂದ ಗುರುತಿಸಲ್ಪಟ್ಟ ಮತ್ತು ಅನರ್ಹವಾಗಿ ಗೌರವಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ ಎಂದು ಹೇಳಿದ್ದಾರೆ.  ಅವರು ತನ್ನ ಸೀಮಿತ, ಮಡಿವಂತಿಕೆಯ ಚಿಂತನೆಯನ್ನು ಬಹಿರಂಗಪಡಿಸುವ ಹೇಳಿಕೆಗಳನ್ನು ನಿರಂತರವಾಗಿ ಮಾಡುತ್ತಾರೆ ಎಂದು ಹೇಳಿರುವ ಚೇತನ್, ಸುಧಾ ಮೂರ್ತಿಯವರು ಹೆಚ್ಚು ಮಾತನಾಡಬೇಕು. ಅವರ ಆಸ್ತಿ ಜಗದಗಲ, ತಿಳಿವಳಿಕೆ ಚಮಚದಗಲ ಎಂದು ವ್ಯಂಗ್ಯವಾಡಿದ್ದಾರೆ.  ಇತ್ತೀಚೆಗೆ ಖಾಸಗಿ ಯೂಟ್ಯೂಬ್ ಚಾನೆಲ್‍ನ ಸಂಚಿಕೆಯೊಂದರಲ್ಲಿ ಸುಧಾ ಮೂರ್ತಿ ಕಾಣಿಸಿಕೊಂಡು ತಾವು ಪಾಲಿಸುವ ಆಹಾರ ಕ್ರಮದ ಬಗ್ಗೆ ಮಾತನಾಡುತ್ತಾ, ‘ನಾನೊಬ್ಬಳು ಶುದ್ಧ ಸಸ್ಯಹಾರಿ. ಮೊಟ್ಟೆ ಸಹಿತ ಯಾವುದೇ ಮಾಂಸಾಹಾರ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದಿಲ್ಲ. ಸಸ್ಯಾಹಾರ–ಮಾಂಸಾಹಾರ ಭಕ್ಷ್ಯಗಳಿಗೆ ಒಂದೇ ಚಮಚ ಬಳಸುತ್ತಾರೆಯೇ ಎಂಬ ಆತಂಕ ನನ್ನ ಮನಸ್ಸನ್ನು ತುಂಬಾ ಕಾಡುತ್ತದೆ' ಎಂದು ಹೇಳಿದ್ದರು.  ‘ನಾನು ವಿದೇಶಕ್ಕೆ ಹೋದರೂ ಅಲ್ಲಿ ಸಸ್ಯಾಹಾರಿ ರೆಸ್ಟೋರೆಂಟ್‍ಗಳನ್ನು ಹುಡುಕುತ್ತೇನೆ. ಮನೆ ಊಟವನ್ನು ಹೆಚ್ಚಾಗಿ ಇಷ್ಟ್ಟಪಡುತ್ತೇನೆ. ಪ್ರಯಾಣ ಮಾಡುವಾಗ ಮನೆಯಲ್ಲೇ ತಯಾರಿಸಿದ ಆಹಾರವನ್ನು ಕೊಂಡೊಯ್ಯುತ್ತೇನೆ' ಎಂದು ಸುಧಾ ಮೂರ್ತಿ ತಿಳಿಸಿದ್ದರು.  