ಮಂಗಳೂರು: ಮಂಗಳೂರಿನ ಪಬ್ಬಾಸ್‌ ಕ್ರೀಂ ಪಾರ್ಲರ್‌ನ ಜನಪ್ರಿಯ ಐಸ್‌ಕ್ರೀಂ ಆದ ಗಡ್‌ಬಡ್‌ ವಿಶ್ವದ 100 ಅಪ್ರತಿಮ ಐಸ್‌ಕ್ರೀಮ್‌ಗಳ ಪಟ್ಟಿಯನ್ನು ಸೇರಿದೆ. ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ವೆಬ್‌ಸೈಟ್‌ ʼಟೇಸ್ಟ್ ಅಟ್ಲಾಸ್ʼ ವಿಶ್ವದ 100 ಅತ್ಯಂತ ಅಪ್ರತಿಮ ಐಸ್ ಕ್ರೀಮ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮಂಗಳೂರಿನ ಗಡ್‌ಬಡ್‌ ಸೇರಿದಂತೆ ಭಾರತದ ಒಟ್ಟು ಐದು ಐಸ್‌ಕ್ರೀಮ್‌ಗಳು ಸ್ಥಾನ ಪಡೆದಿದೆ. ಅವುಗಳಲ್ಲಿ ಮೂರು ಐಸ್‌ಕ್ರೀಮ್‌ಗಳು ಮುಂಬೈ ನಗರದ ವಿಶೇಷತೆಗಳಾದರೆ, ಇನ್ನೆರಡು ಬೆಂಗಳೂರು ಹಾಗೂ ಮಂಗಳೂರಿನ ಐಸ್‌ಕ್ರೀಮ್‌ಗಳಾಗಿವೆ. ಮಂಗಳೂರಿನ ಗಡ್‌ಬಡ್ ಪಬ್ಬಾಸ್‌ ಅವರ ಕೊಡುಗೆಯಾಗಿದ್ದು, ವಿವಿಧ ಐಸ್ ಕ್ರೀಮ್ ಗಳು  ಹಾಗೂ ಹಣ್ಣುಗಳು, ಬೀಜಗಳು ಮತ್ತು ಸಿರಪ್ ಗಳ ವಿಶಿಷ್ಟ ಮಿಶ್ರಣವಾಗಿದೆ.ಬೆಂಗಳೂರಿನ ಕಾರ್ನರ್‌ ಹೌಸ್‌ನಲ್ಲಿ ನೀಡಲಾಗುವ ಡೆತ್ ಬೈ ಚಾಕೊಲೇಟ್ ಕರ್ನಾಟಕದಿಂದ ಈ ಪಟ್ಟಿಗೆ ಆಯ್ಕೆಯಾದ ಎರಡನೇ ಐಸ್‌ಕ್ರೀಂ.  ಮುಂಬೈಯ ಮೂರು ಐಸ್‌ಕ್ರೀಮ್‌ಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, K. Rustom & Co ನಲ್ಲಿ ಸಿಗುವ ಮ್ಯಾಂಗೋ ಐಸ್ ಕ್ರೀಮ್ ಸ್ಯಾಂಡ್‌ವಿಚ್,  ಅಪ್ಸರಾ ಐಸ್ ಕ್ರೀಮ್ಸ್ ನಲ್ಲಿ ಲಭಿಸುವ ಪೇರಲ ಐಸ್  ಹಾಗೂ  ನ್ಯಾಚುರಲ್ಸ್ ನ ಟೆಂಡರ್‌ ಕೋಕನಟ್‌ ಐಸ್‌ಕ್ರೀಮ್‌ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ನ್ಯಾಚುರಲ್ಸ್‌ ಟೆಂಡರ್‌ ಕೋಕನಟ್‌ ಕೂಡಾ ಮಂಗಳೂರು ಮೂಲದವರದ್ದೇ ಅನ್ನುವುದು ವಿಶೇಷ.