ಬೆಳಗಾವಿ: ನಗರದ ಕೋಟೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರನ್ನು ಸಂಚಾರ ಪೊಲೀಸ್‌ ಕಾನ್‌ಸ್ಟೆಬಲ್‌ ಕಾಶಿನಾಥ ಈರಗಾರ ರಕ್ಷಿಸಿದ್ದಾರೆ.'ಉತ್ತರ ಸಂಚಾರ ಠಾಣೆಯ ಕಾನ್‌ಸ್ಟೆಬಲ್‌ ಕಾಶಿನಾಥ್ ಈರಗಾರ ಅವರು ಶನಿವಾರ ಎಂದಿನಂತೆ ಅಶೋಕ ವೃತ್ತದಲ್ಲಿ ಸಂಚಾರ ನಿಯಂತ್ರಣ ಮಾಡುವ ಕರ್ತವ್ಯದಲ್ಲಿ ನಿರತರಾಗಿದ್ದರು. ತುಸು ದೂರದಲ್ಲಿ ಮಹಿಳೆಯೊಬ್ಬರು ಕೆರೆಗೆ ಹಾರಿದ್ದು ಗಮನಕ್ಕೆ ಬಂದ ಕೂಡಲೇ ಕಾಶಿನಾಥ್ ಕೂಡ ಕೆರೆಗೆ ಹಾರಿ, ಆಕೆಯನ್ನು ರಕ್ಷಿಸಿದರು. ಸದ್ಯ ಮಹಿಳೆಗೆ ಪ್ರಾಥಮಿಕ ಚಿಕೆತ್ಸೆ ನೀಡಿ ಕರೆದೊಯ್ಯಲಾಗಿದೆ' ಎಂದು ಹೇಳಲಾಗಿದೆ.ಇದೀಗ ಕಾನ್‌ಸ್ಟೆಬಲ್‌ ಕಾಶಿನಾಥ್ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೇರಿ ಹಲವರು ಕಾನ್‌ಸ್ಟೆಬಲ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  