ಬೆಂಗಳೂರು, ಜು.20: ರಾಜಧಾನಿ ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದಡಿ ಐವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಪ್ರಕರಣದ ಐದನೆ ಆರೋಪಿ ಝಾಹೀದ್ ತಬರೇಝ್ ನ ಮನೆಯಲ್ಲಿದ್ದ ನಾಲ್ಕು ಜೀವಂತ ಹ್ಯಾಂಡ್ ಗ್ರೇನೈಡ್‍ಗಳನ್ನು ಜಪ್ತಿ ಮಾಡಿದ್ದಾರೆ.ಗುರುವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ, ‘ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪದಡಿ ಸುಹೇಲ್, ಝಾಹೀದ್, ಮುದಸ್ಸೀರ್, ಫೈಝಲ್ ರಬ್ಬಾನಿ ಹಾಗೂ ಉಮರ್ ಎಂಬುವರನ್ನು ಬುಧವಾರ ಸಿಸಿಬಿ ಪೊಲೀಸರು ಬಂಧಿಸಿ 7 ದೇಶೀಯ ಪಿಸ್ತೂಲ್, 45 ಸಜೀವ ಗುಂಡುಗಳು, 4 ವಾಕಿಟಾಕಿ, 2 ಡ್ರಾಗರ್, ಹಾಗೂ 12 ಮೊಬೈಲ್‍ಗಳನ್ನು ನಿನ್ನೆ ಜಪ್ತಿ ಮಾಡಿಕೊಂಡಿದ್ದರು. ಇದೀಗ ಕೊಡಿಗೆಹಳ್ಳಿಯಲ್ಲಿರುವ ಝಾಹೀದ್ ಮನೆಯಲ್ಲಿ 4 ಜೀವಂತ ಹ್ಯಾಂಡ್ ಗ್ರೇನೈಡ್‍ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.  ಜನಸಂದಣಿ ಇರುವ ಪ್ರದೇಶಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಆರೋಪಿಗಳು, ತಲೆ ಮರೆಸಿಕೊಂಡಿರುವ ಝುನೈದ್‍ನ ಸೂಚನೆ ಮೇರೆಗೆ ಆರೋಪಿಗಳೆಲ್ಲರೂ ಕೃತ್ಯವೆಸಗಲು ಸಿದ್ಧತೆ ನಡೆಸಿದ್ದರು. ವಿದೇಶದಲ್ಲಿರುವ ಜುನೈದ್ ವ್ಯಕ್ತಿಯೋರ್ವನ ಮುಖಾಂತರ ಝಾಹೀದ್‍ಗೆ ಪಾರ್ಸೆಲ್ ಮೂಲಕ ನಾಲ್ಕು ಹ್ಯಾಂಡ್ ಗ್ರೇನೈಡ್ ಕಳುಹಿಸಿಕೊಟ್ಟಿದ್ದ. ಇದನ್ನು ಸುರಕ್ಷಿತವಾಗಿ ಇರಿಸುವಂತೆ ಸೂಚಿಸಿದ್ದ. ಇದರಂತೆ ಮನೆಯ ಕೊಠಡಿಯ ಅಲ್ಮೆರಾದಲ್ಲಿ ಇಟ್ಟು ಲಾಕ್ ಮಾಡಿಕೊಂಡಿದ್ದ ಎಂದು ಶರಣಪ್ಪ ಮಾಹಿತಿ ನೀಡಿದರು.  ಪಾರ್ಸೆಲ್‍ನಲ್ಲಿ ಗ್ರೇನೈಡ್ ಇರುವುದರ ಬಗ್ಗೆ ಝಾಹೀದ್‍ಗೂ ಗೊತ್ತಿರಲಿಲ್ಲ. ಆದರೆ, ವಿದ್ವಂಸಕ ಕೃತ್ಯವೆಸಗಲು ಸಾಧನ-ಸಲಕರಣೆ ಇರುವುದನ್ನು ಮನಗಂಡಿದ್ದ. ಸಿಸಿಬಿ ವಿಚಾರಣೆ ನೀಡಿದ ಮಾಹಿತಿ ಮೇರೆಗೆ ಸಿಸಿಬಿ, ಎಫ್‍ಎಸ್‍ಎಲ್, ಬಾಂಬ್ ನಿಷ್ಕ್ರಿಯದಳ ತಂಡಗಳು ತೆರಳಿ ಪರಿಶೀಲನೆ ನಡೆಸಿ ಖಚಿತಪಡಿಸಿಕೊಂಡ ಬಳಿಕ ಗ್ರೇನೈಡ್‍ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಶರಣಪ್ಪ ವಿವರಿಸಿದರು.  ಬಂಧಿತ ಶಂಕಿತ ಐವರು ಆರೋಪಿಗಳನ್ನು ಏಳು ದಿನಗಳವರೆಗೆ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ‘ಎಷ್ಟು ದಿನಗಳಿಂದ ಸ್ಫೋಟ ಕೃತ್ಯವೆಸಗಲು ಸಂಚು ರೂಪಿಸಿದ್ದರು. ಎಲ್ಲೆಲ್ಲಿ ಸ್ಫೋಟಿಸಲು ಯೋಜನೆ ಮಾಡಿಕೊಂಡಿದ್ದರು’ ಎಂಬುದರ ಬಗ್ಗೆ ಈ ಹಂತದಲ್ಲಿ ಮಾಹಿತಿ ನೀಡಲು ಸಾಧ್ಯವಿಲ್ಲ. ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಶರಣಪ್ಪ ತಿಳಿಸಿದರು.‘ಸಿಸಿಬಿ ಪೊಲೀಸರ ವಿಚಾರಣೆಯಲ್ಲಿ ಬಂಧಿತ ಶಂಕಿತ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ವಶಕ್ಕೆ ಪಡೆದುಕೊಂಡಿದ್ದ 12 ಮೊಬೈಲ್‍ಗಳನ್ನು ಪರಿಶೀಲನೆ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬಂಧಿತ ಶಂಕಿತ ಆರೋಪಿಗಳ ವಿಚಾರಣೆ ಮುಕ್ತಾಯದ ಬಳಿಕ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಕರೆಯಿಸಿ ವಿಚಾರಣೆ ನಡೆಸಲಾಗುತ್ತದೆ. ಪ್ರಕರಣದ ಪ್ರಮುಖ ಹಾಗೂ ಬೆಂಗಳೂರು ಸರಣಿ ಸ್ಫೋಟದ ಆರೋಪಿಯಾಗಿರುವ ಟಿ.ನಝೀರ್‍ನನ್ನು ಬಾಡಿ ವಾರೆಂಟ್ ಮೇರೆಗೆ ವಶಕ್ಕೆ ಪಡೆಯಲಾಗುತ್ತದೆ’  -ಶರಣಪ್ಪ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ  