ಮೈಸೂರು,ಜು.20: ವ್ಹೀಲಿಂಗ್ ಮಾಡುತ್ತಾ ಬೈಕ್ ಒಂದು ಶಿಕ್ಷಕಿಯ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಶಿಕ್ಷಕಿಗೆ ಗಂಭೀರ ಗಾಯಗಳಾಗಿರುವ ಘಟನೆ ಗಾಯತ್ರಿ ಪುರಂ ಚರ್ಚ್ ಬಳಿ ವರದಿಯಾಗಿದೆ.ಈ ಸಂಬಂಧ ಸಿದ್ದಾರ್ಥ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜು. 18ರಂದು ಈ ಘಟನೆ ನಡೆದಿದೆ.  ಶಿಕ್ಷಕಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ  ವೇಳೆ ವ್ಹೀಲಿಂಗ್ ಮಾಡುತ್ತಾ  ಬೈಕಿನಲ್ಲಿ ಬಂದ ಮೂವರು ಯುವಕರು ಶಿಕ್ಷಕಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾರೆ. ಕೆಟಿಎಂ ಬೈಕ್ ನಲ್ಲಿ ಬಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ.ಢಿಕ್ಕಿ ಹೊಡೆದ ಪರಿಣಾಮ ತಲೆಗೆ ಗಾಯವಾಗಿ ರಕ್ತಸ್ರಾವವಾಗಿ ಶಿಕ್ಷಕಿಗೆ ಪ್ರಜ್ಞೆ ತಪ್ಪಿದ್ದು,  ರಕ್ತದ ಮಡುವಿನಲ್ಲಿದ್ದ ಶಿಕ್ಷಕಿಯನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿಕ್ಷಕಿ ತೀವ್ರನಿಗಾ ಘಟಕದಲ್ಲಿ ಸಾವು ಬದುಕಿನ ನಡುವೆ  ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 