ಬೆಂಗಳೂರ: ಸರ್ವರಿಗೂ ಸಮಾನ ನ್ಯಾಯ ದೊರಕಿಸುವಲ್ಲಿ ನ್ಯಾಯಾಂಗದ ಪಾತ್ರ ಬಹುಮುಖ್ಯ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ತಿಳಿಸಿದ್ದಾರೆ.   ಗುರುವಾರ ಹೈಕೋರ್ಟ್‍ನಲ್ಲಿ ಆಯೋಜಿಸಿದ್ದ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟĀಗಾರರ ತ್ಯಾಗ ಬಲಿದಾನವನ್ನು ಇಂದು ನಾವು ಸ್ಮರಿಸಬೇಕು. ಹಾಗೆಯೇ ನಮಗೆ ದೊರೆತ ಸ್ವಾತಂತ್ರ್ಯವು ನಮ್ಮ ಮೇಲಿನ ಜವಾಬ್ದಾರಿ ಹೆಚ್ಚಿಸಿದೆ. ಜನರಿಗೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ನ್ಯಾಯಾಂಗದ ಪಾತ್ರ ಮಹತ್ವದ್ದು ಎಂದು ತಿಳಿಸಿದರು.   ಇಂದು ತ್ವರಿತವಾಗಿ ಜನರಿಗೆ ನ್ಯಾಯ ಕೊಡಿಸುವಲ್ಲಿ ಲೋಕ್ ಅದಾಲತ್, ಮಧ್ಯಸ್ಥಿಕೆ ಮುಂತಾದ ನ್ಯಾಯಾಂಗದ ಕಾರ್ಯಕ್ರಮಗಳು ಯಶಸ್ಸುಗಳಿಸಿದೆ. ತಂತ್ರಜ್ಞಾನದ ಕ್ರಾಂತಿಯಿಂದಾಗಿ ಇ- ಸೇವಾ ಕೇಂದ್ರ ಮತ್ತು  ವರ್ಚುವಲ್ ಕೋರ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಇವು ಹೆಚ್ಚು ಜನಸ್ನೇಹಿಯಾಗಿವೆ. ಮುಂದುವರೆದು ಕಾಗದ ಮುಕ್ತ ನ್ಯಾಯಾಲಯ ಮಾಡುವ ಗುರಿ ಹೊಂದಲಾಗಿದೆ ಎಂದರು.  ರಾಜ್ಯದಲ್ಲಿ ನಡೆಸಲಾಗುತ್ತಿರುವ ಲೋಕ್ ಅದಾಲತ್ ನಲ್ಲಿ ಅತಿಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿದ್ದು, ನ್ಯಾಯಾಲಯದ ಸಮಯ ಉಳಿತಾಯದ ಜೊತೆಗೆ ತ್ವರಿತವಾಗಿ ಜನರಿಗೆ ನ್ಯಾಯ ದೊರಕಿಸಿದಂತಾಗಿದೆ ನ್ಯಾಯಾಲಯದಲ್ಲಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಮುಂಬಡ್ತಿ ನೀಡಲಾಗುತ್ತಿದೆ. ನ್ಯಾಯಾಂಗ ಅಕಾಡೆಮಿ ಹಲವು ಕಾರ್ಯಕ್ರಮ ತರಬೇತಿಗಳನ್ನು ಆಯೋಜಿಸುತ್ತಿದೆ. ನಗರದ ಕಾವೇರಿ ಭವನದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯಕ್ಕೆ ಹೆಚ್ಚುವರಿ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸ್ಥಳಾವಕಾಶ ದೊರೆಯುತ್ತಿದೆ. ರಾಷ್ಟ್ರ ನಿರ್ಮಾಣದಲ್ಲಿ ನ್ಯಾಯಾಂಗದ ಪಾತ್ರ ಹಿರಿದಾಗಿದ್ದು, ಆ ನಿಟ್ಟಿನಲ್ಲಿ ಪರಸ್ಪರ ನಂಬಿಕೆ, ಹೊಸ ಆಲೋಚನೆ ಹಾಗೂ ದೂರದೃಷ್ಟಿಕೋನದಿಂದ ನ್ಯಾಯಾಂಗ ಮುಂದೆ ಸಾಗಬೇಕಿದೆ ಎಂದರು.  ಕಾರ್ಯಕ್ರಮದಲ್ಲಿ ಹೈಕೋರ್ಟ್‍ನ ನ್ಯಾಯಮೂರ್ತಿಗಳು, ಹೆಚ್ಚುವರಿ ಸಾಲಿಸಿಟರ್ ಜನರಲ್, ಅಡ್ವಕೋಟ್ ಜನರಲ್, ವಕೀಲರ ಸಂಘದ ಅಧ್ಯಕ್ಷರು, ಹಿರಿಯ ವಕೀಲರು ಉಪಸ್ಥಿತರಿದ್ದರು  