ಬೆಂಗಳೂರು, ಆ.14: ಈ ಹಿಂದೆ ಮಾಡಿದ್ದ ಎರಡು ಪ್ರತ್ಯೇಕ ನಿಶ್ಚಿತ ಠೇವಣಿಗಳನ್ನು ಹಿಂದಿರುಗಿಸದಿರುವ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಹಾಗೂ ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್ ಬಿ)ಗಳಲ್ಲಿ ಇರಿಸಿರುವ ಎಲ್ಲ ಠೇವಣಿಗಳನ್ನು ಹಿಂಪಡೆಯಲು ರಾಜ್ಯ ಸರಕಾರ ನಿರ್ಧರಿಸಿದೆ. ಅಲ್ಲದೇ ಭವಿಷ್ಯದಲ್ಲಿ ಈ ಎರಡು ಬ್ಯಾಂಕ್ ಗಳಲ್ಲಿ ಯಾವುದೇ ರೀತಿಯ ಠೇವಣಿ ಇಡದಂತೆ, ಹೂಡಿಕೆ ಮಾಡದಂತೆ ಹಣಕಾಸು ಇಲಾಖೆಯ ಮೂಲಕ ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.ಭಾರತೀಯ ಸ್ಪೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಯಾವುದೇ ಶಾಖೆಗಳಲ್ಲಿ   ರಾಜ್ಯ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಮತ್ತಿತರ ಸಂಸ್ಥೆಗಳು ಮಾಡಿರುವ ಎಲ್ಲಾ ರೀತಿಯ ಠೇವಣಿಗಳನ್ನು/ಹೂಡಿಕೆಗಳನ್ನು ತಕ್ಷಣದಿಂದ ಹಿಂಪಡೆಯುವಂತೆ ಹಾಗೂ ಇನ್ನು ಮುಂದೆ ಈ  ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಠೇವಣಿಗಳನ್ನು/ ಹೂಡಿಕೆಗಳನ್ನು ಮಾಡಬಾರದು ಎಂದು ಸುತ್ತೋಲೆಯಲ್ಲಿ ಆದೇಶಿಸಲಾಗಿದೆ.  ತಮ್ಮ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕಚೇರಿಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಮತ್ತಿತರ ಸಂಸ್ಥೆಗಳು ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್ಗಳ ಎಲ್ಲಾ ಶಾಖೆಗಳಲ್ಲಿ ಹೂಡಿರುವ ಠೇವಣಿಗಳನ್ನು ಮತ್ತು ಇತರ ಎಲ್ಲಾ ಖಾತೆಗಳನ್ನು ಮುಕ್ತಾಯಗೊಳಿಸಿ,  ದೃಢೀಕರಣವನ್ನು ಮತ್ತು ಠೇವಣಿಗಳ ಹಾಗೂ ಖಾತೆಗಳ ವಿವರಗಳನ್ನು ಲಗತ್ತಿಸಿದ ನಮೂನೆಯಲ್ಲಿ ಸೆಪ್ಟಂಬರ್ 20 ಒಳಗಾಗಿ ಸರಕಾರದ ಉಪ ಕಾರ್ಯದರ್ಶಿ,ಆಯವ್ಯಯ ಮತ್ತು ಸಂಪನ್ಮೂಲ ಶಾಖೆ, ಆರ್ಥಿಕ ಇಲಾಖೆಗೆ ಸಲ್ಲಿಸುವಂತೆ ಹಣಕಾಸು ಇಲಾಖೆಯನ್ನೂ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರಿಂದ ಅನು ಮೋದಿಸಲ್ಪಟ್ಟ ಈ ಆದೇಶವನ್ನು ಆ.12ರಂದು ಹಣಕಾಸು ಇಲಾಖೆಯ (ಆಯವ್ಯಯ ಮತ್ತು ಸಂಪನ್ಮೂಲ) ಕಾರ್ಯದರ್ಶಿ ಡಾ.ಪಿ.ಸಿ. ಜಾಫರ್ ಹೊರಡಿಸಿದ್ದಾರೆ.  