Photo credit: deccanherald.comಬೆಂಗಳೂರು: ಭಾರತದ ಮಹಾಕಾವ್ಯಗಳು, ವೇದ, ಉಪನಿಷತ್ತುಗಳು ಶೂದ್ರರಿಂದಲೇ ರಚಿತವಾಗಿವೆ. ಖಡ್ಗ ಸಂಸ್ಕಾರದಿಂದ ಶೂದ್ರರು, ರಾಜರೂ ಆಗಿ ಹೋಗಿದ್ದಾರೆ ಎಂದು ಹೈಕೋರ್ಟ್ ನ್ಯಾಯಾದೀಶ ಕೃಷ್ಣ ಎಸ್. ದೀಕ್ಷಿತ್ ಹೇಳಿದ್ದಾರೆ.ಸೋಮವಾರ ನಗರದ ಎನ್‌ಜಿಒ ಹಾಲ್‌ನಲ್ಲಿ ಹೈಕೋರ್ಟ್ ನ ಹಿರಿಯ ವಕೀಲ ವಿ.ತಾರಕರಾಮ್ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ 'ಕಾನೂನು ಮತ್ತು ಧರ್ಮ' ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು, "ವರ್ಣಗಳು ಜಾತಿಗಳಲ್ಲ, ಮನು ಬ್ರಾಹ್ಮಣನಲ್ಲ. ಅದೊಂದು ಹುದ್ದೆ. ಮನುಸ್ಮೃತಿ ಅನೇಕ ಹಿರಿದಾದ ತತ್ವಗಳನ್ನು ಒಳಗೊಂಡಿದೆ" ಎಂದು ಅಭಿಪ್ರಾಯಪಟ್ಟರು.ವಿಶ್ವದ ಬೇರೆಲ್ಲಾ ಧರ್ಮಗಳಿಗಿಂತಲೂ ನಮ್ಮ ಕಾನೂನುಗಳು ರೂಪುಗೊಳ್ಳುವಲ್ಲಿ ಹಿಂದೂಧರ್ಮದ ಹಿರಿಮೆ ಸದಾ ಗಾಢವಾದ ಪಾತ್ರ ವಹಿಸಿದೆ. ಎಲ್ಲ ದೇಶಗಳಲ್ಲಿನ ಕಾನೂನುಗಳೂ ಸ್ಥಳೀಯ ಶಾಸನಗಳು, ಆಚರಣೆ ಮತ್ತು ಪೂರ್ವನಿದರ್ಶನಗಳ ತಹಳಹದಿಯ ಮೇಲೆ ರೂಪುಗೊಳ್ಳುತ್ತಾ ಬಂದಿವೆ. ತಾರತಮ್ಯಗಳಿಲ್ಲದ ವ್ಯವಸ್ಥೆಯೇ ಧರ್ಮ ಎಂದು ಅವರು ತಿಳಿಸಿದರು.ಎಲ್ಲ ಧರ್ಮಗಳಲ್ಲೂ ಕರ್ಮಠರಿದ್ದಾರೆ. ಅವರ ಪ್ರಮಾಣ ಹೆಚ್ಚು ಕಡಿಮೆ ಇದೆ ಅಷ್ಟೇ. ಧರ್ಮ ಭಾವನಾತ್ಮಕ ಅಂಶಗಳನ್ನು ಒಳಗೊಂಡಿದೆ. ಅದಕ್ಕಾಗಿಯೇ ಕಾರ್ಲ್ ಮಾರ್ಕ್ಸ್ ‘ಧರ್ಮ ಅಫೀಮು ಇದ್ದಂತೆ’ ಎಂದು ಹೇಳಿದ್ದಾರೆ. ಯಾವುದೇ ಧರ್ಮವೂ ಟೀಕೆಗೆ ಹೊರತಾಗಿಲ್ಲ. ಯುದ್ದ ಆರಂಭಕ್ಕೂ ಮುನ್ನ ಯುದ್ಧದ ನಿಯಮಗಳನ್ನು ರೂಪಿಸಿಕೊಂಡ ಬಗೆಯನ್ನು ಮಹಾಭಾರತದಲ್ಲಿ ಕಾಣಬಹುದು. ಆದರೆ, ಯುದ್ದ ಮತ್ತು ಪ್ರೀತಿಯಲ್ಲಿ ಎಲ್ಲವೂ ಸಲ್ಲುತ್ತದೆ ಎಂಬ ನೀತಿ ಯುರೋಪಿನದ್ದು ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ, ಆಂಧ್ರಪ್ರದೇಶದ ರಾಜ್ಯಪಾಲ ಎಸ್.ಅಬ್ದುಲ್ ನಜೀರ್, ಹಿರಿಯ ವಕೀಲ ಡಿ.ಎಲ್.ಎನ್.ರಾವ್ ಹಾಗೂ ತಾರಕರಾಮ್ ಸಹೋದರ ನಟರಾಜ್ ಉಪಸ್ಥಿತರಿದ್ದರು.