ಬೆಂಗಳೂರು, ಜುಲೈ 06: ಸಾರಿಗೆ ಇಲಾಖೆ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಚಿವ ಚೆಲುವರಾಯಸ್ವಾಮಿ ಕಾರಣ ಎಂಬ ಕುಮಾರಸ್ವಾಮಿ ಯವರ ಆರೋಪದಲ್ಲಿ ಹುರುಳಿಲ್ಲ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಇಂದು ಮಾಜಿ ಉಪ ಪ್ರಧಾನಮಂತ್ರಿ ಡಾ: ಬಾಬು ಜಗಜೀವನ್ ರಾಂ ಅವರ 37 ನೇ ಪುಣ್ಯಸ್ಮರಣೆಯ ಅಂಗವಾಗಿ ವಿಧಾನ ಸೌಧದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರು ವರ್ಗಾವಣೆಗಳ ಬಗ್ಗೆ ಹತಾಶರಾಗಿದ್ದಾರೆ. ವರ್ಗಾವಣೆ ಮಾಡಲೇಬೇಕಾಗಿರುವುದರಿಂದ ಅದನ್ನು ಸರ್ಕಾರ  ಮಾಡುತ್ತಿದೆ.  ಆ ಕಾರಣಕ್ಕೆ ಧಂಧೆ ನಡೆದಿದೆ, ಲಂಚ ಪಡೆದಿದ್ದಾರೆ ಎನ್ನುವುದು ಸುಳ್ಳು ಆರೋಪ. ಅವರ ಕಾಲದಲ್ಲಿಯೂ  ವರ್ಗಾವಣೆ ಆಗಿದ್ದವು. ಅವರು ದುಡ್ಡು  ಪಡೆದಿದ್ದರೇ? ಎಂದು ಪ್ರಶ್ನಿಸಿದರು.  ಹೊಸ ಸರ್ಕಾರ ಬಂದಿದೆ. ಆಡಳಿತದ ಹಿತದೃಷ್ಟಿಯಿಂದ ವರ್ಗಾವಣೆಯನ್ನು ಮಾಡಬೇಕು. ಮಾರ್ಚ್ , ಏಪ್ರಿಲ್ ನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ವರ್ಗಾವಣೆ ಆಗಿರಲಿಲ್ಲ. ಈಗ ಸಾಮಾನ್ಯ ವರ್ಗಾವಣೆಗಳಾಗುತ್ತಿವೆ ಎಂದರು.   ಮೃತ ಚಾಲಕ ಡೆತ್ ನೋಟಿನಲ್ಲಿ ಸಚಿವ ಚೆಲುವರಾಯಸ್ವಾಮಿಯವರ ಹೆಸರು ಬರೆದಿದ್ದು,  ಸಚಿವರು ರಾಜೀನಾಮೆ ಕೊಡಬೇಕು ಎಂಬ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ಈ ಬಗ್ಗೆ ವಿಚಾರ ಮಾಡುತ್ತೇನೆ. ಅವರ ಪತ್ನಿ ಪಂಚಾಯತಿ ಸದಸ್ಯರು, ಅಧ್ಯಕ್ಷ ರಾಗುವ ಪ್ರಯತ್ನ ಮಾಡುತ್ತಿದ್ದಾರೆ. ಇಲಾಖೆ ವರ್ಗಾವಣೆ ಮಾಡಿದ ಕಾರಣಕ್ಕೆ ಅವರು  ವಿಷ ಕುಡಿದಿದ್ದಾರೆ ಎಂದರು.   ಹೆಚ್.ಡಿ.ಕುಮಾರಸ್ವಾಮಿ ಅವರು ಆಡಿಯೋ ಬಿಡುಗಡೆ ಮಾಡುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಹೆಚ್.ಡಿ.ಕುಮಾರಸ್ವಾಮಿ ಅವರ  ಆರೋಪಗಳು ಹಿಟ್ ಅಂಡ್ ರನ್ ಇದ್ದಂತೆ. ಅವರು ಮಾಡಿರುವ ಯಾವ ಆರೋಪಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆ? ಎಂದು ಪ್ರಶ್ನಿಸಿದರು.   ಯತೀಂದ್ರ ಅವರ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಮನೆ ಮಗ, ಅವರ ಅಣ್ಣ ಸಚಿವರಾಗಿದ್ದರು. ಅವರ ಪತ್ನಿ ಶಾಸಕರು, ಅವರ ತಂದೆ ಪ್ರಧಾನಿಗಳಾಗಿದ್ದವರು, ಅವರ ಅಣ್ಣನ ಮಕ್ಕಳು ಶಾಸಕರಾಗಿದ್ದಾರಲ್ಲ ಅವರನ್ನು ಏನಂತ ಕರೆಯಬೇಕು ಎಂದು ಕೇಳಿದರು.   