ಮೃತ ಕಾನ್ಸ್ಟೆಬಲ್ ಬೆಂಗಳೂರು, ಜು.3: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಚಿಕ್ಕಜಾಲ ಬಳಿಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಕಾರು ಪರಿಶೀಲನೆ ಸಂದರ್ಭದಲ್ಲಿ ಮತ್ತೊಂದು ಕಾರು ಢಿಕ್ಕಿ ಹೊಡೆದು ದೇವನಹಳ್ಳಿ ಠಾಣೆಯ ಕಾನ್‌ಸ್ಟೆಬಲ್ ಸಾವನ್ನಪ್ಪಿದ್ದು, ಇನ್ಸ್ಪೆಕ್ಟರ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.ರವಿವಾರ ರಾತ್ರಿ ಗಸ್ತಿನಲ್ಲಿದ್ದ ದೇವನಹಳ್ಳಿ ಇನ್‌ಸ್ಪೆಕ್ಟರ್ ಧರ್ಮೆಗೌಡ ಮತ್ತು ಜೀಪ್ ಚಾಲನೆ ಮಾಡುತ್ತಿದ್ದ ಕಾನ್‌ಸ್ಟೆಬಲ್ ಸುರೇಶ್, ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಕಾರು ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಇನ್ನೊಂದು ಕಾರು ಢಿಕ್ಕಿಯಾಗಿ ಕಾನ್‌ಸ್ಟೆಬಲ್ ಸುರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಫೋನ್‌ನಲ್ಲಿ ಮಾತನಾಡುತ್ತಾ ಪಕ್ಕದಲ್ಲಿ ನಿಂತಿದ್ದ ಇನ್‌ಸ್ಪೆಕ್ಟರ್ ಧರ್ಮೆಗೌಡ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆನ್ನಲಾಗಿದೆ.ಢಿಕ್ಕಿ ಹೊಡೆದ ಕಾರಿನಲ್ಲಿ ಮೂವರು ಯುವಕರು ಹಾಗೂ ಮೂವರು ಯುವತಿಯರಿದ್ದರು. ರಾತ್ರಿಯೆಲ್ಲ ಪಾರ್ಟಿ ಮಾಡಿಕೊಂಡು ಮುಂಜಾನೆ ನಂದಿ ಬೆಟ್ಟಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಇನ್ನು ಈ ಕಾರು ಚಾಲಕ ಮತ್ತು ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳವಾಗಿವೆ ಎಂದು ತಿಳಿದುಬಂದಿದೆ.