ಮೃತ ವಿದ್ಯಾರ್ಥಿನಿ ಬೆಂಗಳೂರು, ಜು.2: ಪ್ರೀತಿಸುವಂತೆ ಪೀಡಿಸುತ್ತಿದ್ದ ಶಿಕ್ಷಕಿಯ ಮಗನೊಬ್ಬನ ಕಿರುಕುಳಕ್ಕೆ ಮನನೊಂದು ಎಸೆಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಪಾರ್ವತಿಪುರದಲ್ಲಿ ವರದಿಯಾಗಿದೆ. ಸಾರಾ(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದು, ಮಗಳ ಸಾವಿಗೆ ಶಿಕ್ಷಕಿ ಹಾಗೂ ಇತರರು ಕಾರಣ ಎಂದು ಆರೋಪಿಸಿ ಹೊಸಕೋಟೆ ಠಾಣೆಗೆ ಮೃತ ವಿದ್ಯಾರ್ಥಿನಿ ಪೋಷಕರಿಂದ ದೂರು ನೀಡಲಾಗಿದೆ.   ಇನ್ನು ಶಿಕ್ಷಕಿ ಹಾಗೂ ಆಕೆಯ ಮಗನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಹೊಸಕೋಟೆ ಠಾಣೆಯ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.  ಹೊಸಕೋಟೆಯ ಖಾಸಗಿ ಶಾಲೆಯಲ್ಲಿ ಮೃತ ಸಾರಾ ಓದುತ್ತಿದ್ದಳು. ಪ್ರೀತಿ ಮಾಡಲು ಒಪ್ಪದ ಕಾರಣ ಶಿಕ್ಷಕಿಯ ಮಗನಿಂದ ಪ್ರೀತಿಸುವಂತೆ ಕಿರುಕುಳ ನೀಡಲಾಗಿದೆ. ಬಾಲಕಿ ಸಾವಿನ ನಂತರ ಈ ವಿಚಾರ ಎಲ್ಲಿಯೂ ತಿಳಿಸದಂತೆ ಮೃತ ವಿದ್ಯಾರ್ಥಿನಿ ಸ್ನೇಹಿತರಿಗೆ ಶಿಕ್ಷಕಿಯಿಂದ ಧಮ್ಕಿ ಆರೋಪ ಮಾಡಲಾಗಿದೆ.  ಬಾಲಕಿ ಮೃತಪಟ್ಟು ವಾರದ ನಂತರ ಮೃತ ಸಾರಾ ಪೋಷಕರಿಗೆ ಸಹಪಾಠಿಗಳು ವಿಷಯ ತಿಳಿಸಿದ್ದು, ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.  