ಬೆಂಗಳೂರು, ಜೂ. 24: ‘ಬಿಜೆಪಿ ಸೋಲಿಗೆ ಕಾಂಗ್ರೆಸ್ ಗ್ಯಾರಂಟಿಗಳು ಕಾರಣ’ ಎಂದು ವಿಶ್ಲೇಷಿಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ‘ಗ್ಯಾರಂಟಿ ಯೋಜನೆ ಅನುಷ್ಟಾನಕ್ಕೆ ಆಗ್ರಹಿಸಿ ಅಧಿವೇಶನದ ಒಳಗೆ ಮತ್ತು ಹೊರಗೆ ನಾವು ಸತ್ಯಾಗ್ರಹ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.ಶನಿವಾರ ನಗರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 'ನಾನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಹೋಗಬೇಕು ಎಂದು ತೀರ್ಮಾನ ಮಾಡಿದ್ದೇನೆ. ಕಾಂಗ್ರೆಸ್ ನಿಜಬಣ್ಣ ಬಯಲು ಮಾಡಬೇಕಾಗಿದೆ. ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣ ಮುಗಿದ ಬಳಿಕ ವಿಧಾನಸೌಧ ಆವರಣದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ನಾನೇ ಸತ್ಯಾಗ್ರಹ ಕೂರುತ್ತೇನೆ' ಎಂದು ಗುಡುಗಿದರು.ರಾಜ್ಯದ ಜನತೆ ಕಾಂಗ್ರೆಸ್‍ನ ಐದು ಗ್ಯಾರಂಟಿ ನಂಬಿ ಅವರಿಗೆ ಮತ ನೀಡಿದ್ದಾರೆ. ಆದರೆ, ಬಿಜೆಪಿ ಕಾರ್ಯಕರ್ತರು ಹೆದರಬೇಕಿಲ್ಲ, ಎದ್ದೇಳಬೇಕಾಗಿದೆ. ಸುಳ್ಳು ಭರವಸೆಗಳ ವಿರುದ್ಧ ಆಂದೋಲನ ರೂಪಿಸಬೇಕು’ ಎಂದು ಸಲಹೆ ನೀಡಿದರು.