ಹಾಸನ ಜೂ 24:- ಪ್ರಯಾಣಿಕರ ಅನುಕೂಲ, ಸಂಚಾರ ಸಮಸ್ಯೆ ಶಾಶ್ಚತ ಪರಿಹಾರಕ್ಕಾಗಿ ಶಿರಾಡಿಘಾಟ್ ಸುರಂಗಗಳನ್ನೊಳಗೊಂಡ ಸಂಚಾರ ಮಾರ್ಗ ನಿರ್ಮಾಣ ಮಾಡಲು ಯೋಜಿಸಲಾಗಿದೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ..ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ದೋಣಿಗಾಲ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 75 ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವರು ಒಟ್ಟು ಮೂವತ್ತು ಕಿಲೋಮೀಟರ್ ಉದ್ದದ ಹೊಸ ಯೋಜನೆಗೆ ರೂಪುರೇಷೆ ಸಿದ್ಧಪಡಿಸಲಾಗಿದೆ ಇದರಲ್ಲಿ 3.8 ಕಿಲೋಮೀಟರ್ ಸುರಂಗ ಮಾರ್ಗ ಇರಲಿದೆ ಎಂದು ಮಾಹಿತಿ ನೀಡಿದರು.  ಹತ್ತು ಕಿಲೋಮೀಟರ್ ಪ್ರದೇಶ ಅರಣ್ಯ ಸಂರಕ್ಷಣಾ ಕಾಯಿದೆ ವ್ಯಾಪ್ತಿಯಲ್ಲಿದ್ದು ಅದಕ್ಕೆ ಅರಣ್ಯ ಇಲಾಖೆಯೊಂದಿಗೆ ವ್ಯವಹರಿಸಿ, ಆನೆ ಕಾರಿಡಾರ್ ಸೇರಿದಂತೆ ಪ್ರಾಣಿಗಳ ಚಲನ ವಲನಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುವುದು ಎಂದರು.  ಇನ್ನೂ ವಿಸ್ತೃತ ಕ್ರೀಯಾ ಯೋಜನೆ ತಯಾರಾಗಬೇಕಿದೆ ಹಾಲಿ ಕೆಲವಡೆ ಪ್ರತ್ಯೇಕ ಏಕ ಮುಖ ಸಂಚಾರ ಮಾರ್ಗರೂಪಿಸುವ ಪ್ರಸ್ತಾವನೆ ಕೂಡ ಇದೆ. ಅತ್ಯಂತ ತಿರುವುಗಳಿರುವ ಪ್ರದೇಶವಾಗಿರುವುದರಿಂದ, ಬಹಳಷ್ಟು ಅಪಘಾತಗಳಾಗುತ್ತವೆ.ಹೊಸ ಯೋಜನೆಯಿಂದ ಸಮಸ್ಯೆ ಪರಿಹಾರ ಆಗುತ್ತದೆ ಅನ್ನೋದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಲಹೆ ಯಾಗಿದೆ ಎಂದು ಸಚಿವರು ಹೇಳಿದರು.  ಕರ್ನಾಟಕಕ್ಕೆ ಇದೊಂದು ಹೆಮ್ಮೆಯ ಯೋಜನೆ ಇದನ್ನು ಮುಖ್ಯಮಂತ್ರಿಗಳು, ಹಾಗೂ ಕ್ಯಾಬಿನೆಟ್ ಗಮನಕ್ಕೆ ತರಬೇಕಿದೆ ಅಲ್ಲದೆ ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿ ಗಮನಕ್ಕೆ ತರುತ್ತೇವೆ ಅನುಮತಿದೊರೆತ ನಂತರ ವಿಸ್ತೃತ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಲೋಕೋಪಯೋಗಿ ಸಚಿವರು ಹೇಳಿದರು.  ಪ್ರಾಥಮಿಕ ಯೋಜನೆ ಪ್ರಕಾರ ಈ ಮಾರ್ಗವನ್ನು ಮಾರೇನಹಳ್ಳಿಯಿಂದ ಅಡ್ಡಹೊಳೆಯವರೆಗೆ ಮಾಡಲಾಗುವುದು ಮುಂದೆ ಘಾಟ್ ಇಲ್ಲವಾದಕಾರಣ ವಾಹನಗಳು ಸುಲಭವಾಗಿ ಹೋಗುತ್ತವೆ ಒಂದು ಕಡೆಯಿಂದ ಟನಲ್‍ನಲ್ಲಿ, ಇನ್ನೊಂದು ಕಡೆ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತವೆ ಅಪಘಾತಗಳು ಕಡಿಮೆಯಾಗುತ್ತೆ ಸಮಯ ಉಳಿಯುತ್ತೆ ಎಂದು ಸಚಿವರು ಅಭಿಪ್ರಾಯಪಟ್ಟರು.  ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಲಾಗುವುದು ಪರಿಸರಕ್ಕೆ ಪ್ರಾಮುಖ್ಯತೆ ನೀಡಿ ಅದನ್ನು ಉಳಿಸಿಕೊಂಡು ಯೋಜನೆ ಮಾಡಲಾಗುವುದು ಎಂದರು.  ಕೇಂದ್ರ ಸಚಿವರನ್ನು ಭೇಟಿ ಮಾಡಿ ನಾವು ಮನವರಿಕೆ ಮಾಡುತ್ತೇವೆ.ಆನಂತರ ನಮ್ಮ ರಾಜ್ಯ ಸರ್ಕಾರ ಹೆಜ್ಜೆ ಇಡುತ್ತೆ.ತಾವೂ ಕೂಡ ಅರಣ್ಯ ಮಂತ್ರಿಯಾಗಿ ಕೆಲಸ ಮಾಡಿದ್ದೀನಿ ಪರಿಸರದ ಮಹತ್ವ, ಗಾಂಭೀರ್ಯತೆ ಅರಿವಿದೆ ಅದನ್ನು ಗಮನದಲ್ಲಿಟ್ಟು ಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸತೀತ್ ಜಾರಕಿಹೊಳಿ ತಿಳಿಸಿದರು.