PC : onmanorama.comಬೆಂಗಳೂರು : ನಮ್ಮ ವರದಿಯನ್ನು ಅಧ್ಯಯನ ಮಾಡದೇ ತಪ್ಪು ಅಭಿಪ್ರಾಯ ಮೂಡಿಸಿದ್ದು, ವರದಿಯ ಶಿಫಾರಸ್ಸುಗಳು ಜಾರಿಯಾದರೆ ಪಶ್ಚಿಮ ಘಟ್ಟದಲ್ಲಿ ಉಂಟಾಗುವ ಅವಘಡಗಳನ್ನು ತಪ್ಪಿಸಬಹುದು ಎಂದು ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಅಭಿಪ್ರಾಯಪಟ್ಟಿದ್ದಾರೆ.   ಶನಿವಾರ ಇಲ್ಲಿನ ಗಾಂಧಿ ಭವನದಲ್ಲಿ ಪರಿಸರಕ್ಕಾಗಿ ನಾವು ಸಂಘಟನೆಯು ಆಯೋಜಿಸಿದ್ದ ‘ಗಾಡ್ಗೀಳ್ ವರದಿ ಜಾರಿ ಮಾಡಲು ಇನ್ನೂ ಎಷ್ಟೆಷ್ಟು ಬಲಿ ಬೇಕು? ಜೀವಲೋಕದ ಹಕ್ಕೊತ್ತಾಯಕ್ಕಾಗಿ ಚರ್ಚೆ ಮತ್ತು ಸಂವಾದ’ ಕಾರ್ಯಕ್ರಮದಲ್ಲಿ ಆನ್‍ಲೈನ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು.  ಇಡೀ ಪಶ್ಚಿಮ ಘಟ್ಟ ಪ್ರದೇಶವನ್ನೇ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಹೀಗಾಗಿ ನಾವು ಭೌಗೋಳಿಕ ಸೂಕ್ಷ್ಮತೆಯನ್ನು ಗಮನಿಸಿ ಪರಿಸರ ವಲಯವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿದ್ದೆವು. ನಮ್ಮ ವರದಿಯ ಮೂಲಕ ಪಶ್ಚಿಮ ಘಟ್ಟದಲ್ಲಿ ಉಂಟಾಗುವ ಆವಾಂತರಗಳ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸರಕಾರಗಳು ಎಚ್ಚೆತ್ತುಕೊಳ್ಳಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.  ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಹೊಂದಿರುವ ಕಾರಣ ಪಶ್ಚಿಮ ಘಟ್ಟಗಳಲ್ಲಿ ನಡೆಯುವ ಕಲ್ಲಿನ ಗಣಿಗಾರಿಕೆಯು ಅಪಾಯಕ್ಕೆ ಕಾರಣವಾಗಲಿದೆ. ನಮ್ಮ ವರದಿ ಪಶ್ಚಿಮ ಘಟ್ಟದಲ್ಲಿ ಅಭಿವೃದ್ಧಿ ಚಟುವಟಿಕೆಯ ವಿರೋಧಿಯಾಗಿಲ್ಲ. ಅದು ಪರಿಸರವನ್ನು ರಕ್ಷಿಸಿಕೊಂಡು ಸುಸ್ಥಿರ ಆರ್ಥಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು ಎಂಬ ಶಿಫಾರಸ್ಸು ಮಾಡಿದೆ ಎಂದು ಅವರು ಸ್ಪಷ್ಟಪಡಿಸಿದರು.   ಕೇರಳದ ವಯನಾಡಿನಲ್ಲಿ ನಡೆದಿರುವುದು ಮಾನವ ನಿರ್ಮಿತ ದುರಂತವಾಗಿದ್ದು, ಸರಕಾರಕ್ಕೆ ಅಲ್ಲಿನ ಶ್ರೀಮಂತರ ಹಣದ ಚಿಂತೆಯಷ್ಟೇ ಇದೆ. ಹೀಗಾಗಿ ಪರಿಸರ ರಕ್ಷಣೆಯ ಕ್ರಮಗಳನ್ನು ಸರಕಾರ ಜಾರಿಗೊಳಿಸುತ್ತಿಲ್ಲ. ಅಲ್ಲಿ ಭೂ ಕುಸಿತಕ್ಕೆ ಬಳಿಯಾದವರಲ್ಲಿ ಬಹುತೇಕ ಮಂದಿ ಟೀ ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಮತ್ತವರ ಕುಟುಂಬವಾಗಿದೆ. ಸರಕಾರಕ್ಕೆ ಇಲ್ಲಿನ ಬಡವರ ಬಗ್ಗೆ ಚಿಂತೆ ಏಕೆ ಇಲ್ಲ ಎಂದು ಪ್ರಶ್ನಿಸಿದ ಅವರು, ಹಿಮಾಚಲ, ಹಿಮಾಲಯ, ಮಹಾರಾಷ್ಟ್ರದಲ್ಲಿ ಅನೇಕ ದುರ್ಘಟನೆಗಳು ನಡೆದಿದ್ದರೂ, ವಯನಾಡಿನಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದಿಲ್ಲ ಎಂದರು.    ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ. ವಿ. ರಾಮಚಂದ್ರ ಮಾತನಾಡಿ, ಸ್ಥಳೀಯ ಸಸ್ಯ ಪ್ರಬೇಧಗಳು ಇದ್ದಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿರುತ್ತದೆ. ಸ್ಥಳೀಯ ಪ್ರಬೇಧ ಸಸ್ಯಗಳನ್ನು ಬೆಳೆಸದೆ ನೆಡುತೋಪು ಮಾಡಿದರೆ ಭೂಮಿ ಜಾಳಾಗಿ ಭೂ ಕುಸಿತವಾಗುವ ಸಂಭವ ಹೆಚ್ಚಿದೆ. ಹೀಗಾಗಿ ಪಶ್ಚಿಮ ಘಟ್ಟದ ಭಾಗದಲ್ಲಿ ಸ್ಥಳೀಯ ಸಸ್ಯ ಪ್ರಬೇಧಗಳನ್ನು ಬೆಳೆಸುವುದು ಅವಶ್ಯಕ ಎಂದು ಹೇಳಿದರು.  ಉತ್ತರ ಕನ್ನಡ ಜಿಲ್ಲೆಯ ಜಿಡಿಪಿ 5,800 ಕೋಟಿ ರೂ ಎಂದು ಅಲ್ಲಿನ ಜಿಲ್ಲಾಧಿಕಾರಿಗಳು ಹೇಳುತ್ತಾರೆ. ಈ ಜಿಡಿಪಿಯಲ್ಲಿ ಬರೀ 180 ಕೋಟಿ ರೂ. ಮಾತ್ರ ಅರಣ್ಯದ ಕೊಡುಗೆಯೆಂದು ಅವರು ಲೆಕ್ಕ ಹಾಕಿದ್ದಾರೆ. ಆದರೆ ವಾಸ್ತವದಲ್ಲಿ ಆ ಜಿಲ್ಲೆಗೆ 9,600 ಕೋಟಿ ರೂ.ಗಿಂತ ಹೆಚ್ಚು ಜಿಡಿಪಿಯನ್ನು ಅರಣ್ಯ ಒದಗಿಸುತ್ತದೆ. ಈ ರೀತಿ ನಮ್ಮ ಅರ್ಥ ವ್ಯವಸ್ಥೆಗೆ ಅರಣ್ಯ ನೀಡುವ ಕೊಡುಗೆಯನ್ನು ಕಡಿಮೆ ಅಂದಾಜು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.   ರಾಜ್ಯದಲ್ಲಿ 2005ರಲ್ಲಿ 2,854 ಬಿಲಿಯನ್ ರೂಪಾಯಿಗಳ ಅರಣ್ಯ ಸಂಪತ್ತಿತ್ತು. ಈಗ ಶೇ.35ರಷ್ಟು ಅರಣ್ಯ ಸಂಪತ್ತು ನಾಶವಾಗಿ 1,835 ಬಿಲಿಯನ್ ರೂಪಾಯಿ ಮೌಲ್ಯದ ಅರಣ್ಯ ಮಾತ್ರ ಉಳಿದುಕೊಂಡಿದೆ. ಅರಣ್ಯ ನಾಶದಿಂದ ಅಕಾಲಿಕ ಮಳೆ, ಭೂಕುಸಿತ, ಜೀವ ವೈವಿಧ್ಯತೆಯ ನಷ್ಟ ಆಗುತ್ತದೆ ಎಂದು ಟಿ. ವಿ. ರಾಮಚಂದ್ರ ಹೇಳಿದರು.   ಕಾರ್ಯಕ್ರಮದಲ್ಲಿ ವಿಜ್ಞಾನ ಬರಹಗಾರ ನಾಗೇಶ ಹೆಗಡೆ, ಸಂಘಟನೆಯ ಸದಸ್ಯರಾದ ಆಂಜನೇಯರೆಡ್ಡಿ, ಪರಶುರಾಮೇಗೌಡ ಮಾತನಾಡಿದರು.   ಬೆಂಗಳೂರು ನಗರಕ್ಕೆ ಪ್ರತಿವರ್ಷ 18 ಟಿಎಂಸಿ ಅಡಿ ನೀರು ಬೇಕು. ಮಳೆ ನೀರು ಸಂಗ್ರಹದ ಮೂಲಕವೇ 15 ಟಿಎಂಸಿ ಅಡಿ ನೀರು ಪೂರೈಸಬಹುದು. ಅದೇ ನೀರನ್ನು ಮರು ಬಳಕೆ ಮಾಡಿದರೆ, ಎಲ್ಲದಕ್ಕೂ ಸಾಕಾಗುತ್ತದೆ. ಅದನ್ನು ಬಿಟ್ಟು ಪರಿಸರಕ್ಕೆ ಮಾರಕವಾದ ಮೇಕೆದಾಟು ಯೋಜನೆ ತರಲು ಮುಂದಾಗಿದ್ದಾರೆ. ಯೋಜನೆಗೆ 5 ಸಾವಿರ ಹೇಕ್ಟರ್ ಕಾಡು ನಾಶವಾಗಲಿದೆ. ಇದರಿಂದ 100 ಟಿಎಂಸಿ ಅಡಿ ನೀರು ಇಂಗಿಸುವ ಪ್ರದೇಶವನ್ನು ನಾಶ ಮಾಡಿ ಕಾಂಕ್ರೀಟ್ ಅಣೆಕಟ್ಟು ಕಟ್ಟಿ 65 ಟಿಎಂಸಿ ಅಡಿ ನೀರು ತರಲು ಹೊರಟಿದ್ದಾರೆ.- ಟಿ. ವಿ. ರಾಮಚಂದ್ರ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ   