ಬೆಂಗಳೂರು: ಆಹಾರ ಭದ್ರತೆ, ಇಂಧನ ಸುರಕ್ಷತೆ, ಶುದ್ಧ ಜಲ, ಮೂಲಸೌಕರ್ಯ, ಆರೋಗ್ಯ ಸೇವೆ, ಔಷಧ, ತ್ಯಾಜ್ಯವಸ್ತುಗಳ ನಿರ್ವಹಣೆ, ಪರಿಸರ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಎದುರಾಗುವ ಸವಾಲುಗಳಿಗೆ ವಿನೂತನ ನ್ಯಾನೋ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.ಶುಕ್ರವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ವತಿಯಿಂದ ಆಯೋಜಿಸಲಾಗಿದ್ದ 13ನೇ ಬೆಂಗಳೂರು ಇಂಡಿಯಾ ನ್ಯಾನೋ ತಂತ್ರಜ್ಞಾನ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.  ಹೆಚ್ಚುತ್ತಿರುವ ನಗರೀಕರಣ, ಜನಸಂಖ್ಯೆ ಹೆಚ್ಚಳ ಹಾಗೂ ಬದಲಾಗುತ್ತಿರುವ ಜೀವನ ಶೈಲಿಯಿಂದ ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿದ್ದು, ಇವುಗಳಿಗೆ ನ್ಯಾನೋ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಸಂಶೋಧಿಸಲು ನಾನು ವಿಜ್ಞಾನಿಗಳಿಗೆ ಮತ್ತು ಇಂಜಿನಿಯರ್‍ಗಳನ್ನು ಕೇಳಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.  ಈ ಹೊಸ ತಾಂತ್ರಿಕ ಕ್ಷೇತ್ರದ ಸಾಧ್ಯತೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಅಂತರ್‍ರಾಷ್ಟ್ರೀಯ ಸಂಶೋಧನಾ ಸಹಭಾಗಿತ್ವ ಅತ್ಯಗತ್ಯವಾಗಿದೆ. ಇದಕ್ಕಾಗಿ ಮಾಹಿತಿಗಳ ಹಾಗೂ ತಾಂತ್ರಿಕತೆಗಳ ಪರಸ್ಪರ ವಿನಿಮಯ, ಈ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳ ಮತ್ತು ಅವುಗಳ ಪರಿಹಾರ ಸಾಧ್ಯತೆಗಳ ವಿಚಾರ ವಿನಿಮಯ ಮತ್ತು ಅಂತಿಮವಾಗಿ ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಪ್ರತಿಭೆಗಳನ್ನು ಬೆಳೆಸುವ ಅಗತ್ಯವಿದೆ ಎಂದು ಅವರು ನುಡಿದರು.  ಇಂತಹ ಅಂತರ್‍ರಾಷ್ಟ್ರೀಯ ಸಮಾವೇಶಗಳು ಪರಸ್ಪರ ಸಂಪರ್ಕ ಸಾಧಿಸಲು, ಜ್ಞಾನವನ್ನು ಹಂಚಿಕೊಳ್ಳಲು, ತಾಂತ್ರಿಕತೆಗಳ ವಿನಿಮಯಕ್ಕೆ, ಕೌಶಲ್ಯ ಅಭಿವೃದ್ಧಿಗೆ ಹಾಗೂ ಉದ್ಯಮ ಸಹಭಾಗಿತ್ವಕ್ಕೆ ಸಾಕಷ್ಟು ಅವಕಾಶವನ್ನು ಕಲ್ಪಿಸಲಿದೆ. ಯುವ ಉದ್ಯಮಿಗಳು ಈ ಕ್ಷೇತ್ರದ ತಜ್ಞರ ಮತ್ತು ದಿಗ್ಗಜರ ಸಹಕಾರ  ಮತ್ತು ಸಹಭಾಗಿತ್ವದ ಸದುಪಯೋಗಪಡೆದುಕೊಂಡು ನಮ್ಮ ರಾಜ್ಯದಲ್ಲಿ ಹೊಸ ಉದ್ಯಮಗಳನ್ನು ಆರಂಭಿಸುವಂತೆ ಮುಖ್ಯಮಂತ್ರಿ ಆಹ್ವಾನಿಸಿದರು.  ಕರ್ನಾಟಕದಲ್ಲಿ ಈ ವಿನೂತನ ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಿರುವ ಸಂಪೂರ್ಣ ಸಹಕಾರವನ್ನು ನಮ್ಮ ಸರಕಾರ ಒದಗಿಸಲಿದೆ. ಕರ್ನಾಟಕ ತನ್ನ ಶ್ರೀಮಂತ ಸಾಂಸ್ಕøತಿಕ ಪರಂಪರೆಗಳಿಗೆ ಮಾತ್ರವಲ್ಲದೆ ಶೈಕ್ಷಣಿಕ ಮತ್ತು ಸಂಶೋಧನೆ ಚಟುವಟಿಕೆಗಳಿಗೆ ಭದ್ರ ತಳಹದಿಯನ್ನು ಕಲ್ಪಿಸುವ ಕಾರ್ಯದಲ್ಲಿ ಹೆಸರುವಾಸಿಯಾಗಿದೆ. ತಾಂತ್ರಿಕತೆ ಆಧಾರಿತ ಅನ್ವೇಷಣೆ ಕ್ಷೇತ್ರದಲ್ಲಿ ನಮ್ಮ ರಾಜ್ಯ ಎಂದಿಗೂ ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದರು. ಐಐಎಸ್ಸಿ, ಜೆಎನ್‍ಸಿಎಎಸ್‍ಆರ್, ಎನ್‍ಸಿಬಿಎಸ್, ಸಿಇಎನ್‍ಎಸ್ ನಂತಹ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ನೆರವಿನೊಂದಿಗೆ, ಬೆಂಗಳೂರು ದೇಶದ  ನ್ಯಾನೋ ಟೆಕ್ ಹಬ್ ಆಗಿ ರೂಪುಗೊಳ್ಳುವ ಪೂರ್ಣ ವಿಶ್ವಾಸ ನನಗಿದೆ. ಮುಂಬರುವ ವರ್ಷಗಳಲ್ಲಿ ಬೆಂಗಳೂರು ಈ ಆಧುನಿಕ ತಾಂತ್ರಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.  ಈ ಸಮಾವೇಶವನ್ನು 2007ರಿಂದ ನಿರಂತರವಾಗಿ ಆಯೋಜಿಸಿಕೊಂಡು ಬರಲು ಮಾರ್ಗದರ್ಶನ ನೀಡುತ್ತಿರುವ ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ನಾನು ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ. 13ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ಅವರು ಹಾರೈಸಿದರು.  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬೆಂಗಳೂರು ಇಂಡಿಯಾ ನ್ಯಾನೋ ತಂತ್ರಜ್ಞಾನ ಸಮ್ಮೇಳನ ಮಾದರಿಯಲ್ಲಿ ‘ಕ್ವಾಂಟಮ್ ತಂತ್ರಜ್ಞಾನ ಸಮ್ಮೇಳನ'ವನ್ನು ಸರಕಾರ ಶೀಘ್ರದಲ್ಲೇ ಆಯೋಜಿಸುತ್ತದೆ. ತಂತ್ರಜ್ಞಾನ ಮನುಷ್ಯನ ಭವಿಷ್ಯದ ಬದುಕಿಗೆ ಪೂರಕವಾಗಿ ಇರಬೇಕು. ನ್ಯಾನೋ ಮತ್ತು ಕ್ವಾಂಟಮ್ ತಂತ್ರಜ್ಞಾನದ ಬೆಳವಣಿಗೆಗೆ ಸರಕಾರದ ಜೊತೆ ಎಲ್ಲರು ಕೈ ಜೋಡಿಸಬೇಕು. ಬೆಂಗಳೂರನ್ನು ಅಗ್ರಗಣ್ಯ ನಗರವನ್ನಾಗಿ ಮಾಡಲು ಸಹಕರಿಸಬೇಕು ಎಂದು ಕರೆ ನೀಡಿದರು.  ನ್ಯಾನೋ ತಂತ್ರಜ್ಞಾನದಿಂದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅತ್ಯಂತ ಸಮರ್ಥವಾಗಿ ಉತ್ಪಾದನೆಯನ್ನು ಮಾಡಬಹುದು. ಈ ತಂತ್ರಜ್ಞಾನದಿಂದ ಕೃಷಿ, ವಿದ್ಯುತ್, ಆಹಾರ ಸಂಸ್ಕರಣೆ, ಕೈಗಾರಿಕಾ ಕ್ಷೇತ್ರಗಳಲ್ಲಿ ಕಡಿಮೆ ದರದಲ್ಲಿ ಹೆಚ್ಚು ಉತ್ಪಾದನೆ ಮಾಡಿ ಜನಸ್ನೇಹಿಯಾಗಿಸಬೇಕಿದೆ. ರಾಜ್ಯದಲ್ಲಿ ಕೈಗಾರಿಕೆ, ಶೈಕ್ಷಣಿಕ ಮತ್ತು ಸಂಶೋಧಕರಿಗೆ ಜ್ಞಾನ ವಿನಿಮಯಕ್ಕೆ ಈ ಕಾರ್ಯಕ್ರಮವು ಜಾಗತಿಕ ವೇದಿಕೆಯಾಗಿದೆ ಎಂದು ಅವರು ಹೇಳಿದರು.  ನ್ಯಾನೋ ವಿಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನ ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ನೆರವಾಗಲಿದೆ. ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನವು ಭವಿಷ್ಯದಲ್ಲಿ ಹೆಚ್ಚು ಉಪಯೋಗಕ್ಕೆ ಬರಲಿದೆ. ನ್ಯಾನೋ ತಂತ್ರಜ್ಞಾನ ಇಂದು ಹೆಚ್ಚು ಪ್ರಚಲಿತದಲ್ಲಿದ್ದು,  ಕೃಷಿಯಲ್ಲೂ ಬಳಸಲಾಗುತ್ತಿದೆ. ಈ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿದ್ದು, ಇದರಿಂದ ರಾಜ್ಯದ ಆರ್ಥಿಕತೆಯು ಹೆಚ್ಚಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.  ಕಸ ಸಂಸ್ಕರಣೆಗೆ ನ್ಯಾನೋ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಕಸದಿಂದ ವಿದ್ಯುತ್ ಉತ್ಪಾದನೆ ಅμÉ್ಟೂಂದು ಯಶಸ್ವಿ ಕಂಡಿಲ್ಲ. ಗ್ಯಾಸ್ ಉತ್ಪಾದನೆ ಸ್ವಲ್ಪಮಟ್ಟಿಗೆ ಯಶಸ್ಸು ಕಂಡಿದೆ. ನ್ಯಾನೋ ತಂತ್ರಜ್ಞಾನ ಬಳಸಿಕೊಂಡು ಕಸದ ಸಮಸ್ಯೆ ಬಗೆಹರಿಸುವ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಅವರು ಹೇಳಿದರು.  ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್, ಡಾ.ಇಂದುಮತಿ ರಾವ್, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಶಾಸಕ ರಿಝ್ವಾನ್ ಅರ್ಶದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.‘ಶೋಕಾಸ್ ನೋಟಿಸ್’ ಹಿಂಪಡೆಯಲು ರಾಜ್ಯಪಾಲರಿಗೆ ಸಲಹೆ  ಮುಖ್ಯಮಂತ್ರಿಗೆ ನೀಡಿರುವ ಶೋಕಾಸ್ ನೋಟಿಸನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಟಿ.ಜೆ.ಅಬ್ರಹಾಂ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.  