ಬೆಂಗಳೂರು : ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಮೈಸೂರು ವರೆಗೂ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ, ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿದ್ದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಸಭೆ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.ಗುರುವಾರ ಸದಾಶಿವನಗರದಲ್ಲಿರುವ ಮಾಜಿ ಶಾಸಕ ಕುಮಾರ ಬಂಗಾರಪ್ಪ ನಿವಾಸದಲ್ಲಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ಪ್ರತಾಪ ಸಿಂಹ ಸಭೆ ಸೇರಿದ್ದು, ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ಪಾದಯಾತ್ರೆ ಬಗ್ಗೆ ನಡೆಯುತ್ತಿರುವ ಗೊಂದಲದ ಬೆಳವಣಿಗೆ ನಡುವೆ ಬಿಜೆಪಿ ಶಾಸಕರ ಒಂದು ತಂಡ ಪ್ರತ್ಯೇಕ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಬಿಜೆಪಿ ಪಾದಯಾತ್ರೆಗೆ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವೂ ಯತ್ನಾಳ್ ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕಿದ್ದರು.ಇನ್ನೂ, ಪ್ರತಾಪ ಸಿಂಹ ಮತ್ತು ಕುಮಾರ ಬಂಗಾರಪ್ಪ ಸಹ ಈ ತಂಡಕ್ಕೆ ಸೇರ್ಪಡೆ ಆಗುವಂತೆ ಕಾಣುತ್ತಿದ್ದು, ಈ ಭಿನ್ನಮತೀಯರ ಸಭೆ ಮತ್ತು ಮಾತುಕತೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.