ಬೆಳಗಾವಿ : ರಾಜ್ಯದಲ್ಲಿರುವ ನಮ್ಮ ಅಂಗನವಾಡಿಗಳ ಹೆಸರನ್ನು ‘ಸರಕಾರಿ ಮಾಂಟೆಸ್ಸರಿ’ ಎಂದು ಮರು ನಾಮಕರಣ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದವರ ಅನುಕೂಲಕ್ಕಾಗಿ ಅವುಗಳನ್ನು ಎಲ್‍ಕೆಜಿ, ಯುಕೆಜಿ ಎಂದು ಹಾಗೂ ಮೈಸೂರು ಕರ್ನಾಟಕ ಭಾಗದಲ್ಲಿ ಸರಕಾರಿ ಮಾಂಟೆಸ್ಸರಿಗಳೆಂದು ಕರೆಯಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.  ಬುಧವಾರ ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ 18 ಸಾವಿರ, ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು, ಅದರಲ್ಲೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ  300ಕ್ಕೂ ಅಧಿಕ ಎಲ್‍ಕೆಜಿ, ಯುಕೆಜಿ ಯನ್ನು ಆರಂಭಿಸಲಾಗುವುದು ಎಂದು ಹೇಳಿದರು.  ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಮಾಂಟೆಸ್ಸರಿಗಳನ್ನು ತೆರೆಯಲಾಗುತ್ತಿದ್ದು, ಇಲಾಖೆ ವತಿಯಿಂದ ಮಕ್ಕಳಿಗೆ ಸಮವಸ್ತ್ರ, ಸ್ಕೂಲ್ ಬ್ಯಾಗ್, ನೋಟ್ ಪುಸ್ತಕ, ಕಲಿಕಾ ಪುಸ್ತಕಗಳನ್ನು ವಿತರಿಸಲಾಗುವುದು. ಮುಂದಿನ ತರಗತಿಗಳಿಗೆ ಹೋಗಲು ಟಿಸಿ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.  ಕಳೆದ 49 ವರ್ಷಗಳ ಹಿಂದೆ ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದ ಹೆಗ್ಗಳಿಕೆ ಕರ್ನಾಟಕದ್ದು. ಈಗ ಮತ್ತೆ ದೇಶದಲ್ಲೆ ಪ್ರಪ್ರಥಮ ಬಾರಿಗೆ ಅಂಗನವಾಡಿಗಳಲ್ಲೇ ‘ಸರಕಾರಿ ಮಾಂಟೆಸ್ಸರಿ’ ಆರಂಭಿಸುವ ಮೂಲಕ ‘ಕರ್ನಾಟಕ’ ದೇಶದ ಇತಿಹಾಸದ ಸುವರ್ಣಾಕ್ಷರದಲ್ಲಿ ಬರೆಯುವಂತ ಹೊಸ ದಾಖಲೆ ಮಾಡಿದೆ ಎಂದು ಅವರು ಹೇಳಿದರು.  ಕರ್ನಾಟಕದಲ್ಲಿ 1975ನೇ ಇಸವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಪ್ರಪ್ರಥಮ ಬಾರಿಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಅಂಗನವಾಡಿಗಳಿಗೆ ಚಾಲನೆ ಕೊಟ್ಟಿದ್ದರು. ಮುಂದಿನ ವರ್ಷಕ್ಕೆ ನಮ್ಮ ಅಂಗನವಾಡಿಗಳು ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು.  ಹಿಂದೆ ಒಂದು ಕಾಲವಿತ್ತು ಅಂಗನವಾಡಿಗಳಿಗೆ ಹೋಗುವ ಮಕ್ಕಳೆಂದರೆ, ನರ್ಸರಿಗಳಿಗೆ ಶುಲ್ಕ ಕಟ್ಟಲಾಗದವರು, ಬಡವರ ಮಕ್ಕಳು ಮಾತ್ರ ಹೋಗುವ ಪರಿಕಲ್ಪನೆ ಇತ್ತು. ಆದರೆ, ಇಂದು ಆ ಪರಿಕಲ್ಪನೆ ಬದಲಾಗಿದೆ. ನಮ್ಮ ಸರಕಾರ ಅಂಗನವಾಡಿಗಳ ಚಿತ್ರಣವನ್ನೇ ಬದಲಾಯಿಸಿದೆ. ನಮ್ಮ ಅಂಗನವಾಡಿಗಳಲ್ಲೆ ಸರಕಾರಿ ಮಾಂಟೆಸ್ಸರಿ-ಪೂರ್ವ ಪ್ರಾಥಮಿಕ ಶಾಲೆಗಳನ್ನಾಗಿ ಆರಂಭಿಸಿದೆ. ಈಗಾಗಲೇ, ಬೆಂಗಳೂರಿನಲ್ಲಿ 250 ಎಲ್ ಕೆಜಿ, ಯುಕೆಜಿ ನರ್ಸರಿಗಳು ಚಾಲನೆಗೊಂಡಿವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.   ಅಂಗನವಾಡಿಗಳಲ್ಲಿ ಕೆಲಸ ಮಾಡುವವರಿಗೆ ಪಿಯುಸಿ ಮಾನದಂಡ ಮಾಡಲಾಗಿದೆ. ಆದರೆ, ಈಗಾಗಲೇ ಅಂಗನವಾಡಿಗಳಲ್ಲಿ ಎಂಎ, ಬಿಎ, ಬಿಎಡ್, ಬಿಇ ಕಲಿತವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.  ನೇಮಕಾತಿ ಆದೇಶ ಪತ್ರ ವಿತರಣೆ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಒಟ್ಟು 43 ಜನ ಅಂಗನವಾಡಿ ಸಹಾಯಕಿಯರು ಹಾಗೂ 6 ಜನ ಕಾರ್ಯಕರ್ತೆಯರು ನೇಮಕಗೊಂಡಿದ್ದು ಅವರಿಗೆ ಆದೇಶ ಪತ್ರಗಳನ್ನು ವಿತರಿಸಿ ಶುಭ ಕೋರಿದ ಲಕ್ಷ್ಮಿ ಹೆಬ್ಬಾಳ್ಕರ್, ಇದೇ ಸಮಯದಲ್ಲಿ ಕಾರ್ಯಕರ್ತೆಯರಿಗೆ ಹೊಸ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ವಿತರಿಸಲಾಯಿತು.  