ಬೆಂಗಳೂರು: ಹೈದ್ರಾಬಾದ್‍ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಮಾದರಿಯಲ್ಲಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣವಾಗಬೇಕು. ಸಿನೆಮಾ ಜಗತ್ತಿನ ಬೇಡಿಕೆಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಇಲ್ಲಿ ಲಭ್ಯವಿರಬೇಕು. ಈ ಕುರಿತು ದೇಶದ ಪ್ರಮುಖ ಮೂರು ಚಿತ್ರನಗರಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.  ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಿಸುವ ಕುರಿತು ನಡೆದ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಮ್ಮಾವು ಗ್ರಾಮದಲ್ಲಿ ಈಗಾಗಲೇ ಗುರುತಿಸಲಾಗಿರುವ 110 ಎಕರೆ ಕೆಐಎಡಿಬಿ ಭೂಮಿಯನ್ನು ಆದಷ್ಟು ಬೇಗನೆ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಗೆ  ಹಸ್ತಾಂತರಿಸಿ ಆದೇಶ ಹೊರಡಿಸುವಂತೆ ಸೂಚಿಸಿದರು.   ವಾರ್ತಾ ಇಲಾಖೆ ಜಮೀನು ಸ್ವಾಧೀನಪಡಿಸಿಕೊಂಡ ಬಳಿಕ ಆದಷ್ಟು ಬೇಗನೆ ಟೆಂಡರ್ ಕರೆದು ಚಿತ್ರ ನಗರಿ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಟ್ರಾನ್ಸಾಕ್ಷನ್ ಅಡ್ವೈಸರ್ ನೇಮಕ  ಮಾಡಲು ಟೆಂಡರ್ ಕರೆಯುವಂತೆ ಮುಖ್ಯಮಂತ್ರಿ ಸೂಚಿಸಿದರು.   ಇದರೊಂದಿಗೆ ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತರಣೆಗೆ 50 ಎಕರೆ ಗುರುತಿಸಿ  ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ಜಮೀನಿಗೆ ಕಾಂಪೌಂಡ್ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.   ಮೂರು ವರ್ಷಗಳ ಒಳಗಾಗಿ ಚಿತ್ರನಗರಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಚಿತ್ರರಂಗದವರ ಅಭಿಪ್ರಾಯಗಳನ್ನು ಸಹ ಪಡೆದುಕೊಂಡು, ಎಲ್ಲ ಸೌಲಭ್ಯಗಳು ಒಳಗೊಂಡಿರುವ ಚಿತ್ರನಗರ ನಿರ್ಮಾಣವಾಗಬೇಕು. ಸರಕಾರಕ್ಕೆ ಹೊರೆಯಾಗಬಾರದು. ಚಿತ್ರನಗರಿ ಸ್ವರೂಪ ಕುರಿತಾಗಿ ಸಮಗ್ರವಾದ ವರದಿಯನ್ನು ಸಲ್ಲಿಸಲು ಮುಖ್ಯಮಂತ್ರಿ ತಿಳಿಸಿದರು.  ಚಿತ್ರ ನಗರಿ ನಿರ್ಮಾಣದಿಂದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ದೊರೆಯಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಪ್ರಸ್ತಾವನೆ ಸಲ್ಲಿಸಲು ಸಿದ್ದರಾಮಯ್ಯ ಸೂಚನೆ ನೀಡಿದರು.  ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ವಾರ್ತಾ ಇಲಾಖೆ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಆಯುಕ್ತ ಹೇಮಂತ್ ನಿಂಬಾಳ್ಕರ್ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.  