ಬೆಂಗಳೂರು : ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ, ಅಪಮಾನ ಮಾಡುವುದನ್ನು ನಿಷೇಧಿಸುವ ಹಾಗೂ ವೈದ್ಯಕೀಯ ವೃತ್ತಿ ಪಾಲನೆ ಮಾಡುವವರಿಗೆ ಕಡ್ಡಾಯ ನೋಂದಣಿ ಮಾಡಿಸಬೇಕಾದ ಮಸೂದೆಯನ್ನು ವಿಧಾನಪರಿಷತ್ತಿನಲ್ಲಿ ಗುರುವಾರ ಅಂಗೀಕಾರಗೊಂಡಿದೆ.  ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಇದೇ ವೇಳೆ ಮುಡಾ ಹಗರಣವನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್‍ನ ಸದಸ್ಯರು ಸದನದ ಬಾವಿಯಲ್ಲಿ ಇಳಿದು ಧರಣಿ ನಡೆಸುತ್ತಿದ್ದರು.   ಪ್ರಸ್ತಾವಿತ ಮಸೂದೆಯಲ್ಲಿ ವೈದ್ಯರು ವೃತ್ತಿಯಲ್ಲಿ ಕಾರ್ಯನಿರ್ವಹಿಸಬೇಕಾದರೆ, ವೈದ್ಯಕೀಯ ಪರಿಷತ್ತಿನಲ್ಲಿ ಕಡ್ಡಾಯವಾಗಿ ನೋಂದಣಿ ಆಗಿರಬೇಕು. ಒಂದು ವೇಳೆ ನೋಂದಣಿಯಾಗದೆ ವೃತ್ತಿ ಅಭ್ಯಾಸ ಮಾಡುತ್ತಿದ್ದರೆ, ಅಂತಹವರ ವಿರುದ್ಧ ಪರಿಷತ್ ಕ್ರಮ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ಪರಿಷತ್‍ಗೆ ರಿಜಿಸ್ಟರ್ ಹಾಗೂ ಉಪ ರಿಜಿಸ್ಟರ್ ಗಳನ್ನು ನೇಮಕ ಮಾಡುವ ವ್ಯವಸ್ಥೆಯಲ್ಲೂ ಬದಲಾವಣೆ ತರಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.  ನಕಲಿ ವೈದ್ಯರಿಗೆ ದಂಡ: ನಕಲಿಯಾಗಿ ವೈದ್ಯಕೀಯ ವೃತ್ತಿ ಮಾಡುವವರಿಗೆ 10 ಸಾವಿರ ರೂ.ನಿಂದ 1 ಲಕ್ಷ ರೂ. ಗಳವರೆಗೂ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ಸೇವಾ ಸಿಬ್ಬಂದಿಯನ್ನು ಹಿಂಸಿಸುವುದು, ಅಪಮಾನ ಮಾಡುವುದು, ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದಕ್ಕೆ ಈ ಮೊದಲು ನಿಗದಿಯಾಗಿದ್ದ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ.   ಪ್ರಸ್ತಾವಿತ ಮಸೂದೆಯಲ್ಲಿ ಮೂರು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಏಳು ವರ್ಷಗಳವರೆಗೂ ವಿಸ್ತರಿಸಬಹುದಾದ ಕಾರಾಗೃಹ ವಾಸ ಹಾಗೂ 25 ಸಾವಿರ ರೂ.ಗಳಿಗಿಂತ ಕಡಿಮೆ ಇಲ್ಲದಂತೆ 2 ಲಕ್ಷಗಳವರೆಗೂ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.  ಅಪರಾಧಗಳಿಗೆ ಪ್ರಚೋದನೆ ನೀಡುವವರಿಗೂ ಇದೇ ತೆರನಾದ ಶಿಕ್ಷೆಯನ್ನು ವಿಧಿಸಲು ಮಸೂದೆಯಲ್ಲಿ ಅವಕಾಶವಿದೆ. ಇನ್ನು ಮುಂದೆ ವೈದ್ಯಕೀಯ ಸೇವಾ ಸಿಬ್ಬಂದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ, ಆಡಿಯೋ-ವಿಡಿಯೋಗಳಲ್ಲಿ, ಆಸ್ಪತ್ರೆಗಳಲ್ಲಿ ಫೊಟೋ, ವಿಡಿಯೋ ತೆಗೆಯುವ ಮೂಲಕ ಅಗೌರವಿಸುವ, ದೌರ್ಜನ್ಯ ಎಸಗುವ ಕೃತ್ಯಗಳನ್ನು ನಡೆಸಿದರೆ ಅವು ದಂಡನಾರ್ಹವಾಗಲಿವೆ ಎಂದು ಹೇಳಿದರು.  