ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತ ಪ್ರಕರಣದ ವರದಿಯನ್ನು ಕೇಂದ್ರ ಸರಕಾರ ಹೈಕೋರ್ಟ್‌ಗೆ ಸಲ್ಲಿಸಿದೆ.ವಕೀಲ ಸಿಜಿ ಮಲಾಯಿಲ್, ಸುಭಾಷ್ ಚಂದ್ರನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು. ಈ ವೇಳೆ ಈವರೆಗೆ ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ಕೇಂದ್ರ ಸರ್ಕಾರ ಸಲ್ಲಿಸಿತು. ಅಲ್ಲದೆ, ಈವರೆಗೆ 8 ಮೃತದೇಹಗಳು ಪತ್ತೆಯಾಗಿವೆ ಎಂದು ಎಎಸ್‌ಜಿ ಅರವಿಂದ್ ಕಾಮತ್ ಮಾಹಿತಿ ನೀಡಿದರು. ಹಾಗೆಯೇ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿರುವುದಾಗಿ ಪೀಠಕ್ಕೆ ತಿಳಿಸಿದರು.ಇನ್ನು, ರಾಜ್ಯ ಸರಕಾರದ ವರದಿ ಸಲ್ಲಿಕೆಗೆ ಕಾಲಾವಕಾಶ ಕೋರಿರುವ ಹಿನ್ನೆಲೆಯಲ್ಲಿ ವಿಚಾರಣೆ ಆ.1ಕ್ಕೆ ಹೈಕೋರ್ಟ್ ಮುಂದೂಡಿದೆ.