‘ಕಾಲ’ನಿಗೆ ಕರುಣೆಯಿಲ್ಲ ಎನ್ನುವ ಮಾತು ಹಳತಾದರೂ ಅದರ ಅನುಭವ ಆಗಾಗ ಆಗುತ್ತಲೇ ಇರುತ್ತದೆ. ಯಕ್ಷಗಾನ ಲೋಕ ಯಕ್ಷ ಋಷಿ ಎಂದೇ ಕರೆಯುತ್ತಿದ್ದ ಹೊಸ್ತೋಟ ಮಂಜುನಾಥ ಭಾಗವತರು ಬದುಕಿನ ವೇಷ ಕಳಚಿದರು ಎನ್ನುವುದನ್ನು ಕೇಳಿದಾಗ ಸಹಜವಾಗಿಯೇ ಕಾಲನಿಗೆ ಕರುಣೆಯಿಲ್ಲ ಎಂಬ ಉದ್ಗಾರ ಹೊರಬಂತು. ಕಳೆದ ಎಂಬತ್ತು ವರ್ಷಗಳ ಪೈಕಿ ಎಪ್ಪತ್ತೇಳು ಯಕ್ಷ ವಸಂತಗಳು. ಹದಿಹರೆಯದಲ್ಲಿಯೇ ಆಟದ ಮಾಣಿ. ಬದುಕಿನುದ್ದಕ್ಕೂ ಯಕ್ಷಗಾನದ ಲಯದಲ್ಲಿ ಕನ್ನಡವನ್ನೇ ಕುಣಿಸಿದ ಭಾಗವತರು ಕಾಲದಲ್ಲಿ ಲಯವಾದರು ಎನ್ನುವುದನ್ನು ನಂಬುವುದಕ್ಕೇ ಕಷ್ಟವಾಗುತ್ತಿದೆ.
ಎರಡು ವಾರಗಳ ಹಿಂದೆ ಮೂರುದಿನ ಅವರನ್ನು ಮಾತಾಡಿಸುವ ಅವಕಾಶ ಸಿಕ್ಕಿತ್ತು. ಸೋಂದಾದ ಶ್ರೀಪಾದ ಜೋಶಿಯವರ ಮನೆಯಲ್ಲಿದ್ದ ಭಾಗವತರನ್ನು ಬೆಳಗ್ಗೆ ಮತ್ತು ಸಂಜೆ ಮಾತನಾಡಿಸುತ್ತಿದ್ದೆ. ಅವರು ಆಡಿದ್ದನ್ನೆಲ್ಲ ಧ್ವನಿಮುದ್ರಣ ಮಾಡಿಕೊಂಡೆ. ಕೆಲವು ಬಾರಿ ಮಾತ್ರ ಮಾತು ಸ್ಪಷ್ಟವಾಗಿರುತ್ತಿತ್ತು. ಹತ್ತು ನಿಮಿಷ ಮಾತಾಡಿದರೆ ಸುಸ್ತಾಗುತ್ತಿದ್ದ ಅವರು ಸ್ವಲ್ಪ ಹೊತ್ತು ತಡೆದು ಮತ್ತೆ ಮಾತಾಡುತ್ತಿದ್ದರು. ಅರ್ಧ ತಾಸಿನ ನಂತರ ನಿದ್ದೆಗೆ ಜಾರುತ್ತಿದ್ದರು. ಕ್ಯಾನ್ಸರ್ ನೋವಿನಿಂದ ಮುಖ ಹಿಂಡುತ್ತ ಅಕ್ಷರಶಃ ಸಾವಿನೊಡನೆ ಹೆಣಗಾಡುತ್ತಿದ್ದರು. ನನಗೂ ಮರಣದ ಮುಂಬಾಗಿಲಿನಲ್ಲಿ ನಿಂತು ಮಾತಾಡಿಸಿದ ಅನುಭವ!
ಭಾಗವತರ ಲೋಕ ಸಂಗ್ರಹ ಅಪಾರವಾದದ್ದು. ಜೀವವೈವಿಧ್ಯ ದಾಖಲಾತಿಯಿಂದ ಕ್ರಿಕೆಟ್​ವರೆಗೆ, ಜಾನಪದ ಹಾಡುಗಳಿಂದ ಜೈಮಿನಿ ಭಾರತದವರೆಗೆ ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲ. ಕ್ರಿಕೆಟ್ ನೋಡುವಾಗ ನಿಮಗೇನೆನಿಸುತ್ತದೆ ಎಂದು ಕೇಳಿದೆ. ಕ್ರಿಕೆಟ್ ಆಟವೆಂದರೆ ಆಕಸ್ಮಿಕಗಳ ಮೊತ್ತ, ಪ್ರತಿ ಕ್ಷಣವೂ ನಮ್ಮ ನಿರೀಕ್ಷೆಗಳನ್ನು ಸುಳ್ಳಾಗಿಸುತ್ತಲೇ ಸಾಗುತ್ತದೆ, ಯೋಜಿತ ಪ್ರಯತ್ನದ ನಡುವೆಯೂ ಅನಿರೀಕ್ಷಿತಗಳು ಘಟಿಸುತ್ತವೆ. ಇಷ್ಟು ಬೆರಗು, ರೋಚಕತೆ ಮತ್ತೊಂದು ಆಟದಲ್ಲಿ ಇಲ್ಲ. ನಮ್ಮ ಬದುಕೂ ಹಾಗೇ, ಅನಿರೀಕ್ಷಿತಗಳ ಮೊತ್ತ. ಎಲ್ಲ ಯೋಚಿಸಿ, ಯೋಜಿಸಿಯೇ ಕಾರ್ಯ ಮಾಡಿದ್ದೇವೆಂದು ಹೇಳಿಕೊಳ್ಳುತ್ತೇವೆ. ಆದರೆ, ಆಗುವುದು ಎನ್ನುವುದೊಂದು ಇದೆ. ಮತ್ತು ಅದೇ ಆಗುತ್ತದೆ. ಈ ಉತ್ತರಕ್ಕೆ ಅದೆಷ್ಟು ಆಯಾಮಗಳು!
ಮುಂಜಾನೆಯ ಎಳೆ ಬಿಸಿಲಿಗೆ ಮೈ ಕಾಯಿಸಲಿ ಎಂದು ಶ್ರೀಪಾದ ಜೋಶಿ ದಂಪತಿ ಭಾಗವತರ ಎಡ ಬಲಗಳನ್ನು ಹಿಡಿದು ತಂದು ಅಂಗಳದ ಕುರ್ಚಿಯಲ್ಲಿ ಕೂಡಿಸುತ್ತಿದ್ದರು. ಶೂನ್ಯವನ್ನು ದೃಷ್ಟಿಸುತ್ತ ಕುಳಿತುಕೊಳ್ಳುತ್ತಿದ್ದ ಅವರ ಸ್ಥಿತಿಯನ್ನು ನೋಡಿದಾಗ ವ್ಯಥೆಯಾಗುತ್ತಿತ್ತು. ಒಡನಾಟದ ವಲಯದಲ್ಲಿ ಭಾಗವತರು ಎಂದೇ ಪರಿಚಿತರಾಗಿದ್ದ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನದ ನಡೆದಾಡುವ ವಿಶ್ವಕೋಶವಾಗಿದ್ದರು. ಶ್ರೀರಾಮಕೃಷ್ಣ ಆಶ್ರಮದಲ್ಲಿ ‘ಅಭಯ ಚೈತನ್ಯ’ ನಾಮಧೇಯದಲ್ಲಿ ಅಧ್ಯಾತ್ಮ ಸಾಧನೆಗೆ ತೊಡಗಿದ್ದ ಯುವಕ, ಯಕ್ಷಗಾನ ಲೋಕಕ್ಕೆ ಒಲಿದು ಬಂದಿದ್ದು ನಾಡಿನ ಭಾಗ್ಯವಾಯಿತು. ರಂಗಭೂಮಿಯೂ ಅಧ್ಯಾತ್ಮ ಸಾಧನೆಯ ಅವಕಾಶವಾಗಬಲ್ಲದು ಎನ್ನುವುದಕ್ಕೆ ನಿದರ್ಶನ ಒದಗಿತು. ಅಧ್ಯಾತ್ಮವೆಂದರೆ ತಟಸ್ಥ ಮನೋಭಾವವಲ್ಲ, ಅಂತರಂಗವನ್ನು ಅರಿಯುವ ನಿರಂತರ ತಹತಹ ಎನ್ನುವುದು ಭಾಗವತರನ್ನು ಕಂಡವರಿಗೆ ಅರ್ಥವಾಗುತ್ತಿತ್ತು. ಬದುಕಿನ ಎಲ್ಲ ಭಾವಗಳಿಗೂ ಸ್ಪಂದಿಸುತ್ತಿದ್ದ ಭಾಗವತರ ಹಠ, ಸಿಟ್ಟು, ಸಂತೋಷಗಳು ಎಲ್ಲರಿಗೂ ಪರಿಚಿತ. ಅಧ್ಯಾತ್ಮದ ಸಾಧನೆಯಲ್ಲಿ ತೊಡಗಿರುವವರಿಗೆ ಇಷ್ಟೆಲ್ಲ ಹಠ-ಸಿಟ್ಟು ಯಾಕೆ ಎಂಬ ಪ್ರಶ್ನೆ ಕಾಡಿದ್ದು ನಿಜ. ಧಾರವಾಡ ಆಕಾಶವಾಣಿಗಾಗಿ ಅವರನ್ನು ಸಂದರ್ಶನ ಮಾಡಿದಾಗ ಈ ಪ್ರಶ್ನೆಯನ್ನು ಕೇಳಿಯೂ ಇದ್ದೆ. ಅವರು ಕೊಟ್ಟ ಉತ್ತರಕ್ಕೆ ನನ್ನ ಕಣ್ಣುಗಳೇ ಹನಿದವು. ಅವರೆಂದರು, ‘ನನಗೆ ನನ್ನದೇ ಆದ ಮನೆ, ಸಂಸಾರ ಅಂತ ಇಲ್ಲ. ಈ ಜೀವಕ್ಕೆ ಭಾವನೆಗಳ ತಾಕಲಾಟ ಇದ್ದಿದ್ದೇ. ನಾನು ಅತ್ತರೂ ನಕ್ಕರೂ ಬಸ್ ಸ್ಟಾ್ಯಂಡಿನಲ್ಲೇ. ನನ್ನ ಶಿಷ್ಯರನ್ನು ಮಕ್ಕಳಂತೆ ತಿಳಿದು ದಂಡಿಸಿದ್ದೇನೆ, ಸಿಟ್ಟು ಮಾಡಿದ್ದೇನೆ. ಯಾರಿಗೂ ಅನ್ಯಾಯ ಮಾಡುವ ಮನಸು ನನಗಿಲ್ಲ. ಆದರೂ, ಬೇಸರ ಆಗ್ತದೆ, ಸಿಟ್ಟೂ ಬರ್ತದೆ. ಇಷ್ಟಾದರೂ ನನ್ನನ್ನು ಸಮಾಜ ಪ್ರೀತಿಯಿಂದ ಆದರಿಸುತ್ತಿದೆ. ‘ಭಾಗೋತರೆ ಎನ್ನ ಮಗಂಗೆ ಸ್ವಲ್ಪ ಬುದ್ಧಿ ಹೇಳ್ರಾ…‘ ಅಂತ ಪಾಲಕರು ಹೇಳ್ತಾರೆ. ಅಳಬೇಕೋ ನಗಬೇಕೋ ತಿಳಿಯೋದಿಲ್ಲ’.
ಮೊನ್ನೆಯೂ, ಒಡಲನ್ನು ಒತ್ತಿ ಬರುತ್ತಿದ್ದ ನೋವನ್ನು ಸಹಿಸಿಕೊಳ್ಳಲು ಓಂ.. ಎಂದು ಉಸಿರುಗರೆಯುತ್ತಿದ್ದರು. ಆದರೂ ಲೌಕಿಕ ಬದುಕಿನ ಕುತೂಹಲವಿತ್ತು. ಕ್ರಿಕೆಟ್​ನಲ್ಲಿ ಯಾರು ಗೆದ್ದರು? ಉಳ್ಳಾಗಡ್ಡಿ ದರ ಕಡಿಮೆಯಾಯಿತೆ? ಎಂದು ವಿಚಾರಿಸುತ್ತಿದ್ದರು. ಈ ಅಸಹಾಯಕ ಕ್ಷಣಗಳಲ್ಲೂ ಆ ಎಲ್ಲ ಕುತೂಹಲ ವಿಸ್ಮಯವಾಗಿ ಕಾಡುತ್ತದೆಯೇ? ಎಂದು ಕೇಳಿದ್ದೆ. ಬದುಕು ಅಗಾಧವಾದದ್ದು, ಅದರ ವಿಸ್ಮಯಕ್ಕೆ ಕೊನೆಯೇ ಇಲ್ಲ. ಈಗಲೂ ಸುಷುಪ್ತಿಯಲ್ಲಿ ಎಲ್ಲ ನೆನಪುಗಳನ್ನೂ ಅನುಭವಿಸುತ್ತಿದ್ದೇನೆ. ಏನೇ ಆಲೋಚನೆ ಮಾಡಿದರೂ ಒಂದು ಹೊಸ ಹಾಡು ಮನಸಿನಲ್ಲಿ ಮೂಡುತ್ತದೆ. ಈ ನೋವುಗಳಿಗೆಲ್ಲ ಕಾವ್ಯದಲ್ಲಿ ಅಭಿವ್ಯಕ್ತಿ ಕೊಡಲಾಗುತ್ತಿಲ್ಲ ಎಂದು ಅಲವತ್ತುಕೊಂಡರು. ಅವರ ಜೀವನ ಪ್ರೀತಿ, ಕಾವ್ಯ ಪ್ರೀತಿಗೆ ಕೈಮುಗಿದೆ. ಶಬ್ದಗಳೊಡನೆ ಆಟವಾಡುವುದು ಭಾಗವತರಿಗೆ ಸ್ವಭಾವವೇ ಆಗಿತ್ತು. ಕನ್ನಡದ ಪ್ರತಿ ಶಬ್ದವನ್ನೂ ಉಚ್ಚರಿಸುವಾಗಿನ ಅಂಗ ಭಾಷೆಯನ್ನೂ ರಂಗ ಭಾಷೆಯನ್ನೂ ಬದುಕಿನ ಅಧ್ಯಯನವಾಗಿಸಿಕೊಂಡಿದ್ದರು. ಯಕ್ಷಗಾನದ ಒಂದೊಂದು ತಾಳದಲ್ಲಿಯೂ ಅದೆಷ್ಟು ಮಟ್ಟುಗಳಿವೆ, ಝುಂಪೆಯ ಮಟ್ಟನ್ನು ಆದಿತಾಳಕ್ಕೆ ತಂದರೆ ಹೇಗೆ, ಪಾತ್ರದ ಪ್ರವೇಶವನ್ನು ತ್ರಿವುಡೆಯ ಬದಲು ಅಷ್ಟ ತಾಳದಲ್ಲಿ ಮಾಡಿಸಿದರೆ ಹೇಗೆ! ಇಂತಹ ಕುತೂಹಲ, ಪ್ರಯೋಗಗಳಿಂದಲೇ ನಿತ್ಯ ವಿಸ್ಮಯವಾಗಿದ್ದ ಭಾಗವತರ ಬದುಕು ಮುಗಿದ ನಂತರವೂ ಬೆರಗಿನ ಆಗರ. ಸಂಚಾರಿ ಶಾಲೆಯಾಗಿದ್ದ ಭಾಗವತರಿಂದ ಯಕ್ಷಗಾನವನ್ನು ಕಲಿತವರು ಅಸಂಖ್ಯ. ರಂಗದ ಎಲ್ಲ ವಿಭಾಗಗಳಲ್ಲಿಯೂ ಪರಿಣತಿ ಮತ್ತು ಪ್ರಯೋಗ. ಯಕ್ಷಗಾನದ ಎಲ್ಲ ವಲಯಗಳಲ್ಲೂ ಒಡನಾಟ, ಬಡಗು ತಿಟ್ಟು, ತೆಂಕು ತಿಟ್ಟು, ಮೂಡಲಪಾಯ ಎಲ್ಲದರ ಅಧ್ಯಯನ. ಶಿವಮೊಗ್ಗದ ಅಂಧರ ವಿಕಾಸ ಶಾಲೆಯ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿದ ಭಾಗವತರ ಕಲ್ಪನಾ ಶಕ್ತಿ, ಕಲಿಕೆ ಯನ್ನು ರೂಪಿಸಿದ ಕ್ರಮವೇ ಅದ್ಭುತ. ಮುನ್ನೂರಕ್ಕೂ ಮಿಕ್ಕಿದ ಯಕ್ಷಗಾನ ಪ್ರಸಂಗಗಳು, ಗಣಿತದಂತೆ ರೂಪಿಸಿದ ತಾಳಸೂತ್ರಗಳು, ಯಕ್ಷಗಾನಕ್ಕೊಂದು ಲಕ್ಷಣ ಗ್ರಂಥ, ಮಟ್ಟುಗಳ ಶೋಧ-ಸಂಗ್ರಹ ಒಂದೇ ಎರಡೇ ಯರ್ಕÒ ಎನ್ನುವ ಮಾತು ಪೂರ್ಣ ಸತ್ಯ.
ಭಾಗವತರು ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲಿಯೇ ಬರೆದ ಪ್ರಸಂಗ ಶ್ರೀರಾಮ ನಿರ್ಯಾಣ. ಅದರಲ್ಲಿ ಬರುವ ರಾಮನ ಒಂದು ಪದ್ಯ ಹೀಗಿದೆ; ನೋವು ನಲಿವುಗಳಿಂದ ಕೂಡಿದ| ಜೀವನವ ಕಂಡಾಯ್ತು ಮುಂದಿ|ನ್ನಾವ ಫಲವಿದೆ ನೀತಿಯೊಂದೇ| ದೇವನೆನಿಸಿತು ಎನ್ನನು||
ಸುತ್ತಲಿನ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸಿ ಕಾವ್ಯಾಭಿವ್ಯಕ್ತಿ ನೀಡುತ್ತಲೇ ತನ್ನ ನೋವು ನಲಿವುಗಳನ್ನೂ ಅನುಭವಿಸುತ್ತ ಕಳೆದ ಭಾಗವತರ ಬದುಕು-ಬರಹ ನಾಡಿನ ಸಂಪತ್ತು.
ಮೊನ್ನೆ ಅವರೆಂದ ಇನ್ನೊಂದು ಮಾತೂ ನೆನಪಾಗುತ್ತಿದೆ. ‘ನಾವೂ ರಾಮಕೃಷ್ಣರಾಗಬಹುದು, ವಿವೇಕಾನಂದರಾಗಬಹುದು. ಆದರೆ, ನಮಗೆ ಅಷ್ಟು ಧೈರ್ಯ ಬೇಕು. ಅವರ ಬದುಕಿನ ಕೊನೆಯಲ್ಲಿ ಹೊಳೆದ ಈ ಸತ್ಯವನ್ನು ಅರಗಿಸಿಕೊಳ್ಳುವುದಕ್ಕೂ, ಅವರ ನಿರ್ಗಮನವನ್ನು ಸಹಿಸಿಕೊಳ್ಳುವುದಕ್ಕೂ ನಮಗೀಗ ಧೈರ್ಯ ಬೇಕಾಗಿದೆ’.
ದಿವಾಕರ ಹೆಗಡೆ
(ಲೇಖಕರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರು)
ಶ್ರೀ ರಾಮ ನಿರ್ಯಾಣ, ಶ್ರೀ ರಾಮ ಮಹಿಮೆ (19 ಆಖ್ಯಾನಗಳು), ಶ್ರೀ ಕೃಷ್ಣ ಮಹಿಮೆ (21 ಆಖ್ಯಾನಗಳು), ಮಹಾಭಾರತ (50 ಆಖ್ಯಾನಗಳು), ಹನುಮಾಯಣ (28 ಆಖ್ಯಾನಗಳು), ಗೋ ಮಹಿಮೆ (33 ಆಖ್ಯಾನಗಳು), ರಾಮಕೃಷ್ಣ ಚರಿತೆ (27ಆಖ್ಯಾನಗಳು), ಭಾಸವತಿ, ಉತ್ತರರಾಮ ಚರಿತೆ, ಪ್ರತಿಜ್ಞಾಯೌಗಂಧರಾಯಣ, ಚಂಡ ಮಹಾಸೇನ, ಸುಹಾಸಿನಿ ಪರಿಣಯ, ಹೋಮರನ ಒಡೆಸ್ಸಿ ಕಾವ್ಯವನ್ನಾಧರಿಸಿ ಉಲ್ಲಾಸದತ್ತ ಚರಿತ್ರೆ, ಶೇಕ್ಸ್​ಪಿಯರ್​ನ ಮ್ಯಾಕ್ ಬೆತ್ ನಾಟಕದ ರೂಪಾಂತರವಾದ ಮೇಘಕೇತ ಪ್ರಸಂಗ… ಹೀಗೆ ಅವರಿಂದ ಮೂಡಿ ಬಂದ ಯಕ್ಷ ಪ್ರಸಂಗಗಳಿಗೆ ಲೆಕ್ಕವಿಲ್ಲ. ಯಕ್ಷಗಾನ ತಾಳಸೂತ್ರ, ಯಕ್ಷಗಾನ ಮಟ್ಟುಗಳ ಸಂಗ್ರಹ, ಯಕ್ಷಗಾನ ಮದ್ದಲೆ ನುಡಿಗಟ್ಟುಗಳು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಪವಾಡವಲ್ಲ ವಿಸ್ಮಯ, ಒಡಲಿನ ಮಡಿಲು-ಯಕ್ಷತಾರೆ ಎಂಬ ಅನುಭವ ಕಥನಗಳನ್ನು ಬರೆದಿದ್ದಾರೆ. ವೀರಶೈವ ಸಿದ್ಧಾಂತ ಕುರಿತು ಮಾಯಾ ಕೋಲಾಹಲ, ಪ್ರಭುಲಿಂಗ ಲೀಲೆ ಹಾಗೂ ಬಸವೇಶ್ವರ ಚರಿತೆ ರಚಿಸಿದ್ದಾರೆ. ಸಾಕ್ಷರತೆಯ ಮಹತ್ವ ಸಾರಲು ರಚಿಸಿದ ಅಕ್ಷರ ವಿಜಯ ಯಕ್ಷಗಾನ 50ಕ್ಕೂ ಹೆಚ್ಚುಕಡೆ ಪ್ರದರ್ಶನಗೊಂಡಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eight =
Remember me
