ಬೆಂಗಳೂರು:ಅಡಿಕೆ ವ್ಯಾಪಾರಿಯನ್ನು ಯಾಮಾರಿಸಿ ಕಾರಿನಲ್ಲಿದ್ದ ೧ ಕೋಟಿ ರೂ. ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಸೇರಿ ನಾಲ್ವರು ಆರೋಪಿಗಳನ್ನು ಉಪ್ಪಾರಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.ಚಿತ್ರದುರ್ಗ ಹೋಳಲಕೆರೆ ತಾಲೂಕಿನ ಪಿ.ಬಿ. ಸ್ವಾಮಿ (೩೪), ಈತನ ಸ್ನೇಹಿತೆ ಹಾಗೂ ಮಹದೇವಪುರ ನಿವಾಸಿ ಎನ್.ಎಂ.ಅನುಪಮಾ(೩೮), ಈಕೆಯ ಸ್ನೇಹಿತ ಚಿತ್ರದುರ್ಗದ ಪವನ್(೩೦), ಸಕಲೇಪುರದ ಕಾರ್ತಿಕ್(೨೭) ಬಂಧಿತರು.
ಬಂಧಿತರಿಂದ ೯೦.೧೯ ಲಕ್ಷ ರೂ. ನಗದು, ಕದ್ದ ಹಣದಲ್ಲಿ ಖರೀದಿಸಿದ್ದ ೬.೪೯ ಲಕ್ಷ ರೂ.ಮೌಲ್ಯದ ೨ ಆ್ಯಪಲ್ ಐಫೋನ್ ಮೊಬೈಲ್‌ಗಳು, ೧ ಇಯರ್ ಫೋನ್, ೨ ವಾಚುಗಳು, ೧ ಸ್ಮಾರ್ಟ್ ವಾಚ್, ೬೧.೬೭೦ ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ೨ ಕಾರುಗಳು, ೧ ಬೈಕ್ ಅನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಅ.೭ರಂದು ದಾಬಸಪೇಟೆ ಬಳಿ ಉಮೇಶ್ ಅವರ ಕಾರಿನ ಹಿಂಭಾಗದ ಬ್ಯಾಗಿನಲ್ಲಿದ್ದ ೧ ಕೋಟಿ ರೂ. ನಗದು ದೋಚಿ ಪರಾರಿಯಾಗ್ದಿದರು. ಈ ಸಂಬಂಧ ವ್ಯಾಪಾರಿ ಉಮೇಶ್, ಅ.೨೧ರಂದು ಠಾಣೆಗೆ ಬಂದು ಚಾಲಕ ಸ್ವಾಮಿ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.ಆರೋಪಿಗಳ ಪೈಕಿ ಸ್ವಾಮಿ ಸುಮಾರು ೧೫ ವರ್ಷಗಳಿಂದ ಅಡಿಕೆ ವ್ಯಾಪಾರಿ ಉಮೇಶ್ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸ್ವಾಮಿ ಮತ್ತು ಅನುಪಮಾ ಚಿತ್ರದುರ್ಗ ಮೂಲದವರಾಗಿದ್ದು ಇಬ್ಬರು ಸ್ನೇಹಿತರಾಗಿದ್ದಾರೆ. ಅನುಪಮಾ ಮಹದೇವಪುರದಲ್ಲಿ ಬ್ಯೂಟಿಪಾರ್ಲರ್ ಹೊಂದಿದ್ದಾಳೆ. ಅನುಪಮಾ ಸ್ನೇಹಿತನಾಗಿರುವ ಕಾರ್ತಿಕ್ ಈ ಹಿಂದೆ ಚಿತ್ರದುರ್ಗದಲ್ಲಿ ಮೆಡಿಕಲ್ ಸ್ಟೋರ್ ಹೊಂದಿದ್ದ ನಷ್ಟವಾಗಿದ್ದರಿಂದ ಮೆಡಿಕಲ್ ಸ್ಟೋರ್ ಅನ್ನು ಮುಚ್ಚಿದ್ದ. ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹಾಸನದ ಮೂಲದ ಪವನ್ ಕಾರ್ತಿಕ್‌ನ ಸ್ನೇಹಿತನಾಗಿದ್ದಾನೆ. ಈ ನಾಲ್ವರು ಒಟ್ಟು ಗೂಡಿ ಉಮೇಶ್ ಬಳಿ ಹೆಚ್ಚು ಹಣವಿದೆ ಎಂದು ತಿಳಿದು ಸಂಚು ರೂಪಿಸಿ ಕಳವು ಮಾಡಿದ್ದರು.
ಚಿತ್ರದುರ್ಗದ ಭೀಮಸಮುದ್ರ ನಿವಾಸಿ ಉಮೇಶ್, ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದಲ್ಲಿ ಅಡಿಕೆ ವ್ಯಾಪಾರ ಮಾಡುತ್ತಿದ್ದು, ಹೀಗಾಗಿ ಕಾರಿನಲ್ಲಿ ಯಾವಾಗಲೂ ಕೋಟ್ಯಂತರ ರೂ. ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಅ.೭ರಂದು ಅಡಿಕೆ ಖರೀದಿಗಾಗಿ ಶಿರಾ, ತುಮಕೂರಿಗೆ ಹೋಗಿದ್ದರು. ಅಲ್ಲಿ ಅಡಿಕೆ ಸಿಕ್ಕಿರಲಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರಿಯನ್ನು ನೋಡಿಕೊಂಡು ಹೋಗೋಣ ಎಂದು ಚಾಲಕ ಸ್ವಾಮಿ ಜತೆ ಬೆಂಗಳೂರಿಗೆ ಬಂದು ಗಾಂಧಿನಗರದಲ್ಲಿರುವ ಹೋಟೆಲ್‌ನಲ್ಲಿ ಊಟ ಮಾಡಿ, ಚಂದ್ರಾಲೇಔಟ್‌ನ ಪಿಜಿಯಲ್ಲಿದ್ದ ಪುತ್ರಿಯನ್ನು ನೋಡಿಕೊಂಡು ವಾಪಸ್ ಚಿತ್ರದುರ್ಗ ಕಡೆ ಹೊರಟ್ಟಿದ್ದಾರೆ.
ದಾಬಸ್‌ಪೇಟೆ ಬಳಿ ಕಳವುಚಿತ್ರದುರ್ಗ ಕಡೆ ಹೋಗುವ ಮಾರ್ಗ ಮಧ್ಯೆ ದಾಬಸ್‌ಪೇಟೆಯ ಹೋಟೆಲ್‌ವೊಂದರ ಬಳಿ ಟೀ ಕುಡಿಯಲು ಕಾರು ನಿಲ್ಲಿಸಿದ್ದಾರೆ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರು ಕಾರಿನ ಹಿಂಭಾಗದ ಡೋರ್ ತೆರೆದು ೧ ಕೋಟಿ ರೂ. ಇದ್ದ ಹಣದ ಬ್ಯಾಗ್ ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸಿಸಿ ಕ್ಯಾಮಾರಾಗಳನ್ನು ಶೋಧಿಸಿದಾಗ ಹಣ ಕದ್ದ ಆರೋಪಿಗಳು ಚಾಲಕ ಸ್ವಾಮಿಯನ್ನು ಸಂಪರ್ಕಿಸಿರುವುದು ಗೊತ್ತಾಗಿದೆ. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದು ಪತ್ತೆಯಾಗಿ, ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ನಕಲಿ ಕೀ ಬಳಸಿ ಕೃತ್ಯ:ಪ್ರಮುಖ ಆರೋಪಿ ಸ್ವಾಮಿ, ಕೆಲ ತಿಂಗಳ ಹಿಂದೆ ಮಹದೇವಪುರದಲ್ಲಿರುವ ಸ್ನೇಹಿತೆ ಅನುಪಮಾ ಬಳಿ ತನ್ನ ಮಾಲೀಕ ಯಾವಾಗಲೂ ಕೋಟ್ಯಂತರ ರೂ. ಅನ್ನು ಕಾರಿನಲ್ಲಿ ಇಟ್ಟಿರುತ್ತಾರೆ. ಅದನ್ನು ಕಳವು ಮಾಡಿದರೆ, ಸಾಲ ತೀರಿಸಿಕೊಂಡು, ಒಮ್ಮೆಲೆ ಶ್ರೀಮಂತರಾಗಬಹುದು ಎಂದಿದ್ದ. ಈ ವಿಚಾರವನ್ನು ಸ್ನೇಹಿತ ಪವನ್‌ಗೂ ತಿಳಿಸಿದ್ದ. ಪವನ್, ಕಾರ್ತಿಕ್‌ಗೆ ತಿಳಿಸಿದ್ದ. ಅಲ್ಲದೆ, ಅನುಪಮಾಗೆ ಓಡಾಡಲು ಕೆಲ ದಿನಗಳ ಕಾಲ ತನ್ನ ಮಾಲೀಕನ ಕಾರು ಕೊಟ್ಟಿದ್ದ. ಈ ವೇಳೆ ಆಕೆ, ಕಾರಿನ ನಕಲಿ ಕೀ ಮಾಡಿಸಿಕೊಂಡಿದ್ದಾಳೆ.
ಕಾರಿಗೆ ಜಿಪಿಎಸ್ ಅಳವಡಿಕೆ:ನಕಲಿ ಕೀ ಮಾಡಿಸಿಕೊಂಡಿದಲ್ಲದೇ ಸ್ಟೇರಿಂಗ್ ಕೆಳಭಾಗದಲ್ಲಿ ಯಾರಿಗೂ ತಿಳಿಯದ ಹಾಗೇ ಕಾರಿಗೆ ಜಿಪಿಎಸ್ ಅಳವಡಿಸಿ, ಕಾರು ಎಲ್ಲೆಲ್ಲಿ ಹೋಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದರು. ಇದೇ ವೇಳೆ ಅ.೭ರಂದು ಒಂದು ಕೋಟಿ ರೂ. ಜತೆಗೆ ಬೆಂಗಳೂರಿಗೆ ಬರುತ್ತಿರುವ ಬಗ್ಗೆ ಸ್ವಾಮಿಯಿಂದ ಮಾಹಿತಿ ಪಡೆದ, ಅನುಪಮಾ ಮತ್ತು ಇತರರು ಹಣ ದೋಚಲು ಸಂಚು ರೂಪಿಸಿದ್ದರು. ಅದರಂತೆ ದಾಬಸಪೇಟೆಯ ಹೋಟೆಲ್ ಬಳಿ ಟೀ ಕುಡಿಯಲು ಕಾರು ನಿಲ್ಲಿಸಿದಾಗ, ಬೈಕ್‌ನಲ್ಲಿ ಬಂದ ಪವನ್ ಮತ್ತು ಕಾರ್ತಿಕ್ ಕಾರಿನ ಹಿಂಭಾಗ ಡೋರ್ ತೆಗೆದು ಒಂದು ಕೋಟಿ ರೂ. ಇದ್ದ ಬ್ಯಾಗ್ ದೋಚಿ ಪರಾರಿಯಾಗಿದ್ದರು.
ಕದ್ದ ಹಣ ಅನಾಥಶ್ರಮಕ್ಕೆ ದಾನ ಕೊಟ್ಟರು:ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಕಳವು ಮಾಡಿದ್ದ ಹಣದ ಪೈಕಿ ಕೆಲ ಅನಾಥಾಶ್ರಮಗಳಿಗೆ ಧನ ಸಹಾಯ ಮಾಡಿದ್ದಾರೆ, ಅಲ್ಲದೆ, ಚಿನ್ನಾಭರಣ, ಐಫೋನ್‌ಗಳ ಖರೀದಿಸಿದ್ದಾರೆ. ಸಾಲಗಳನ್ನು ತೀರಿಸಿಕೊಂಡಿದ್ದಾರೆ. ಬಾಕಿ ಉಳಿದ ಹಣವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಒಟ್ಟಾರೆ ೯೭ ಲಕ್ಷ ರೂ. ಹಣವನ್ನು ರಿಕವರಿ ಮಾಡಲಾಗಿದೆ. ಉಳಿದ ಹಣವನ್ನು ಬೇರೆ ಬೇರೆ ಕೆಲಸಕಾರ್ಯಗಳಿಗೆ ಖರ್ಚು ಮಾಡಿದ್ದಾರೆ. ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 4 =
Remember me
