ಬೆಂಗಳೂರು:ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.1 ಮೀಸಲಿಡಬೇಕೆಂಬ ಸಲಹೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್​ನಲ್ಲಿ ಪ್ರಕಟಿಸಿದರು. ಬಜೆಟ್​ನಲ್ಲಿ ನಡೆದ ಚರ್ಚೆಗೆ ಶುಕ್ರವಾರ ಉತ್ತರಿಸಿದ ಅವರು, ವಯೋವೃದ್ಧ ಲೈಂಗಿಕ ಅಲ್ಪಸಂಖ್ಯಾತರಿಗೆ ಆರೋಗ್ಯ ಸವಲತ್ತು ಒದಗಿಸಲು ಕ್ರಮವಹಿಸುವೆ. ಅಲ್ಲದೆ, ಕಾನೂನು ಮತ್ತು ಆಡಳಿತಾತ್ಮಕ ಅಂಶಗಳನ್ನು ಪರಿಶೀಲಿಸಿ ಶೇ.1 ಹುದ್ದೆಗಳನ್ನು ಮೀಸಲಿಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದರು.
ದೃಢ ಸಂಕಲ್ಪ:ರಾಜ್ಯದ ಆರ್ಥಿಕತೆಯನ್ನು ಮರಳಿ ಹಳಿಗೆ ತರುವ ದೃಢ ಸಂಕಲ್ಪ ಮಾಡಿರುವೆ. ಇದಕ್ಕೆ ಪೂರಕವಾಗಿ 2.65 ಲಕ್ಷ ರೂ. ಗಾತ್ರದ ಅನುಷ್ಠಾನ ಯೋಗ್ಯ, ಪ್ರಗತಿದಾಯಕ ಬಜೆಟ್ ಮಂಡಿಸಿದ್ದು, ಎಲ್ಲ ಜಾತಿ, ವರ್ಗಗಳ, ಕ್ಷೇತ್ರಗಳು, ಪ್ರದೇಶಗಳಿಗೆ ಸಮಾನ ಆದ್ಯತೆ ನೀಡಿರುವೆ ಎಂದು ಸಿಎಂ ಹೇಳಿದರು. ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಯಾಗಬೇಕು ನಿಜ. ಅದೇಕಾಲಕ್ಕೆ ಬಂಡವಾಳದಾರರಿಂದ ಆರ್ಥಿಕತೆ ಅಭಿವೃದ್ಧಿಯಾಗುತ್ತದೆ ಎನ್ನುವ ಭ್ರಮೆಯಿಂದ ಹೊರಬರಬೇಕಾಗಿದೆ. ಕೃಷಿಕರು, ಕೂಲಿಕಾರರು ಸೇರಿ ಕೆಳಹಂತದ ಜನರೇ ಬಂಡವಾಳ ಹರಿಯುವಿಕೆ, ಅರ್ಥಿಕತೆ ವೃದ್ಧಿ, ಅಭಿವೃದ್ಧಿಪಥ ಕೊಂಡೊಯ್ಯುವವರು ಎನ್ನುವುದು ವಾಸ್ತವ. ಅಭಿವೃದ್ಧಿ ಮುಖೇನ ಆರ್ಥಿಕತೆ ವೃದ್ಧಿ ಚಿಂತನೆ, ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಿ ಮೂರು ಸೆಕ್ಟರ್​ಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ವಿವರಿಸಿದರು.
ಶೇ.9.5 ಬೆಳವಣಿಗೆ ವಿಶ್ವಾಸ:ಆರ್ಥಿಕತೆಗೆ ಸಿಂಹಪಾಲು ನೀಡುವವರಿಗೆ ದೊಡ್ಡ ಗೌರವ ಮತ್ತು ಆದ್ಯತೆ ನೀಡಬೇಕು ಎನ್ನುವುದು ನನ್ನ ತತ್ವವಾಗಿದ್ದು, ಹಣಕಾಸು ಮತ್ತು ಜನರ ಚಟುವಟಿಕೆ ನಡುವೆ ಸಮತೋಲನ ಕಾಯ್ದುಕೊಳ್ಳಲು ಪ್ರಾಶಸ್ಱ ನೀಡಿರುವೆ. ರೈತರು ಉತ್ಪಾದಕರು ಮಾತ್ರವಲ್ಲ ಗ್ರಾಹಕರು ಹೌದು. ಕೃಷಿ ವಲಯ ಶೇ.1 ಬೆಳವಣಿಗೆ ಸಾಧಿಸಿದರೆ ತಯಾರಿಕಾ ವಲಯ ಶೇ.4 ಹಾಗೂ ಸೇವಾ ವಲಯ ಶೇ.10 ವೃದ್ಧಿ ಸಾಧಿಸಲಿದ್ದು, ಈ ಬೆಳವಣಿಗೆ ಚಕ್ರ ಅಡೆತಡೆಯಿಲ್ಲದೆ ಸಾಗಿ ಶೇ.9.5 ಬೆಳವಣಿಗೆ ಸಾಧಿಸುವ ವಿಶ್ವಾಸವಿದೆ ಎಂದು ಬೊಮ್ಮಾಯಿ ತಿಳಿಸಿದರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ 15,645 ಕೋಟಿ ರೂ. ಆದಾಯ ಕೊರತೆ ಅಂದಾಜಿತ್ತು. ಆರ್ಥಿಕ ಶಿಸ್ತು ಮತ್ತು ಬದ್ಧ ಕಾರಣಕ್ಕೆ ಕೊರತೆ ಪ್ರಮಾಣ 6,478ಕ್ಕೆ ಇಳಿಸಲು ಸಾಧ್ಯವಾಗಿದೆ. ಬದ್ಧತಾ ವೆಚ್ಚದ ಮಿತಿ ಶೇ.97ಕ್ಕೆ ಏರಿದ್ದನ್ನು ಶೇ.89ಕ್ಕೆ ತಂದಿರುವೆ. ಜಿಡಿಪಿ ಅನುಸಾರ ಸಾಲದ ಪ್ರಮಾಣ ಶೇ.27.49ಕ್ಕೆ ತಲುಪಿದ್ದು, ನಿಯಮದಂತೆ ಶೇ.25ರೊಳಗೆ ಮಿತಿಗೊಳಿಸಲು ಪ್ರಯತ್ನಿಸುವೆ ಎಂಬ ಆಶ್ವಾಸನೆ ನೀಡಿದರು.

ಶಿಕ್ಷಕರ ನೇಮಕದಲ್ಲಿ ಘೋಷಣೆ:ಸರ್ಕಾರಿ ಹುದ್ದೆಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಶೇ.1 ಮೀಸಲು ಕಲ್ಪಿಸುವ ಕುರಿತು ಪರಿಶೀಲಿಸುವುದಾಗಿ ಮೇಲ್ಮನೆಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ಧಾರೆ. ಆದರೆ, ಶಿಕ್ಷಣ ಇಲಾಖೆಯು 15 ಸಾವಿರ ಶಿಕ್ಷಕರ ನೇಮಕಾತಿ ಸಂಬಂಧ ತೃತೀಯ ಲಿಂಗಿಗಳಿಗೆ ಪ್ರತಿ ಪ್ರವರ್ಗದಲ್ಲಿ ಶೇ.1 ಮೀಸಲಾತಿ ಘೋಷಿಸಿದೆ. ಆ ಮೂಲಕ ಮೀಸಲು ಜಾರಿ ಮಾಡಿದ ಮೊದಲ ಇಲಾಖೆಯಾಗಿದೆ.
ಮುಖ್ಯಮಂತ್ರಿ ಆಕ್ರೋಶ:ವಿರೋಧ ಪಕ್ಷದವರು ಕೇಳಿದ ಎಲ್ಲದಕ್ಕೂ ವಿವರ, ಸಮಜಾಯಿಷಿ ನೀಡಿದ್ದು, ಉತ್ತರ ಪೂರ್ಣಗೊಳ್ಳುವ ಮುನ್ನವೇ ಸಭಾತ್ಯಾಗ ಮಾಡಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಸುಮ್ಮನೆ ವಿರೋಧಕ್ಕಾಗಿ ವಿರೋಧ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಸಿಎಂ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷದವರು ಎಲ್ಲೆಲ್ಲಿ ಅಂಕಿ-ಅಂಶ ತಂದಿದ್ದಾರೊ ಗೊತ್ತಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಕೋವಿಡ್ ಇರಲಿಲ್ಲ. ಆರ್ಥಿಕ ಸ್ಥಿತಿ ಎಲ್ಲವೂ ಉತ್ತಮವಾಗಿದ್ದರೂ, -ಠಿ;1.40 ಲಕ್ಷ ಕೋಟಿ ಸಾಲ (ಶೇ.107) ಮಾಡಿದ್ದರು. ಇವರು ನಮಗೆ ನೈತಿಕತೆ ಪಾಠ ಹೇಳುವುದಕ್ಕೆ ಬರುತ್ತಿದ್ದಾರೆ ಎಂದು ಸಿಎಂ ವ್ಯಗ್ಯವಾಡಿದರು. ಬಜೆಟ್ ಘೋಷಣೆಗಳ ಕಾರ್ಯರೂಪಕ್ಕೆ ತರುವುದು ಹೇಗೆ ಎಂದು ಹಲವರು ಕೇಳಿದ್ದಾರೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ ಎಂದರು.
ಕಾಂಗ್ರೆಸ್ ಸಭಾತ್ಯಾಗ:ಇದೊಂದು ಅಭಿವೃದ್ಧಿಗೆ ಪೂರಕವಲ್ಲದ ನಿರಾಶ ದಾಯಕ ಬಜೆಟ್ ಎಂದು ಕಾಂಗ್ರೆಸ್ ಮೇಲ್ಮನೆಯಲ್ಲಿ ಸಭಾತ್ಯಾಗ ಮಾಡಿತು. ಸಿಎಂ ಉತ್ತರಕ್ಕೂ ತೃಪ್ತರಾಗದ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ನಾವು ಏನು ನಿರೀಕ್ಷೆ ಇಟ್ಟುಕೊಂಡು ಚರ್ಚೆ ಮಾಡಿದ್ದೇವೊ ಅದಕ್ಕೆ ಸೂಕ್ತ ಉತ್ತರ ಬಂದಿಲ್ಲ. ಅಲ್ಲದೆ, ಕಾಂಗ್ರೆಸ್ ಸದಸ್ಯರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಹೊರ ನಡೆದರು. ಇಡೀ ಬಜೆಟ್ ನೋಡಿದರೆ, ಅಲ್ಲಿ ಬಡವರ ಬಗ್ಗೆ ಕಾಳಜಿ ಇಲ್ಲ. ಕೂಲಿ ಕಾರ್ವಿುಕರ ಬಗ್ಗೆ ಕೃಷಿಗೆ ಆದ್ಯತೆ ನೀಡಿಲ್ಲ. ಇದು ಯಾವುದೇ ತೆರಿಗೆ ಇಲ್ಲದ ಚುನಾವಣೆ ಮುನ್ನೋಟ ಹೊಂದಿದ ಬಜೆಟ್ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಉತ್ತರ ಬಳಿಕವೂ ಬಜೆಟ್ ಅನುಮೋದನೆ ಮುಂದಕ್ಕೆ:ಬಜೆಟ್ ಮೇಲೆ ಚರ್ಚೆಗೆ ಸಿಎಂ ಉತ್ತರ ನೀಡಿದ ಮೇಲೆ ಬಜೆಟ್ ಅನುಮೋದನೆ ಮಾಡದೆ ಮುಂದೂಡುವ ಮೂಲಕ ಹೊಸ ಸಂಪ್ರದಾಯಕ್ಕೆ ಮೇಲ್ಮನೆ ನಾಂದಿಯಾಡಿತು. ಎರಡು ವಾರಗಳಿಂದ 27 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಸದನದಲ್ಲಿ ಉತ್ತರ ನೀಡಿದರು. ಅಷ್ಟೇ ಅಲ್ಲದೆ, ಸದಸ್ಯರ ಪ್ರಶ್ನೆಗಳಿಗೆ ವಿವರಗಳನ್ನು ಒದಗಿಸಿ, ಸ್ಪಷ್ಟನೆಯನ್ನು ನೀಡಿದರು. ಇದೆಲ್ಲವೂ ಮುಗಿಯುವ ಹೊತ್ತಿಗೆ ಮದ್ಯಾಹ್ನ 3 ಗಂಟೆಯಾಗುತ್ತಾ ಬಂದ ಕಾರಣ ಎಲ್ಲರಿಗೂ ಹೊಟ್ಟೆ ಹಸಿವು ಹೆಚ್ಚಾಗಿತ್ತು. ಆ ಕಾರಣಕ್ಕೆ ಮತ್ತೆ ಬಜೆಟ್ ಅಂಗೀಕಾರ ಪ್ರಕ್ರಿಯೆಯನ್ನು ಸೋಮವಾರ ಸದನ ಪ್ರಾರಂಭವಾದ ಬಳಿಕ ತೆಗೆದುಕೊಳ್ಳಲು ಉದ್ದೇಶಿಸಿದ್ದು, ಕಲಾಪವನ್ನು ಮುಂದೂಡಲಾಗಿದೆ. ಅನುಮೋದನೆಗೆ ಸಿಎಂ ಮನವಿ ಮಾಡಿದರೂ, ಸಮಯದ ಕೊರತೆ ಹಿನ್ನೆಲೆ ಕಲಾಪವನ್ನು ಸಭಾಪತಿ ಮುಂದೂಡಿದರು.
ರಾಜಸ್ವ ಕೊರತೆ:ರಾಜ್ಯದಲ್ಲಿ 14,699 ಕೋಟಿ ರೂ. ರಾಜಸ್ವ ಕೊರತೆ ಇದ್ದರೆ, ಕೇರಳದಲ್ಲಿ 22 ಸಾವಿರ ಕೋಟಿ ರೂ. ರಾಜಸ್ವ ಕೊರತೆ ಇದೆ. ಹಲವು ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಪರಿಸ್ಥಿತಿ ಉತ್ತಮವಾಗಿದೆ. ಆರ್ಥಿಕ ನಿರ್ವಹಣೆ ಸರಿ ದಾರಿಯಲ್ಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಮೊದಲನೇ ಪ್ಯಾಕೇಜಿನಲ್ಲಿ 4644 ಕೋಟಿ ರೂ., ಎರಡನೇ ಪ್ಯಾಕೇಜಿಗೆ 2658 ರೂ. ವೆಚ್ಚವಾಗಿದೆ. ಸಾರಿಗೆ ನೌಕರರ ಸಂಬಳ, ಖರೀದಿ ಸೇರಿ ರಾಜ್ಯದಲ್ಲಿ ಈ ತನಕ ಕೋವಿಡ್​ಗಾಗಿ 15,646 ಕೋಟಿ ವೆಚ್ಚ ಮಾಡಲಾಗಿದೆ ಎಂದರು.
ಪಂಚಾಂಗ ಪ್ರಕಾರ ಧಾರ್ವಿುಕ ನಾಯಕರ ಜಯಂತಿ ಆಚರಿಸಿ:ಧಾರ್ವಿುಕ ಮಹಾತ್ಮರ ಜಯಂತಿ ಯನ್ನು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ನಡೆಸದೆ ಹಿಂದು ಪಂಚಾಗದ ದಿನದ ಪ್ರಕಾರ ನಡೆಸುವ ಬಗ್ಗೆ ಸರ್ಕಾರ ಚರ್ಚೆ ನಡೆಸಿ ತೀರ್ಮಾನ ಮಾಡಲಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಗೆ ತಿಳಿಸಿದರು. ಶುಕ್ರವಾರ ಪ್ರಶ್ನೋತ್ತರ ಕಲಾಪದ ಬಳಿಕ ಸ್ಪೀಕರ್ ಅವರು ಯೋಗಿ ನಾರೇಯಣ ಜಯಂತಿ ಆಚರಣೆ ಪ್ರಕಟಣೆ ಮತ್ತು ಜಯಂತಿ ಅಂಗವಾಗಿ ಶುಭಾಶಯ ಕೋರಿದರು. ಈ ವೇಳೆ ಮಾತನಾಡಿದ ರಮೇಶ್​ಕುಮಾರ್, ತಾತಯ್ಯ ಯೋಗಿ ನಾರೇಯಣ ಫಾಲ್ಗುಣ ಪೌರ್ಣಮಿಯಂದು ಜನಿಸಿದ್ದರು. ಮನುಕುಲಕ್ಕೆ ಮಾರ್ಗದರ್ಶನ ಮಾಡಿದವರು. ಅವರ ಜಯಂತಿ ಆಚರಣೆಯನ್ನು ಪ್ರತಿ ವರ್ಷ ಫಾಲ್ಗುಣ ಪೌರ್ಣಮಿಯಂದೇ ಆಚರಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು. ಸ್ಪೀಕರ್ ಕೂಡ ದನಿಗೂಡಿಸಿ, ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಆಚರಿಸದೆ ಹಿಂದು ಪಂಚಾಗದ ಪ್ರಕಾರ ಆಚರಿಸುವುದು ಸೂಕ್ತ, ಈ ಸಲಹೆಯನ್ನು ಪರಿಗಣಿಸಬಹುದಲ್ಲವೇ ಎಂದು ಸರ್ಕಾರವನ್ನು ಕೋರಿದರು. ಬಳಿಕ ಉತ್ತರ ನೀಡಿದ ಮಾಧುಸ್ವಾಮಿ, ಈ ವಿಚಾರ ಚರ್ಚೆಯಾಯಿತು, ಇದು ನಮ್ಮ ವ್ಯಾಪ್ತಿಗೆ ಬರಲ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರಲಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ತಿಳಿಸಿತು. ಬೇರೆ ಯಾವೆಲ್ಲ ಧಾರ್ವಿುಕ ಮಹಾತ್ಮರ ಜಯಂತಿಯನ್ನು ಇಂಗ್ಲಿಷ್ ಕ್ಯಾಲೆಂಡರ್ ರೀತಿ ಆಚರಿಸದೆ ಪಂಚಾಗದಲ್ಲಿ ಬರುವ ದಿನದಂದು ಆಚರಿಸಬಹುದು ಎಂಬ ಬಗ್ಗೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎಂದರು.
ಹೊಸದಾಗಿ 300 ಎಲೆಕ್ಟ್ರಿಕ್ ಬಸ್ ಖರೀದಿಗೆ ನಿರ್ಧಾರ:ಪರಿಸರ ಸಂರಕ್ಷಣೆ ಹಾಗೂ ಡಿಸೇಲ್​ಗೆ ಬಳಕೆ ತಗ್ಗಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ಬಸ್​ಗಳ ಕಾರ್ಯಾಚರಣೆಗೆ ಒತ್ತು ನೀಡಲು ಸರ್ಕಾರ ಬದ್ಧವಾಗಿದ್ದು, ಹೊಸದಾಗಿ 300 ಎಲೆಕ್ಟ್ರಿಕ್ ಬಸ್​ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಶುಕ್ರವಾರ ಮೇಲ್ಮನೆಗೆ ತಿಳಿಸಿದರು. ಕಾಂಗ್ರೆಸ್​ನ ಕೆ.ಗೋವಿಂದರಾಜ್ ಪ್ರಶ್ನೆಗೆ ಉತ್ತರಿಸಿ, ಕೇಂದ್ರ ಸರ್ಕಾರವು ಭಾರಿ ಕೈಗಾರಿಕೆ ಇಲಾಖೆಯ ಫೇಮ್2 ಯೋಜನೆಯಡಿ ಪ್ರತಿ ಬಸ್​ಗೆ 55 ಲಕ್ಷ ರೂ.ನಂತೆ 300 ಬಸ್​ಗಳಿಗೆ ಗರಿಷ್ಠ 165 ಕೋಟಿ ರೂ. ಅನುದಾನವನ್ನು ನೀಡುತ್ತಿದೆ. ರಾಜ್ಯ ಸರ್ಕಾರವು ಪ್ರತಿ ಬಸ್​ಗೆ 33 ಲಕ್ಷ ರೂ.ನಂತೆ 100 ಕೋಟಿ ರೂ. ಭರಿಸಲಿದೆ. ಒಟ್ಟಾರೆ ಪ್ರತಿ ಬಸ್​ಗೆ 88.33 ಲಕ್ಷ ರೂ.ಗಳನ್ನು ಒಪ್ಪಂದ ಪ್ರಕಾರ ಮೆ.ಅಶೋಕ್ ಲೇಲ್ಯಾಡ್ ಮತ್ತು ಮೆ. ಸ್ವಿಚ್ ಮೊಬಿಲಿಟಿ ಆಟೋಮೊಟಿವ್ ಲಿಮಿಟೆಡ್​ನವರಿಗೆ ಪಾವತಿಸಲಾಗುವುದು ಎಂದು ತಿಳಿಸಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 24 ಬಸ್​ಗಳು ಡಿಸೆಂಬರ್​ನಿಂದ ಕಾರ್ಯಾಚರಣೆ ಪ್ರಾರಂಭಿಸಿವೆ. 90 ಬಸ್​ಗಳಿಗೆ ಒಪ್ಪಂದವಾಗಿದ್ದರೂ, ಅಗತ್ಯ ಇರುವಷ್ಟು ಚಾರ್ಜಿಂಗ್ ಸೆಂಟರ್ ಲಭ್ಯವಿಲ್ಲದ ಕಾರಣ ಎಲ್ಲ ಬಸ್​ಗಳು ಕಾರ್ಯಾಚರಣೆಗೆ ಇಳಿದಿಲ್ಲ ಎಂದರು.
ಪ್ರತಿ ಪೈಸೆಯೂ ವಸೂಲಿ:ಸಾರಿಗೆ ನಿಗಮಕ್ಕೆ ವಂಚಿಸುವ ಅಧಿಕಾರಿ ಗಳು, ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವ ಜತೆಗೆ ದುರ್ಬಳಕೆ ಮಾಡಿಕೊಂಡ ಪ್ರತಿ ಪೈಸೆಯೂ ವಸೂಲಿ ಮಾಡಲಾಗುವುದು ಎಂದ ಶ್ರೀರಾಮುಲು, ಮುಷ್ಕರದಲ್ಲಿ ಭಾಗವಹಿಸಿದ್ದ 4 ಸಾರಿಗೆ ನಿಗಮಗಳ ಒಟ್ಟು 2846 ಸಿಬ್ಬಂದಿ ಅಮಾನತು ಆದೇಶ ಹಿಂಪಡೆಯಲಾಗಿದೆ ಎಂದು ಹೇಳಿದರು.
130 ವಸತಿ ಶಾಲೆ ಕಟ್ಟಡ ಪೂರ್ಣ:ರಾಜ್ಯದಲ್ಲಿ 130 ವಸತಿ ಶಾಲೆ ಕಟ್ಟಡಗಳು ಏಳೆಂಟು ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು. ವಿಧಾನಸಭೆಯಲ್ಲಿ ಬಿಜೆಪಿಯ ಸಿದ್ದು ಸವದಿ ಬೇಡಿಕೆ ಪ್ರಸ್ತಾಪಕ್ಕೆ ಕಾರಜೋಳ ಉತ್ತರಿಸಿ, ರಾಜ್ಯದಲ್ಲಿ ಒಟ್ಟು 826 ವಸತಿ ಶಾಲೆಗಳಿವೆ. ಈ ಪೈಕಿ 426ಕ್ಕೆ ಕಟ್ಟಡಗಳಿವೆ. ಇನ್ನಷ್ಟು ವಾಸಕ್ಕೆ ಸಿದ್ಧವಾಗಿವೆ. ಈ ವಿಷಯದಲ್ಲಿ ಸರ್ಕಾರಕ್ಕೆ ಬದ್ಧತೆ ಇದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದರು.
ರೈತರಿಗೆ ಒಳ್ಳೆಯ ಬೆಲೆ ಸಿಗಬೇಕು:ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ರೈತರ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ರೈತರಿಗೆ ಸರಿಯಾದ ಬೆಂಬಲ ಬೆಲೆ ಸಿಗಬೇಕು.ಸ್ವಾಮಿನಾಥನ್ ವರದಿ ಶೇ.90 ಶಿಫಾರಸು ಜಾರಿ ಮಾಡಿದ್ದೇವೆ. ರೈತರು ಬೆಳೆದ ಬೆಳೆಯನ್ನು ಗೋದಾಮಿನಲ್ಲಿ ದಾಸ್ತಾನಿಟ್ಟು ಬೆಲೆ ಬಂದಾಗ ಮಾರುವ ವ್ಯವಸ್ಥೆಯಾಗಬೇಕು. ಈ ನಿಟ್ಟಿನಲ್ಲಿ ಇನ್ನಷ್ಟು ಸುಧಾರಣೆ ಆಗಬೇಕಿದೆ ಎಂದರು.
4,244 ಅಂಗನವಾಡಿಗೆ ಬೇಡಿಕೆ:ರಾಜ್ಯದಲ್ಲಿ 4,244 ಹೊಸ ಅಂಗನವಾಡಿಗಳಿಗೆ ಬೇಡಿಕೆ ಇದೆ ಎಂದು ಸಚಿವ ಹಾಲಪ್ಪ ಆಚಾರ್ ವಿಧಾನಸಭೆಯಲ್ಲಿ ತಿಳಿಸಿದರು. ಕಾಂಗ್ರೆಸ್​ನ ಸೌಮ್ಯರೆಡ್ಡಿ ಪ್ರಶ್ನೆಗೆ ಉತ್ತರಿಸಿ, ಬೆಂಗಳೂರೊಂದರಲ್ಲೇ 2000 ಹೊಸ ಅಂಗನವಾಡಿಗೆ ಬೇಡಿಕೆ ಇದೆ. ಜಯನಗರ ಕ್ಷೇತ್ರದ ಅಂಗನವಾಡಿಗಳ ಸಮಸ್ಯೆ ಬಗ್ಗೆ ಪರಿಶೀಲಿಸಲು ತಕ್ಷಣವೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸುವುದಾಗಿ ತಿಳಿಸಿದರು.
ಪಕೋಡಾ ಮಾರಾಟ ಮಾಡುವುದು ಪ್ರಧಾನಿ ಅವರ ಫೇವರಿಟ್. ಇದನ್ನು ಮಾರಾಟ ಮಾಡುವುದಕ್ಕಾದರೂ ಬೀದಿ ಬದಿ ವ್ಯಾಪಾರಿಗಳಿಗೆ ಅನುದಾನ ಒದಗಿಸಿ ಎಂದು ಪ್ರಿಯಾಂಕ್ ಖರ್ಗೆ ಸರ್ಕಾರವನ್ನು ತಿವಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಕಾಂಗ್ರೆಸ್​ನ ಅನಿಲ್ ಚಿಕ್ಕಮಾದು, ಸಮೃದ್ಧಿ ಯೋಜನೆಗೆ ಅನುದಾನ ನೀಡದೆ ಇರುವುದು ಹಾಗೂ ಉದ್ಯೋಗಿನಿ ಯೋಜನೆಯಡಿ ಅತಿ ಕಡಿಮೆ ಗುರಿ ನಿಗದಿ ಮಾಡಿದ್ದರ ಬಗ್ಗೆ ಪ್ರಸ್ತಾಪಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಬಸಪ್ಪ ಆಚಾರ್ ಅನುದಾನದ ಲಭ್ಯತೆ ಇಲ್ಲದ ವಿಚಾರ ಹೇಳಿ ಕೈಚೆಲ್ಲಿದರು. ಸಿಎಂಗೆ ಹೆಚ್ಚಿನ ಅನುದಾನ ಕೊಡುವಂತೆ ಕೇಳಿದ್ದೇವೆ, ಅನುದಾನ ಪಡೆಯಲು ಪ್ರಯತ್ನ ನಡೆಸಿದ್ದೇವೆ ಎಂದರು. ಈ ಉತ್ತರದಿಂದ ತೃಪ್ತರಾದ ಶಾಸಕರು ಸರ್ಕಾರದ ಮೇಲೆ ಮುಗಿಬಿದ್ದರು. ಈ ವೇಳೆ ಪ್ರಿಯಾಂಕ್ ಖರ್ಗೆ, ಪಕೋಡ ವಿಚಾರ ಪ್ರಸ್ತಾಪಿಸಿದರು. ಬೀದಿಬದಿಯಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ ಬಡತನರೇಖೆಗಿಂತ ಕೆಳಗಿರುವ ಮಹಿಳೆಯರಿಗೆ 10 ಸಾವಿರ ರೂ. ಪ್ರೋತ್ಸಾಹಧನ ಒದಗಿಸುವ ಸಮೃದ್ಧಿ ಯೋಜನೆಗೆ 2020-21ನೇ ಸಾಲಿನಿಂದ ಅನುದಾನ ಹಂಚಿಕೆಯಾಗಿಲ್ಲ ಎಂದು ಸಚಿವರೇ ಒಪ್ಪಿಕೊಂಡರು.
ಕೋವಿಡ್ ನಿರ್ವಹಣೆ ಬಗ್ಗೆ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಬಿಜೆಪಿಯ ಸಿದ್ದು ಸವದಿ, ನಮ್ಮ ಸರ್ಕಾರ ಕರೊನಾ ಸಂದರ್ಭ ಪ್ರಪಂಚಕ್ಕೆ ಮಾದರಿ ಕೆಲಸ ಮಾಡಿದೆ. ಆದರೂ ವಿರೋಧ ಪಕ್ಷದ ನಾಯಕರು ಯಾಕೆ ಮಾತನಾಡುತ್ತಾರೋ ಗೊತ್ತಿಲ್ಲ. ನಿಮ್ಮದೇ ಸರ್ಕಾರ ಮಹಾರಾಷ್ಟ್ರದಲ್ಲಿ ಇತ್ತು, ಮಹಾರಾಷ್ಟ್ರ ಕಥೆ ಏನಾಯ್ತು? ಪ್ರಪಂಚದ ಹಿರಿಯಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಕಥೆ ಏನಾಯ್ತು? ನಿಮ್ಮ ನಾಯಕಿಯ ಮೂಲ ಸ್ಥಾನ ಇಟಲಿಯಲ್ಲಿ ಏನಾಯ್ತು, ಬೀದಿಯಲ್ಲಿ ಹೆಣ ಬಿದ್ದು, ಮಿಲಿಟರಿ ವಾಹನ ತಂದು ದಫನ್ ಮಾಡಿದಿರಿ. ನಮ್ಮ ಬಗ್ಗೆ, ಮೋದಿ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ ಎಂದು ಹೇಳಿದರು.
ಮಧ್ಯಪ್ರದೇಶಿಸಿದ ಪ್ರಿಯಾಂಕ್ ಖರ್ಗೆ, ಸೋನಿಯಾ ಗಾಂಧಿ ಎಲೆಕ್ಟೆಡ್ ಮೆಂಬರ್ ಆಫ್ ಪಾರ್ಲಿಮೆಂಟ್, ಇಟಲಿಯಲ್ಲಿ ಮೆಂಬರ್ ಆಫ್ ಪಾರ್ಲಿಮೆಂಟ್ ಆಗಲು ಆಗುತ್ತಾ? ಏನು ಜಾಣತನದಿಂದ ಮಾತನಾಡುತ್ತಿದ್ದೀರಾ ಎಂದು ಕೆಣಕಿದರು. ಉದ್ಯೋಗದ ಬಗ್ಗೆ ಮಾತನಾಡಿ, ಎಷ್ಟು ಜನಕ್ಕೆ ರಾಜ್ಯದಲ್ಲಿ ಉದ್ಯೋಗ ಕೊಡಿಸಿದ್ದಿರಾ? ಕೋವಿಡ್​ನಿಂದ ಎಷ್ಟು ಜನ ಸತ್ತಿದ್ದಾರೆ ಹೇಳಿ ಎಂದು ಕಿಡಿಕಾರಿದರು. ಆಗ ಸಿದ್ದು ಸವದಿ, ಮೋದಿ ಉಚಿತವಾಗಿ ಲಸಿಕೆ ಕೊಟ್ಟಿದ್ದಾರೆ. ಯಾವ ಲಸಿಕೆಗೆ ಚಾರ್ಜ್ ಮಾಡಿದ್ದಾರೆ. ಫ್ರೀ ಕೊಟ್ಟರೋ ಇಲ್ಲವೋ ಹೇಳಿ ಎಂದು ತಿರುಗೇಟು ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ರಾಜ್ಯ ಬಜೆಟ್ ಬಗ್ಗೆ ಮಾತನಾಡುವುದಿದ್ದರೆ ಮಾತನಾಡಿ. ಇಲ್ಲ ಮೋದಿಯವರಿಂದ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಹೇಳಿ ಎಂದು ಕೇಳಿದರು. ಕಾರ್ವಿುಕ ಇಲಾಖೆಯಲ್ಲಿ 33 ಸಾವಿರ ಉದ್ಯೋಗ ನಷ್ಟವಾಗಿದೆ. ಸುಮ್ಮನೆ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್​ನ ವೆಂಕಟರಾವ್ ನಾಡಗೌಡ ಮಾತನಾಡಿ, ಪಶು ಭಾಗ್ಯ ಪುನರಾರಂಭಿಸಬೇಕು. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ರೈತರಿಗೆ ನೀರು, ಗುಣಮಟ್ಟದ ವಿದ್ಯುತ್ ಹಾಗೂ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು. ಮಧ್ಯ ಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, ರೈತರಿಗೆ ಮಾರಕ ಕಾಯ್ದೆ ಜಾರಿಗೆ ತಂದಿರುವುದರಿಂದ ಎಪಿಎಂಸಿಗಳು ಮುಚ್ಚಿ ಹೋಗುತ್ತಿವೆ. ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಒಂದೂವರೆಯಿಂದ ಎರಡು ವರ್ಷದಲ್ಲಿ 30 ಎಪಿಎಂಸಿಗಳು ನಷ್ಟದಲ್ಲಿವೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ. ಸೋಮಶೇಖರ್, ಕೃಷಿ ಕಾಯ್ದೆಯಿಂದ ರಾಜ್ಯದ ರೈತರಿಗೆ ಸಾಕಷ್ಟು ಪ್ರಯೋಜನವಾಗುತ್ತಿದೆ. ಈ ಕಾಯ್ದೆ ಬೇಡ ಎಂದು ಯಾರೂ ದೂರಿಲ್ಲ ಎಂದು ತಿರುಗೇಟು ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + twenty =
Remember me
