|ಹರೀಶ್ ಬೇಲೂರುಬೆಂಗಳೂರು
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳಿಂದ ತರಹೇವಾರಿ ಕಸರತ್ತು ನಡೆಯುತ್ತಿದೆ. ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇ ಬೇಕೆಂದು ನಾನಾ ತಂತ್ರ ಹೂಡುತ್ತಿವೆ. ಜತೆಗೆ, ವೈಯಕ್ತಿಕವಾಗಿಯೂ ಅಭ್ಯರ್ಥಿಗಳು ಗೆಲ್ಲಲೇಬೇಕೆಂಬ ಛಲದಲ್ಲಿರುವುದರಿಂದ ಒಟ್ಟಾರೆ ಈ ಬಾರಿ ಚುನಾವಣೆಯಲ್ಲಿ 10 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಹಣದ ಹೊಳೆಯೇ ಹರಿಯುವ ಅಂದಾಜು ಮಾಡಲಾಗಿದೆ. ಚುನಾವಣೆ ಆಯೋಗದ ಹದ್ದಿನ ಕಣ್ಣು, ಆದಾಯ ತೆರಿಗೆ ಇಲಾಖೆ ತೀವ್ರ ನಿಗಾದ ನಡುವೆಯೂ ವಿಪರೀತ ಪ್ರಮಾಣದಲ್ಲಿ ಹಣ, ಇತರ ‘ಗಿಫ್ಟ್’ ಹಂಚಲು ಯೋಜನಾಬದ್ಧವಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿರುವ ಅಭ್ಯರ್ಥಿಗಳು, ಚುನಾವಣಾ ಘೋಷಣೆಯಾಗುವ ಮುನ್ನವೇ ಒಂದು ಸುತ್ತಿನ ‘ಹಂಚಿಕೆ’ಯನ್ನು ನಿರಾತಂಕವಾಗಿ ನಡೆಸಿದ್ದಾರೆ.
ಪ್ರತಿ ಕ್ಷೇತ್ರಕ್ಕೆ ಅಂದಾಜು 40- 50 ಕೋಟಿ ರೂ.ನಂತೆ 224 ಕ್ಷೇತ್ರಗಳಲ್ಲಿ 10 ಸಾವಿರ ಕೋಟಿ ರೂ. ಗೂ ಹೆಚ್ಚು ವ್ಯಯವಾಗಲಿದೆ, ತೀವ್ರ ಪೈಪೋಟಿ ಇರುವಂತಹ ಕ್ಷೇತ್ರದಲ್ಲಿ ಅಭ್ಯರ್ಥಿಗಳು 100 ಕೋಟಿ ರೂ.ಗಿಂತ ಅಧಿಕ ಖರ್ಚು ಮಾಡಲು ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆರ್ಥಿಕ ಶಕ್ತಿ ಆಧಾರದ ಮೇಲೆ ಅಭ್ಯರ್ಥಿ ವೆಚ್ಚ ಮಾಡಲಿದ್ದು, ಪ್ರಚಾರ ಕಾರ್ಯ, ಸಮಾವೇಶಗಳಿಗೆ ವೇದಿಕೆ, ಸಮಾವೇಶಕ್ಕೆ ಬರುವ ಜನರಿಗೆ, ಸ್ಥಳೀಯವಾಗಿ ಪ್ರಭಾವಿಗಳಾಗಿರುವ ಜಿಪಂ, ತಾಪಂ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನು ನಿಭಾಯಿಸಲು, ಬಾರ್ ಮತ್ತು ಮಾಂಸದ ಹೋಟೆಲ್​ಗಳಲ್ಲಿ ಊಟೋಪಚಾರಕ್ಕೆ ಕೋಟ್ಯಂತರ ರೂ. ಹಣ ವ್ಯಯಿಸಲು ಸಜ್ಜಾಗಿದ್ದಾರೆ. ಮತದಾರರಿಗೆ ಹಂಚಲು ಸೀರೆ, ಮದ್ಯ, ಮೂಗುತಿ, ಡಾಲರ್, ಬೆಳ್ಳಿ ಓಲೆ ಮತ್ತು ಕಾಲು ಚೈನ್, ಕುಕ್ಕರ್, ಟಿವಿ ಸೇರಿ ವಿವಿಧ ವಸ್ತುಗಳ ಗಿಫ್ಟ್​ಗೆ ಕೋಟ್ಯಂತರ ರೂ. ಸುರಿಯಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಚುನಾವಣಾ ಕಣ ರಂಗೇರಿದೆ. ಹಾಲಿ ಶಾಸಕರು, ಮಾಜಿ ಶಾಸಕರು, ಹೆಸರು ಘೋಷಣೆ ಖಚಿತವಾಗಿರುವವರು, ಆಕಾಂಕ್ಷಿ ಹುರಿಯಾಳುಗಳು ಉಡುಗೊರೆಗಳನ್ನು ಮನೆಮನೆ ತಲುಪಿಸುತ್ತಿದ್ದಾರೆ. ಧಾರ್ವಿುಕ ಕ್ಷೇತ್ರಗಳಿಗೆ ಯಾತ್ರೆಗಳನ್ನು ಏರ್ಪಡಿಸುತ್ತಿದ್ದಾರೆ.
ವ್ಯಾಪಾರಿಗಳು ಫುಲ್ ಖುಷ್:ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಿನ್ನಾಭರಣ, ಸೀರೆ, ಮದ್ಯದಂಗಡಿ ಮತ್ತು ಮಾಂಸಾಹಾರ ಅಂಗಡಿಗಳ ಮಾಲೀಕರು ಸಖತ್ ಖುಷಿಯಾಗುತ್ತಿದ್ದಾರೆ. ಕೋಟ್ಯಂತರ ರೂ. ವಹಿವಾಟು ನಡೆಯುವುದರಿಂದ ವರ್ಷಕ್ಕೆ ಆಗುವ ವ್ಯಾಪಾರ ತಿಂಗಳಲ್ಲೇ ಮಾಡಲಿದ್ದಾರೆ.
ಕಾರ್ವಿುಕರ ಕೊರತೆ:ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಹೆಚ್ಚಿನ ಜನರನ್ನು ಕರೆದೊಯ್ಯುವ ಕಾರಣದಿಂದ ಕೃಷಿ ಸೇರಿ ಇತರ ಕಾರ್ಯಗಳಿಗೆ ಕೂಲಿ ಕಾರ್ವಿುಕರ ಸಮಸ್ಯೆ ಎದುರಾಗುತ್ತದೆ. ಪ್ರತಿನಿತ್ಯ ಪ್ರಚಾರಕ್ಕೆ ಒಬ್ಬರಿಗೆ ಸಾವಿರ ರೂ. ಹಣ, ಊಟ ಮತ್ತು ಹೆಂಡ ಸಿಗುವುದರಿಂದ ಒಂದೂವರೆ ತಿಂಗಳು ಕೂಲಿ ಕಾರ್ವಿುಕರು ಸಿಗುವುದಿಲ್ಲ. ಇನ್ನೂ ಕೆಲವರಿಗೆ ಇನ್ನಷ್ಟು ಆಮಿಷವೊಡ್ಡಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಹೀಗಾಗಿ, ದೈನಂದಿನ ಕೆಲಸಗಳಿಗೆ ಕಾರ್ವಿುಕರ ಕೊರತೆ ಕಾಡಲಿದೆ.
ಹಸಿರು-ಪಿಂಕ್ ನೋಟ್:ಇನ್ನು ಚುನಾವಣೆ ಒಂದು ವಾರವಿದ್ದಾಗ ಮತದಾರರನ್ನು ಶತಾಯಗತಾಯ ಓಲೈಸಿಕೊಳ್ಳಲು ಹಣ ಹಂಚುವುದು ಸಾಮಾನ್ಯವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ‘ಹಸಿರು-ಪಿಂಕ್ ನೋಟ್’ (500 ರೂ. ಹಾಗೂ 2000 ರೂ.) ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದ್ದು, ಎದುರಾಳಿಯ ಹಂಚಿಕೆ ಸಾಮರ್ಥ್ಯವನ್ನು ಅಳೆದು ಹೆಚ್ಚೆಚ್ಚು ಕೊಡುವುದು ವಾಡಿಕೆ. ಇದೇ ಬೆಳವಣಿಗೆ ಈ ಬಾರಿಯೂ ಮರುಕಳಿಸುವುದು ನಿಚ್ಚಳವಾಗಿದೆ.
ಕರ್ನಾಟಕ ಸೇರಿ ದೇಶದ ಯಾವುದೇ ಚುನಾವಣೆಗಳಲ್ಲಿ ಅಧಿಕ ಹಣ ಖರ್ಚು ಮಾಡುವುದು ಕಾನೂನು ಮತ್ತು ಪ್ರಜಾಪ್ರಭುತ್ವಕ್ಕೆ ವಂಚನೆ ಮಾಡಿದಂತಾಗಲಿದೆ. ರಾಜಕೀಯ ಪಕ್ಷಗಳು ಚುನಾವಣಾ ನೀತಿಸಂಹಿತೆ ಕಟ್ಟುನಿಟ್ಟಾಗಿ ಪಾಲಿಸದಿರುವುದು ಅಕ್ಷಮ್ಯ. ಪ್ರಜಾಪ್ರಭುತ್ವ ಮೌಲ್ಯವನ್ನೇ ಉಲ್ಲಂಘಿಸಿ ಹಣದ ಪ್ರಭಾವದಿಂದ ಚುನಾವಣೆ ಗೆಲ್ಲುವ ಕ್ರಮ ಖಂಡನೀಯ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ವೆಚ್ಚ ಸೇರಿ ಇತರ ಚಟುವಟಿಕೆಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟು ತನ್ನ ಅಧಿಕಾರ ಬಳಸಿ ಕಠಿಣ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ.
|ಪ್ರೊ.ಚಂಬಿ ಪುರಾಣಿಕ್ರಾಜಕೀಯ ವಿಶ್ಲೇಷಕ
ಗ್ರಾಮೀಣ, ಸ್ಲಮ್ ಮತದಾರರ ಮೇಲೆ ಕಣ್ಣು:ಚುನಾವಣೆ ವೇಳೆ ನಿರ್ಣಾಯಕ ಪಾತ್ರ ವಹಿಸುವ ಗ್ರಾಮೀಣ ಮತ್ತು ಸ್ಲಂ ಮತಗಳ ಮೇಲೆ ರಾಜಕೀಯ ನಾಯಕರು ದೃಷ್ಟಿ ಹರಿಸುತ್ತಿದ್ದಾರೆ. ಇವರನ್ನು ಓಲೈಸಲು ಹಣದ ಜತೆಗೆ ವಿವಿಧ ಗಿಫ್ಟ್​ಗಳ ಆಮಿಷವೊಡ್ಡಲಿದ್ದಾರೆ. ಗಿಫ್ಟ್​ಗಳ ಜತೆಗೆ ಹಣವೂ ರವಾನೆಯಾಗಲಿದೆ.
50 ಲಕ್ಷ ರೂ. ಮಿತಿ:ವಿಧಾನಸಭಾ ಚುನಾವಣೆಗೆ 50 ಲಕ್ಷ ರೂ. ಗಿಂತ ಕಡಿಮೆ ಖರ್ಚು ಮಾಡಲು ಚುನಾವಣಾ ಆಯೋಗ ಮಿತಿ ವಿಧಿಸಿದೆ. ಆದರೆ, ಸಂಭಾವ್ಯ ಅಭ್ಯರ್ಥಿಗಳು ಚಾಪೆ ಕೆಳಗೆ, ರಂಗೋಲಿ ಕೆಳಗೆ ತೂರುವ ತಂತ್ರಗಾರಿಕೆ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಹಣದ ಹೊಳೆಯನ್ನೇ ಹರಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಮಹಿಳಾ ಮತದಾರರ ಮನ ಸೆಳೆಯಲು ಆದ್ಯತೆ ನೀಡಿರುವ ರಾಜಕೀಯ ಮುಖಂಡರು ಕೋಟ್ಯಂತರ ರೂ. ಮೌಲ್ಯದ ಸೀರೆಗಳ ಮುಂಗಡ ಖರೀದಿ ನಡೆಸಿದ್ದಾರೆ. ಕೋಟ್ಯಂತರ ಮೌಲ್ಯದ ಬಂಗಾರದ ಮೂಗುತಿ, ಡಾಲರ್, ಬೆಳ್ಳಿಯ ಓಲೆ ಮತ್ತು ಕಾಲು ಚೈನ್ ಸೇರಿ ವಿವಿಧ ಆಭರಣಗಳನ್ನು ಹಂಚುವ ಇರಾದೆ ಹೊಂದಿದ್ದಾರೆ.
ನಿತ್ಯವೂ ಲಕ್ಷಾಂತರ ರೂ. ಖರ್ಚು:ಪ್ರಚಾರಕ್ಕಾಗಿ ಬರುವ ಜನರಿಗೆ ಊಟ, ಮದ್ಯ ಮತ್ತು ಇತರೆ ವೆಚ್ಚ ಸೇರಿ ಆಂದಾಜು ಪ್ರತಿನಿತ್ಯ ಲಕ್ಷಾಂತರ ರೂ. ಖರ್ಚಾಗಲಿದೆ. ಚುನಾವಣೆ ಪ್ರಚಾರ ಮುಗಿದ ಬಳಿಕ ಮತದಾನಕ್ಕೆ 2 ಅಥವಾ 3 ದಿನ ಬಾಕಿ ಇರುವಾಗಲೇ ಸದ್ದಿಲ್ಲದೆ ಗರಿಗರಿ ನೋಟುಗಳ ಸದ್ದು ಜೋರಾಗಿ ನಡೆಯಲಿದೆ. ಇನ್ನು ಹಣ ಹಂಚುವುದರಲ್ಲೂ ಓರ್ವ ಅಭ್ಯರ್ಥಿ ಪ್ರತಿ ಮನೆಗೆ 2 ಸಾವಿರ ರೂ. ನೀಡಿದರೆ, ಇನ್ನೊಬ್ಬರು , 3 ಸಾವಿರ ರೂ, 4 ಸಾವಿರ ರೂ.ನಂತೆ ಹಂಚುತ್ತಾರೆ. ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಪ್ರತಿ ಮನೆಗೆ 5 ಸಾವಿರ ರೂ.ವರೆಗೆ ಹಣ ಜತೆಗೆ ಸೀರೆ, ಚಿನ್ನದ ಮೂಗುತಿ, ವಾಚು ಸೇರಿ ಇತರ ಗಿಫ್ಟ್​ಗಳನ್ನು ಹಂಚುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ.
ಚುನಾವಣೆ ಮುಗಿಯುವವರೆಗೂ ರಾಜಕೀಯ ಪ್ರೇರಿತ ಕ್ರಿಕೆಟ್​ ಟೂರ್ನಮೆಂಟ್​​ಗಳಿಗೆ ನಿಷೇಧ; ಪಂದ್ಯಾವಳಿ ನಡೆಸಿದ್ರೆ ಕೇಸ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eleven =
Remember me
