ಬೆಂಗಳೂರು:ದಲಿತರಿಗೆ ಮೀಸಲಾಗಿರುವ 11 ಸಾವಿರ ಕೋಟಿ ರೂ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ವರ್ಗಾವಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರಿಗೆ ಮಹಾ ಮೋಸ ಮಾಡಿದ್ದು, ದಲಿತ ವಿರೋಧಿಯಾಗಿದ್ದಾರೆ ಎಂದು ಬಿಜೆಪಿ ಎಸ್ಸಿ ಮತ್ತು ಎಸ್ಟಿ ಮೋರ್ಚಾ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್‌ಸಿಎಸ್ಪಿ ಟಿಎಸ್‌ಪಿ ಯೋಜನೆಗೆ ಮೀಸಲಾಗಿದ್ದ ಹಣವನ್ನು ಗ್ಯಾರಂಟಿಗಳಿಗೆ ವರ್ಗಾವಣೆ ಮಾಡುವ ಮೂಲಕ ನಂಬಿಕೆ ದ್ರೋಹ ಮಾಡಿರುವ ಕಾಂಗ್ರೆಸ್ ಪಕ್ಷವೇ ವಂಚಕರ ಸಂತೆಯಾಗಿದೆ ಎಂದು ದೂರಿದರು.
ಕಾಂಗ್ರೆಸ್‌ನಲ್ಲಿರುವ ದಲಿತ ನಾಯಕರು ಧ್ವನಿ ಇಲ್ಲದ ಮತ್ತು ಬೆನ್ನೆಲುಬಿಲ್ಲದವರಾಗಿದ್ದಾರೆ. ಈಗಲಾದರೂ ಈ ಅನ್ಯಾಯ ಖಂಡಿಸಿ ಹೊರ ಬರಲಿ ಎಂದು ಸವಾಲು ಹಾಕಿದರು.
ದಲಿತರ ಸಂಹಾರದ ನೀಚ ಕೆಲಸಕ್ಕೆ ಮಹದೇವಪ್ಪ ಮತ್ತು ಪ್ರಿಯಾಂಕ ಖರ್ಗೆ ಸಹಕಾರ ಮಾಡುತ್ತಿದ್ದಾರೆ. ಇವರಿಗೆ ಸ್ವಾಭಿಮಾನವಿದ್ದರೆ ರಾಜೀನಾಮೆ ಕೊಟ್ಟು ಬರಲಿ. ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ಅವರೇ ಭಾಷಣ ಮಾಡಿದ್ದಾರೆ. ಅದರಂತೆ ಬಜೆಟ್‌ನಲ್ಲಿ ಶೇ. 24.1 ಹಣವನ್ನು ಎಸ್‌ಸಿ, ಎಸ್‌ಟಿ ವರ್ಗಕ್ಕೆ ಒತ್ತಾಯಿಸಿದ್ದರು ಎಂದರು.
ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ ಹಣವನ್ನು 2013ರಲ್ಲಿ 7 ಡಿ ನಿಯಮಾವಳಿ ಮೂಲಕ ಬೇರೆಡೆಗೆ ವರ್ಗಾಯಿಸುತ್ತಿದ್ದರು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ 7ಡಿ ರದ್ದು ಮಾಡಲು ಮುಂದಾಗಿದ್ದರು. ಈಗ 7 ಡಿ ರದ್ದಾಗಿದೆಯೇ? ಎನ್ನುವ ಮಾಹಿತಿ ಇಲ್ಲ. ಈ ಬಗ್ಗೆ ಸರ್ಕಾರ ಬಹಿರಂಗವಾಗಿ ಹೇಳಲಿ ಎಂದರು.
ಉಲ್ಟಾ ಹೊಡೆದ ಸಿಎಂ
3 ಲಕ್ಷ ಬಜೆಟ್‌ನಲ್ಲಿ ಶೇ.40 ಕಮಿಷನ್ ನಿಲ್ಲಿಸುವ ಮೂಲಕ ಗ್ಯಾರಂಟಿ ಯೋಜನೆ ಜಾರಿ ಮಾಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ಈಗ ಉಲ್ಟಾ ಹೊಡೆದಿದ್ದಾರೆ. ವರ್ಗಾವಣೆ ದಂಧೆಯ ಮೂಲಕ ಕಮಿಶನ್ ದಂಧೆಯನ್ನು ಹೆಚ್ಚಿಸಿಕೊಂಡಿದ್ದೆ ಕಾಂಗ್ರೆಸ್ ಸಾಧನೆಯಾಗಿದೆ ಎಂದು ಟೀಕಿಸಿದರು. ಶೋಷಿತರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯದ ಸೌಕರ್ಯ, ಶೋಷಣೆರಹಿತ ಘನತೆಯ ಬದುಕು ಬೇಕು. ನಿಮ್ಮ ಬಿಟ್ಟಿ ಭಾಗ್ಯ ಅಲ್ಲ ಎಂದು ತಿರಗೇಟು ನೀಡಿದರು.
ನಮ್ಮ ಸರ್ಕಾರದ ಸಾಧನೆ
ನಮ್ಮ ಸರ್ಕಾರ ಇದ್ದಾಗ ಪೌರಕಾರ್ಮಿಕರ ಖಾಯಂ ಮಾಡಿ, ದಲಿತರಿಗೆ ನ್ಯಾಯ ಕೊಟ್ಟಿದ್ದೇವೆ. ದಲಿತರ ಸಮಸ್ಯೆ ಮತ್ತು ವಿಚಾರ ಬಂದಾಗ ಹಕ್ಕು ಕೇಳುವ ಕೆಲಸ ಮಾಡಬೇಕು. ಇಲ್ಲವಾದರೆ ರಾಜೀನಾಮೆ ಕೊಟ್ಟು ಹೊರಕ್ಕೆ ಬನ್ನಿ ಎಂದು ಆಗ್ರಹಿಸಿದರು.
ಆಪತ್ತು ಬಂದಾಗ ಕಾಂಗ್ರೆಸ್ ದಲಿತರ ಕಾರ್ಡ್ ಬಳಸುತ್ತದೆ. 2006ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಬಳಿಕ ಪರಮೇಶ್ವರರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಆದರೆ, ಅಧಿಕಾರ ಬಂದಾಗಲೂ ದಲಿತರನ್ನು ಸಿಎಂ ಮಾಡಲಿಲ್ಲ. ಬದಲಾಗಿ ಪಕ್ಷಕ್ಕೆ ವಲಸೆ ಬಂದ ಸಿದ್ದರಾಮಯ್ಯರನ್ನು ಸಿಎಂ ಮಾಡಿ ದಲಿತರಿಗೆ ವಂಚನೆ ಮಾಡಿದರು ಎಂದರು.
ಪ್ಯಾಕೇಜ್ ಸಂಘಟನೆಗಳು!
ಕೆಲವು ದಲಿತ ನಾಯಕರು ಮತ್ತು ಸಂಘಟನೆಗಳು ಕಾಂಗ್ರೆಸ್‌ಗೆ ಪ್ಯಾಕೇಜ್ ಸಂಘಟನೆಗಳಂತಿವೆ. ದಲಿತರಿಗೆ ಅನ್ಯಾಯ ಕಂಡರೂ ಮೌನದಲ್ಲಿದ್ದಾರೆ. ಹಾಗಾದರೆ ಅವರ ಸ್ವರ ಎಲ್ಲಿದೆ? ನಿಮ್ಮ ಸ್ವಾರ್ಥಕ್ಕಾಗಿ ಸರ್ಕಾರಕ್ಕೆ ಪ್ಯಾಕೇಜ್ ಬೆಂಬಲ ನೀಡಬೇಡಿ ಎಂದು ದಲಿತರಿಗೆ ಎಚ್ಚರಿಕೆ ನೀಡಿದರು.ದೆಹಲಿಯಲ್ಲಿ ಕಾಂಗ್ರೆಸ್ಸಿಗರು ವಸ್ತುಗಳ ಬೆಲೆ ಗಗನದಿಂದ ಆಚೆಗೆ ಹೋದ ಬಗ್ಗೆ ಚರ್ಚಿಸಲಿ ಮತ್ತು ಕಾರಣ ತಿಳಿಸಲಿ ಎಂದು ಆಗ್ರಹಿಸಿದರು.
ಎಲ್ಲ ಬೆಲೆ ಹೆಚ್ಚಳ
ಹಾಲು, ವಿದ್ಯುತ್, ಹೋಟೆಲ್ ತಿಂಡಿ ತಿನಿಸು ಸೇರಿ ಎಲ್ಲ ಬೆಲೆ ಹೆಚ್ಚಾಗಿದೆ. ಕಾಂಗ್ರೆಸ್ ಬೆಲೆ ಮಾತ್ರ ಹೆಚ್ಚಾಗಿಲ್ಲ. 2 ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಕೆಟ್ಟ ಸರಕಾರ ಎಂಬ ಹೆಸರು ಪಡೆದಿದಿರುವುದು ನಾಚಿಕೆಗೇಡಿನ ಸಂಗತಿ ಎಂದರು.ರಾಜ್ಯ ಕಾರ್ಯದರ್ಶಿ ಜಗದೀಶ್, ಬೆಂಗಳೂರು ನಗರ ಜಿಲ್ಲೆ ಎಸ್‌ಸಿ ಮೋರ್ಚಾ ಅಧ್ಯಕ್ಷ ಎಚ್.ವಿ. ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + seventeen =
Remember me
