| ರಾಯಣ್ಣ ಆರ್.ಸಿ. ಬೆಂಗಳೂರುಅಧಿಕಾರ ವಿಕೇಂದ್ರೀಕರಣದಿಂದಾಗಿ ಬೇರುಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಲಿದೆ ಎಂಬ ಮಹತ್ವಾಕಾಂಕ್ಷೆಯಿಂದಾಗಿ ಪಂಚಾಯಿತಿ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ, ತಳಮಟ್ಟದಲ್ಲಿ ಸರ್ಕಾರದ ಸ್ಥಳೀಯ ಆಡಳಿತ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿ ರುವ ಗ್ರಾಮ ಪಂಚಾಯಿತಿಗಳಲ್ಲಿ ಕೋಟ್ಯಂತರ ರೂ. ಪೋಲಾಗುತ್ತಿರುವ ಸಂಗತಿ ಬಯಲಿಗೆ ಬಂದಿದೆ. ರಾಜ್ಯದಲ್ಲಿರುವ 5,957 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 125.79 ಕೋಟಿ ರೂ. ದುರುಪಯೋಗವಾಗಿದೆ ಎಂಬುದನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಪತ್ತೆ ಹಚ್ಚಿದೆ. 2022-23ನೇ ಸಾಲಿನ ಅಂತ್ಯಕ್ಕೆ ಗ್ರಾಮ ಪಂಚಾಯಿತಿಗಳಲ್ಲಿ 4,44,048 ಕಂಡಿಕೆಗಳಲ್ಲಿ 6,664.11 ಕೋಟಿ ರೂ. ಮೊತ್ತಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಕಂಡಿಕೆಗಳಲ್ಲಿ 665.53 ಕೋಟಿ ರೂ. ವಸೂಲಾತಿಗೆ ಬಾಕಿಯಿರುವುದು ಲೆಕ್ಕಪತ್ರ ಇಲಾಖೆಯ ಲೆಕ್ಕ ಪರಿಶೋಧನಾ ವರದಿಯಲ್ಲಿ ಗುರುತಿಸಲಾಗಿದೆ.
ತಾಪಂ ಇಒಗಳ ನಿರ್ಲಕ್ಷ?:ಗ್ರಾಮ ಪಂಚಾಯಿತಿಗಳು ಮೌಲಿಕ ಆಕ್ಷೇಪಣೆಗಳ ತೀರುವಳಿಗೆ ಸಂಬಂಧಿಸಿದಂತೆ ಕರ್ನಾಟಕ ಪಂಚಾಯತ್​ರಾಜ್ ಅಧಿನಿಯಮ 1993 ಕಲ0 246(6) ಪ್ರಕಾರ ಗ್ರಾಮ ಪಂಚಾಯಿತಿಯ ಲೆಕ್ಕಪರಿಶೋಧನಾ ವರದಿಗಳಲ್ಲಿ ದಾಖಲಿಸಿರುವ ದೋಷಗಳು ಹಾಗೂ ಅಕ್ರಮಗಳನ್ನು ಸರಿಪಡಿಸಿಕೊಳ್ಳಬೇಕು. ಇಂಥ ಹಣಕಾಸಿನ ದುರುಪಯೋಗ ಪ್ರಕರಣಗಳು ಕಂಡುಬಂದಾಗ 3 ತಿಂಗಳೊಳಗೆ ಸರಿಪಡಿಸಿ, ತಾಪಂ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಪಂಚಾಯತ್ ರಾಜ್ ಅಧಿನಿಯಮದಲ್ಲಿ ಹೇಳಲಾಗಿದೆ.
ಸಮರ್ಪಕ ವರದಿ ನೀಡದ ಗ್ರಾಪಂ ಅಧಿಕಾರಿಗಳ ವಿರುದ್ಧ ಅಥವಾ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಅಧಿಕಾರ ಇದೆ. ಆದರೆ, ಬಹುತೇಕ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಇಂತಹ ಪ್ರಕರಣಗಳು ಪುನರಾವರ್ತನೆಯಾಗುತ್ತಿವೆ ಎನ್ನುತ್ತದೆ ಲೆಕ್ಕ ಪರಿಶೋಧನಾ ಇಲಾಖೆ.
ಪರಿಹಾರವೇನು?:ಗ್ರಾಮ ಪಂಚಾಯಿತಿಯಿ ಲೆಕ್ಕಪರಿಶೋಧನೆಯನ್ನು ಅಡಿಟ್ ಆನ್​ಲೈನ್ ತಂತ್ರಾಂಶದ ಮೂಲಕವೇ ನಿರ್ವಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನುಮುಂದೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವುದರಿಂದ ಅದರ ಆಧಾರದಲ್ಲಿ ಕೇಂದ್ರದ ಪಂಚಾಯತ್ ರಾಜ್ ಸಚಿವಾಲಯ ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಯಲ್ಲಿ ಏಕರೂಪತೆ ತರುವುದಕ್ಕಾಗಿ ಮತ್ತು ನಿಗದಿತ ಅವಧಿಯಲ್ಲಿ ಲೆಕ್ಕಪತ್ರಗಳ ಅಡಿಟ್ ಕೈಗೊಳ್ಳಲು ವೆಬ್ ಆಧಾರಿತ ತಂತ್ರಾಂಶ ಬಳಸುವುದರಿಂದ ಹಣ ದುರುಪಯೋಗ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ. ಆದರೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕಿದೆ.
2022-23ನೇ ವರ್ಷದಲ್ಲಿ ಕೈಗೊಳ್ಳಲಾದ ಲೆಕ್ಕಪರಿಶೋಧನಾ ವರದಿಯನ್ವಯ ಗ್ರಾಪಂಗಳ ಜಾಗೃತಿ ಮತ್ತು ಗುಣನಿಯಂತ್ರಣ ತಂಡಗಳಿಂದ ಎನ್​ಆರ್​ಇಜಿ ಯೋಜನೆಯಲ್ಲಿ ಫಲಾನುಭವಿಗಳ ಪಟ್ಟಿಯನ್ನು ಪಕ್ಕಾ ತನಿಖೆಗೆ ಹಾಜರು ಪಡಿಸಿರುವುದಿಲ್ಲ. ಹತ್ತು ನಿಯಮಬಾಹಿರ ಸಾಗಾಣಿಕೆ ವೆಚ್ಚ ಪಾವತಿಸಲಾಗಿದೆ. ರಸೀದಿ ಗಳನ್ನು ತಿದ್ದಿ ದುರುಪಯೋಗಪಡಿಸಿಕೊಂಡಿರುವುದು ಗೊತ್ತಾಗಿದೆ. ಅನುದಾನದ ದಾಖಲೆ ನಿರ್ವಹಿಸದಿರುವುದು ಮತ್ತು ಚರಾಸ್ತಿ /ಸ್ಥಿರಾಸ್ತಿ ವಹಿ ನಿರ್ವಹಿಸದಿರುವುದು, ಉಪಕರಗಳನ್ನು ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಗೆ ಜಮಾ ಮಾಡದೆ ದುರುಪಯೋಗ ಮಾಡಿಸಿಕೊಳ್ಳಲಾಗಿದೆ. ಸಿಬ್ಬಂದಿ ವೇತನ ಶ್ರೇಣಿ ನಿರ್ವಹಿಸದಿರುವುದು, ಲೆಕ್ಕಪರಿಶೋಧನೆಗೆ ಸಲ್ಲಿಸದೇ ಇರುವುದು ಮತ್ತು ವೇತನ ಹೆಚ್ಚಳ ಮಾಡಿದ ಬಗ್ಗೆ ಜಿಪಂ ನಿಂದ ಮಂಜೂರಾತಿ ಪಡೆಯದೆ ದುರ್ಬಳಕೆ ಮಾಡಲಾಗಿದೆ ಎಂದು ವರದಿ ಹೇಳಿದೆ.
ಸರ್ಕಾರದಿಂದ ಒದಗಿಸಲಾದ ಒಂದೇ ಯೋಜನೆಯ ಅನುದಾನಕ್ಕೆ ಎರಡೆರಡು ಬ್ಯಾಂಕ್ ಖಾತೆ ತೆರೆದು ವ್ಯವಹರಿಸುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಕಡಿತ ಮಾಡಿರುವ ಶಾಸನಬದ್ಧ ತೆರಿಗೆಗಳನ್ನು ಸರ್ಕಾರದ ಲೆಕ್ಕ ಶೀರ್ಷಿಕೆ ಜಮಾ ಮಾಡಿರುವುದಿಲ್ಲ. ಅಳತೆ ಪುಸ್ತಕಗಳ ದಾಸ್ತಾನು ಮತ್ತು ವಿತರಣೆ ಲೆಡ್ಜರ್ ನಿರ್ವಹಿಸದಿರುವುದು, ಸಂಖ್ಯೆ ಮುದ್ರಿಸಿರುವ ಎನ್​ಎಂಆರ್​ಗಳನ್ನು ಉಪಯೋಗಿಸದಿರುವುದು, ಸರ್ಕಾರದ ವಿವಿಧ ಯೋಜನೆಗಳ ಮಾರ್ಗಸೂಚಿಯಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಹಾಗೂ ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ನಿಯಮ ಪಾಲನೆಯಾಗಿಲ್ಲ ಎಂಬುದು ಲೆಕ್ಕ ಪರಿಶೋಧನೆಯಲ್ಲಿ ಗೊತ್ತಾಗಿದೆ. ರಸೀದಿ ಗಳಲ್ಲಿ ತೋರಿಸಿದ ಮೊತ್ತಕ್ಕಿಂತ ಸರ್ಕಾರಕ್ಕೆ ಕಡಿಮೆ ಹಣ ಜಮಾ ಮಾಡಿರುವುದು ಬೆಳಕಿಗೆ ಬಂದಿದೆ. ರಸೀದಿ ಗಳಿಂದ ವಸೂಲಿ ಮಾಡಲಾದ ಮೊಬಲಗನ್ನು ಸರ್ಕಾರಕ್ಕೆ ಕಡಿಮೆ ಜಮಾ ಮಾಡಲಾಗಿದೆ ಎಂದು ಲೆಕ್ಕ ವರದಿ ಹೇಳಿದೆ. ಕಾಮಗಾರಿ ಬಿಲ್ಲುಗಳಲ್ಲಿ ರಾಜಧನ, ಆದಾಯ ತೆರಿಗೆ, ಮಾರಾಟ ತೆರಿಗೆ ಮತ್ತು ಕಾರ್ವಿುಕ ಕಲ್ಯಾಣ ನಿಧಿಯನ್ನು ನಿಗದಿಗಿಂತ ಕಡಿಮೆ ಕಟಾಯಿಸಿರುವುದು ಕಂಡುಬಂದಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 9 =
Remember me
