ಬೆಂಗಳೂರು:ರಾಜ್ಯದಲ್ಲಿ 947 ಹೊಸ ಪ್ರಕರಣಗಳೊಂದಿಗೆ ಕೋವಿಡ್ ಸೋಂಕಿತರ ಸಂಖ್ಯೆ 15 ಸಾವಿರ ಗಡಿ ದಾಟಿದ್ದು, 20 ಮಂದಿ ಸಾವನ್ನಪ್ಪುವ ಮೂಲಕ ಮೃತರ ಸಂಖ್ಯೆ 246ಕ್ಕೆ ಏರಿಕೆಯಾಗಿದೆ. ಗಂಭೀರ ಸಮಸ್ಯೆಯಿಂದ ತುರ್ತು ನಿಗಾ ಘಟಕದಲ್ಲಿ 271 ಸೋಂಕಿತರು ದಾಖಲಾಗಿದ್ದು ಆತಂಕ ಮುಂದುವರೆದಿದೆ. ಬೆಂಗಳೂರು ನಗರದಲ್ಲಿ ಅತೀ ಹೆಚ್ಚು 503 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 235 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಸೋಂಕಿಗೆ 20 ಬಲಿ: ಮಂಗಳವಾರ ಬಳ್ಳಾರಿಯಲ್ಲಿ 6, ಬೆಂಗಳೂರು ನಗರದಲ್ಲಿ 4, ಹಾವೇರಿ, ವಿಜಯಪುರ ಮತ್ತು ಧಾರವಾಡದಲ್ಲಿ ತಲಾ 2, ಮೈಸೂರು, ಬೆಳಗಾವಿ, ಕೋಲಾರ ಮತ್ತು ದಾವಣಗೆರೆಯಲ್ಲಿ ತಲಾ ಒಬ್ಬರಂತೆ ಒಟ್ಟು 20 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇವರಲ್ಲಿ ಉಸಿರಾಟದ ತೊಂದರೆ (ಸಾರಿ)ಯಿಂದ 13 ಮಂದಿ, ಶೀತ ಜ್ವರ (ಐಎಲ್​ಐ) ಸಮಸ್ಯೆಯಿಂದ ಮೂವರು, ರೋಗಿಯ ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದ ಇಬ್ಬರು, ಸೌದಿ ಪ್ರಯಾಣ ಹಿನ್ನೆಲೆ ಹೊಂದಿದ್ದ ಒಬ್ಬರು ಮೃತಪಟ್ಟಿದ್ದು, ಇನ್ನಬ್ಬ ಮೃತರ ಸಂಪರ್ಕ ಮಾಹಿತಿ ಲಭ್ಯವಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ನೂರರಲ್ಲಿ ಇಬ್ಬರಿಗೆ ಸೋಂಕು
ರಾಜ್ಯದಲ್ಲಿ ಕರೊನಾ ಸೋಂಕು ಪತ್ತೆ ಪ್ರಮಾಣ ಶೇ. 2ಕ್ಕೆ ಏರಿಕೆಯಾಗಿದ್ದು, ಪತ್ರಿ ನೂರು ಮಂದಿಯನ್ನು ತಪಾಸಣೆಗೆ ಒಳಪಡಿಸಿದರೆ ಇಬ್ಬರಲ್ಲಿ ಸೋಂಕು ದೃಢಪಡುತ್ತಿದೆ. ಜೂ. 1ರಂದು ಶೇ. 1.26 ಇದ್ದ ಸೋಂಕು ಪತ್ತೆ ಪ್ರಮಾಣ ತಿಂಗಳಾಂತ್ಯಕ್ಕೆ ಶೇ. 2ಕ್ಕೆ ಏರಿಕೆಯಾಗಿದೆ. ಸೋಂಕು ಪತ್ತೆ ಪ್ರಮಾಣದಲ್ಲಿ ಬೆಂಗಳೂರು (ಶೇ. 4.7) ಮೊದಲ ಸ್ಥಾನದಲ್ಲಿದೆ.
ನವಜಾತ ಶಿಶುವಿಗೆ ಸೋಂಕು!
ಹುಬ್ಬಳ್ಳಿ: ಇಲ್ಲಿನ ಕಿಮ್ಸ್​ನ ಕೋವಿಡ್ ವಾರ್ಡ್​ನಲ್ಲಿ ಭಾನುವಾರ ಜನಿಸಿದ್ದ ಹೆಣ್ಣು ಶಿಶುವಲ್ಲಿ ಕರೊನಾ ಸೋಂಕು ಕಾಣಿಸಿದ್ದು, ಇದು ವಿಶೇಷ ಪ್ರಕರಣವೆಂದೇ ಮಕ್ಕಳ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ತಾಲೂಕಿನ ಉಮಚಗಿಯ ಸೋಂಕಿತ ಮಹಿಳೆ (25) ಶಿಶುವಿಗೆ ಜನ್ಮ ನೀಡಿದ್ದರು. ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೆರಿಗೆ ಮಾಡಿಸಿದ್ದು, ಅಂದೇ ಶಿಶುವಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ತಾಯಿ ಸಂಪರ್ಕ ಇದ್ದುದರಿಂದ ಸೋಂಕು ದೃಢವಾಗಿದ್ದು, ಕುಟುಂಬ ಹಾಗೂ ವೈದ್ಯರಿಗೆ ಆತಂಕ ಮತ್ತು ಅಚ್ಚರಿ ತರಿಸಿದೆ.
ಸಂಪರ್ಕ ಮಾಹಿತಿ ಇಲ್ಲ
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ವರದಿಯಾದ ಸೋಂಕಿತರ ಸಂಪರ್ಕ ಮಾಹಿತಿ ಲಭ್ಯವಾಗಿಲ್ಲ. ಇದೀಗ ಮಂಗಳವಾರ ವರದಿಯಾದ 947 ಪ್ರಕರಣಗಳಲ್ಲಿ 586 ಸೋಂಕಿತರ ಸಂಪರ್ಕ ಮಾಹಿತಿ ದೊರೆತಿಲ್ಲ. ಇದು ರಾಜ್ಯದಲ್ಲಿ ಸೋಂಕು ಸಮುದಾಯಕ್ಕೆ ಹರಡಿರುವುದನ್ನು ಖಚಿತಪಡಿಸುತ್ತಿದೆ.
ಸರ್ವಪಕ್ಷ ಪರಿಶೀಲನಾ ಸಮಿತಿ ರಚಿಸಿ
ಬೆಂಗಳೂರು: ಕರೊನಾ ಚಿಕಿತ್ಸೆ ಮೇಲೆ ನಿಗಾ ಇಡಲು ಸರ್ಕಾರ ತಕ್ಷಣ ಸರ್ವಪಕ್ಷಗಳ ಪರಿಶೀಲನಾ ಸಮಿತಿ ರಚಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಪಕ್ಷಗಳಲ್ಲಿರುವ ವೃತ್ತಿನಿರತ ಮತ್ತು ವೈದ್ಯಕೀಯ ಶಿಕ್ಷಣ ಹೊಂದಿರುವ ನಾಯಕರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಬಹುದು ಎಂದಿರುವ ಅವರು ಕರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಿರ್ಲಕ್ಷ್ಯ, ತಾರತಮ್ಯ ನೀತಿ ಮತ್ತು ಭ್ರಷ್ಟಾಚಾರದ ಆರೋಪಗಳಿವೆ. ರಾಜಕೀಯ ಪ್ರಭಾವ ಬಳಸಿ ಬಲವಿದ್ದವರು ಬದುಕಿಕೊಳ್ಳುತ್ತಾರೆ, ಬಡವರಿಗೆ ದಿಕ್ಕಿಲ್ಲದಂತಹ ಸ್ಥಿತಿ ಇದೆ ಎಂದಿದ್ದಾರೆ. ನೀಡುತ್ತಿರುವ ಔಷಧ, ಅನುಸರಿಸುತ್ತಿರುವ ಚಿಕಿತ್ಸಾ ವಿಧಾನ ಏನು ಎಂಬುದನ್ನು ತಿಳಿಸದೆ ರೋಗಿಗಳನ್ನು ಕತ್ತಲಲ್ಲಿಡಲಾಗುತ್ತಿದೆ. ಇದು ಅನ್ಯಾಯ ಅಲ್ಲವೇ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆಗೆ ಅವಕಾಶ ಸ್ವಾಗತಾರ್ಹ ಕ್ರಮ. ಚಿಕಿತ್ಸಾ ಶುಲ್ಕ ಕಡಿಮೆ ಮಾಡಲು ಒಪ್ಪಿರುವ ಖಾಸಗಿಯವರು ಚಿಕಿತ್ಸೆಯ ಗುಣಮಟ್ಟದಲ್ಲಿ ರಾಜಿಯಾಗದಂತೆ ನಿಗಾ ಇಡಬೇಕು. ಸೋಂಕಿತರಿಗೆ ನೀಡುತ್ತಿರುವ ಔಷಧ ಮತ್ತು ಅನುಸರಿಸಲಾಗುತ್ತಿರುವ ಚಿಕಿತ್ಸಾ ವಿಧಾನದದ ಸಂಪೂರ್ಣ ಮಾಹಿತಿಯನ್ನು ಮೊದಲೇ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
40 ಸಾವಿರ ಟೆಸ್ಟ್ ವರದಿ ಬಾಕಿ!
ಬೆಂಗಳೂರು: ಈವರೆಗೆ ರಾಜ್ಯಾದ್ಯಂತ ನಡೆದಿರುವ ಕೋವಿಡ್ ಟೆಸ್ಟ್​ನಲ್ಲಿ 40 ಸಾವಿರ ಸ್ಯಾಂಪಲ್​ಗಳ ವರದಿ ಬಾಕಿ ಇದೆ ಎಂಬ ಸಂಗತಿ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗಿದೆ. ರಾಜ್ಯದಲ್ಲಿ 80 ಲ್ಯಾಬ್ ಇದೆ ಎನ್ನುತ್ತೀರಿ, 40 ಸಾವಿರ ಟೆಸ್ಟ್ ವರದಿ ಬಂದಿಲ್ಲವೇಕೆ? ಎಂದು ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರನ್ನು ತರಾಟೆಗೆ ತೆಗೆದುಕೊಂಡರೆಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಆಡಳಿತ ಪಕ್ಷದ ಶಾಸಕ ರವಿಸುಬ್ರಹ್ಮಣ್ಯ ಅಧಿಕಾರಿಗಳನ್ನು ದಬಾಯಿಸಿದ್ದು, ಎಷ್ಟು ಆಂಬುಲೆನ್ಸ್ ಬಳಸಿಕೊಳ್ಳುತ್ತಿದ್ದೀರಿ, ಸಮಯಕ್ಕೆ ಏಕೆ ಬರುತ್ತಿಲ್ಲ, ಜನರು ಗಂಟೆಗಟ್ಟಲೆ ರಸ್ತೆಯಲ್ಲೇಕೆ ನಿಲ್ಲುವ ಸ್ಥಿತಿ ನಿರ್ವಿುಸಿದ್ದೀರಿ ಎಂದು ಹರಿಹಾಯ್ದರು. ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ದನಿಗೂಡಿಸಿದ್ದು, ರಾತ್ರಿ 12 ಗಂಟೆಗೆ ಕರೆ ಮಾಡಿ ಆಂಬುಲೆನ್ಸ್ ಅವ್ಯವಸ್ಥೆ ಬಗ್ಗೆ ತಮ್ಮ ಬಳಿಯೇ ಹೇಳಿದ್ದೇನಲ್ಲವೇ? ಎಂದು ಅಧಿಕಾರಿಯನ್ನು ಕುಟುಕಿದರೆಂದು ಮೂಲಗಳು ತಿಳಿಸಿವೆ.
ಮುಂದಿನ ವಾರ ತನಿಖಾ ವರದಿ:ಕರೊನಾ ಹಿನ್ನೆಲೆ ಸರ್ಕಾರ ನಡೆಸಿದ ಪರಿಕರಗಳ ಖರೀದಿಯಲ್ಲಿ ಅಕ್ರಮವಾಗಿದೆ ಎಂಬ ದೂರಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮುಂದಿನ ಸೋಮವಾರ ವರದಿ ಒಪ್ಪಿಸುವುದಾಗಿ ಲೆಕ್ಕಪತ್ರ ಸಮಿತಿಗೆ ಜಾವೇದ್ ಅಖ್ತರ್ ಭರವಸೆ ನೀಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಕಾಲಾವಕಾಶ ಬೇಕೆಂದು ಕೋರಿದರೂ ಸಮಿತಿ ಅಧ್ಯಕ್ಷರು ಸಮಯ ನೀಡಲು ಅಸಾಧ್ಯ ಎಂದಿದ್ದಾರೆ.
ಖರೀದಿಗೆ ಮುನ್ನ ನಡೆದ ಪ್ರಕ್ರಿಯೆಯ ಟಿಪ್ಪಣಿ ಹಾಳೆ ನೀಡುವಂತೆ ಲೆಕ್ಕಪತ್ರ ಸಮಿತಿ ಕೋರಿಕೆಗೂ ಆರೋಗ್ಯ ಇಲಾಖೆ ನಿರಾಕರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಾರವಾದರೂ ಶವ ಕೊಡಲಿಲ್ಲ
ಹೃದಯಾಘಾತದಿಂದ ಮೃತಪಟ್ಟ ಉಪನ್ಯಾಸಕ ರೊಬ್ಬರ ಶವವನ್ನು ಒಂದು ವಾರವಾದರೂ ಕೆ.ಸಿ.ಜನರಲ್ ಆಸ್ಪತ್ರೆ ನೀಡಿಲ್ಲ. ಈ ವಿಚಾರ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರೆಂದು ತಿಳಿದುಬಂದಿದೆ. ನಾನ್ ಕೋವಿಡ್ ರೋಗಿಗಳಿಗೆ ಸಮಸ್ಯೆಯಾಗದಂತೆ ಜಾವೇದ್ ಅಖ್ತರ್​ಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿದಿರಿನ ಕಡ್ಡಿ, ಸಿರಿಂಜ್​ಗಳು, ಗ್ಲಾಸ್​ ಶೀಲ್ಡ್​; ಬಿಹಾರ ಚುನಾವಣೆಗೆ ಇವೆಲ್ಲ ಏಕೆ ಬೇಕು…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
