| ರುದ್ರಣ್ಣ ಹರ್ತಿಕೋಟೆ ಬೆಂಗಳೂರುಸರ್ಕಾರಿ ಭೂಮಿಯ ಅಕ್ರಮ ಪರಭಾರೆಗೆ ಬ್ರೇಕ್ ಹಾಕಲು ಮುಂದಾಗಿರುವ ಸರ್ಕಾರ, ಬಗರ್​ಹುಕುಂನಲ್ಲಿ ಅರ್ಜಿ ಹಾಕಿರುವವರು ಹದಿನೈದು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೆ ಮಾತ್ರ ಸಕ್ರಮ ಮಾಡಬೇಕೆಂಬ ಮಹತ್ವದ ನಿರ್ಧಾರಕ್ಕೆ ಬಂದಿದೆ.
ಬಗರ್​ಹುಕುಂನಲ್ಲಿಯೂ ಅನೇಕರು ಬೋಗಸ್ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ತಂತ್ರಾಂಶದ ಮೂಲಕ ನೈಜ ಉಳುಮೆದಾರರನ್ನು ಪತ್ತೆ ಹಚ್ಚಿ ಅರ್ಹ ರೈತರ ನೆರವಿಗೆ ಮುಂದಾಗಲು ಕಂದಾಯ ಇಲಾಖೆ ಕಾರ್ಯೋನ್ಮುಖವಾಗಿದೆ. ಕೆಲವರು ಐದು, ಹತ್ತು ಕಡೆ ಭೂಮಿಯನ್ನು ಗುರುತಿಸಿಕೊಂಡು ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆಲವರು ಬೇರೆ ಬೇರೆ ತಾಲೂಕಿನಲ್ಲಿಯೂ ಅರ್ಜಿ ಸಲ್ಲಿಸಿರುವ ದೂರುಗಳಿವೆ. ಆದ್ದರಿಂದಲೇ ಇಂತಹ ಅಕ್ರಮಗಳಿಗೆ ತಡೆ ಹಾಕುವ ಕಡೆ ಗಮನ ಹರಿಸಲಾಗಿದೆ.
ಹತ್ತಾರು ವರ್ಷಗಳಿಂದ ಲಕ್ಷಾಂತರ ರೈತರು ಬಗರ್​ಹುಕುಂನಲ್ಲಿ ಸಕ್ರಮಕ್ಕೆ ಕಾಯುತ್ತಿದ್ದಾರೆ. ಸರ್ಕಾರಿ ಭೂಮಿ ಈಗ ಸಾಕಷ್ಟು ಒತ್ತುವರಿಯಾಗುತ್ತಿದೆ. ಸರ್ಕಾರದ ಉದ್ದೇಶಗಳಿಗೆ ಭೂಮಿಯೇ ಇಲ್ಲದಂತಹ ಪರಿಸ್ಥಿತಿ ಬರುತ್ತಿದೆ. ಆದ್ದರಿಂದ ಇರುವ ಭೂಮಿಯನ್ನು ಉಳಿಸಿಕೊಳ್ಳಬೇಕು ಹಾಗೂ ಅರ್ಹ ಬಡ ರೈತರಿಗೆ ಭೂಮಿ ಸಿಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. 100 ಜಾನುವಾರುಗಳಿದ್ದರೆ 30 ಎಕರೆ ಗೋಮಾಳ ಇರಬೇಕು ಎಂಬುದು ನಿಯಮ. ಆದರೆ ಭೂಮಿ ಕರಗುತ್ತಿದೆ. ಆದ್ದರಿಂದಲೇ ಬಗರ್​ಹುಕುಂನಲ್ಲಿ ಸಕ್ರಮಕ್ಕೂ ಕೆಲವೊಂದು ಕಠಿಣ ನಿಯಮಗಳನ್ನು ತರಲಾಗುತ್ತಿದೆ.
ಭೂ ಸುಧಾರಣಾ ಕಾಯ್ದೆಯ ನಿಯಮ 50, 53 ಹಾಗೂ 57ರಲ್ಲಿ ಸಕ್ರಮಕ್ಕಾಗಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದುವರೆಗೂ ಭೌತಿಕವಾಗಿ ಅರ್ಜಿಗಳ ವಿಲೇವಾರಿಯಾಗುತ್ತಿದೆ. ಅಲ್ಲಿ ಅಕ್ರಮಗಳಿಗೆ ಅವಕಾಶ ಇದೆ. ಆದ್ದರಿಂದಲೇ ಸಂಪೂರ್ಣ ತಂತ್ರಜ್ಞಾನ ಬಳಕೆಗೆ ಸರ್ಕಾರ ಮುಂದಾಗಿದೆ.
ತಂತ್ರಾಂಶ ಅಭಿವೃದ್ಧಿ:ಬಗರ್​ಹುಕುಂ ಅರ್ಜಿಗಳ ವಿಲೇವಾರಿಗಾಗಿಯೇ ಅದೇ ಹೆಸರಿನಲ್ಲಿ ಪ್ರತ್ಯೇಕ ತಂತ್ರಾಂಶ ಸಿದ್ಧಪಡಿಸಲಾಗಿದೆ. ಸದ್ಯದಲ್ಲಿಯೇ ಪ್ರತಿಯೊಂದು ಕಂದಾಯ ವಿಭಾಗಕ್ಕೆ ಒಂದು ತಾಲೂಕಿನಂತೆ ನಾಲ್ಕು ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆಗೆ ಒಳಪಡಿಲಾಗುತ್ತದೆ. ಸ್ಯಾಟಲೈಟ್ ಚಿತ್ರಗಳನ್ನು ಈ ಆಪ್​ಗೆ ಅಳವಡಿಸುವ ಮೂಲಕ ಉಳುಮೆಯ ನೈಜತೆಯನ್ನು ಪತ್ತೆ ಹಚ್ಚಲಾಗುತ್ತದೆ. ಪ್ರಾಯೋಗಿಕ ಜಾರಿಯ ನಂತರ ಉಳಿದ ತಾಲೂಕುಗಳಿಗೂ ವಿಸ್ತರಣೆ ಮಾಡಲಾಗುತ್ತದೆ. ತಂತ್ರಾಂಶದ ಮೂಲಕವೇ ಸಾಗುವಳಿ ಚೀಟಿಯನ್ನು ನೀಡಲಾಗುತ್ತದೆ.
ಪತ್ತೆ ಹೇಗೆ?:ಹದಿನೈದು ವರ್ಷಗಳಿಂದ ಉಳುಮೆ ಮಾಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಇಸ್ರೋ ಹಾಗೂ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ (ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಕ ಕೇಂದ್ರ) ಉಪಗ್ರಹ ಆಧಾರಿತ ಚಿತ್ರಗಳನ್ನು ಪಡೆದು ಪತ್ತೆ ಹಚ್ಚಲಾಗುತ್ತದೆ. ಇದಕ್ಕಾಗಿ ಹದಿನೈದು ವರ್ಷಗಳ ಚಿತ್ರಗಳನ್ನು ಪಡೆಯಲಾಗುತ್ತದೆ. ಅನರ್ಹರಿಗೆ ಭೂಮಿ ಹೋಗಬಾರದು ಹಾಗೂ ಅರ್ಹರಿಗೆ ಕೈ ತಪ್ಪಬಾರದು ಎಂಬ ಕಾರಣಕ್ಕಾಗಿ ಎರಡು ಸಂಸ್ಥೆಗಳ ಸ್ಯಾಟಲೈಟ್ ಚಿತ್ರಗಳನ್ನು ಪಡೆಯಲಾಗುತ್ತದೆ. ಅದರಲ್ಲಿ ಸರ್ವೆ ನಂಬರ್ ಮೂಲಕ ಎಷ್ಟು ವರ್ಷದಿಂದ ಉಳುಮೆ ಮಾಡಲಾಗುತ್ತಿದೆ ಎಂಬುದು ಪತ್ತೆಯಾಗುತ್ತದೆ. ಉಪಗ್ರಹದ ಚಿತ್ರಗಳಲ್ಲಿ ಉಳುಮೆಯ ಮಾಹಿತಿ ಲಭ್ಯವಾಗದಿದ್ದಲ್ಲಿ ಅಂತಹ ಅರ್ಜಿಗಳನ್ನು ಮುಲಾಜಿಲ್ಲದೇ ರದ್ದು ಮಾಡಲಾಗುತ್ತದೆ.
ಬಗರ್​ಹುಕುಂನಲ್ಲಿ ಸಕ್ರಮಕ್ಕೆ ಫಾರಂ 57ರಲ್ಲಿ ಅರ್ಜಿ ಹಾಕಿರುವುದು ದುರುಪಯೋಗವಾಗಿರುವ ಸಾಧ್ಯತೆಗಳಿವೆ. ಕೆಲವರು 5 ರಿಂದ 10 ಕಡೆ ಅರ್ಜಿ ಸಲ್ಲಿಸಿರುವ ಮಾಹಿತಿಯೂ ಇದೆ. ನಿಜವಾದ ಸಾಗುವಳಿದಾರರಿಗೆ ಅನ್ಯಾಯವಾಗಬಾರದು. 15 ವರ್ಷದಿಂದ ಉಳುಮೆಯನ್ನು ಆಪ್ ಮೂಲಕ ಪತ್ತೆ ಮಾಡಿ ಅರ್ಹರಿಗೆ ಸಾಗುವಳಿ ಚೀಟಿ ನೀಡಲಾಗುತ್ತದೆ. ಆದಷ್ಟು ಬೇಗ ಈ ವ್ಯವಸ್ಥೆ ಜಾರಿಗೆ ಬರಲಿದೆ. | ಕೃಷ್ಣ ಬೈರೇಗೌಡ ಕಂದಾಯ ಸಚಿವ
ಒತ್ತುವರಿ ತಡೆಗೆ ಜಿಯೋ ಫೆನ್ಸಿಂಗ್:ಉಳಿದಿರುವ ಸರ್ಕಾರಿ ಭೂಮಿ ಒತ್ತುವರಿಯಾಗದಂತೆ ನೋಡಿಕೊಳ್ಳಲು ಬೀಟ್ ಜಾರಿಗೆ ಬರಲಿದೆ. ಸರ್ಕಾರಿ ಭೂಮಿ ಇರುವ ಕಡೆ ಕಂದಾಯ ಇಲಾಖೆ ಸಿಬ್ಬಂದಿ ಪ್ರತಿ ಮೂರು ತಿಂಗಳಿಗೊಮ್ಮೆ ತೆರಳಿ ಪರಿಶೀಲನೆ ಮಾಡಬೇಕು. ಜಿಯೋ ಫೆನ್ಸಿಂಗ್ ಮಾಡಬೇಕು. ಭೂಮಿಯ ವಿವರಗಳನ್ನು ಬೀಟ್ ಆಪ್​ನಲ್ಲಿ ಅಪ್​ಲೋಡ್ ಮಾಡುತ್ತಿರಬೇಕು ಎಂಬ ವ್ಯವಸ್ಥೆಯೂ ತಕ್ಷಣದಲ್ಲಿಯೇ ಜಾರಿಗೆ ಬರಲಿದೆ.
6 ತಿಂಗಳಲ್ಲಿ ವಿಲೇವಾರಿ:ಸಮಿತಿ ಮುಂದೆ ಬಾಕಿ ಇರುವ ಅರ್ಜಿಗಳನ್ನು ಆರು ತಿಂಗಳ ಅವಧಿಯಲ್ಲಿ ವಿಲೇವಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಸಮಿತಿಗಳನ್ನು ರಚನೆ ಮಾಡಲು ಪ್ರಕ್ರಿಯೆ ಆರಂಭಿಸಿದೆ. ತಕ್ಷಣಕ್ಕೆ 50 ತಾಲೂಕುಗಳಲ್ಲಿ ಸಮಿತಿ ರಚನೆ ಪ್ರಕ್ರಿಯೆ ಅಂತಿಮವಾಗಿದೆ. ಶೀಘ್ರದಲ್ಲಿ ಆದೇಶ ಹೊರಬೀಳಲಿದೆ. ಉಳಿದ ತಾಲೂಕುಗಳಲ್ಲಿಯೂ ಸಮಿತಿಗಳ ರಚನೆಯಾಗಲಿದೆ.
16 ದಿನ ಮನೆಯಲ್ಲಿ ಯಾರೂ ಇರಲಿಲ್ಲ, ಆದ್ರೂ ಬಂತು ಕರೆಂಟ್ ಬಿಲ್ ಮೂರುಪಟ್ಟು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 8 =
Remember me
