| ಜಗನ್ ರಮೇಶ್ ಬೆಂಗಳೂರು
ಎಲೆಕ್ಟ್ರಿಕ್ ವಾಹನ (ಇವಿ) ಖರೀದಿಸಿದ್ದ ಗ್ರಾಹಕರೊಬ್ಬರು ಫ್ಯಾನ್ಸಿ ನೋಂದಣಿ ಸಂಖ್ಯೆ ಪಡೆಯಲು ಆರ್​ಟಿಒಗೆ 25 ಸಾವಿರ ರೂ. ಶುಲ್ಕ ಪಾವತಿಸಿದ್ದರೂ ಬೇರೊಂದು ಸಂಖ್ಯೆ ನೋಂದಣಿ ಮಾಡಿಕೊಟ್ಟಿದ್ದ ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೖೆವೇಟ್ ಲಿಮಿಟೆಡ್​ಗೆ ಬೆಂಗಳೂರು ಗ್ರಾಹಕ ನ್ಯಾಯಾಲಯ 15 ಸಾವಿರ ರೂ. ದಂಡ ವಿಧಿಸಿದೆ. ಜತೆಗೆ, ಫ್ಯಾನ್ಸಿ ಸಂಖ್ಯೆಗಾಗಿ ಪಾವತಿಸಿದ್ದ 25 ಸಾವಿರ ರೂ.ಗಳನ್ನೂ ಗ್ರಾಹಕರಿಗೆ ಮರುಪಾವತಿಸುವಂತೆ ಕಂಪನಿಗೆ ಆದೇಶಿಸಿದೆ.
ಮಾರತ್ತಹಳ್ಳಿಯ ವಿವೇಕ್ ಅಲಹರಿ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋ ಗದ ಅಧ್ಯಕ್ಷ ರಾಮಚಂದ್ರ, ಸದಸ್ಯರಾದ ಚಂದ್ರಶೇಖರ್ ಎಸ್. ನೂಲ ಹಾಗೂ ನಂದಿನಿ ಎಚ್. ಕುಂಬಾರ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಕಂಪನಿ ಎಸಗಿರುವ ಸೇವಾ ನ್ಯೂನತೆಗೆ ಪರಿಹಾರ ವಾಗಿ 10 ಸಾವಿರ ರೂ. ಹಾಗೂ ವ್ಯಾಜ್ಯದ ವೆಚ್ಚ 5 ಸಾವಿರ ರೂ.ಗಳನ್ನು ದೂರುದಾರರಿಗೆ ಪಾವತಿಸಬೇಕು. ಜತೆಗೆ, ದೂರುದಾರರ ಫ್ಯಾನ್ಸಿ ನೋಂದಣಿ ಸಂಖ್ಯೆ ಪಡೆಯಲು ಆರ್​ಟಿಒಗೆ ಪಾವತಿಸಿದ್ದ 25 ಸಾವಿರ ರೂ. ಶುಲ್ಕವನ್ನೂ ವಾರ್ಷಿಕ ಶೇ. 8 ಬಡ್ಡಿಯೊಂದಿಗೆ ಕಂಪನಿಯೇ ಮರುಪಾವತಿಸಬೇಕು ಎಂದು ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಸಿಗದ ಫ್ಯಾನ್ಸಿ ನಂಬರ್:ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೖೆವೇಟ್ ಲಿಮಿಟೆಡ್​ನಿಂದ ಇ.ವಿ. ಖರೀದಿಸಿದ್ದ ವಿವೇಕ್ ಅಲಹರಿ, ಅದಕ್ಕಾಗಿ 1,65,549 ರೂ. ಪಾವತಿಸಿದ್ದರು. ಹೊಸ ವಾಹನಕ್ಕೆ ಫ್ಯಾನ್ಸಿ ನೋಂದಣಿ ಸಂಖ್ಯೆ ಪಡೆಯಲು ಬಯಸಿದ್ದ ಅವರು, ಅದಕ್ಕಾಗಿ ಆರ್​ಟಿಒಗೆ ಹೆಚ್ಚುವರಿಯಾಗಿ 25 ಸಾವಿರ ರೂ. ಪಾವತಿಸಿದ್ದರು. ಶುಲ್ಕ ಸ್ವೀಕರಿಸಿದ್ದ ಆರ್​ಟಿಒ ರಸೀದಿಯನ್ನೂ ನೀಡಿತ್ತು.
ವಾಹನದ ನೋಂದಣಿ ವಿಚಾರವಾಗಿ 2022ರ ಡಿ. 18ರಂದು ವಿವೇಕ್​ಗೆ ಕಂಪನಿಯಿಂದ ಕರೆ ಬಂದಿತ್ತು. ಫ್ಯಾನ್ಸಿ ನಂಬರ್ ಪಡೆದುಕೊಳ್ಳಲು ಬಯಸಿದ್ದು, ವಾಹನ ನೋಂದಣಿ ಮಾಡದಂತೆ ಮನವಿ ಮಾಡಿದ್ದರು. ಹೀಗಿದ್ದರೂ, ಪ್ರಕ್ರಿಯೆ ಮುಂದು ವರಿಸಿದ್ದ ಕಂಪನಿ, ವಿವೇಕ್ ಬಯಸಿದ್ದ ಫ್ಯಾನ್ಸಿ ನಂಬರ್ ಬದಲಿಗೆ ಬೇರೊಂದು ಸಂಖ್ಯೆ ನೋಂದಣಿ ಮಾಡಿತ್ತು. ಇದರಿಂದ ಓಲಾ ಕಂಪನಿ ಹಾಗೂ ಆರ್​ಟಿಒ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ವಿವೇಕ್ ದೂರು ನೀಡಿದ್ದರು. ಫ್ಯಾನ್ಸಿ ಸಂಖ್ಯೆಗಾಗಿ ಹೆಚ್ಚುವರಿಯಾಗಿ 25 ಸಾವಿರ ರೂ. ಶುಲ್ಕ ಪಾವತಿಸಿದ್ದರೂ ನನ್ನ ಮನವಿ ಪರಿಗಣಿಸಲು ಕಂಪನಿ ವಿಫಲವಾಗಿದೆ. ಗ್ರಾಹಕರಿಗೆ ಒದಗಿಸಬೇಕಾದ ಸೇವೆಯಲ್ಲಿ ಲೋಪವೆಸಗಿದೆ. ಆದ್ದರಿಂದ ಕಂಪನಿಯಿಂದ ಸೂಕ್ತ ಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದ್ದರು.
ಕಂಪನಿಯಿಂದಲೇ ನ್ಯೂನತೆ:ದೂರಿನ ಸಂಬಂಧ ಓಲಾ ಕಂಪನಿ ಹಾಗೂ ಆರ್​ಟಿಒಗೆ ಗ್ರಾಹಕ ನ್ಯಾಯಾಲಯ ನೋಟಿಸ್ ನೀಡಿತ್ತು. ಆರ್​ಟಿಒ ವಿಚಾರಣೆಗೆ ಗೈರಾಗಿತ್ತು. ಓಲಾ ಕಂಪನಿ ವಕೀಲರ ಮೂಲಕ ಪ್ರಕರಣವನ್ನು ಪ್ರತಿನಿಧಿಸಿದರೂ ಯಾವುದೇ ಹೇಳಿಕೆ ಸಲ್ಲಿಸಿರಲಿಲ್ಲ. ದೂರುದಾರರು ಇ.ವಿ. ಖರೀದಿಸಿದ ರಸೀದಿ, ಫ್ಯಾನ್ಸಿ ನಂಬರ್​ಗಾಗಿ ಪಾವತಿಸಿದ್ದ ಹಣಕ್ಕೆ ಆರ್​ಟಿಒ ನೀಡಿದ್ದ ರಸೀದಿ, ಕಂಪನಿಗೆ ನೀಡಿದ್ದ ಲೀಗಲ್ ನೋಟಿಸ್ ಸೇರಿ ಹಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಫ್ಯಾನ್ಸಿ ನಂಬರ್ ನೋಂದಣಿಗಾಗಿ ದೂರುದಾರರು ಆರ್​ಟಿಒಗೆ ಹೆಚ್ಚುವರಿ 25 ಸಾವಿರ ರೂ. ಪಾವತಿಸಿದ್ದಾರೆ. ಆದರೆ, ಫ್ಯಾನ್ಸಿ ನಂಬರ್ ವಿಚಾರದಲ್ಲಿ ಸರಿಯಾದ ಸೇವೆ ಒದಗಿಸಲು ಕಂಪನಿ ವಿಫಲವಾಗಿದೆ. ವಾಹನ ಮಾರಾಟಗಾರರಾಗಿ ಕಂಪನಿಯು ಗ್ರಾಹಕರ ಬೇಡಿಕೆಯ ಬಗ್ಗೆ ಗಮನ ಹರಿಸದೆ ಸೇವಾ ನ್ಯೂನತೆ ಎಸಗಿದೆ. ಆದ್ದರಿಂದ, ಪರಿಹಾರ ಪಾವತಿಸುವ ಹೊಣೆ ಕಂಪನಿಯ ಮೇಲಿದೆ ಎಂದು ಹೇಳಿದೆ. ಆರ್​ಟಿಒ ರಾಜ್ಯ ಸರ್ಕಾರದ ನೋಂದಣಿ ಪ್ರಾಧಿಕಾರವಾಗಿದ್ದು, ಈ ಪ್ರಕರಣದಲ್ಲಿ ಅದರ ಪಾತ್ರವಿಲ್ಲ. ದೂರುದಾರರೂ ಸಹ ಅದರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಆದ್ದರಿಂದ, ಆರ್​ಟಿಒ ವಿರುದ್ಧದ ದೂರನ್ನು ರದ್ದುಪಡಿಸಲಾಗುತ್ತಿದ್ದು, ಸೇವಾ ನ್ಯೂನತೆ ಎಸಗಿರುವ ಕಂಪನಿಯೇ ದೂರುದಾರ ರಿಗೆ 25 ಸಾವಿರ ರೂ.ಗಳನ್ನು ಮರುಪಾವತಿಸಬೇಕು ಎಂದು ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಕಾಡಲ್ಲಿ ಯುವತಿಯ ಶವ ಪತ್ತೆ; ಆಕೆಯ ಮೂವರು ಚಿಕ್ಕಮ್ಮಂದಿರ ಬಂಧನ: ಆಗಿದ್ದೇನು?

ಮುಂಗಾರು ಮತ್ತಷ್ಟು ಚುರುಕು: ರಾಜ್ಯದ ಎಲ್ಲೆಲ್ಲಿ ಎಷ್ಟು ದಿನ ಆರೆಂಜ್ ಅಲರ್ಟ್?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:1 × one =
Remember me
