| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಕಳೆದ ಒಂದು ದಶಕದಿಂದ ರಾಜ್ಯವು ಪ್ರಕೃತಿ ವಿಕೋಪದಿಂದ ಜಝುರಿತಗೊಂಡಿದ್ದು, ಒಂದಲ್ಲ ಒಂದು ರೀತಿಯ ಹೊಡೆತದಿಂದ ಬರೋಬ್ಬರಿ 2 ಲಕ್ಷ ಕೋಟಿ ರೂ. ವರೆಗೆ ನಷ್ಟ ಅನುಭವಿಸಿದೆ. ಇದರ ಬಹುಪಾಲು ‘ಸಂತ್ರಸ್ತರು’ ರೈತರಾಗಿದ್ದಾರೆ. ಹಾಗೆಯೇ ಆಸ್ತಿ ಕಳೆದುಕೊಂಡ ಜನಸಾಮಾನ್ಯರು ಮತ್ತು ಸರ್ಕಾರಿ ಸ್ವತ್ತುಗಳು ದೊಡ್ಡಮಟ್ಟದಲ್ಲಿ ಈ ಪಟ್ಟಿಯಲ್ಲಿವೆ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವರದಿ ಪ್ರಕಾರ ಹತ್ತು ವರ್ಷಗಳಲ್ಲಿ ವಿಪರೀತ ಮಳೆ ಇಲ್ಲವೇ ಬರ ಅಥವಾ ಅನ್ಯರಾಜ್ಯದ ಮಳೆಯ ಪರಿಣಾಮದಿಂದ ರಾಜ್ಯ ಪ್ರಕೃತಿ ವಿಕೋಪದ ತಾಪವನ್ನು ಎದುರಿಸಿದೆ. 10 ವರ್ಷಗಳಲ್ಲಿ 2 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಸ್ವತ್ತು ನಷ್ಟವಾಗಿದ್ದರೆ, ಇದಕ್ಕೆ ದೊರೆತ ಪರಿಹಾರ ಅತ್ಯಲ್ಪವಾಗಿದೆ.
ಕರ್ನಾಟಕವು ಅತಿ ಹೆಚ್ಚಿನ ಮಳೆಯಾಧಾರಿತ ಕೃಷಿ ಪ್ರದೇಶ ಹೊಂದಿದ್ದು (7.01 ದಶಲಕ್ಷ ಹೆಕ್ಟೇರ್) ಕೇವಲ ಶೇ.26 ನೀರಾವರಿ ಕೃಷಿ ಪ್ರದೇಶವಿದೆ. ರಾಜ್ಯದಲ್ಲಿ ವಾರ್ಷಿಕ 1,150 ಮಿಮೀ ವಾಡಿಕೆ ಮಳೆ ಇದ್ದು, ಶೇ.70ರಷ್ಟು ಮಳೆಯನ್ನು ನೈಋತ್ಯ ಮುಂಗಾರು ಅವಧಿಯಲ್ಲಿ ಪಡೆಯುತ್ತದೆ. ಪ್ರಾದೇಶಿಕ ಮಳೆ ಹಂಚಿಕೆ ಮತ್ತು ಮಳೆ ಅವಧಿಗಳಲ್ಲಿ ವ್ಯತ್ಯಾಸವಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ 750 ಮಿ.ಮೀ.ರಷ್ಟು ಮಳೆ ಕೊರತೆ ಕಂಡುಬರುತ್ತದೆ. ಕೃಷ್ಣ ಹಾಗೂ ಕಾವೇರಿ ನದಿ ಕಣಿವೆ ವ್ಯಾಪ್ತಿಯ ಜಿಲ್ಲೆಗಳು ಕಳೆದ ದಶಕದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿಗೆ ತುತ್ತಾಗಿವೆ. ಕರಾವಳಿ, ಮಲೆನಾಡು ಪ್ರದೇಶದಲ್ಲಿ ಅತ್ಯಧಿಕ ಮಳೆಯಿಂದ ತೀವ್ರ ಪ್ರವಾಹ, ಭೂ ಕುಸಿತ ಉಂಟಾಗಿದೆ.
ವಿಪತ್ತು ನಿಧಿಯ ನಿಯಮಗಳು:ಸಾಮಾನ್ಯವಾಗಿ ಅತಿವೃಷ್ಟಿ ಅಥವಾ ಬರ ಘೋಷಣೆಯಾಗುತ್ತಿದ್ದಂತೆ ಅಧಿಕಾರಿಗಳು ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಕೊಡುತ್ತಾರೆ. ಸರ್ಕಾರವು ರಾಜ್ಯ ವಿಪತ್ತು ನಿಧಿ ವಿತರಣೆ ನಿಯಮಾನುಸಾರ ಪರಿಹಾರ ನೀಡುತ್ತದೆ. ಪೂರ್ಣ ಮನೆಹಾನಿ, ಭಾಗಶಃ ಹಾನಿ, ಬೆಳೆಹಾನಿ, ಜೀವನೋಪಾಯಕ್ಕೆ ತುರ್ತು ಪರಿಹಾರ ಹೀಗೆ ಬೇರೆ ಬೇರೆ ಸಂಕಷ್ಟಗಳಿಗೆ ನೆರವು ನೀಡಲಾಗುತ್ತದೆ.
2012ರಿಂದ 2022ರ ವರೆಗೂ ಸರ್ಕಾರ ಮಾಡಿರುವ ಅಂದಾಜಿನ ಪ್ರಕಾರ 1,92,682 ಕೋಟಿ ರೂ. ಪ್ರಕೃತಿ ವಿಕೋಪದಿಂದಲೇ ನಷ್ಟವಾಗಿದೆ. ಈ ವರ್ಷದಲ್ಲೂ ನಷ್ಟವಾಗಿದ್ದು, ಬರ ಹಾಗೂ ನೆರೆ ಹಾನಿಯ ಸರ್ವೆ ನಡೆಯಬೇಕಿದೆ. ಸರ್ಕಾರದ ಮಾಹಿತಿ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ 43,038 ಕೋಟಿ ರೂ. ಪರಿಹಾರ ವಿತರಣೆಯಾಗಿದೆ.
2022 ಜುಲೈನಿಂದ ಸೆಪ್ಟೆಂಬರ್​ನಲ್ಲಾದ ಪ್ರವಾಹದಿಂದ 12,406.65 ಕೋಟಿ ರೂ ನಷ್ಟವಾಗಿದ್ದರೆ, 1,944.44 ಕೋಟಿ ರೂ. ಪರಿಹಾರ ನೀಡಲಾಗಿದೆ. 2021ರಲ್ಲಿನ ಪ್ರವಾಹಕ್ಕೆ 18,293.10 ಕೋಟಿ ರೂ. ಹಾನಿಯಾಗಿ, 2,123.50 ಕೋಟಿ ರೂ. ಪರಿಹಾರ ವಿತರಣೆಯಾಗಿದೆ. 2020ರ ಆಗಸ್ಟ್​ನಿಂದ ಅಕ್ಟೋಬರ್​ನಲ್ಲಾದ ಪ್ರವಾಹಕ್ಕೆ 23,753.86 ಕೋಟಿ ರೂ. ನಷ್ಟ, 2,261.38 ಕೋಟಿ ರೂ. ಪರಿಹಾರ ಸಿಕ್ಕಿದೆ. 2019ರ ಆಗಸ್ಟ್​ನಲ್ಲಾದ ಪ್ರವಾಹದಿಂದ 35,008.83 ಕೋಟಿ ರೂ. ಹಾನಿಗೆ ಸಿಕ್ಕಿದ್ದು 2,444.68 ಕೋಟಿ ರೂ. ಪರಿಹಾರ. 2018ರಲ್ಲಿ 4,262.09 ಕೋಟಿ ರೂ. ಸ್ವತ್ತು ಪ್ರವಾಹದಿಂದ ನಷ್ಟವಾಗಿ 722.70 ಕೋಟಿ ರೂ. ಪರಿಹಾರ ದೊರಕಿದೆ.
ಬರಗಾಲದಿಂದ 2018ರಲ್ಲಿ 16,662.48 ಕೋಟಿ ರೂ. ನಷ್ಟವಾಗಿದ್ದರೆ ಸಿಕ್ಕಿದ್ದು 2,444.68 ಕೋಟಿ ರೂ. ಪರಿಹಾರ. ಹಿಂಗಾರು ಬರ ಪರಿಸ್ಥಿತಿಯಿಂದ 11,384 ಕೋಟಿ ರೂ ನಷ್ಟವಾಗಿತ್ತು. ಇದಕ್ಕೆ 2,064.30 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿತ್ತು. 2016ರ ಮುಂಗಾರು ಬರಕ್ಕೆ 17,193.00 ಕೋಟಿ ರೂ.ನಷ್ಟು ನಷ್ಟವಾಗಿ 4,702.53 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2016 ಹಿಂಗಾರಿನಲ್ಲಿ 7,097.89 ಕೋಟಿ ರೂ. ಬರದಿಂದ ನಷ್ಟವಾಗಿ 3,310.83 ಕೋಟಿ ರೂ. ಪರಿಹಾರ ನೀಡಲಾಗಿತ್ತು. ಇದೇ ವರ್ಷ ಪ್ರವಾಹಕ್ಕೆ 2,485.06 ಕೋಟಿ ರೂ. ಹಾನಿಯಾಗಿ ಪರಿಹಾರ ಸಿಕ್ಕಿದ್ದು 386.44 ಕೋಟಿ ರೂ. ಮಾತ್ರ. 2015ರ ಬರದಲ್ಲಿ 15,636.07 ಕೋಟಿ ರೂ. ಹಾನಿಯಾಗಿ 3,830.84 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿತ್ತು. 2015ರ ಹಿಂಗಾರು ಬರಕ್ಕೆ 6,733.14 ಕೋಟಿ ರೂ. ನಷ್ಟ ಹಾಗೂ 1,417.14 ಕೋಟಿ ರೂ. ಪರಿಹಾರ ಸಿಕ್ಕಿತ್ತು. 2015ರ ಏಪ್ರಿಲ್​ನಲ್ಲಿ ಆಲಿಕಲ್ಲಿ ಮಳೆಗೆ 711.32 ಕೋಟಿ ರೂ. ಹಾನಿಗೆ ಪ್ರತಿಯಾಗಿ 151.28 ಕೋಟಿ ರೂ. ಪರಿಹಾರ ನೀಡಿತ್ತು. 2014ರ ಮುಂಗಾರು ಬರಕ್ಕೆ 3,589.07 ಕೋಟಿ ರೂ. ನಷ್ಟವಾಗಿ 779.20 ಕೋಟಿ ರೂ. ವಿತರಣೆಯಾಗಿತ್ತು. 2014ರ ಆಗಸ್ಟ್​ನಲ್ಲಿನ ಪ್ರವಾಹದಿಂದ 615.39 ಕೋಟಿ ರೂ. ನಷ್ಟಕ್ಕೆ 388.29 ಕೋಟಿ ರೂ. ಪರಿಹಾರ ಸಿಕ್ಕಿತ್ತು. 2013ರ ಮುಂಗಾರಿನಲ್ಲಿ 1719.29 ಕೋಟಿ ರೂ. ಹಾನಿಯಾಗಿ 1,014.15 ಕೋಟಿ ರೂ. ನೆರವು ನೀಡಲಾಗಿತ್ತು. 2013ರ ಪ್ರವಾಹಕ್ಕೆ 2,742.14 ಕೋಟಿ ರೂ. ಹಾನಿಯಾದರೆ ಪರಿಹಾರ ಮೊತ್ತ 610.84 ಕೋಟಿ ರೂ. ನಿಗದಿಯಾಗಿತ್ತು. 2013ರ ಫೆಬ್ರವರಿ, ಮಾರ್ಚ್​ನಲ್ಲಾದ ಆಲಿಕಲ್ಲು ಮಳೆಗೆ 888.29 ಕೋಟಿ ರೂ. ನಷ್ಟ ಸಂಭವಿಸಿ 963.28 ಕೋಟಿ ರೂ. ಪರಿಹಾರ ಹಾಗೂ 2012ರ ಬರಕ್ಕೆ 11,480.00 ಕೋಟಿ ರೂ. ನಷ್ಟ ಸಂಭವಿಸಿದ್ದರೆ ಪರಿಹಾರವಾಗಿ 11,489 ಕೋಟಿ ರೂ. ನೀಡಲಾಗಿತ್ತು.
ಪ್ರವಾಹ ನಷ್ಟ ಸಂದರ್ಭದಲ್ಲಿ ಜನರನ್ನು ಎಚ್ಚರಿಸಲು ವ್ಯವಸ್ಥೆಯಲ್ಲಿ ಆಗಾಗ್ಗೆ ಒಂದಷ್ಟು ಸುಧಾರಣೆಗಳಾಗಿವೆ. 96 ದತ್ತಾಂಶ ಸಂಗ್ರಹ ಕೇಂದ್ರಗಳ ಮೂಲಕ ಹವಾಮಾನ ಸಂಬಂಧಿತ ಸಂಶೋಧನೆ, ಮುನ್ಸೂಚನೆ, ಮುನ್ನೆಚ್ಚರಿಕೆ ಸಂದೇಶ, ಸಲಹೆ-ಸೂಚನೆ ನೀಡಲಾಗುತ್ತಿದೆ. ಈ ವ್ಯವಸ್ಥೆ ದೇಶದಲ್ಲೇ ವಿನೂತನ ಹಾಗೂ ಪ್ರಥಮವಾಗಿದೆ. ರಿಯಲ್ ಟೈಮ್ ಹವಾಮಾನ ಮಾಹಿತಿ, ನಕ್ಷೆ, ವರದಿ, ಮುನ್ನೆಚ್ಚರಿಕೆ ಸಂದೇಶ, ಕೃಷಿ ಸಲಹೆಯನ್ನು ಅಧಿಕಾರಿ, ಸಾರ್ವಜನಿಕ, ರೈತ ಸಮುದಾಯಕ್ಕೆ ನೀಡಲಾಗುತ್ತಿದೆ. ಅದೇ ರೀತಿ ಸರ್ಕಾರವು ಪ್ರವಾಹ ಮುನ್ಸೂಚನೆ ಕೋಶ ಸ್ಥಾಪಿಸಿದೆ. ಈ ಕೋಶ ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ಪ್ರವಾಹ ಮುನ್ಸೂಚನೆ ನೀಡುವ ವ್ಯವಸ್ಥೆ ಅಭಿವೃದ್ಧಿಪಡಿಸಿದೆ. ಇಲ್ಲಿ ತಯಾರಾಗುವ ವರದಿಯನ್ನು ಜಿಲ್ಲಾಡಳಿತಗಳಿಗೆ ನೀಡಲಾಗುತ್ತದೆ. ನಗರ ಪ್ರವಾಹ ಪರಿಸ್ಥಿತಿ ನಿರ್ವಹಿಸಲು ಸಂಯೋಜಿತ ನಗರ ಪ್ರವಾಹ ಮಾದರಿಯನ್ನು ಐಐಎಸ್ಸಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸ್ವಯಂಚಾಲಿತ ಮಾಹಿತಿ ಪ್ರಸರಣೆಗಾಗಿ ‘ವರುಣಮಿತ್ರ’ ಅಂತರ್ಜಾಲ ತಾಣ ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೇ, ಬೆಂಗಳೂರು ಮತ್ತು ಸ್ಮಾರ್ಟ್ ಸಿಟಿಗಳಿಗೆ ಸೀಮಿತವಾಗಿ ಅಧಿಕಾರಿಗಳ ಬಳಕೆಗಾಗಿ ‘ಮೇಘಸಂದೇಶ’ ಮೊಬೈಲ್ ಆಪ್ ಪರಿಚಯಿಸಲಾಗಿದೆ. ಸಿಡಿಲು ಬಡಿತದಿಂದ ಆಗುವ ಜೀವಹಾನಿ, ಆಸ್ತಿಪಾಸ್ತಿ ನಷ್ಟ ತಗ್ಗಿಸಲು 11 ಸಿಡಿಲು ಸಂವೇದಕ ಅಳವಡಿಸಿದ್ದು, ಮುನ್ನೆಚ್ಚರಿಕೆ ವಹಿಸಲು ‘ಸಿಡಿಲು’ ಮೊಬೈಲ್ ಆಪ್ ರಚಿಸಲಾಗಿದೆ.
ಜಾರಿಯಾಗದ ಕಾರ್ಯಸೂಚಿಗಳು:ಕಳೆದ 5 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಭೂಕುಸಿತ ಕಾರ್ಯಸೂಚಿ ಸಿದ್ಧಗೊಂಡಿದೆ. ಆದರೆ, ಅದರ ಅನುಷ್ಠಾನಕ್ಕೆ ಸರ್ಕಾರ ಮನಸ್ಸು ಮಾಡಿದಂತಿಲ್ಲ. ನೆರೆ ಸಂದರ್ಭದಲ್ಲಿ ಹೆಚ್ಚುವರಿ ನೀರನ್ನು ಅಗತ್ಯ ಇರುವೆಡೆ ಹರಿಸುವ ವಿಶೇಷ ಯೋಜನೆಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದವೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ.
ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

ಎಲ್ಲರೂ ಬೇಲಿ ಹಾರುತ್ತಿದ್ದಾರೆ ಎಂದ ಖುಷ್​​ಬೂ; ಉಡುಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಹೀಗಂದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − nine =
Remember me
