ಹಳ್ಳಿಗಳ ಬೆಟ್ಟಗುಡ್ಡಗಳನ್ನೆಲ್ಲ ನುಂಗಿ ಹಾಕುತ್ತಿರುವ ಕಲ್ಲು ಗಣಿಗಾರಿಕೆಯ ಬೇರು ರಾಜ್ಯಾದ್ಯಂತ ವ್ಯಾಪಿಸಿದ್ದು, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2 ಸಾವಿರಕ್ಕೂ ಅಧಿಕ ಅಕ್ರಮ ಗಣಿಗಾರಿಕೆ ಕ್ವಾರಿಗಳು ಪತ್ತೆಯಾಗಿವೆ! ತಪ್ಪಿತಸ್ಥರಿಂದ ಒಂದಷ್ಟು ದಂಡ ವಸೂಲಿ ಬಿಟ್ಟರೆ ಬೇರೆ ಕಾನೂನು ಕ್ರಮ ತೆಗೆದುಕೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಪ್ರಬಲ ಕಾನೂನಿನ ಅಸ್ತ್ರ ಇಲ್ಲದ್ದರಿಂದ ಅಕ್ರಮಕ್ಕೆ ತಡೆಯಿಲ್ಲದಂತಾಗಿದೆ.
ಅಕ್ರಮ ಕಲ್ಲು ಗಣಿಗಾರಿಕೆಗೆ ಸ್ಥಳೀಯ ರಾಜಕಾರಣಿಗಳ ಕೃಪಾಕಟಾಕ್ಷವಿದೆ ಎಂಬ ಆರೋಪಗಳಿವೆ. ಚುನಾವಣೆ ಸಂದರ್ಭದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಗಣಿ ಮಾಲೀಕರ ಪಾತ್ರ ಪ್ರಮುಖವಾಗಿರುತ್ತದೆ. ಹೀಗಾಗಿ ಗಣಿಗಾರಿಕೆಗೆ ಅನುಮತಿ ಕೊಡಿಸುವುದರಲ್ಲಿ ಹಾಗೂ ಅಕ್ರಮ ಗಣಿಗಾರಿಕೆ ನಡೆಸುವುದರಲ್ಲಿ ಸ್ಥಳೀಯ ಮುಖಂಡರ ಕೈವಾಡವಿರುತ್ತದೆ ಎಂಬುದನ್ನು ಇಲಾಖೆ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.
ಏನೆಲ್ಲ ಹಾನಿ?:ಪರಿಸರಕ್ಕೆ ಹಾನಿ ಉಂಟುಮಾಡುವ ಅಧಿಕೃತ ಮತ್ತು ಅನಧಿಕೃತ ಕಲ್ಲು ಗಣಿಕಾರಿಕೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕೆಂದು ಪರಿಸರವಾದಿಗಳು, ರೈತರು ಸೇರಿ ನಾನಾ ಸಂಘಟನೆಗಳು ಈಗಾಗಲೇ ಸಾಕಷ್ಟು ಬಾರಿ ಹೋರಾಟ ನಡೆಸಿದ್ದರೂ ಸರ್ಕಾರ ಸುರಕ್ಷತಾ ಕ್ರಮಕೈಗೊಂಡಿಲ್ಲ. ಜಲ್ಲಿ, ಸೈಜುಗಲ್ಲು, ಬೋಲ್ಡರ್ಸ್, ದಿಂಡುಗಲ್ಲು, ಕಲ್ಲುಪುಡಿ, ಅಲಂಕಾರಿಕ ಶಿಲೆ ಮತ್ತು ಗ್ರಾನೈಟ್ ಗಣಿಗಾರಿಕೆಯಿಂದಾಗಿ ಪರಿಸರಕ್ಕೆ ಅಪಾರ ಹಾನಿಯಾಗುತ್ತದೆ. ಕ್ವಾರಿಗಳಿಂದ ಬರುವ ಧೂಳು ಹಾಗೂ ಸ್ಪೋಟಕ ವಸ್ತು ಬಳಕೆಯಿಂದ ಸ್ಥಳೀಯರಿಗೆ ತೊಂದರೆಯಾಗುತ್ತದೆ. ಆದ್ದರಿಂದ ರಾಜ್ಯದಲ್ಲಿ ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸಬೇಕೆಂಬುದು ಪರಿಸರವಾದಿ ಯಲ್ಲಪ್ಪ ರೆಡ್ಡಿ ಆಗ್ರಹ.
ಮಾಹಿತಿಯೇ ಇಲ್ಲ:ರಾಜ್ಯದ ಕೆಲವು ಕಡೆಗಳಲ್ಲಿ ಎಷ್ಟು ಟನ್ ಕಲ್ಲು ತೆಗೆಯಲಾಗುತ್ತದೆ ಎಂಬುದರ ಬಗ್ಗೆ ಸರಿಯಾಗಿ ಮಾಹಿತಿಯೇ ಇಲ್ಲ. ‘ನಮಗೆ ಬರುತ್ತಿರುವ ಆದಾಯದಲ್ಲಿ ಕಲ್ಲು ಗಣಿಗಾರಿಕೆಯ ರಾಜಧನದ ಪಾಲು ಹೆಚ್ಚಿದೆ. ಆದರೆ, ಅದರಲ್ಲೂ ಶೇ. 90 ದುರುಪಯೋಗವಾಗುತ್ತಿದೆ. ಹೀಗಿರುವಾಗ ರಾಜಧನದ ರೂಪದಲ್ಲಿ ಬರುತ್ತಿರುವ ಆದಾಯ ಸರಿಯಾಗಿರಲು ಹೇಗೆ ಸಾಧ್ಯ?’ ಎಂಬುದು ಇಲಾಖೆಯ ಲೆಕ್ಕಪತ್ರ ವಿಭಾಗದವರ ಅಭಿಪ್ರಾಯ.
ಎಲ್ಲಿ ಹೆಚ್ಚು?:ಇಲಾಖೆ ಕಾರ್ಯಾಚರಣೆ ವೇಳೆ ಅರಣ್ಯ ಸಂರಕ್ಷಣೆ ಕಾಯ್ದೆ ಮತ್ತು ಅರಣ್ಯ ಸಂರಕ್ಷಣಾ ಕಾನೂನು ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿರುವುದು ಪತ್ತೆಯಾಗಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಪ್ಪಳ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಇನ್ನಿತರೆ ಜಿಲ್ಲೆಗಳಲ್ಲಿ ಹೆಚ್ಚು ಅಕ್ರಮ ಕಲ್ಲು ಗಣಿಗಾರಿಕೆ ಕ್ವಾರಿಗಳು ಪತ್ತೆಯಾಗಿವೆ.
ಜೈಲು ಶಿಕ್ಷೆಯ ಭಯ ಇಲ್ಲ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಟಾಸ್ಕ್​ಫೋರ್ಸ್ ಕಳೆದ 4 ವರ್ಷಗಳಲ್ಲಿ ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ 6,873 ವಾಹನಗಳನ್ನು ಜಪ್ತಿ ಮಾಡಿ ಕೋಟ್ಯಂತರ ರೂ. ದಂಡ ವಸೂಲಿ ಮಾಡಿದೆ. ಅರಣ್ಯ ಸಂರಕ್ಷಣೆ ಕಾಯ್ದೆ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಪತ್ತೆಯಾದರೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸಾಧ್ಯವಾಗಿಲ್ಲ. ಇಂತಿಷ್ಟು ಸಾವಿರ ಎಂದು ದಂಡ ಕಟ್ಟುವ ಮಾಲೀಕರು ಪುನಃ ಕಲ್ಲು ಗಣಿಗಾರಿಕೆ ಮುಂದುವರಿಸುತ್ತಾರೆ. ಆರೋಪಿಗಳಿಗೆ ಜೈಲು ಶಿಕ್ಷೆ ಎಂಬುದೇ ಇಲ್ಲ. ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಪ್ರತ್ಯೇಕ ಕಾಯ್ದೆ ರೂಪಿಸಬೇಕು ಎಂಬುದು ಪರಿಸರವಾದಿಗಳ ಆಗ್ರಹ.
1500 ಕೋಟಿ ರೂ. ಆದಾಯ
ರಾಜ್ಯದಲ್ಲಿ ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ 2802 ಕಲ್ಲು ಗಣಿಗಾರಿಕೆ ಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಸರ್ಕಾರಕ್ಕೆ 1500 ಕೋಟಿ ರೂ. ವಾರ್ಷಿಕ ಆದಾಯ ಬರುತ್ತಿದೆ. 1 ಟನ್ ಕಲ್ಲಿಗೆ 650 ರೂ.ನಿಂದ 700 ರೂ.ವರೆಗೆ ದರ ನಿಗದಿ ಮಾಡಲಾಗಿದೆ. ಕಿ.ಮೀ ಆಧಾರದ ಮೇಲೆ ಸಾಗಾಣಿಕ ವೆಚ್ಚವನ್ನು ತೆಗೆದುಕೊಳ್ಳಲಾಗುತ್ತಿದೆ. 60 ರೂ. ರಾಜಧನ, 30 ರೂ. ಜಿಲ್ಲಾ ನಿರ್ವಹಣೆ ನಿಧಿ ಮತ್ತು ಇನ್ನಿತರ ಸೇರಿ ಪ್ರತಿ ಟನ್ ಕಲ್ಲಿಗೆ ಒಟ್ಟು 107 ರೂ. ಶುಲ್ಕವನ್ನು ಸರ್ಕಾರಕ್ಕೆ ಕಟ್ಟಲಾ ಗುತ್ತಿದೆ. ವಾರ್ಷಿಕ ಸಾವಿರಾರು ಮಿಲಿಯನ್ ಮೆಟ್ರಿಕ್ ಟನ್ ಕಲ್ಲು ತೆಗೆಯಲಾಗುತ್ತಿದೆ.
13000 ಎಕರೆಯಲ್ಲಿ ಗಣಿಗಾರಿಕೆ
ಗಣಿಗಾರಿಕೆಗೆ ಅರಣ್ಯ ಸಂರಕ್ಷಣೆ ಕಾಯ್ದೆ 1980 2(1) ಮತ್ತು 2(3) ಹಾಗೂ ಅರಣ್ಯ ಸಂರಕ್ಷಣಾ ಕಾನೂನು 2003 (6) ಹಾಗೂ ಕೇಂದ್ರ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಪಡೆದ ಬಳಿಕ ಗುತ್ತಿಗೆ ಆಧಾರದಲ್ಲಿ ನಿರ್ದಿಷ್ಟ (20 ವರ್ಷ ಗುತ್ತಿಗೆ) ಹಾಗೂ ನಿರ್ದಿಷ್ಟವಲ್ಲದ (30 ವರ್ಷ ಗುತ್ತಿಗೆ) ಎಂದು 2 ವಿಧದಲ್ಲಿ ಅನುಮತಿ ನೀಡಲಾಗುತ್ತದೆ. ಸದ್ಯ ರಾಜ್ಯದಲ್ಲಿ 13 ಸಾವಿರ ಎಕರೆ ಪ್ರದೇಶದಲ್ಲಿ ಗುತ್ತಿಗೆ ಆಧಾರದ ಮೇಲೆ 2802 ಅಧಿಕೃತ ಕಲ್ಲು ಗಣಿಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ.
ಪ್ರತಿ ಜಿಲ್ಲೆಗಳಲ್ಲೂ ತಂಡಗಳನ್ನು ರಚಿಸಲಾಗಿದೆ. ಕಾನೂನು ಬಾಹಿರವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗಳನ್ನು ಪತ್ತೆ ಮಾಡಿ ಎಫ್​ಐಆರ್ ದಾಖಲಿಸಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ದಂಡ ಹಾಕಲಾಗುತ್ತಿದೆ. ಕೆಲವರಿಗೆ ಜೈಲು ಶಿಕ್ಷೆ ಕೂಡ ಆಗಿದೆ.
| ಡಾ.ಶಿವಶಂಕರ್ ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ
| ಬೇಲೂರು ಹರೀಶ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
