ಬೆಂಗಳೂರು:ಗೃಹಲಕ್ಷ್ಮಿ ಯೋಜನೆಯಡಿ ಬಡ ಹೆಣ್ಮಕ್ಳಿಗೆ ಮಾಸಿಕ ಎರಡು ಸಾವಿರ ರೂ ನೀಡಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಪತ್ನಿಗೆ ಬಹು ಕೋಟಿ ರೂ. ಬೆಲೆ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಟಿ ಬೀಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮುಡಾ ನಿವೇಶನಗಳ ಹಂಚಿಕೆ ದಾಖಲೆಗಳ ಪ್ರತಿಗಳನ್ನು ಬಿಡುಗಡೆ ಮಾಡಿ, ಅಕ್ರಮದ ಸ್ವರೂಪವನ್ನು ಬಿಚ್ಚಿಟ್ಟರು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಮುಖವಾಡ ಕಳಚಿ ಬಿದ್ದಿದೆ ಎಂದು ತೀಕ್ಷ್ಣವಾಗಿ ವಿಮರ್ಶಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಐದು ಸಾವಿರ ಕೋಟಿ ರೂ ಮೌಲ್ಯದ ನಿವೇಶನಗಳು ಬೇಕಾಬಿಟ್ಟಿ ಹಂಚಿಕೆಯಾಗಿವೆ. ಹಗರಣ ಮುಚ್ಚಿ ಹಾಕುವ ವ್ಯವಸ್ಥಿತ ಹುನ್ನಾರ ಹೂಡಲಾಗಿದೆ ಎಂದು ಆರೋಪಿಸಿದರು.
ಮುಡಾ ಹಗರಣದ ತನಿಖೆಗೆ ಯಾವುದೇ ಕಾರಣಕ್ಕೂ ಎಸ್ಐಟಿ ರಚಿಸಬಾರದು, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ಹಗರಣದ ವಿರುದ್ಧ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಶುಕ್ರವಾರ ನಡೆಯಲಿದೆ. ಮೂರು ಪ್ರಮುಖ ಕ್ರಮಗಳಿಗೆ ಸರ್ಕಾರಕ್ಕೆ ಒತ್ತಾಯಿಸಲಿದ್ದೇವೆ.
ನಂತರ ಸದನದ ಒಳಗೂ ಹೋರಾಟ ಮಾಡಲಿದ್ದೇವೆ ಎಂದು ಪ್ರಕಟಿಸಿದ ಅವರು, ಮುಂದೆ ಏನು ಮಾಡುತ್ತೇವೆ‌ ಕಾದು ನೋಡಿ. ಬಡವರು, ಪರಿಶಿಷ್ಟ ಜಾತಿ, ಪಂಗಡದವರಿಗೆ ಹಂಚಿಕೆಯಾಗಬೇಕಾದ ನಿವೇಶನಗಳು ಪ್ರಭಾವಿಗಳ ಪಾಲಾಗಿವೆ ಎಂದು ವಾಗ್ದಾಳಿ ಮಾಡಿದರು.
ಕಾಯ್ದೆ, ಕಟ್ಟಳೆಗಳು ಸಿಎಂ ಸಿದ್ದರಾಮಯ್ಯ ಪ್ರಭಾವಕ್ಕೆ ನಿರ್ಲಕ್ಷಿತವಾಗಿವೆ. ಹೇಗಾದರೂ ಸರಿ ಬೆಲೆ ಬಾಳುವ ಭೂಮಿ ಕಬಳಿಕೆ ಮಾಡಬೇಕು ಎಂದು ನಿಯಮ‌ಗಾಳಿಗೆ ತೂರಿ ಅಧಿಕಾರ ದರ್ಬಳಕೆ ಮಾಡಿಕೊಂಡಿದ್ದಾರೆ, ಇದರ ನೇರ ಹೊಣೆ ಹೊರಬೇಕು, ನುಡಿದಂತೆ ನಡೆದಿದ್ದೇವೆ ಎನ್ನುತ್ತಿದ್ದಾರೆ. ಅದಕ್ಕೆ ವ್ಯತಿರಿಕ್ತವಾಗಿ ನಡೆ ಎನ್ನುವುದಕ್ಕೆ ಈ ಹಗರಣವೇ ಕೈಗನ್ನಡಿ ಎಂದು ಹರಿಹಾಯ್ದರು.
ಮಹದೇವಪ್ಪ, ಕಾಕಾಸಾಹೇಬ್ ನಿನ್ನ ಪತ್ನಿಗೂ ಫ್ರೀ ನನ್ನ ಪತ್ನಿಗೂ ಫ್ರೀ ಎಂದಿದ್ದರು, ರಾಜ್ಯದ ಬಡ ಹೆಣ್ಣುಮಕ್ಕಳಿಗೆ 2 ಸಾವಿರ ಕೊಟ್ಟು ತಮ್ಮ ಪತ್ನಿಗೆ ತಲಾ 2 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ 14 ನಿವೇಶನಗಳನ್ನು ಮಂಜೂರಿ ಮಾಡಿಸಿದ್ದಾರೆ ಎಂದು ದೂರಿದರು.
ತಮ್ಮ ಅವಧಿಯಲ್ಲಿ ಅವ್ಯವಹಾರ ನಡೆಸಿ ತಮ್ಮದೇ ಸರ್ಕಾರದಿಂದ ಪರಿಹಾರ ಕೇಳಿದ ಸಿಎಂ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಬಿ.ವೈ.ವಿಜಯೇಂದ್ರ, ದಾಖಲೆಗಳ ಮೂಲಕ ಅಕ್ರಮದ ತಿರುಳು ಬಿಡಿಸಿಟ್ಟರು.
3.16 ಎಕರೆ ಭೂಮಿಗೆ ಬದಲಾಗಿ 14 ನಿವೇಶನ ಮಂಜೂರಾಗಿದೆ ಅದು 17-18 ಕೋಟಿ ಮೌಲ್ಯ ಮಾತ್ರ ವಾಸ್ತವವಾಗಿ ನಮಗೆ 60 ಕೋಟಿ ಪರಿಹಾರ ನೀಡಬೇಕು ಎಂದಿದ್ದಾರೆ, 2022 ರ ಜನವರಿ 12 ರಂದು ಕ್ರಯಪತ್ರವಾಗಿದೆ.
ಇದರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಭೂಮಿಯನ್ನು ಸ್ವ ಇಚ್ಚೆಯಿಂದ ಬಿಟ್ಟುಕೊಡಲು ಪ್ರೋತ್ಸಾಹಕವಾಗಿ ನಿಯಮ 1991 ರ ಪ್ರಕಾರ 14 ನಿವೇಶನ ಕೊಡಲಾಗಿದೆ ಎಂದಿದೆ ಆದರೆ 1991 ರ ಕಾನೂನು ಪ್ರಕಾರ ಬರಬೇಕಾದ ಒಟ್ಟು ನಿವೇಶನ ಒಂದು ಎಕರೆಗೆ 1 ನಿವೇಶನ, 3-4 ಎಕರೆಯಾದರೆ 4800 ಅಡಿ ಮಾತ್ರ ಅಂದರೆ 2 ನಿವೇಶನ ಮಾತ್ರ ಕೊಡಬೇಕಿದೆ.ಬಆದರೆ ಇವರು ಕೊಟ್ಟಿರುವುದು 40*60 ರ ಎರಡು ನಿವೇಶನ ಬದಲು 14 ಕೊಟ್ಟಿರುವುದು ಸಂಪೂರ್ಣ ಕಾನೂನು ಬಾಹಿರವಾಗಿದೆ. ಬಡವರಿಗೆ ಸಿಗಬೇಕಾದ ನಿವೇಶನ ಸಿಎಂ ಪತ್ನಿಗೆ ಸಿಕ್ಕಿದೆ ಎಂದು ಆರೋಪಿಸಿದರು.
2004 ರಲ್ಲಿ ಸಿದ್ದರಾಮಯ್ಯ ಪತ್ನಿಯ ಸಹೋದರ ಖರೀದಿ ಮಾಡುವಾಗ ಮುಡಾ ಸ್ವಾಧೀನದಲ್ಲಿದೆ ಎಂದಿದೆ, ಮುಡಾ ಸ್ವಾಧೀನದಲ್ಲಿ ಇದ್ದಿದ್ದನ್ನು ಇವರು ಹೇಗೆ ಖರೀದಿ ಮಾಡಿದರು? 2009 ರಲ್ಲಿ ಉಡುಗೊರೆಯಾಗಿ ಸಿದ್ದರಾಮಯ್ಯ ಪತ್ನಿಗೆ ನೀಡಿದ್ದು ಹೇಗೆ? ಆರ್.ಟಿ.ಸಿ ಯಲ್ಲಿಯೇ ಇದು ಮುಡಾ ಸ್ವಾಧೀನದಲ್ಲಿದೆ ಎಂದಿದೆ.
ಆದರೂ ಸಹ ಭೂಮಿ ಖರೀದಿ, ಗಿಫ್ಟ್ ಡೀಡ್, ಭೂ ಪರಿವರ್ತನೆಯಾಗಿದೆ, ಕೃಷಿ ಭೂಮಿ ಎಂದು ಗಿಫ್ಡ್ ಡೀಡ್ ಮಾಡಿದ್ದಾರೆ ಆದರೆ ಅದು ಪರಿವರ್ತಿತ ಜಾಗವಾಗಿತ್ತು, ಇನ್ನು ಸಿದ್ದರಾಮಯ್ಯ 2013 ರ ಪ್ರಮಾಣಪತ್ರದಲ್ಲಿ 3.16 ಎಕರೆ ಜಾಗದ ಉಲ್ಲೇಖವನ್ನೇ ಮಾಡಿಲ್ಲ, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗಿದೆ, ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ಕೊಡಲಿದ್ದೇವೆ ಎಂದರು.
62 ಕೋಟಿ ಪರಿಹಾರ ಬರಬೇಕಿತ್ತು 18 ಕೋಟಿ ಮೌಲ್ಯದ ನಿವೇಶನ ಮಾತ್ರ ಬಂದಿದೆ ಎಂದು ಸಿಎಂ ಹೇಳಿದ್ದಾರೆ, ಇದು ಕೂಡ ತಪ್ಪು ಮಾಹಿತಿಯಾಗಿದೆ 1991 ರ ನಿಯಮದ ಪ್ರಕಾರ 2 ನಿವೇಶನ ಮಾತ್ರ? ಇದು ಕೂಡ ತಪ್ಪು ಮಾಹಿತಿಯಾಗಿದೆ. ಮುಡಾದಲ್ಲಿ ಎರಡು ಪ್ರಕರಣ ಇದೆ, ಸಿಎಂ ಪತ್ನಿಗೆ 14 ನಿವೇಶನ ಕೊಟ್ಟಿದ್ದು ಒಂದು ಪ್ರಕರಣವಾಗಿದೆ.
ಅಕ್ರಮದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಆತುರಾತುರವಾಗಿ ಮೈಸೂರಿಗೆ ಹೋಗಿ ಅಧಿಕಾರಿಗಳ ಸಭೆ ಕರೆದ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್, ಏಕಾಏಕಿ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ, ಯಾರಿಗೆ ಶಿಕ್ಷೆಯಾಗಬೇಕೋ ಅವರನ್ನು ವರ್ಗಾವಣೆ ಮಾಡಿದ್ದಾರೆ, ಕಠಿಣ ಕ್ರಮದ ಬದಲು ವರ್ಗಾವಣೆ ಮಾಡಿದ್ದಾರೆ, ಮುಡಾ ಹಗರಣದ ಕುರಿತು ತನಿಖೆ ನಡೆಸಿ ವರದಿ ನೀಡಿದ್ದ ಜಿಲ್ಲಾಧಿಕಾರಿಯನ್ನೂ ವರ್ಗಾವಣೆ ಮಾಡಿದ್ದಾರೆ ಎಂದು ಟೀಕಿಸಿದರು.
ಸಿಎಂ ತವರು ಜಿಲ್ಲೆಯಲ್ಲಿ ಸಂಬಂಧಪಟ್ಟ ಸಚಿವರು ಪ್ರಕರಣ ಮುಚ್ಚಿಹಾಕಲು ಪ್ರಯತ್ನ ಮಾಡಿದ್ದಾರೆ, ಮೈಸೂರಿನಿಂದ ಎಲ್ಲ ಕಡತ ಸ್ವತಃ ಸಚಿವರೇ ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ.ದೊಡ್ಡ ಭ್ರಷ್ಟಾಚಾರದ ಪ್ರಕರಣ ಹೊರಗೆ ಬಾರದಿರಲಿ ಎಂದು ಮುಚ್ಚಿಡಲು ಕಡತ ತೆಗೆದುಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.
14 ನಿವೇಶನಗಳ ಮಾರ್ಗಸೂಚಿ ಮೌಲ್ಯ ಪ್ರತಿ ಚದರಡಿಗೆ ಮೂರು ಸಾವಿರ ರೂ.ಗಳಿದ್ದರೆ, ಮಾರುಕಟ್ಟೆ ಬೆಲೆ ಒಂಭತ್ತು ಸಾವಿರ ರೂ.ಗೂ ಹೆಚ್ಚಿದೆ. 50:50 ಅನುಪಾತದಲ್ಲಿ ನಿವೇಶನ ಹಂಚಿಕೆಗೆ ಅರ್ಹ ಎನ್ನುತ್ತಿದ್ದಾರೆ ಆದರೆ ವಾಸ್ತವವಾಗಿ ಸಿಎಂ ಪತ್ನಿ ಎರಡು ನಿವೇಶನ ಮಾತ್ರ ಪಡೆಯಲು ಅರ್ಹರಿದ್ದಾರೆ.
ಮುಡಾದಲ್ಲಿ ಇಷ್ಟೊಂದು ಅಕ್ರಮ ನಡೆಯುತ್ತಿದೆ, ಹರಾಜು ಆಗಬೇಕಿದ್ದ ನಿವೇಶನ ಮನಬಂದಂತೆ ಹಂಚಿಕೆ ಮಾಡುತ್ತಿರುವ ಕುರಿತು ಜಿಲ್ಲಾಧಿಕಾರಿ ವರದಿ ನೀಡಿದ್ದರೂ ಹಗರಣ ಬಯಲಿಗೆ ಬರುವ ವಾರಕ್ಕೆ ಮೊದಲು 42 ನಿವೇಶನಗಳನ್ನು ಒಬ್ಬರಿಗೆ ಹಂಚಿಕೆ ಮಾಡಿದ್ದಾರೆ, ಈ ರೀತಿ ಸಾವಿರಾರು ನಿವೇಶನವನ್ನು ಕಾನೂನಿಬಾಹಿರವಾಗಿ ಇವರು ನೀಡಿದ್ದಾರೆ. ಅಕ್ರಮವಾಗಿ ನಿವೇಶನ ಹಂಚಿಕೆ, ಸಾವಿರಾರು ನಿವೇಶನಗಳನ್ನು ಬೇಕಾಬಿಟ್ಟಿ ಹಂಚಿಕೆ ಮಾಡಿದ್ದಾರೆ ಎಂದರು.
ಈ ಹಗರಣವನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ, ಶುಕ್ರವಾರ ಪ್ರತಿಪಕ್ಷದ ನಾಯಕ ಅಶೋಕ್‌ಸೇರಿ ಬಿಜೆಪಿ ಶಾಸಕರು, ನಾಯಕರನ್ನೊಳಗೊಂಡ ಬೃಹತ್ ಪ್ರತಿಭಟನಾ ಸಭೆ ಆಯೋಜನೆ ಮಾಡಿದ್ದೇವೆ, ಬಡವರಿಗೆ ಸಿಗಬೇಕಾದ ನಿವೇಶನ ಅವರಿಗೇ ಸಿಗಬೇಕು.
ಪ್ರಭಾವಿಗಳಿಗೆ ಹಂಚಿಕೆ ಮಾಡಿರುವುದನ್ನು ವಾಪಸ್ ಪಡೆಯಬೇಕು. ಈ ಕೇಸ್ ತನಿಖೆಗೆ ಎಸ್ಐಟಿ ರಚಿಸಬೇಡಿ, ಸಿಎಂ, ಸಚಿವರ ವಿರುದ್ಧ ಆರೋಪವಿದೆ, ನೀವು ಪ್ರಾಮಾಣಿಕರಾಗಿದ್ದರೆ ಸಿಬಿಐ ತನಿಖೆಗೆ ಕೊಡಿ ಎಂದು ಆಗ್ರಹಿಸಿದರು.
ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಬಡವರು, ಎಸ್ಸಿಎಸ್ಟಿಗಳಿಗೆ ನೀಡಬೇಕಾದ ನಿವೇಶನಗಳನ್ನು ತಮಗೆ ಬೇಕಟದಂತೆ ಕಾನೂನು ಸಡಿಲಿಸಿರುವುದು ಅಕ್ಷಮ್ಯ ಅಪರಾಧ,ಕೂಡಲೇ ಸಿಎಂ ರಾಜೀನಾಮೆ ನೀಡಬೇಕು, ಪ್ರಕರಣ ಸಿಬಿಐಗೆ ವಹಿಸಬೇಕು. ಮೈಸೂರಿನಲ್ಲಿ ಪ್ರತಿಭಟನೆ ನಂತರ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗುತ್ತದೆ ಎಂದರು.
ಖಾಸಗಿ ದೂರು ಸಲ್ಲಿಕೆ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸೇರಿದಂತೆ ಮುಂದಿನ ಹೋರಾಟದ ಬಗ್ಗೆ ನಾಯಕರೆಲ್ಲ ಸೇರಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಆದರೆ ಯಾರ ಅವಧಿಯಲ್ಲಿ ಅಕ್ರಮವಾದರೂ ಅಕ್ರಮ ಅಕ್ರಮವೇ ಹಾಗಾಗಿ ಸಮಗ್ರ ತನಿಖೆಯಾಗಬೇಕು, ಈ ಹಗರಣ ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
