ಬೆಂಗಳೂರು:ರಾಜ್ಯದಲ್ಲಿ ಹೆಚ್ಚು ಮಳೆಯಾಗಿರುವ 22 ತಾಲೂಕು ಅತಿವೃಷ್ಟಿ ಪೀಡಿತವೆಂದು ಘೊಷಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿ, ಈ ಮೊದಲು 61 ತಾಲೂಕನ್ನು ಪ್ರವಾಹ ಪೀಡಿತವೆಂದು ಘೋಷಿಸಲಾಗಿತ್ತು. ಈಗ ಬೆಳಗಾವಿ, ಚಿಕ್ಕಮಗಳೂರು, ಹುಬ್ಬಳ್ಳಿ ನಗರ, ಹುಬ್ಬಳ್ಳಿ, ದಾಂಡೇಲಿ, ಆಲೂರು, ಭದ್ರಾವತಿ, ಚನ್ನಗಿರಿ, ಅಣ್ಣಿಗೇರಿ, ನಿಡಗುಂದಿ, ಹರಪನಹಳ್ಳಿ, ದಾವಣಗೆರೆ, ಲಕ್ಷೆ್ಮೕಶ್ವರ, ಮುಂಡಗೋಡು, ಕಡೂರು, ತರಿಕೆರೆ, ಸೂಫಾ, ಬಬಲೇಶ್ವರ, ಕೊಲ್ಹಾರ, ಮುದ್ದೇಬಿಹಾಳ, ಮೂಡಿಗೆರೆ, ಹೊಸನಗರಗಳನ್ನು ಪ್ರವಾಹ ಪೀಡಿತವೆಂದು ಘೊಷಿಸಿದ್ದೇವೆ. ಎಲ್ಲೆಡೆ ಪರಿಹಾರೋಪಾಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಈ ಸಮಸ್ಯೆ ಪರಿಹರಿಸಲು ಸೂಚಿಸಿದ್ದೇನೆ. ಬೆಂಗಳೂರಿನಲ್ಲಿ ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ. ಯಾವುದಕ್ಕೂ ಈ ತನಕ ಕಡಿವಾಣ ಹಾಕಿಲ್ಲ ಎಂದರು. ಮೊದಲ ಪಟ್ಟಿಯಲ್ಲಿ ಮೂಡಿಗೆರೆಯನ್ನು ಪ್ರವಾಹ ಪೀಡಿತ ತಾಲೂಕೆಂದು ಘೋಷಣೆ ಮಾಡಿರಲಿಲ್ಲ. ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅದಕ್ಕೆ ಮಣಿದ ಸರ್ಕಾರ ಇದೀಗ ಪಟ್ಟಿಗೆ ಸೇರಿಸಿದೆ.
40 ಕಡೆ ಅಲರಾಂ ಸಿಸ್ಟಂ:ಚಂಡ ಮಾರುತಗಳ ಬಗ್ಗೆ ಮುನ್ಸೂಚನೆ ನೀಡಲು ಕರಾವಳಿ ಭಾಗದಲ್ಲಿ 40 ಕಡೆ ಅಲಾರಂ ಸಿಸ್ಟಂ ಅನುಷ್ಠಾನ ಮಾಡಲಾಗುವುದು ಎಂದು ಅಶೋಕ್ ತಿಳಿಸಿದರು. ಚಂಡ ಮಾರುತ ಬರುವ ಮುನ್ನ ಅಲಾರಂ ಸೈರನ್ ಕಿಮೀವರೆಗೆ ಕೇಳಲಿರುವ ಕಾರಣ, ಎಚ್ಚೆತ್ತುಕೊಳ್ಳಲು ಸಾಕಷ್ಟು ಸಮಯ ಸಿಗಲಿದೆ. ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿಸಲು ಸಾಧ್ಯವಿದೆ. ಈ ಸಿಸ್ಟಂಗಳನ್ನು ಬೆಂಗಳೂರಿನ ವಿಪತ್ತು ನಿರ್ವಹಣಾ ಕೇಂದ್ರ ನಿರ್ವಹಣೆ ಮಾಡಲಿದೆ. ಅಲಾರಾಂ ಅಳವಡಿಕೆಗೆ ಕೇಂದ್ರ ಸರ್ಕಾರದಿಂದ ಹಣ ಬರಲಿದೆ. ಒಂದೊಂದು ಸಿಸ್ಟಂಗೆ 12 ಕೋಟಿ ರೂ. ಖರ್ಚಾಗುತ್ತದೆ ಎಂದರು.
ಈಗಲಾದರೂ, ನನ್ನ ಕ್ಷೇತ್ರದ ಸಮಸ್ಯೆ ಅರ್ಥ ಮಾಡಿಕೊಂಡು ಪಟ್ಟಿಗೆ ಸೇರ್ಪಡೆ ಮಾಡಿರುವುದಕ್ಕೆ ಸಿಎಂ ಹಾಗೂ ಕಂದಾಯ ಸಚಿವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಹೇಮಾವತಿ, ಭದ್ರಾ ನದಿಯ ಉಗಮ ಸ್ಥಾನ ಮೂಡಿಗೆರೆಯಲ್ಲಿ ಮಳೆ ಆಗಿಲ್ಲ ಎಂಬ ವರದಿ ಬೇಸರ ತರಿಸಿದೆ.
|ಎಂ.ಪಿ.ಕುಮಾರಸ್ವಾಮಿಮೂಡಿಗೆರೆ ಶಾಸಕ
ಬೆಂಗಳೂರು:ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಸ್ತೆಗಳು ಹಾಳಾಗಿವೆ. ಹಾಳಾದ ರಸ್ತೆಗಳ ದುರಸ್ತಿ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವಂತೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಸೂಚನೆ ನೀಡಿದರು. ಮಳೆಯಿಂದ ಹಾನಿಯಾದ ಪ್ರದೇಶಗಳ ರಸ್ತೆ ಸುಧಾರಣೆಗೆ 300 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಈ ಅನುದಾನವನ್ನು ವಾಸ್ತವವಾಗಿ ಹಾನಿಯಾದ ಪ್ರದೇಶದಲ್ಲಿಯೇ ದುರಸ್ತಿಗೆ ಬಳಕೆ ಮಾಡುವಂತೆ ಸೂಚನೆ ನೀಡಿದರು. ಪ್ರತಿ ಜಿಲ್ಲೆಯ ರಸ್ತೆಗಳ ಸಾಂದ್ರತೆಯನ್ನು ಪರಿಶೀಲಿಸಿ, ಕಡಿಮೆ ಇರುವ ಜಿಲ್ಲೆಗಳಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುವಂತೆಯೂ ತಿಳಿಸಿದರು. ಒಂದು ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
21ರಂದು ಆಲಮಟ್ಟಿಗೆ ಸಿಎಂ ಬಾಗಿನ:ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ (ಆ.21) ಆಲಮಟ್ಟಿಯ ಲಾಲ್​ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಅಂದು ಬೆಳಗ್ಗೆ 8 ಗಂಟೆಗೆ ಹೆಲಿಕಾಪ್ಟರ್​ನಲ್ಲಿ ಹೊರಟು 11 ಗಂಟೆಗೆ ಬಾಗಿನ ಅರ್ಪಿಸಲಿದ್ದಾರೆ. ಆ ನಂತರ ಜನಪ್ರತಿನಿಧಿಗಳ ಜತೆ ಸಭೆ ನಡೆಸಲಿದ್ದಾರೆ. ಆಲ್ಲಿಂದ 2 ಗಂಟೆಗೆ ಬೆಳಗಾವಿಗೆ ಬಂದು ಸುವರ್ಣಸೌಧದಲ್ಲಿ ಕರೊನಾ ಹಾಗೂ ನೆರೆ ಕುರಿತಂತೆ ಜನಪ್ರತಿನಿಧಿಗಳ ಸಭೆ ನಡೆಸುವರು.
ಬೆಂಗಳೂರು:ನೆರೆಯಿಂದ ಹಾನಿಗೆ ಒಳಗಾಗಿಮನೆ-ಬೆಳೆ-ಜಾನವಾರು ಕಳೆದುಕೊಂಡ ಎಲ್ಲ ಸಂತ್ರಸ್ತರಿಗೆ ಕೂಡಲೇ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಜನ ಸಂಕಷ್ಟದಲ್ಲಿರುವಾಗ ಸರ್ಕಾರ ಸ್ಪಂದಿಸಬೇಕು ಎಂದಿದ್ದಾರೆ. ಹಾನಿಗೊಳಗಾಗಿರುವ ರಸ್ತೆ, ಸೇತುವೆ, ಶಾಲೆ, ಆಸ್ಪತ್ರೆ, ಪ್ರಾಥಮಿಕ ಆರೋಗ್ಯ  ಕೇಂದ್ರ, ಅಂಗನವಾಡಿ, ಸರ್ಕಾರಿ ಕಚೇರಿ ಕಟ್ಟಡಗಳನ್ನು ದುರಸ್ತಿ ಮಾಡಬೇಕು. ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿರುವ ಪ್ರವಾಹ ಪರಿಹಾರದ ಮೊತ್ತ ರಾಜ್ಯಕ್ಕೆ ಅವಮಾನ ಮಾಡಿದಂತಿದೆ. ಹೀಗಾಗಿ ಕೇಂದ್ರದ ಮೇಲೆ ಒತ್ತಡ ತಂದು ನ್ಯಾಯೋಚಿತ ಪರಿಹಾರ ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + eighteen =
Remember me
