ಬೆಂಗಳೂರು:ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮಹತ್ವಾಕಾಂಕ್ಷೆಯಿಂದ ಸರ್ಕಾರ 2,859 ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ತೀರ್ವನಿಸಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಈ ಯೋಜನೆ ಕೈಗೆತ್ತಿಕೊಂಡಿದ್ದು, 478.91 ಕೋಟಿ ರೂ.ವಿನಿಯೋಗಿಸಲಾಗುತ್ತದೆ. ಈ ಮೊತ್ತದ ಪೈಕಿ ಶೇ.60ನ್ನು ಕೇಂದ್ರ ಸರ್ಕಾರ ನೀಡಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೇಲ್ದರ್ಜೆಗೇರಿಸಿದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಆರೋಗ್ಯ ಪೂರೈಕೆ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಸ್ಟಾಫ್​ನರ್ಸ್, ಎಎನ್​ಎಂ, ಬಿಎಸ್ಸಿ ನರ್ಸಿಂಗ್ ಮಾಡಿದವರಿಗೂ ಹುದ್ದೆಗಳ ಭರ್ತಿಯಲ್ಲಿ ಅವಕಾಶ ನೀಡಲಾಗುತ್ತದೆ. ಆಸ್ಪತ್ರೆಗೆ ಮೂಲಸೌಕರ್ಯ, ಪರಿಕರ ಖರೀದಿಗೆ ಅವಕಾಶವಿದೆ. ಕ್ಷೇಮ ಕೇಂದ್ರಗಳಿಗೆ ಕಟ್ಟಡ ಲಭ್ಯವಿಲ್ಲದಿದ್ದರೆ ಮಾಸಿಕ 5 ಸಾವಿರ ರೂ. ದರದಲ್ಲಿ ಕಟ್ಟಡ ಬಾಡಿಗೆ ಪಡೆಯಲು ಅವಕಾಶವಿದೆ ಎಂದರು.
ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಆರೈಕೆ ಕರಡು ನಿಯಮಗಳು-2021 ಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಿಗೆ ಮಾನಸಿಕ ಆರೋಗ್ಯ ಆರೈಕೆ ಮತ್ತು ಸೇವೆ ಒದಗಿಸುವುದು, ಇಂಥ ಆರೈಕೆ-ಸೇವೆ ಸಮಯದಲ್ಲಿ ಅಂತಹ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಈ ನಿಯಮಗಳನ್ನೊಳಗೊಂಡ ಕಾಯ್ದೆಗೆ ಸಂಪುಟ ಸಮ್ಮತಿ ನೀಡಿದೆ. ಪಶ್ಚಿಮ ವಾಹಿನಿ ಯೋಜನೆ ವಿಚಾರ ಕುರಿತು, ನದಿಗಳಿಗೆ ನಿರ್ವಹಣಾ ಡ್ಯಾಂಗಳ ನಿರ್ಮಾಣ ಮಾಡಲಾಗುತ್ತದೆ. ಕಾರವಾರದಲ್ಲಿ ಸಮುದ್ರ ಸೇರುವ ನದಿ ನೀರಿಗೆ ಆಣೆ, ಬದು ಹಾಕಿ ಸಿಹಿ ಮತ್ತು ಉಪ್ಪು ನೀರು ಬೇರ್ಪಡಿಸಲಾಗುತ್ತದೆ. ಬೆಂಗಳೂರು ವೃಷಭಾವತಿ ನದಿ ನೀರು ಶುದ್ಧೀಕರಣ ಮಾಡಿ ಕೆರೆಗಳಿಗೆ ಹರಿಸಲಾಗುತ್ತದೆ ಎಂದರು.
ಹೆಸರು ಬದಲಾವಣೆ ಪ್ರಸ್ತಾಪವಿಲ್ಲ:ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಶುಚಿ ಕಾರ್ಯಕ್ರಮಕ್ಕೆ 47 ಕೋಟಿ ರೂಪಾಯಿ:2021-22ನೇ ಸಾಲಿಗೆ ಸರ್ಕಾರಿ ಹಾಗೂ ಅನುದಾನಿತ ಶಾಲೆ ಕಾಲೇಜುಗಳ ಹೆಣ್ಣು ಮಕ್ಕಳಿಗೆ ‘ಶುಚಿ’ ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಅದಕ್ಕಾಗಿ 47 ಕೋಟಿ ರೂ.ಗಳ ಅಂದಾಜು ಮೊತ್ತದ ಖರೀದಿಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಘನ ತ್ಯಾಜ್ಯ ವಿಲೇವಾರಿ:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪಾರಂಪರಿಕ ತ್ಯಾಜ್ಯ ನಿರ್ವಹಣೆಗಾಗಿ ಸಲ್ಲಿಸಿರುವ 73.73 ಕೋಟಿ ರೂ.ಗಳ ವಿಸ್ತೃ ಯೋಜನಾ ವರದಿಗೆ ಸಂಪುಟ ಅನುಮೋದನೆ ನೀಡಿದೆ.
ನೆರೆ, ಬರ, ಭ್ರಷ್ಟಾಚಾರ ಪ್ರಸ್ತಾಪ:ನೆರೆ, ಬರ, ಕರೊನಾ ನಿರ್ವಹಣೆ ಮತ್ತಿತರ ವಿಷಯಗಳು ಈ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ. ಆಡಳಿತ ವೈಫಲ್ಯ, ನೆರೆ ನಿರ್ವಹಣೆಯಲ್ಲಿನ ವಿಫಲತೆ, ನಾಯಕತ್ವ ಬದಲಾವಣೆ, ಕೇಂದ್ರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಹೊಗೇನಕಲ್ ಯೋಜನೆ, ಕರೊನಾ ಉಪಕರಣ ಖರೀದಿಯಲ್ಲಿ ಆಗಿರುವ ಹಣ ದುರ್ಬಳಕೆ, ಮೊಟ್ಟೆ ಖರೀದಿಯಲ್ಲಿ ಶಶಿಕಲಾ ಜೊಲ್ಲೆ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಮತ್ತಿತರ ವಿಚಾರಗಳನ್ನಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ.
ಬಾರದ ಆನಂದ್ ಸಿಂಗ್:ಖಾತೆ ಬಗ್ಗೆ ಮುನಿಸಿಕೊಂಡಿರುವ ಆನಂದ್ ಸಿಂಗ್ ಗುರುವಾರ ನಡೆದ ಸಂಪುಟ ಸಭೆಯಿಂದ ದೂರ ಉಳಿದರು. ಸಾರಿಗೆ ಸಚಿವ ಶ್ರೀರಾಮುಲು ವೈಯಕ್ತಿಕ ಕಾರಣಕೊಟ್ಟು ಸಭೆಯಿಂದ ದೂರ ಉಳಿದರೆಂದು ಮೂಲಗಳು ತಿಳಿಸಿವೆ.
ಕರೊನಾ, ಮುಖ್ಯಮಂತ್ರಿ ಬದಲಾವಣೆ ಮತ್ತಿತರ ಕಾರಣಗಳಿಂದಾಗಿ ಮುಂದೂಡಲ್ಪಡುತ್ತಿದ್ದ ರಾಜ್ಯ ವಿಧಾನಮಂಡಲ ಅಧಿವೇಶನ ಬೆಂಗಳೂರಿನಲ್ಲಿ ಸೆಪ್ಟೆಂಬರ್ 13 ರಿಂದ 10 ದಿನಗಳ ಕಾಲ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಮುಖ್ಯಮಂತ್ರಿ ಬದಲಾದ ಹಿನ್ನೆಲೆಯಲ್ಲಿ ಸಂಪುಟ ಉಪ ಸಮಿತಿಗಳು ರದ್ದಾಗಿದ್ದವು. ಈಗ ಹೊಸ ಉಪಸಮಿತಿ ರಚನೆಗೆ ಸಿಎಂಗೆ ಅಧಿಕಾರ ನೀಡಲಾಗಿದೆ. ಒಟ್ಟು 14 ಸಂಪುಟ ಉಪ ಸಮಿತಿ ರಚಿಸಲು ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ವಿವರಿಸಿದರು.
ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸವಿನೆನಪಿಗಾಗಿ ಸಿಎಂ ಘೋಷಿಸಿರುವ 800 ಕೋಟಿ ರೂ.ಗಳ ಯೋಜನೆಗಳಿಗೂ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಅಮೃತ ನಿರ್ಮಲ ನಗರ ಯೋಜನೆಯಡಿ 75 ನಗರ ಸ್ಥಳೀಯ ಸಂಸ್ಥೆಗಳನ್ನು ಆಯ್ಕೆ ಮಾಡಿ ಸ್ವಚ್ಛ, ಸುಂದರ ನಗರವಾಗಿ ಅಭಿವೃದ್ಧಿಪಡಿಸಲು ರೂಪಿಸುವ 75 ಕೋಟಿ ರೂ.ಗಳ ಯೋಜನೆಗೆ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ. ರೈತ, ನೇಕಾರ, ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ವಿಶೇಷ ಪೋ›ತ್ಸಾಹ ನೀಡಲು 750 ಅಮೃತ ರೈತ ಉತ್ಪಾದಕ ಸಂಸ್ಥೆಗಳಿಗೆ ತಲಾ -ಠಿ;30 ಲಕ್ಷದಂತೆ ಮೂರು ವರ್ಷದ ಅವಧಿಗೆ -ಠಿ;225 ಕೋಟಿ ಅನುದಾನ ದೊರೆಯಲಿದೆ.
ಆಯ್ದ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ತಲಾ 20 ಲಕ್ಷ ರೂ.ಗಳಂತೆ 150 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು. 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಗೃಹ ಇತ್ಯಾದಿ ಸಮಗ್ರ ಸೌಲಭ್ಯ ಒದಗಿಸಲು ತಲಾ 10 ಲಕ್ಷ ರೂ.ಗಳಂತೆ 75 ಕೋಟಿ ರೂ. ಅನುದಾನ ನೀಡಲಾಗುವುದು. 7,500 ಸ್ವಸಹಾಯ ಗುಂಪುಗಳನ್ನು ಕಿರು ಉದ್ಯಮ ಸಂಸ್ಥೆಗಳಾಗಿ ರೂಪಿಸಲು ತಲಾ 1 ಲಕ್ಷ ರೂ.ಗಳಂತೆ 75 ಕೋಟಿ ರೂ. ಬೀಜ ಧನ ಸೌಲಭ್ಯ ನೀಡಲಾಗುತ್ತದೆ. ರಾಜ್ಯದ 750 ಗ್ರಾಮ ಪಂಚಾಯಿತಿಗಳಲ್ಲಿ ಬೀದಿ ದೀಪಗಳು, ಪ್ರತಿ ಮನೆಗೆ ಕುಡಿಯುವ ನೀರಿನ ಸರಬರಾಜು, ಶೇ.100 ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಸೌರವಿದ್ಯುತ್ ಅಳವಡಿಕೆ, ಡಿಜಿಟಲ್ ಲೈಬ್ರರಿಗಳೊಂದಿಗೆ ಸುಸಜ್ಜಿತವಾದ ಶಾಲೆಗಳನ್ನು ಸ್ಥಾಪಿಸಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಪ್ರತಿ ಗ್ರಾಮ ಪಂಚಾಯಿತಿಗೆ 25 ಲಕ್ಷ ರೂ. ನೀಡಲು ಸಂಪುಟ ತೀರ್ಮಾನಿಸಿದೆ.
ಇವರಿಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಕರೊನಾ ಬಂತು!; ಈ ಪೈಕಿ ಕೇರಳದಲ್ಲೇ ಗರಿಷ್ಠ ಪ್ರಕರಣ…

ಆಟ ಆಡ್ತ ಆಡ್ತ ಸತ್ತು ಹೋದ ಬಾಲಕಿ: ಶಾಲೆ ತೆರೆದಿಲ್ಲ, ಮಕ್ಕಳು ಮನೇಲೇ ಇದ್ದಾರೆ ಅಂತಾದರೆ ಯಾವುದಕ್ಕೂ ಹುಷಾರಾಗಿರಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 11 =
Remember me
