ಬೆಂಗಳೂರು:ರಾಜ್ಯದ ಜೈವಿಕ ಆರ್ಥಿಕತೆ ಗಾತ್ರವನ್ನು ಮುಂದಿನ 5 ವರ್ಷಗಳಲ್ಲಿ 3.70 ಲಕ್ಷ ಕೋಟಿ ರೂ. (5,000 ಕೋಟಿ ಡಾಲರ್)ಗೆ ಹೆಚ್ಚಿಸುವ ಗುರಿ ಇದೆ. ರಾಷ್ಟ್ರೀಯ ಗಾತ್ರದ ಗುರಿಯಲ್ಲಿ ರಾಜ್ಯದಿಂದ ಅರ್ಧಪಾಲು ಕೊಡುಗೆ ನೀಡುವ ಸಂಕಲ್ಪ ಮಾಡಲಾಗಿದೆ ಎಂದು ಐಟಿ-ಬಿಟಿ ಇಲಾಖೆ ಹೊಂದಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಘೋಷಿಸಿದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಮೇಳ (ಬಿಟಿಎಸ್-2020) ಭಾಗವಾಗಿ ಮೊದಲ ಬಾರಿಗೆ ಜೈವಿಕ ತಂತ್ರಜ್ಞಾನ ವರದಿ-2020 ಅನ್ನು ಶುಕ್ರವಾರ ಬಿಡುಗಡೆ ಮಾಡಿ, ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ವರದಿ ಪ್ರಕಾರ, ಜೈವಿಕ ಆರ್ಥಿಕತೆ ಗಾತ್ರ ಈಗ 2,200 ಕೋಟಿ ಡಾಲರ್ (1.67 ಲಕ್ಷ ಕೋಟಿ ರೂ.) ಇದ್ದು, ಮೌಲ್ಯವರ್ಧನೆ ಜತೆಗೆ ವಿವಿಧ ಕಾರ್ಯತಂತ್ರಗಳ ಮೂಲಕ ಹೆಚ್ಚುವರಿ ಆದಾಯ ಪಡೆದು 5000 ಕೋಟಿ ಡಾಲರ್​ಗೆ ಕೊಂಡೊಯ್ಯಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೃಷಿ, ಪಶು ಸಂಗೋಪನೆ, ಪೌಷ್ಟಿಕತೆ, ಲಸಿಕೆ, ಆರೋಗ್ಯ ಸೇವೆ, ಜೈವಿಕ ಇಂಧನ ಒಳಗೊಂಡು ವರದಿಯಲ್ಲಿ 7 ಪ್ರಮುಖ ಶಿಫಾರಸುಗಳಿವೆ. ಜೈವಿಕ ತಾಂತ್ರಿಕ ವಲಯದಲ್ಲಿ ಸಂಶೋಧನೆ, ಆವಿಷ್ಕಾರ, ಮೌಲ್ಯವರ್ಧನೆ ವಲಯಗಳಿಗೆ ಒತ್ತು ನೀಡಿ, ದೇಶದ 100 ಬಿಲಿಯನ್ ಡಾಲರ್ ಗುರಿಗೆ ರಾಜ್ಯದಿಂದ ಅರ್ಧದಷ್ಟು ಕೊಡುಗೆ ನೀಡುವ ಮಹತ್ವಾಕಾಂಕ್ಷೆಯನ್ನು ಅಶ್ವತ್ಥನಾರಾಯಣ ಬಿಚ್ಚಿಟ್ಟರು.
ಕಟ್ಟಕಡೆ ವ್ಯಕ್ತಿಗೆ ಲಾಭ:ಜೈವಿಕ ತಂತ್ರಜ್ಞಾನ ಹಾಗೂ ಉದ್ಯಮ ಉಳ್ಳವರು, ಗಣ್ಯಾತಿಗಣ್ಯರು, ಪರಿಣತರು, ತಂತ್ರಜ್ಞರಿಗೆ ಮೀಸಲು ಎನ್ನುವ ತಪು್ಪ ಕಲ್ಪನೆಯಿದೆ. ಸುಸ್ಥಿರ ಅಭಿವೃದ್ಧಿ, ಸಮಾಜದ ಕಟ್ಟಕಡೆಯ ವ್ಯಕ್ತಿಯು ಘನತೆ-ಗೌರವ, ಆರೋಗ್ಯಪೂರ್ಣ ಬದುಕು ನಡೆಸಬೇಕು ಎನ್ನುವುದು ಈ ಕ್ಷೇತ್ರದ ಆಶಯ. ಅದೇ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕೃಷಿ, ಪಶು ಸಂಗೋಪನೆ, ಪೌಷ್ಟಿಕತೆ, ಲಸಿಕೆ, ಆರೋಗ್ಯ ಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಆಗುವ ಜೈವಿಕ ತಂತ್ರಜ್ಞಾನ ಬೆಳವಣಿಗೆಯು ಜನ-ಸಾಮಾನ್ಯರ ಬದುಕು ಸುಧಾರಿಸಲಿದೆ. ವಂಶವಾಹಿ ಕಾಯಿಲೆ ಹೋಗಲಾಡಿಸುವ ಜೀನ್-ಎಡಿಟಿಂಗ್, ದೇಹದ ಅಂಗಾಂಗಳನ್ನು ಪ್ರಯೋಗಾಲಯದಲ್ಲಿ ತಯಾರಿಸುವ ಮಟ್ಟಕ್ಕೆ ಈ ಕ್ಷೇತ್ರ ಬೆಳೆದಿದೆ ಎಂದು ಡಿಸಿಎಂ ವಿವರಿಸಿದರು.
ಅಮೆಜಾನ್​ನಿಂದ 10 ಲಕ್ಷ ಜಾಬ್
ಒಂದು ಕೋಟಿ ಸಣ್ಣ ಮತ್ತು ಮಧ್ಯಮ ಹಂತದ ಉದ್ಯಮಗಳನ್ನು ಡಿಜಿಟಲೀಕರಣಗೊಳಿಸುವುದು ಸೇರಿ 2025ರೊಳಗೆ 10 ಲಕ್ಷ ಡಿಜಿಟಲ್ ಉದ್ಯೋಗ ಸೃಷ್ಟಿಸಲು ಗುರಿ ಹಾಕಿಕೊಂಡಿರುವುದಾಗಿ ಅಮೆಜಾನ್ ತನ್ನ ಮುಂದಿನ ಯೋಜನೆಯನ್ನು ಬಹಿರಂಗಪಡಿಸಿದೆ. ಶೃಂಗಸಭೆಯಲ್ಲಿ ಮಾತನಾಡಿದ ಅಮೆಜಾನ್ ಇಂಡಿಯಾದ ಜಾಗತಿಕ ಹಿರಿಯ ಉಪಾಧ್ಯಕ್ಷ ಮತ್ತು ಕಂಟ್ರಿ ಹೆಡ್ ಅಮಿತ್ ಅಗರ್ವಾಲ್, ತಂತ್ರಜ್ಞಾನ ಮತ್ತು ಮೊಬೈಲ್ ಇಂಟರ್ನೆಟ್ ದೈನಂದಿನ ಜೀವನವನ್ನು ಜಾಗತಿಕವಾಗಿ ಪರಿವರ್ತಿಸಿದೆ. ಇದರಿಂದ ಭಾರತವೂ ಭಿನ್ನವಾಗಿಲ್ಲ. ಇವು ದೇಶದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದರು. ಕನ್ನಡ ಸೇರಿ ನಾಲ್ಕು ಸ್ಥಳೀಯ ಭಾಷೆಯನ್ನೂ ನಾವು ವಹಿವಾಟಿನಲ್ಲಿ ಬಳಸಿಕೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ವಹಿವಾಟು ಗಣನೀಯವಾಗಿ ವೃದ್ಧಿಯಾಗಿದೆ. ಗ್ರಾಮಿಣ ಭಾಗದಿಂದಲೂ ಬೇಡಿಕೆ ಬರುತ್ತಿದೆ. ಸಣ್ಣ ಪುಟ್ಟ ಅಂಗಡಿಯವರೂ ವ್ಯವಹಾರವನ್ನು ಡಿಜಿಟಲ್​ಗೆ ಪರಿವರ್ತಿಸಿಕೊಳ್ಳುತ್ತಿದ್ದಾರೆ.
ನಮ್ಮಲ್ಲೂ ಸಣ್ಣ ಪುಟ್ಟ ವ್ಯಾಪಾರಸ್ಥರನ್ನು ಸೇರಿಸಿಕೊಂಡಿದ್ದರಿಂದ ಅವರ ವ್ಯಾಪಾರ ನಿರೀಕ್ಷೆ ಮೀರಿ ಹೆಚ್ಚಾಗಿದೆ. ಸ್ಥಳೀಯ ಅಂಗಡಿ, ಜಾಗತಿಕ ಮಾರಾಟ ಎಂಬಂತಾಗಿದೆ ಎಂದವರು ಹೇಳಿದರು.
ಶಿಫಾರಸುಗಳು
ರಾಜ್ಯದ ಜತೆ ಹೆಜ್ಜೆ ಹಾಕಲು ಏಳು ದೇಶಗಳು ಮುಂದಡಿ
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಎಂಟು ಮಹತ್ವದ ಒಡಂಬಡಿಕೆಯಾಗಿದ್ದು, ಕರ್ನಾಟಕದ ಜತೆ ಸೇರಿ ಹೆಜ್ಜೆ ಹಾಕಲು ಫಿನ್​ಲೆಂಡ್, ಸ್ವೀಡನ್, ಅಮೆರಿಕ, ಬ್ರಿಟನ್, ಇಂಡಿಯಾನ, ವರ್ಜೀನಿಯಾ, ನೆದರ್ಲೆಂಡ್ ಮುಂದೆ ಬಂದಿವೆ. ನವೋದ್ಯಮಗಳ ಸ್ಥಾಪನೆ, ಕೌಶಲಾಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ, ಎಕೋಸಿಸ್ಟಮ್ ಕನೆಕ್ಟ್, ಲೈಫ್ ಸೈನ್ಸ್, ಜೈವಿಕ ತಂತ್ರಜ್ಞಾನ, ಆರೋಗ್ಯ, ರಕ್ಷಣೆ, ಬಾಹ್ಯಾಕಾಶ, ಕ್ರೀಡೆ, ಶಿಕ್ಷಣ, ಪರಸ್ಪರ ಮಾರುಕಟ್ಟೆ ವಿಸ್ತರಣೆ ಸೇರಿ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಒಡಂಬಡಿಕೆಗಳಿಗೆ ಆನ್​ಲೈನ್ ವೇದಿಕೆ ಮೂಲಕ ಅಧಿಕೃತ ಮುದ್ರೆ ಬಿತ್ತು. ರಾಜ್ಯದ ಪರವಾಗಿ ಆಯಾ ಇಲಾಖೆಯ ಅಧಿಕಾರಿಗಳು ಹಾಜರಿದ್ದು ದಾಖಲೆಗಳನ್ನು ನೀಡಿದರೆ, ಅದೇ ರೀತಿ ಮೈತ್ರಿ ದೇಶಗಳ ಸ್ಥಳೀಯ ಕಾನ್ಸುಲೇಟ್​ಗಳ ಹಿರಿಯ ಅಧಿಕಾರಿಗಳು ಅಂಕಿತ ಹಾಕಿ ದಾಖಲೆ ಹಸ್ತಾಂತರ ಮಾಡಿದರು.
ಶೀಘ್ರ ಡಿಜಿಟಲ್ ಹೆಲ್ತ್ ಮಿಷನ್
ಜನ-ಸಾಮಾನ್ಯರಿಗೆ ಸುಲಭ, ಕೈಗೆಟುಕುವ ದರದಲ್ಲಿ ವೈದ್ಯಕೀಯ ಆರೋಗ್ಯ ಸವಲತ್ತು ಒದಗಿಸಲು ಉದ್ದೇಶಿತ ‘ಡಿಜಿಟಲ್ ಹೆಲ್ತ್ ಮಿಷನ್’ ಶೀಘ್ರವೇ ದೇಶವ್ಯಾಪಿ ಜಾರಿಯಾಗಲಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಹಾಗೂ ಆಯುಷ್ಮಾನ್ ಭಾರತ್ ಅಧ್ಯಕ್ಷ ಡಾ.ಇಂದು ಭೂಷಣ್ ಪ್ರಕಟಿಸಿದರು. ಈಗಾಗಲೆ 6 ಕೇಂದ್ರಾಡಳಿತ ಪ್ರದೇಶದಲ್ಲಿ ಡಿಜಿಟಲ್ ಹೆಲ್ತ್ ಮಿಷನ್ ಅನುಷ್ಠಾನಕ್ಕೆ ತಂದಿದ್ದು, ದೇಶವು ಹೊಸ ಡಿಜಿಟಲ್ ಆರೋಗ್ಯ ಕಾರ್ಯಕ್ರಮದ ಹೊಸ್ತಿಲಲ್ಲಿದೆ. ಹಲವು ಕ್ಷೇತ್ರಗಳ ಪೈಕಿ ಆರೋಗ್ಯ ಕ್ಷೇತ್ರವು ದೊಡ್ಡದಾಗಿ ಹೊರಹೊಮ್ಮುತ್ತಿದೆ ಎಂದರು.
ಅರ್ಧ ಜನಸಂಖ್ಯೆ ವಿಮೆ ವ್ಯಾಪ್ತಿಗೆ:ಆಯುಷ್ಮಾನ್ ಭಾರತ್ ಯೂನಿವರ್ಸಲ್ ಆರೋಗ್ಯ ವಿಮೆ ಯೋಜನೆಯಡಿ 1 ವರ್ಷದಲ್ಲಿ 50 ಕೋಟಿ ಜನರನ್ನು ವಿಮೆ ವ್ಯಾಪ್ತಿಗೆ ತರಲಾಗಿದೆ. ಇದು ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಾಗಿದೆ. 24,000 ಆಸ್ಪತ್ರೆಗಳು ನೆಟ್​ವರ್ಕ್​ನಲ್ಲಿದ್ದು, ವೈದ್ಯಕೀಯ ಆರೋಗ್ಯ ಸವಲತ್ತು ಒದಗಿಸುತ್ತಿವೆ. ಪ್ರತಿ ಕುಟುಂಬಕ್ಕೆ ತಲಾ 5 ಲಕ್ಷ ರೂ.ವರೆಗೆ ಆರೋಗ್ಯ ರಕ್ಷಣೆ ಒದಗಿಸಲಾಗಿದೆ. ಈ ಯೋಜನೆ ಪ್ರತಿಶತ 100 ವಹಿವಾಟು ಆಧಾರಿತವಾಗಿದೆ ಎಂದರು.
1.4 ಕೋಟಿ ಜನರಿಗೆ ಚಿಕಿತ್ಸೆ:ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಕಳೆದೊಂದು ವರ್ಷದಲ್ಲಿ 1.4 ಕೋಟಿ ಜನರಿಗೆ ಚಿಕಿತ್ಸೆ ಸವಲತ್ತು ಕಲ್ಪಿಸಿ, 17,000 ಕೋಟಿ ರೂ. ವಹಿವಾಟು ನಡೆಸಲಾಗಿದೆ. ಇದರಿಂದಾಗಿ ಯೋಜನೆಯ ಅಗಾಧತೆ ಮತ್ತು ಅನುಕೂಲತೆ ಗಮನ ಸೆಳೆದಿದ್ದು, ಡಿಜಿಟಲ್ ಹೆಲ್ತ್ ಮಿಷನ್​ಗೆ ದೇಶವು ಕಾಲಿಡುವುದಕ್ಕೆ ಸಿದ್ಧವಾಗುತ್ತಿದ್ದಂತೆ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗಿದೆ ಎಂದು ಡಾ.ಇಂದು ಭೂಷಣ್ ಹೇಳಿದರು.
ಜೈವಿಕ ತಂತ್ರಜ್ಞಾನ ವರದಿ ಮುಖ್ಯಾಂಶ
ರಾಜಸ್ಥಾನದ ಹಿಮಾಂಶು ಪ್ರಥಮ
ಬೆಂಗಳೂರು ಟೆಕ್ ಸಮ್ಮಿಟ್ 2020ರಲ್ಲಿ ರಾಷ್ಟ್ರಮಟ್ಟದ ಗ್ರಾಮೀಣ ಐಟಿ ಕ್ವಿಜ್ ಶುಕ್ರವಾರ ನಡೆಯಿತು. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಬೈಟ್ ಅಬಂಡೆನ್ಸ್, ಟೆಕ್ ವಿಷನ್, ಟೆಕ್ ಕ್ಲೌಡ್ಸ್, ಟೆಕ್ ಅಜೈಲ್ ಮತ್ತು ಟೆಕ್ ಇಕೋಸಿಸ್ಟಂ ಸುತ್ತುಗಳಲ್ಲಿ ಪ್ರಶ್ನೆ ಕೇಳಲಾಯಿತು. ಒಟ್ಟು 6 ಸುತ್ತಿನಲ್ಲಿ ನಡೆದ ರಸಪ್ರಶ್ನೆಯಲ್ಲಿ ರಾಜಸ್ಥಾನದ ಹಿಮಾಂಶು ಮಾಕರ್ ಮುನ್ನಡೆ ಕಾಯ್ದುಕೊಂಡಿದ್ದರು. 5ನೇ ಸುತ್ತಿನವರೆಗೆ ಎರಡನೇ ಸ್ಥಾನದಲ್ಲಿದ್ದ ಮಧ್ಯಪ್ರದೇಶದ ಅಮನ್​ಕುಮಾರ್, ಅಂತಿಮ ಸುತ್ತಾದ ಟೆಕ್ ಇಕೋಸಿಸ್ಟಂನಲ್ಲಿ ಮೂರು ಸರಿಯಾದ ಉತ್ತರ ನೀಡಿ ಹಿಮಾಂಶು ಅಂಕಗಳನ್ನು ಸರಿದೂಗಿಸಿಕೊಂಡರು. ಅಂತಿಮ ಸುತ್ತಿನ ಅಂತ್ಯಕ್ಕೆ ಹಿಮಾಂಶು ಹಾಗೂ ಅಮನ್ ಇಬ್ಬರೂ ಒಂದೇ ಅಂಕ ಪಡೆದಿದ್ದರು. ಅದರಿಂದ ಇಬ್ಬರಿಗೂ ಟ್ರೖೆಬೇಕರ್ ಪ್ರಶ್ನೆಯನ್ನು ಕೇಳಲಾಯಿತು. ಅಂತಿಮವಾಗಿ ಹಿಮಾಂಶು, ಅಮನ್​ಗಿಂತ ಮುಂಚಿತವಾಗಿ ಉತ್ತರ ನೀಡಿ ರಾಷ್ಟ್ರಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡರು. ಕರ್ನಾಟಕದ ಉಡುಪಿಯಿಂದ ಸುಹಾಸ್ ಶೆಣೈ, ಮಹಾರಾಷ್ಟ್ರದ ಸಾಕ್ಷಿ ಹಿಂದುಜಾ, ಗುಜರಾತ್​ನ ಪಾರಸ್ ಗತನಿ ಮತ್ತು ಛತ್ತೀಸ್​ಗಡ್​ನಿಂದ ಪಾರಸ್ ಗತನಿ ಫೈನಲ್​ನಲ್ಲಿ ಭಾಗಿಯಾಗಿದ್ದರು. ಮೊದಲ ಸ್ಥಾನ ಪಡೆದ ಹಿಮಾಂಶುಗೆ ಟಿಸಿಎಸ್​ನಿಂದ 1 ಲಕ್ಷ ರೂ. ಸ್ಕಾಲರ್​ಶಿಪ್, ಅಮನ್ ಕುಮಾರ್​ಗೆ 50 ಸಾವಿರ ರೂ. ಹಾಗೂ ಫೈನಲ್​ನಲ್ಲಿ ಪಾಲ್ಗೊಂಡಿದ್ದ ಉಳಿದವರಿಗೆ 10 ಸಾವಿರ ರೂ. ಸ್ಕಾಲರ್​ಶಿಪ್ ನೀಡಲಾಯಿತು.
ಬಯೋ ಕ್ವಿಜ್​ನಲ್ಲಿ ಎಂ.ಭದ್ರಾ ಪ್ರಥಮ
ರಾಜ್ಯಮಟ್ಟದ ಬಯೋಕ್ವಿಜ್​ನಲ್ಲಿ ಬಾಗಲಕೋಟೆಯ ಮಣಿಪಾಲ್​ನ ಎಂ.ಭದ್ರಾ ಪ್ರಥಮ ಸ್ಥಾನ ಪಡೆದರು. ಬಯೋ ಟೆಕ್ನಾಲಜಿ ಮತ್ತು ಬಯಾಲಜಿ ಕುರಿತಂತೆ ಕೇಳಲಾದ 26 ಪ್ರಶ್ನೆಗಳಲ್ಲಿ ಅತಿಹೆಚ್ಚು ಸರಿಯಾದ ಉತ್ತರ ನೀಡುವ ಮೂಲಕ ಎಂ.ಭದ್ರಾ ಪ್ರಥಮ ಹಾಗೂ ಬಾಗಲಕೋಟೆಯ ಅಮೃತ್ ಭಟ್ ದ್ವಿತೀಯ ಹಾಗೂ ಧಾರವಾಡದ ಎಂ. ವ್ರಷ್ಟಿ ತೃತಿಯ ಸ್ಥಾನ ಪಡೆದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 8 =
Remember me
