ಬೆಂಗಳೂರು:ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಕಡಿತ, ನೀರಾವರಿ ಪಂಪ್​ಸೆಟ್ ಅಕ್ರಮ-ಸಕ್ರಮಕ್ಕೆ ಬ್ರೇಕ್ ಹಾಕಿ ಮೂಲಸೌಕರ್ಯಕ್ಕೆ ಫಲಾನುಭವಿಯಿಂದಲೇ ಪೂರ್ಣ ಹಣ ಕಟ್ಟಿಸಿಕೊಳ್ಳುವ ಆದೇಶ ಜಾರಿಯಿಂದ ರೈತಾಪಿ ವಲಯದಲ್ಲಿ ನಕಾರಾತ್ಮಕ ಚರ್ಚೆ ಶುರುವಾದ ಬೆನ್ನಲ್ಲೇ ಸರ್ಕಾರ ಪರಿಸ್ಥಿತಿ ನಿಭಾಯಿಸಲು ತಂತ್ರ ರೂಪಿಸಿದೆ.
ಸೋಮವಾರ ಇಂಧನ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದಿನಂತೆಯೇ ರಾಜ್ಯದಲ್ಲಿ ನೀರಾವರಿ ಪಂಪ್​ಸೆಟ್​ಗಳಿಗೆ 7 ತಾಸು ವಿದ್ಯುತ್ ಸರಬರಾಜು ಮಾಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದೇ ರೀತಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ ಯೋಜನೆ ಫಲಾನುಭವಿಗಳ ಮನೆಗಳಿಗೆ ವಿದ್ಯುತ್ ಕಡಿತ ತಪ್ಪಿಸಲು ಬಾಕಿ ಮನ್ನಾ ಮಾಡುವ ತೀರ್ವನವನ್ನೂ ಪ್ರಕಟಿಸಿದರು.
ವಿದ್ಯುತ್ ಕಡಿತ ಕಾರಣದಿಂದಾಗಿ ಸರ್ಕಾರದ ವಿರುದ್ಧ ರಾಜ್ಯದ ಹಲವೆಡೆ ಹೋರಾಟಗಳು ನಡೆದಿದ್ದವು. ಇದು ‘ಗ್ಯಾರಂಟಿ’ ಇಮೇಜ್​ಗೂ ಧಕ್ಕೆ ಉಂಟು ಮಾಡುತ್ತಿತ್ತು. ಹೀಗಾಗಿ ಉತ್ತರ ಕರ್ನಾಟಕ ಭಾಗದ ಶಾಸಕರು, ರೈತ ಸಂಘಟನೆ ಮುಖಂಡರು ತೀವ್ರ ಆಕ್ಷೇಪ ಎತ್ತಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಆದ್ದರಿಂದಲೇ ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಲು ಮುಂದಾಗಿದೆ.
ಇಂಧನ ಇಲಾಖೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನೀರಾವರಿ ಪಂಪ್​ಸೆಟ್​ಗಳಿಗೆ ಏಳು ತಾಸು ವಿದ್ಯುತ್ ನೀಡುವುದಾಗಿ ಮೊದಲೇ ಘೊಷಣೆ ಮಾಡಿದ್ದೆವು. ರಾಜ್ಯದಲ್ಲಿ ವಿದ್ಯುತ್ ಕೊರತೆಯಿದೆ ಎಂದು ನೀರಾವರಿ ಪಂಪ್​ಸೆಟ್​ಗಳಿಗೆ ಅವಧಿ ಕಡಿತ ಮಾಡಲಾಗಿತ್ತು. ಕೆಲವರು ಸತತವಾಗಿ ಮೂರು ಫೇಸ್​ನಲ್ಲಿ 5 ತಾಸು ವಿದ್ಯುತ್ ನೀಡಿದರೆ ಸಾಕು ಎಂದಿದ್ದರು. ಈ ನಡುವೆ ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ರೈತರು ಭೇಟಿ ಮಾಡಿ ಭತ್ತದ ಬೆಳೆಗೆ 5 ತಾಸು ವಿದ್ಯುತ್ ಸಾಕಾಗುವುದಿಲ್ಲ, ಏಳು ತಾಸು ಬೇಕೆಂದು ಎಂದು ಮನವಿ ಮಾಡಿದ್ದರು ಎಂದು ವಿವರಿಸಿದರು.
ಇಂದಿನಿಂದ ಕೃಷಿ ಪಂಪ್​ಸೆಟ್​ಗಳಿಗೆ 7 ತಾಸು ವಿದ್ಯುತ್ ನೀಡುತ್ತಿದ್ದೇವೆ. ಕೈಗಾರಿಕೆ, ಗೃಹಬಳಕೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿಲ್ಲ.
| ಸಿದ್ದರಾಮಯ್ಯ, ಮುಖ್ಯಮಂತ್ರಿ
ಕಬ್ಬು ಹಾಗೂ ಭತ್ತ ಕಟಾವಿಗೆ ಬಂದಿರುವುದರಿಂದ ಈ ಭಾಗದಲ್ಲಿ ಏಳು ತಾಸು ವಿದ್ಯುತ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉಳಿದ ಭಾಗಗಳಿಗೆ ನೀಡುತ್ತಿದ್ದ 5 ಗಂಟೆಗಳ ವಿದ್ಯುತ್ ಅನ್ನು 7 ಗಂಟೆಗಳಿಗೆ ವಿಸ್ತರಿಸಲು ಸಹ ಸಾಧ್ಯವಾಗುತ್ತದೆ ಎಂದು ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಗಿದೆ ಎಂದರು.
ಇಂದಿನಿಂದ 7 ತಾಸು ವಿದ್ಯುತ್ ಪಂಪ್​ಸೆಟ್​ಗಳಿಗೆ ನೀಡುತ್ತಿದ್ದೇವೆ. ಕೈಗಾರಿಕೆ, ಗೃಹಬಳಕೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿಲ್ಲ. ಪಂಪ್​ಸೆಟ್​ಗಳಿಗೆ ನೀಡುವ ವಿದ್ಯುತ್ ಸಹಾಯಧನವನ್ನು ಸರ್ಕಾರವೇ ನೀಡಿದೆ. 13,100 ಕೋಟಿ ರೂ.ಗಳನ್ನು ಬಜೆಟ್​ನಲ್ಲಿ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತರಪ್ರದೇಶ ಜತೆ ಕೊಡು-ಕೊಳ್ಳುವಿಕೆ:ಎಷ್ಟು ವಿದ್ಯುತ್ ಖರೀದಿಸುತ್ತೇವೆ ಎನ್ನುವುದರ ಮೇಲೆ ವೆಚ್ಚ ಅವಲಂಬಿತವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಉತ್ತರಪ್ರದೇಶ ಹಾಗೂ ಪಂಜಾಬ್ ಜತೆಗೆ ನಮ್ಮ ವಿನಿಮಯ ವ್ಯವಸ್ಥೆ ಇದೆ. ಈಗ ನಾವು ಅವರಿಂದ ಪಡೆದು, ಜೂನ್​ನಿಂದ ಹಿಂದಿರುಗಿಸುತ್ತೇವೆ ಎಂದು ವಿವರಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ. ಅತೀಕ್, ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ , ಹಣಕಾಸು ಹಾಗೂ ಇಂಧನ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ತೀರ್ಮಾನದ ಹಿಂದಿದೆ ಮಹತ್ವದ ಕಾರಣ:ಲೋಕಸಭೆ ಚುನಾವಣೆ ಎದುರಿಗಿರುವ ಕಾರಣ ಪ್ರತಿಪಕ್ಷಕ್ಕೆ ಸರ್ಕಾರದಿಂದಲೇ ಅಸ್ತ್ರ ಕೊಟ್ಟಂತಾಗುತ್ತದೆ. ಹಾಗೆಯೇ ವಿದ್ಯುತ್ ವಿಚಾರ ಜನರನ್ನೂ ನೇರವಾಗಿ ತಲುಪಿಬಿಡಬಹುದು. ಇನ್ನೊಂದು ಆಯಾಮದಲ್ಲಿ ರೈತಾಪಿ ವರ್ಗ ತಿರುಗಿಬಿದ್ದರೆ ಸರ್ಕಾರದ ವರ್ಚಸ್ಸು ಕುಗ್ಗಲಿದೆ. ರಾಜಕೀಯವಾಗಿ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ. ಇದೇ ಕಾರಣಕ್ಕೆ ಎಚ್ಚರಿಕೆ ಹೆಜ್ಜೆ ಇಡಲಾಗಿದೆ.
ಸೆಕ್ಷನ್ 11ರ ಲಾಭ:ವಿದ್ಯುಚ್ಛಕ್ತಿ ಕಾಯ್ದೆಯ ಸೆಕ್ಷನ್ 11ರ ಅನ್ವಯ ನಮ್ಮಲ್ಲಿ ಉತ್ಪಾದನೆಯಾದ ವಿದ್ಯುತ್ ಬೇರೆ ರಾಜ್ಯಗಳಿಗೆ ನೀಡದಂತೆ ನಿರ್ಬಂಧಿಸಿ ಬಳಕೆ ಮಾಡಲಾಗುತ್ತಿದೆ. ಆ ಮೂಲಕ ವಿದ್ಯುತ್ ವಿತರಣೆ ಸಹಜ ಸ್ಥಿತಿಗೆ ಬಂದಿದೆ. ನೋಡಲ್ ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ.
ಅಗತ್ಯವೆಷ್ಟು?:ರಾಜ್ಯದಾದ್ಯಂತ ಐಪಿ ಸೆಟ್​ಗಳಿಗೆ ನಿರಂತರ ಏಳು ಗಂಟೆಗಳ ಅವಧಿಗೆ ವಿದ್ಯುತ್ ಒದಗಿಸಲು ಪ್ರತಿ ಗಂಟೆಗೆ 600 ಮೆಗಾವಾಟ್ ಹಾಗೂ ಪ್ರತಿದಿನಕ್ಕೆ 14 ಮಿಲಿಯನ್ ಯುನಿಟ್​ಗಳ ಅಗತ್ಯವಿದೆ. ಇದಕ್ಕಾಗಿ ಅಂದಾಜು 1,500 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಅನುದಾನದ ಉಳಿತಾಯ, ಮರುಹಂಚಿಕೆಯ ಮೂಲಕ ಈ ವೆಚ್ಚ ಭರಿಸಲಾಗುತ್ತಿದೆ.
ಭವಿಷ್ಯದ ಲೆಕ್ಕಾಚಾರ:ಮುಂದಿನ ವರ್ಷದಲ್ಲಿ ಐಪಿ ಸೆಟ್​ಗಳಿಗೆ ವಿದ್ಯುತ್ ಪೂರೈಕೆಯನ್ನು ಸೌರವಿದ್ಯುತ್ ಮೂಲದಿಂದ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ವೇಳೆಗೆ ಹಗಲು ವೇಳೆಯಲ್ಲಿಯೇ ರೈತರಿಗೆ ವಿದ್ಯುತ್ ನೀಡಲು ಇದರಿಂದ ಅನುಕೂಲವಾಗಲಿದೆ.
389 ಕೋಟಿ ರೂ. ಬಾಕಿ ಮನ್ನಾ:ಗೃಹಜ್ಯೋತಿ ಬಂದ ನಂತರ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿಗಳನ್ನು ಗೃಹಜ್ಯೋತಿ ಯೋಜನೆಯಡಿ ಸೇರಿಸಿ, 58 ಯೂನಿಟ್​ವರೆಗೆ ಉಚಿತವಾಗಿ ವಿದ್ಯುತ್ ನೀಡಲು ತೀರ್ವನಿಸಿದೆ. ಆದರೆ, ಈ ಯೋಜನೆಗಳಡಿ 389.66 ಕೋಟಿ ರೂ. ಬಾಕಿ ಉಳಿದಿದ್ದವು. ಹೀಗಾಗಿ ಗೃಹಜ್ಯೋತಿಯಡಿ ಉಚಿತ ವಿತರಣೆ ಕಷ್ಟವಾಗಿತ್ತು. ಆದ್ದರಿಂದ ಬಾಕಿ ಮೊತ್ತವನ್ನು ಒಂದು ಬಾರಿಗೆ ಮನ್ನಾ ಮಾಡಲಾಗುತ್ತಿದೆ. ಇನ್ನು ಮುಂದೆ ಬಾಕಿ ಕೊಡಬೇಕಾದ ಅಗತ್ಯವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಿಗೆ ನ.1ರಂದು ಘೊಷಿಸಿದಂತೆ ವಿದ್ಯುತ್ ಹಾಗೂ ನೀರಿನ ವೆಚ್ಚವನ್ನು ಸರ್ಕಾರವೇ ಭರಿಸಲು ತೀರ್ವನಿಸಲಾಗಿದೆ. ಮುಂದಿನ ಮುಂಗಾರಿನವರೆಗೆ ಮಳೆ ಬರುವುದಿಲ್ಲ ಎಂದು ಜುಲೈ ಅಂತ್ಯದವರೆಗೆ ಲೆಕ್ಕ ಹಾಕಲಾಗಿದೆ ಎಂದರು.
1. ರಾಯಚೂರು, ಬಳ್ಳಾರಿಯಲ್ಲಿ ಥರ್ಮಲ್ ಘಟಕಗಳು 1000 ಮೆಗಾ ವಾಟ್ ಉತ್ಪಾದಿಸುತ್ತಿವೆ. ಒಟ್ಟಾರೆ ಅಂದಾಜು 2,400ರಿಂದ 3200 ಮೆ.ವಾ. ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ.
2. ಕಬ್ಬು ಅರೆಯುವುದು ಪ್ರಾರಂಭ ವಾಗಿ ಕೋ-ಜನರೇಷನ್ ಮೂಲಕ 450 ಮೆ.ವಾಟ್ ಉತ್ಪಾದನೆಯಾಗುತ್ತಿದೆ. ಕೂಡ್ಲಗಿ ಘಟಕದಿಂದ 150 ಮೆ.ವಾ ಕರ್ನಾಟಕಕ್ಕೆ ಉಳಿತಾಯವಾಗಲಿದೆ.
3. ಸ್ಥಾಪಿತ ಘಟಕಗಳ ಮೂಲಕ ಶೇ.70ರಷ್ಟು ಥರ್ಮಲ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಸ್ಥಳೀಯ ಹಾಗೂ ವಿದೇಶದ ಕಲ್ಲಿದ್ದಲು ಮಿಶ್ರಣ ಮಾಡಿ ಬಳಸಲಾಗುತ್ತಿದೆ.
4. 1000 ಯೂನಿಟ್​ವರೆಗೆ ಹೊರಗಿನಿಂದ ಖರೀದಿಯಾಗುತ್ತಿದೆ. ಇದರಿಂದ ಒಟ್ಟಾರೆ ಬೇಡಿಕೆಯಷ್ಟು ಪೂರೈಸಲು ಸಾಧ್ಯವಾಗುತ್ತಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
