ಬೆಂಗಳೂರು:ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲೇಬೇಕು, ಆ ಮೂಲಕ 2024ರ ಲೋಕಸಭಾ ಚುನಾವಣೆಗೆ ದೇಶಕ್ಕೆ ದೊಡ್ಡ ಸಂದೇಶ ಕಳಿಸಬೇಕೆಂದು ತಹತಹಿಸುತ್ತಿರುವ ರಾಜ್ಯ ಕಾಂಗ್ರೆಸ್, ಪ್ರಸ್ತುತ ಎಚ್ಚರಿಕೆ ಹೆಜ್ಜೆ ಇಟ್ಟು ಕಾರ್ಯತಂತ್ರ ರೂಪಿಸುತ್ತಿದೆ.
ಪ್ರತಿ ತೀರ್ವನವನ್ನು ಅಳೆದು ತೂಗಿ ನಿರ್ಧರಿಸುವುದು ಮತ್ತು ಹೆಜ್ಜೆ ಹೆಜ್ಜೆಗೂ ರಾಜಕೀಯ ಪರಿಣಾಮಗಳ ಬಗ್ಗೆ ಜನರ ನಾಡಿ ಮಿಡಿತ ಅರಿತುಕೊಳ್ಳುತ್ತಾ, ಮೂರು ರೀತಿಯ ವರಸೆಯನ್ನು ಬಳಸಿ ಚುನಾವಣೆಯಲ್ಲಿ ಗೆಲ್ಲುವ ತಂತ್ರಗಾರಿಕೆ ಹೆಣೆದಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೋಡಿ ಲೆಕ್ಕಾಚಾರದಲ್ಲೇ ಮುಂದುವರಿ ಯುತ್ತಿದ್ದು, ಕಾರ್ಯಾಧ್ಯಕ್ಷರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಾಥ್ ನೀಡಿದ್ದಾರೆ. ಚುನಾವಣೆ ಕಾವು ಹೆಚ್ಚಾಗಿರುವುದು ಒಂದೆಡೆಯಾದರೆ, ಅಧಿಸೂಚನೆ ಹೊರಡಲು ಇನ್ನು ಸಮಯಾವಕಾಶವಿಲ್ಲ. ಹೆಚ್ಚೆಂದರೆ 40-42 ದಿನಗಳಲ್ಲಿ ದಿನಾಂಕ ನಿಗದಿಯಾಗುವ ಲಕ್ಷಣವಿದೆ. ಈ ಸಂದರ್ಭದಲ್ಲಿ ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್ ಏನು ಮಾಡುತ್ತಿದೆ? ಯಾವ ರೀತಿ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಪಕ್ಷದ ಪಡಸಾಲೆಯೊಳಗೆ ಒಳಹೊಕ್ಕು ನೋಡಿದಾಗ, ಅನೇಕ ವಿಶೇಷ ಸಂಗತಿಗಳು ಗಮನಕ್ಕೆ ಬಂದಿದೆ.
1. ವೈಯಕ್ತಿಕ ಭರವಸೆಯೇ ಅಸ್ತ್ರ:ಪಕ್ಷ ಪ್ರಣಾಳಿಕೆಯಲ್ಲಿ ಏನು ಭರವಸೆ ಕೊಟ್ಟಿದೆ, ಈ ಹಿಂದೆ ಯಾವುದನ್ನೆಲ್ಲ ಈಡೇರಿಸಿದೆ ಎಂದು ಸಾಮಾನ್ಯ ಜನ ಗಮನಿಸುವುದಿಲ್ಲ. ಕಾಲ ಬದಲಾಗಿದ್ದು, ವೈಯಕ್ತಿಕವಾಗಿ ತನಗೇನು ಲಾಭ ಎಂದು ಪ್ರತಿಯೊಬ್ಬರೂ ಯೋಚಿಸುತ್ತಾರೆ. ಈ ಲಹರಿ ಅರಿತು, ಸಂದರ್ಭಕ್ಕೆ ತಕ್ಕಂತೆ ಪಕ್ಷವು ಪ್ರಮುಖ ‘ಗ್ಯಾರಂಟಿ’ ವಾಗ್ದಾನ ಮಾಡಿದೆ. 200 ಯೂನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ಮಾಸಿಕ ಎರಡು ಸಾವಿರ, ರೈತರ ಸಾಲ ನೀಡಿಕೆ ಪ್ರಮಾಣ ಹೆಚ್ಚಳ ಸೇರಿ ಪ್ರದೇಶವಾರು ವಾಗ್ದಾನ ಮಾಡಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಮಹತ್ವದ ವಾಗ್ದಾನ ನೀಡುವುದು ಬಾಕಿ ಇದೆ. ಪಕ್ಷ ನೀಡಿದ ಈ ಗ್ಯಾರಂಟಿಗಳನ್ನು ಪಟ್ಟಿ ಮಾಡಿ, ಒಂದು ಕೋಟಿ ಕಾರ್ಡ್ ಮಾಡಿ ಮನೆ ಮನೆಗೆ ಹಂಚಲಾಗುತ್ತದೆ. ಗ್ಯಾರಂಟಿ ಕಾರ್ಡ್​ನಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರ ಸಹಿಯೂ ಇರಲಿದೆ.
ಈ ಭರವಸೆ ಮೂಡಿಸುವ ತಂತ್ರ ಸಾಕಷ್ಟು ಕೆಲಸ ಮಾಡಿದೆ. ನಮ್ಮ ಚುನಾವಣಾ ತಂತ್ರಗಾರಿಕಾ ಸಂಸ್ಥೆಗಳು ಜನರ ಅಭಿಪ್ರಾಯ ಸಂಗ್ರಹಿಸಿದ್ದು, ಪಕ್ಷದ ಪರವಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಸುಮ್ಮನೆ ಬೈಯ್ದುಕೊಂಡು ಓಡಾಡುವುದಕ್ಕಿಂತ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ತಂತ್ರ ಕೂಡ ಕೆಲಸ ಮಾಡಲಿದೆ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
2. ಸಾಮೂಹಿಕ ನಾಯಕತ್ವದ ಟ್ರ್ಯಾಕ್:ಈ ಹಿಂದೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ಚುನಾವಣೆಯಲ್ಲಿ ಹಿನ್ನೆಡೆಯಾದ ಉದಾಹರಣೆ ಇದೆ. ಇದೇ ಕಾರಣಕ್ಕೆ ಈ ಚುನಾವಣೆ ಸಾಮೂಹಿಕ ನಾಯಕತ್ವದಲ್ಲೇ ನಡೆಯಬೇಕೆಂಬ ಕಲ್ಪನೆಯಲ್ಲಿ ಎಐಸಿಸಿ ಎಲ್ಲ ನಾಯಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಜಗಜ್ಜಾಹೀರಾಗಿದೆ. ಈ ನಡುವೆಯೇ ಮುಂದಿನ ಮುಖ್ಯಮಂತ್ರಿ ವಿಚಾರ ಪ್ರಸ್ತಾಪಿಸಿ ಗೊಂದಲ ಸೃಷ್ಟಿ ಮಾಡುವವರಿಗೆ ನೇರವಾಗಿ ಎಚ್ಚರಿಕೆ ನೀಡಿರುವ ಪ್ರಸಂಗ ನಡೆದಿದೆ. ಈ ರೀತಿ ಐದಕ್ಕೂ ಹೆಚ್ಚು ಮಂದಿಗೆ ಬಿಸಿ ಮುಟ್ಟಿದೆ.
ಈ ಹಿಂದೆ ಏಕ ನಾಯಕತ್ವದಲ್ಲಿ ಚುನಾವಣೆಗೆ ಹೋದಾಗ ಪರಿಣಾಮ ಏನಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಪ್ರಯೋಗ ನಮ್ಮಲ್ಲಿ ‘ಟೆಸ್ಟೆಡ್ ಫೇಲ್ಯೂರ್’ ಆಗಿರುವಾಗ ಸಾಮೂಹಿಕ ನಾಯಕತ್ವವೇ ಸರಿ ಎಂಬುದನ್ನು ಒಪ್ಪಿಕೊಂಡಿದ್ದೇವೆ ಎಂದು ಪಕ್ಷದ ಪ್ರಧಾನ ನಾಯಕರು ಅಭಿಪ್ರಾಯ ಹೇಳಿದ್ದಾರೆ.
3. ತಪ್ಪುಗಳೇ ಪಾಠಗಳು:2018ರ ವಿಧಾನಸಭೆಯಲ್ಲಿ ಒಂದಷ್ಟು ತಪ್ಪುಗಳನ್ನು ಮಾಡಿದ ಪರಿಣಾಮ ಹಲವು ಕ್ಷೇತ್ರ ಕಳೆದುಕೊಳ್ಳಲಾಯಿತು. ಈ ಬಾರಿ ಅಂತಹ ತಪ್ಪುಗಳಾಗಬಾರದೆಂಬ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಪ್ರಮುಖ ಪದಾಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದರು.
ಅಲ್ಪಸಂಖ್ಯಾತರಿಗೆ ಪಕ್ಷ ಸಾಕಷ್ಟು ಅವಕಾಶ ನೀಡುತ್ತಿದೆ, ಕೆಲವೊಂದು ಬಾರಿ ಆ ಸಮುದಾಯದವರು ಕೇಳುವ ಕ್ಷೇತ್ರವನ್ನು ನೀಡಿ ಸೋತಿದೆ. ಜತೆಗೆ ಕೆಲವು ಕ್ಷೇತ್ರಗಳಲ್ಲಿ ಸೋತ ಅಭ್ಯರ್ಥಿಗಳಿಗೆ ನಿರಂತರ ಅವಕಾಶ ನೀಡದೇ ನಾಯಕತ್ವ ಕೊರತೆ ಕಾಣಿಸಿದೆ. ಮುಂದೆ ಹೀಗಾಗಬಾರದೆಂದು ಕ್ರಮವಹಿಸಲಾಗುತ್ತಿದೆ ಎಂಬುದು ಅವರ ವಿವರಣೆಯಾಗಿದೆ.
ಇನ್ನೊಂದು ಪ್ರಮುಖ ಬೆಳವಣಿಗೆ ಎಂದರೆ ಹಳೇ ಮೈಸೂರು ಭಾಗದಲ್ಲಿ ಡಿ.ಕೆ.ಶಿವಕುಮಾರ್ ಇಮೇಜ್ ಹೆಚ್ಚಿಸಿ, ಅವರ ನಾಯಕತ್ವದ ದಾಳ ಉರುಳಿಸಿ ಜೆಡಿಎಸ್ ಮತ ಕಬಳಿಸುವ ತಂತ್ರಗಾರಿಕೆ ಸದ್ದಿಲ್ಲದೇ ನಡೆದಿದೆ. ಈ ಪ್ರಯತ್ನ ಜೆಡಿಎಸ್ ಸ್ಥಾನಗಳನ್ನು ಕುಗ್ಗಿಸಲಿದೆ ಹಾಗೆಯೇ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿರುವ ಪ್ರಬಲ ಲಿಂಗಾಯತ ಸಮುದಾಯವನ್ನು ಓಲೈಸಿಕೊಳ್ಳಲು ಒಂದು ಕಾರ್ಯತಂತ್ರವೂ ರೂಪಿತವಾಗುತ್ತಿದೆ ಎಂಬುದು ವಿಶೇಷ ಸಂಗತಿಯಾಗಿದೆ.
ಏರಿಳಿತ ಗ್ರಹಿಕೆ:ಚುನಾವಣೆ ಹೊಸ್ತಿಲಿನಲ್ಲಿ ಸರ್ಕಾರದ ಕಡೆಯಿಂದ ಕೈಗೊಳ್ಳುತ್ತಿರುವ ತೀರ್ವನಗಳು ಜನರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು ಗ್ರಹಿಸಲು ಕಾಂಗ್ರೆಸ್ ವಿಶೇಷ ಪ್ರಯತ್ನ ಹಾಕುತ್ತಿದೆ. ಪಕ್ಷಕ್ಕೆ ಬಂದಿರುವ ವರದಿಗಳ ಪ್ರಕಾರ ಎಸ್ಸಿ,ಎಸ್ಟಿ ಮೀಸಲು ಹೆಚ್ಚಳ ಬಿಜೆಪಿಗೆ ಕೊಂಚ ಅನುಕೂಲವಾದಂತೆ ಕಾಣಿಸಿತ್ತು. ಆದರೆ, ಪಂಚಮಸಾಲಿ ವಿಚಾರದಲ್ಲಿ ಬಿಜೆಪಿಗೆ ನಿರೀಕ್ಷಿತ ಫಲ ಸಿಕ್ಕಿಲ್ಲ. ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿ ಪ್ರಕಟಣೆ ಜನರ ನಡುವೆ ಚರ್ಚೆಯಾಗುತ್ತಿದ್ದು, ಪಕ್ಷಕ್ಕೆ ಹೆಚ್ಚಿನ ಲಾಭ ತಂದುಕೊಡಲಿದೆ ಎಂಬ ವಿಶ್ಲೇಷಣೆ ಇದೆ.
78 ಲಕ್ಷ ಸದಸ್ಯರ ನೆರವು:ಕ್ಷೇತ್ರಕ್ಕೆ ಯಾರು ಅಭ್ಯರ್ಥಿಯಾದರೆ ಸೂಕ್ತ ಎಂದು ಪಕ್ಷದ ಸದಸ್ಯರ ಅಭಿಪ್ರಾಯ ಸಂಗ್ರಹಿಸುವ ಕೆಲಸ ನಡೆದಿದೆ. ಖಾಸಗಿ ಸಂಸ್ಥೆಯ ಸರ್ವೆಯನ್ನೂ ಪೂರ್ಣ ನೆಚ್ಚಿಕೊಳ್ಳದೇ, ಪಕ್ಷದ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿ ಬೂತ್​ನಲ್ಲೂ ಸಹ ಅಭಿಪ್ರಾಯ ಹೆಕ್ಕಿ ತೆಗೆದಯುವ ಕೆಲಸ ಕೂಡ ನಡೆದಿದೆ.
ವರ್ಕೌಟ್​ ಆದ 50% ಆಫರ್​: ಮೂರನೇ ದಿನವೂ ಕೋಟಿಗಟ್ಟಲೆ ಟ್ರಾಫಿಕ್​ ಫೈನ್​ ಸಂಗ್ರಹ; ಒಟ್ಟು ಮೊತ್ತವೆಷ್ಟು?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:12 − six =
Remember me
