ಮೈಸೂರು:ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ಗೆ 30-40 ಸ್ಥಾನಗಳು ಬಂದರೆ ನಾನು ಅಧಿಕಾರದಿಂದ ದೂರ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೊಷಿಸಿದರು.
ಜೆಡಿಎಸ್ ಶಾಸಕರು, ಮುಖಂಡರೊಂದಿಗೆ ಗುರುವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಬಾರಿ ಜೆಡಿಎಸ್​ಗೆ ಕಡಿಮೆ ಸ್ಥಾನ ಬಂದರೂ ಕುಮಾರಸ್ವಾಮಿ ಸಿಎಂ ಆಗುತ್ತಾರೆಂದು ನಮ್ಮ ಪಕ್ಷದ ಶಾಸಕರು ಅಂದುಕೊಳ್ಳುವುದು ಬೇಡ. ನಾನು ಸಿಎಂ ಆಗಲ್ಲ. ಬದಲಿಗೆ ನಮ್ಮಲ್ಲೇ ಯಾರಾದರೂ ಒಬ್ಬರನ್ನು ಆ ಸ್ಥಾನದಲ್ಲಿ ಕೂರಿಸಿ ನಾನು ಮಾರ್ಗದರ್ಶನ ಮಾಡುತ್ತೇನೆ ಎಂದರು.
ನನಗೆ ಈ ಬಾರಿ ಸಂಪೂರ್ಣ ಬಹುಮತ ಕೊಡಿ, ಪಂಚರತ್ನ ಪರಿಕಲ್ಪನೆಯ 5 ಯೋಜನೆಗಳನ್ನು 5 ವರ್ಷಗಳ ಅವಧಿಯಲ್ಲಿ ಅನುಷ್ಠಾನ ಮಾಡುತ್ತೇನೆ. ಒಂದು ವೇಳೆ ಆ ಕಾರ್ಯಕ್ರಮ ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ. ಚಾಮುಂಡಿಯ ಸನ್ನಿಧಾನದಲ್ಲಿ ಈ ಮಾತು ಹೇಳುತ್ತಿದ್ದೇನೆ. ಪಂಚರತ್ನ ಯೋಜನೆ ಜಾರಿ ಸಮ್ಮಿಶ್ರ ಸರ್ಕಾರದಿಂದ ಸಾಧ್ಯವಿಲ್ಲ. ಈ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಬಂದರೆ ಸಿಎಂ ಆಗುವುದಿಲ್ಲ ಎಂದರು.
ಅಭ್ಯರ್ಥಿಗಳ ಪಟ್ಟಿಯಲ್ಲಿ ನಿಖಿಲ್ ಹೆಸರು:ಮುಂದಿನ ಚುನಾವಣೆಗೆ ಜೆಡಿಎಸ್​ನ 126 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಅದರಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರೂ ಇರಬಹುದು ಎಂದು ಕುಮಾರಸ್ವಾಮಿ ಸುಳಿವು ನೀಡಿದರು. ನಿಖಿಲ್ ತನ್ನ ಶಕ್ತಿಯನ್ನು ಬಳಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಲು ತೀರ್ಮಾನ ಮಾಡಿಕೊಂಡಿದ್ದಾರೆ. ಈಗ ಸಿದ್ಧವಾಗಿರುವ 126 ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಇರಬಹುದು ಅಥವಾ ಇಲ್ಲದೆಯೂ ಇರಬಹುದು ಎಂದು ಮುಗುಮ್ಮಾಗಿ ಹೇಳಿದರು.
3ನೇ ಪವರ್ ಸೆಂಟರ್ ಸೃಷ್ಟಿ:ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆ ಪಕ್ಷದಲ್ಲಿ ಕೆಲಸ ಮಾಡಲು ಎಷ್ಟು ಸ್ವಾತಂತ್ರ್ಯ ಇದೆ ಎಂಬುದು ಬಹಳ ಮುಖ್ಯ. ಕರ್ನಾಟಕ ಕಾಂಗ್ರೆಸ್​ನಲ್ಲಿ ಈಗಾಗಲೇ ಎರಡು ಅಧಿಕಾರ ಕೇಂದ್ರಗಳಿವೆ. ಖರ್ಗೆ ಅಧ್ಯಕ್ಷರಾಗುವ ಮೂಲಕ 3ನೇ ಪವರ್ ಸೆಂಟರ್ ಸೃಷ್ಟಿಯಾಗಿದೆ. ಆದರೆ, ಕನ್ನಡಿಗರೊಬ್ಬರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರು ಎಂಬ ಸಂತೋಷ ಇದೆ ಎಂದರು.
ಜಿಟಿಡಿ ಮನೆಗೆ ‘ದಳಪತಿ’ ಭೇಟಿ: ಜೆಡಿಎಸ್​ನಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ.ದೇವೇಗೌಡರ ಮನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗುರುವಾರ ಭೇಟಿ ನೀಡಿ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಮೈಸೂರು ನಗರದ ಒಂಟಿಕೊಪ್ಪಲಿನಲ್ಲಿರುವ ಜಿಟಿಡಿ ನಿವಾಸಕ್ಕೆ ಬಂದ ದಳಪತಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ಊಟ ಮಾಡಿ ಮಾತುಕತೆ ನಡೆಸಿದರು. ದೊಡ್ಡಗೌಡರ ಪ್ರೀತಿಗೆ ಮಣಿದು, ಮರಿಗೌಡರು(ಜಿಟಿಡಿ) ಜೆಡಿಎಸ್​ನಲ್ಲೇ ಉಳಿಯುವುದಾಗಿ ಘೊಷಿಸಿಯೇ ಬಿಟ್ಟರು. ಇದರೊಂದಿಗೆ ಮೂರು ವರ್ಷಗಳಿಂದ ಎದುರಾಗಿದ್ದ ಗೊಂದಲಕ್ಕೂ ತೆರೆಬಿದ್ದಿದೆ.
ಜೆಡಿಎಸ್​ನಲ್ಲಿ ಉಳಿಯುತ್ತೇನೆ:ಎಚ್.ಡಿ.ದೇವೇಗೌಡರಿಗೆ ನನ್ನ ಬಗ್ಗೆ ಪ್ರೀತಿ ಇದೆ. ಮರಿ ದೇವೇಗೌಡ ಎಂದು ಕರೆಯುತ್ತಿದ್ದರು. ಅವರ ಪ್ರೀತಿಯ ಹಗ್ಗ ಕಟ್ಟಿ ಹಾಕಿದೆ. 3 ವರ್ಷ ದೂರ ಇದ್ದರೂ ನನ್ನ ಬಗ್ಗೆ ಪ್ರೀತಿ ಕಡಿಮೆ ಆಗಿರಲಿಲ್ಲ. ಹೀಗಾಗಿ, ಜೆಡಿಎಸ್​ನಲ್ಲಿ ಉಳಿಯುತ್ತೇನೆ ಎಂದು ಜಿಟಿಡಿ ಘೊಷಿಸಿದರು. ಸಿದ್ದರಾಮಯ್ಯ ಹಾಗೂ ಬಿಜೆಪಿಯವರು ನನ್ನನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದರು. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಜೆಡಿಎಸ್ ಬಿಡಲ್ಲ. ಎಚ್.ಡಿ.ದೇವೇಗೌಡರ ಬಂಧ ನನ್ನ ಕಟ್ಟಿಹಾಕಿದೆ. ನಾನು ಮತ್ತು ನನ್ನ ಕುಟುಂಬ ಎಚ್.ಡಿ.ದೇವೇಗೌಡರು ಇರುವವರೆಗೂ ಜೆಡಿಎಸ್ ಬಿಡಲ್ಲ. ಅವರ ಪ್ರೀತಿ, ಅಭಿಮಾನದ ಆಶೀರ್ವಾದಕ್ಕಿಂತ ನನಗೆ ಯಾವುದು ದೊಡ್ಡದಲ್ಲ ಎಂದರು. ಯಾವುದೇ ಮುನಿಸು ಇಲ್ಲ. ತ್ಯಾಗ ಮಾಡಲು ಸಿದ್ಧ ಇದ್ದೇನೆ. ಕುಮಾರಸ್ವಾಮಿ ಸಿಎಂ ಮಾಡುತ್ತೇನೆ. ಹಿಂದೆ ಹಲವು ಸ್ಥಾನ ಕೊಟ್ಟಿದ್ದರು. ದೇವೇಗೌಡರ ಕನಸು-ನನಸು ಮಾಡುತ್ತೇವೆ. ಜೆಡಿಎಸ್ ಅಧಿಕಾರಕ್ಕೆ ತರುತ್ತೇನೆ ಎಂದರು.
ಜಿಟಿಡಿ ನಮ್ಮನ್ನು ಬಿಟ್ಟು ಹೋಗಲ್ಲ:ಎಚ್.ಡಿ.ದೇವೇಗೌಡರು ಮಾತನಾಡಿ, ಜಿಟಿಡಿ ನಮ್ಮನ್ನು ಬಿಟ್ಟು ಹೋಗಲ್ಲ. ಜೆಡಿಎಸ್​ನಲ್ಲೇ ಇರುತ್ತಾನೆ. ಜಿಟಿಡಿಯ ಮನಸ್ಸಿಗೆ ನೋವಾದಾಗಲೂ ಪಕ್ಷದಿಂದ ಹೊರಹೋಗಲಿಲ್ಲ. ನನ್ನ ಮತ್ತು ಜಿಟಿಡಿ ಅವರ ಸಂಬಂಧ ಚೆನ್ನಾಗಿದೆ. ಅವರು ಎಲ್ಲವನ್ನೂ ಮರೆತಿದ್ದಾರೆ ಎಂದರು. ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರ ಜತೆ ಮಾತನಾಡಿದ್ದೇನೆ. ಆತುರದಲ್ಲಿ ನಿರ್ಧಾರ ಕೈಗೊಳ್ಳಬೇಡಿ ಎಂದಿದ್ದೇನೆ. ತೀರ ಮೀರಿ ಹೊಸ ರಾಜಕೀಯ ಬೆಳವಣಿಗೆ ಆಗಿ, ಬೇರೆಯವರ ಮಾತಿಗೆ ಬೆಲೆ ಕೊಟ್ಟರೆ ನಾನು ಏನು ಮಾಡಲು ಸಾಧ್ಯ ಎಂದು ಎಚ್.ಡಿ.ದೇವೇಗೌಡ ಹೇಳಿದರು.
ಕಣ್ಣೀರಿಟ್ಟ ಜಿ.ಟಿ.ದೇವೇಗೌಡ:ಅನಾರೋಗ್ಯದ ಕಾರಣಕ್ಕೆ ಎಲ್ಲ ನಾಯಕರು, ಸ್ವಾಮೀಜಿಗಳು ದೊಡ್ಡಗೌಡರನ್ನು ನೋಡಲು ಹೋಗಿದ್ದರು. ನಾನು ಮಾತ್ರ ಅವರ ಆರೋಗ್ಯ ವಿಚಾರಿಸಲು ಹೋಗಿರಲಿಲ್ಲ. ಆದರೆ, ಈಗ ಅನಾರೋಗ್ಯದ ನಡುವೆಯೂ ಅವರು ನನ್ನಂತ ಚಿಕ್ಕ ವ್ಯಕ್ತಿಯ ಮನೆಗೆ ಬಂದಿದ್ದಾರೆ ಎಂದು ಕಣ್ಣೀರು ಸುರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 19 =
Remember me
