|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಪ್ರೊ. ಡಿ.ಎಂ. ನಂಜುಂಡಪ್ಪ ವರದಿ ಜಾರಿಯಾದರೂ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಜ್ಯದ ಸರಾಸರಿಗಿಂತ ಕಡಿಮೆ ಇರುವ ತಾಲೂಕುಗಳನ್ನು ‘ಅಭಿವೃದ್ಧಿ ಆಕಾಂಕ್ಷಿ’ ತಾಲೂಕುಗಳೆಂದು ಗುರುತಿಸಿ ವಿಶೇಷ ಯೋಜನೆ ಮೂಲಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ನಂಜುಂಡಪ್ಪ ವರದಿಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿತ್ತು. ಆದರೀಗ ನಂಜುಂಡಪ್ಪ ವರದಿಯ ಅವಧಿ ಮುಗಿದಿದೆ. ಆ ತಾಲೂಕುಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಆದ್ಯತೆ ಸಿಕ್ಕಿಲ್ಲ. ಆದ್ದರಿಂದಲೇ ಸರ್ಕಾರ ಈಗ ನೀತಿ ಆಯೋಗ ನಿಗದಿ ಮಾಡಿರುವ 49 ಸೂಚಕಗಳನ್ನು ಬಳಸಿ ಈ ತಾಲೂಕುಗಳ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸುತ್ತಿದೆ.
ಐದು ವಲಯದಲ್ಲಿ ಅಭಿವೃದ್ಧಿ:ಒಟ್ಟು ಐದು ವಲಯದಲ್ಲಿ ಅಭಿವೃದ್ಧಿ ಸಾಧಿಸಲು ಉದ್ದೇಶಿಸಲಾಗಿದೆ. ಆರೋಗ್ಯ, ಶಿಕ್ಷಣ, ಅಂಗನವಾಡಿ, ರಸ್ತೆ ಹಾಗೂ ಕುಡಿವ ನೀರು ಮತ್ತು ಅಪೌಷ್ಟಿಕತೆ ನಿವಾರಣೆಗೆ ಒತ್ತು ನೀಡಲಾಗುತ್ತದೆ. ಯಾವ ತಾಲೂಕು ಯಾವ ಕ್ಷೇತ್ರದಲ್ಲಿ ಹಿಂದುಳಿದಿದೆಯೋ ಆ ಕ್ಷೇತ್ರದಲ್ಲಿ ವಿಶೇಷ ಯೋಜನೆ ರೂಪಿಸಲಾಗುತ್ತದೆ. ಜತೆಗೆ ಹಾಸ್ಟೆಲ್​ಗಳ ನಿರ್ವಣಕ್ಕೂ ಆದ್ಯತೆ ನೀಡಲಾಗುತ್ತದೆ.
12ರಂದು ಸಂಪುಟದ ಒಪ್ಪಿಗೆ:ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಗ್ರ ಯೋಜನೆ ರೂಪಿಸಲು ಯೋಜನಾ ಸಚಿವ ಮುನಿರತ್ನ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿತ್ತು. ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ್, ಹಾಲಪ್ಪ ಆಚಾರ್ ಸಮಿತಿ ಸದಸ್ಯರಾಗಿದ್ದರು. ಆ ಸಮಿತಿ ಸಿದ್ಧಪಡಿಸಿರುವ ವರದಿಯನ್ನು ಆ.12 (ಶುಕ್ರವಾರ)ನಡೆಯಲಿರುವ ಸಚಿವ ಸಂಪುಟದ ಮುಂದೆ ಮಂಡಿಸಿ ಒಪ್ಪಿಗೆ ಪಡೆಯಲಾಗುತ್ತದೆ.
3 ಸಾವಿರ ಕೋಟಿ ರೂ.:ನಂಜುಂಡಪ್ಪ ವರದಿ ಆಧಾರಿತ ತಾಲೂಕಿನಲ್ಲಿ ಸರ್ಕಾರದ ಯೋಜನೆಗಳನ್ನು ವಿಶೇಷ ಯೋಜನೆ ಎಂದು, ಉಳಿದ ತಾಲೂಕುಗಳಲ್ಲಿ ಅದೇ ಯೋಜನೆಗಳನ್ನು ಮಾಮೂಲಿ ಯೋಜನೆಗಳೆಂದು ಗುರುತಿಸಲಾಗಿದೆ. ಆದರೆ ಈಗ ಆ ರೀತಿ ಮಾಡದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 3 ಸಾವಿರ ಕೋಟಿ ರೂ.ಗಳನ್ನು ವಿಶೇಷವಾಗಿ ಮೀಸಲಿಟ್ಟಿದ್ದಾರೆ. ಆ ಮೊತ್ತಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಹಿಂದಿನ ಬೆಳಗಾವಿ ಅಧಿವೇಶನದಲ್ಲಿ ಇಂತಹ ವಿಶೇಷ ಯೋಜನೆ ಘೋಷಣೆ ಮಾಡಲಾಗಿತ್ತು.
ವಿವಿಧ ವರದಿಗಳ ಆಧಾರ:ಶೇಷ ಯೋಜನೆಗಳನ್ನು ರೂಪಿಸುವುದಕ್ಕೆ ಸರ್ಕಾರದ ಬಳಿ ಇರುವ ಯುಎನ್​ಡಿಪಿ, ಮೌಲ್ಯಾಂಕನ ಪ್ರಾಧಿಕಾರ, ಸಿಒಡಿಆರ್ ವರದಿಗಳೇ ಆಧಾರವಾಗಿವೆ ಎಂದು ಮೂಲಗಳು ಹೇಳುತ್ತವೆ.
ಯಾವ ತಾಲೂಕು ಯಾವ ವಲಯದಲ್ಲಿ ಅಭಿವೃದ್ಧಿ ಸಾಧಿಸಿಲ್ಲವೋ ಅದನ್ನು ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶವಾಗಿದೆ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಅಭಿವೃದ್ಧಿಯಾಗಿ ಅನುದಾನ ಸಮರ್ಪಕ ಬಳಕೆಯಾಗಬೇಕಾಗಿದೆ. ಅದಕ್ಕಾಗಿ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳನ್ನು ಗುರುತಿಸಿ ಯೋಜನೆ ಜಾರಿಮಾಡಲಾಗುತ್ತದೆ.
|ಮುನಿರತ್ನಯೋಜನಾ ಸಚಿವ
ತಾಪಂಗಳ ಮೂಲಕ ಜಾರಿ:ಇಲಾಖೆಗಳ ಮೂಲಕ ಯೋಜನೆ ಜಾರಿಗೆ 7-8 ತಿಂಗಳು ತಡವಾಗುತ್ತದೆ. ಆದ್ದರಿಂದ ನೇರವಾಗಿ ತಾಲೂಕು ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡುವುದು. ಏಜೆನ್ಸಿಗಳನ್ನು ನಿಗದಿ ಮಾಡಿ ಯೋಜನೆಗಳನ್ನು ಜಾರಿ ಮಾಡುವುದು, ತಾಪಂಗಳ ಕಾರ್ಯ ನಿರ್ವಹಣಾಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳುವುದು ಎಂಬುದು ಯೋಜನಾ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆ. ಸಂಪುಟದಲ್ಲಿ ಒಪ್ಪಿಗೆ ಸಿಕ್ಕರೆ ಯೋಜನೆಗಳ ಅನುಷ್ಠಾನ ಬೇಗ ಆರಂಭವಾಗುತ್ತದೆ.
ನಂಜುಂಡಪ್ಪ ವರದಿ ಫಲಶ್ರುತಿ:ಮೂಲಸೌಕರ್ಯ ಅಭಿವೃದ್ಧಿಯ 39 ಸೂಚ್ಯಂಕದಲ್ಲಿ ಹಿಂದುಳಿದಿದ್ದ 114 ತಾಲೂಕುಗಳನ್ನು ಹಿಂದುಳಿದ ಹಾಗೂ ಅತಿ ಹಿಂದುಳಿದ ತಾಲೂಕುಗಳೆಂದು ನಂಜುಂಡಪ್ಪ ವರದಿಯಲ್ಲಿ ಗುರುತಿಸಲಾಗಿತ್ತು. ಈ ತಾಲೂಕುಗಳಿಗೆ 8 ವರ್ಷದಲ್ಲಿ 30 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಬೇಕೆಂದು ಶಿಫಾರಸು ಮಾಡಲಾಗಿತ್ತು. ಈವರೆಗೆ 31 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಅದರಲ್ಲಿ 15 ಸಾವಿರ ಕೋಟಿ ರೂ.ಗಳು ಮಾಮೂಲಿಯಂತೆ ಎಲ್ಲ ತಾಲೂಕುಗಳಿಗೂ ಸಿಗುವ ಅನುದಾನವಾಗಿದ್ದರೆ, 16 ಸಾವಿರ ಕೋಟಿ ರೂ.ಗಳನ್ನು ವಿಶೇಷವಾಗಿ ಖರ್ಚು ಮಾಡಲಾಗಿದೆ. ಆದರೆ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಕೆಲವೊಮ್ಮೆ ಅನುದಾನವನ್ನು ಮಾಮೂಲಿಯಂತೆ ಮೀಸಲಿಟ್ಟರೂ ಬಜೆಟ್​ನಲ್ಲಿ ಮಾತ್ರ ವಿಶೇಷ ಅನುದಾನವೆಂದೇ ತೋರಿಸಲಾಗಿದೆ.
2 ತಾಲೂಕು ಮಾತ್ರ ಅಭಿವೃದ್ಧಿ:ಕರ್ನಾಟಕ ಮೌಲ್ಯಾಂಕನ ಪ್ರಾಧಿಕಾರ 2018ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ನಂಜುಂಡಪ್ಪ ವರದಿ ಜಾರಿಗೆ ಬಂದ ನಂತರ ಬೈಲಹೊಂಗಲ ಮತ್ತು ಆನೇಕಲ್ ತಾಲೂಕಿನಲ್ಲಿ ಮಾತ್ರ ಅಭಿವೃದ್ಧಿ ಸಾಧಿಸ ಲಾಗಿದೆ ಎಂಬ ಆತಂಕದ ಸಂಗತಿ ಹೊರಬಿದ್ದಿದೆ. ಆದ್ದರಿಂದಲೇ ಸರ್ಕಾರ ಈಗ ಈ ತಾಲೂಕುಗಳಿಗೆ ವಿಶೇಷ ಒತ್ತು ನೀಡಲು ಉದ್ದೇಶಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + eighteen =
Remember me
