ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ (ಎನ್​ಸಿಆರ್​ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯು ಬೆಚ್ಚಿಬೀಳಿಸುವ ಅನೇಕ ಸಂಗತಿಗಳನ್ನು ಒಳಗೊಂಡಿದೆ. ಮುಖ್ಯವಾಗಿ, ಬದಲಾಗುತ್ತಿರುವ ಅಪರಾಧದ ಸ್ವರೂಪಗಳನ್ನು ವರದಿ ವಿವರಿಸಿದ್ದು, ಕಾನೂನು ಸುವ್ಯವಸ್ಥೆ ನೆಲೆಗೊಳ್ಳಲು ಮತ್ತು ಅಪರಾಧಗಳ ಹೊಸ ಸ್ವರೂಪವನ್ನು ತಡೆಯಲು ಇನ್ನೂ ಪರಿಣಾಮಕಾರಿ ಪ್ರಯತ್ನಗಳು ಅವಶ್ಯಕವಾಗಿವೆ ಎಂಬುದು ಸ್ಪಷ್ಟ.
ನವದೆಹಲಿ:ರಾಜ್ಯದಲ್ಲಿ ದಿನಕ್ಕೆ ಸರಾಸರಿ ನಾಲ್ವರು ರೈತರು, ಐವರು ಗೃಹಿಣಿಯರು, ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 37 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 8 ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 2022ರಲ್ಲಿ ರಾಷ್ಟ್ರದಲ್ಲಿ 1,70,924 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ ಕರ್ನಾಟಕದಲ್ಲಿ ಪ್ರಾಣ ಕಳೆದುಕೊಂಡವರು 13,606 ಮಂದಿ.
ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ (ಎನ್​ಸಿಆರ್​ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ಉದ್ಯೋಗ ಆಧಾರದ ಮೇಲೆ ಆತ್ಮಹತ್ಯೆ ಪ್ರಕರಣಗಳನ್ನು ವಿಶ್ಲೇಷಣೆ ಮಾಡಿದಾಗ ರಾಜ್ಯದಲ್ಲಿ ಗೃಹಿಣಿಯರೇ (1,893) ಅತೀ ಹೆಚ್ಚು ಸಾವಿಗೆ ಶರಣಾಗಿದ್ದಾರೆ. ಇದಾದ ಮೇಲೆ 1,466 (ಗಂಡಸರು-1239; ಹೆಂಗಸರು-227) ವೇತನದಾರರು, ರೈತರು 1,323 (ಪುರುಷರು-1278; ಮಹಿಳೆಯರು-45) ಹಾಗೂ 734 (ಯುವಕರು-386; ಯುವತಿಯರು-348) ವಿದ್ಯಾರ್ಥಿಗಳು ಸೇರಿದಂತೆ 13,606 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಒಟ್ಟಾರೆ ಪ್ರಕರಣಗಳಲ್ಲಿ ಶೇ.8 ರಾಜ್ಯದಲ್ಲಿ ವರದಿ ಆಗಿದ್ದು, 2021ರಲ್ಲಿ 13,056 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು. 2022ಕ್ಕೆ ಶೇ. 4.2 ಏರಿಕೆಯಾಗಿದ್ದು, ದೇಶದಲ್ಲಿ 4ನೇ ಸ್ಥಾನ ಎಂಬ ಕುಖ್ಯಾತಿಗೆ ಒಳಗಾಗಿರುವುದು ಆತಂಕದ ವಿಚಾರವಾಗಿದೆ.
ಹಲವು ಕಾರಣಗಳು:ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ 162 ವಿದ್ಯಾರ್ಥಿಗಳು, ಕೌಟುಂಬಿಕ ಕಲಹದಿಂದ 3,779 (ಗಂಡಸರು-2462; ಹೆಂಗಸರು-1317) ಮಂದಿ, ಆರ್ಥಿಕ ಸಂಕಷ್ಟದಿಂದ 1,401 ಮಂದಿ (ಪುರುಷರು-1335, ಮಹಿಳೆಯರು-66) ಆತ್ಮಹತ್ಯೆ ಮಾಡಿಕೊಂಡಿರುವ ವರದಿಯಾಗಿವೆ. ಪ್ರೀತಿಪ್ರೇಮದ ವಿಚಾರವಾಗಿ ರಾಜ್ಯದಲ್ಲಿ 250 ಪುರುಷರು, 103 ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 158 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2ನೇ ಸುಸೈಡ್ ಸಿಟಿ?:ರಾಷ್ಟ್ರದ 53 ನಗರಗಳ ಪೈಕಿ ಬೆಂಗಳೂರು ನಗರದಲ್ಲಿ ಹೆಚ್ಚು ಆತ್ಮಹತ್ಯೆ ಕೇಸುಗಳು ದಾಖಲಾಗಿವೆ. 2,313 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, 2ನೇ ಸ್ಥಾನದಲ್ಲಿದೆ. 2021ರಲ್ಲಿ 2,292 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಶೇ.0.9 ಏರಿಕೆಯಾಗಿದೆ. ಇನ್ನೂ ದೆಹಲಿ ನಗರದಲ್ಲಿ 3,367 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿ ಚೆನ್ನೈ 1,581, ಮುಂಬೈ 1501, ಸೂರತ್ 1,004 ಮತ್ತು ಪುಣೆ 1,003 ಆನಂತರ ಸ್ಥಾನದಲ್ಲಿವೆ.
ಆತಂಕಕಾರಿ ಸಂಗತಿ:ರಾಜ್ಯದಲ್ಲಿ ಸಾಮೂಹಿಕ ಆತ್ಮಹತ್ಯೆಯ 7 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 13 ವಿವಾಹಿತರು, 3 ಅವಿವಾಹಿತರು ಅಸುನೀಗಿದ್ದಾರೆ. ತಮಿಳುನಾಡಿನಲ್ಲಿ 90 ಸಾಮೂಹಿಕ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 192 ಮಂದಿ ಪ್ರಾಣ ಬಿಟ್ಟಿದ್ದಾರೆ.
ವಿದೇಶಿ ನಾಗರಿಕರೂ ಸುರಕ್ಷಿತರಲ್ಲ:ವಿದೇಶಿ ನಾಗರಿಕರ ಮೇಲಿನ ಅಪರಾಧ ಪ್ರಕರಣಗಳು ಕೂಡ 2022ರಲ್ಲಿ ಏರಿಕೆ ಕಂಡಿವೆ. 192 ಪ್ರಕರಣಗಳು ದಾಖಲಾಗಿದ್ದು, 2021ಕ್ಕೆ ಹೋಲಿಸಿದರೆ ಶೇ.28 ಹೆಚ್ಚು. ಕರ್ನಾಟಕದಲ್ಲಿ ಎಲ್ಲಕ್ಕಿಂತ ಹೆಚ್ಚು 28 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 21, ಹಿಮಾಚಲಪ್ರದೇಶದಲ್ಲಿ 21, ಛತ್ತೀಸ್​ಗಢದಲ್ಲಿ 16, ರಾಜಸ್ಥಾನದಲ್ಲಿ 4, ಗುಜರಾತ್​ನಲ್ಲಿ ಎರಡು ಮತ್ತು ಮಧ್ಯಪ್ರದೇಶದಲ್ಲಿ ಒಂದು ಪ್ರಕರಣ ದಾಖಲಾಗಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚು ಅಂದರೆ 40 ಪ್ರಕರಣಗಳು ದಾಖಲಾಗಿವೆ.
ಡ್ರಗ್ಸ್ ವ್ಯಸನಿಗಳೇ ಹೆಚ್ಚು:ನಾಗರಿಕ ಸಮಾಜಕ್ಕೆ ಕಂಟಕವಾಗಿರುವ ಮಾದಕ ದ್ರವ್ಯ ಸಾಗಾಣಿಕೆ, ಮಾರಾಟ ಮತ್ತು ಸೇವನೆ ಸಹ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ. ಡ್ರಗ್ಸ್ ಮತ್ತು ಮದ್ಯಪಾನ ವ್ಯಸನಿಗಳು ಮಾನಸಿಕ ಖಿನ್ನತೆಗೆ ಒಳಗಾಗಿ ಸಾವಿನ ನಿರ್ಧರ ತೆಗೆದುಕೊಳ್ಳುತ್ತಿದ್ದಾರೆ. 2022ರಲ್ಲಿ ರಾಜ್ಯದಲ್ಲಿ 1,389 ಪುರುಷರು, 16 ಮಹಿಳಾ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿ ಆಗಿದೆ. ಬೆಂಗಳೂರು ನಗರದಲ್ಲಿಯೂ ಐವರು ಮಹಿಳೆಯರು ಸೇರಿ 145 ವ್ಯಸನಿಗಳು ಸಾವನ್ನಪ್ಪಿದ್ದಾರೆ.
ಭ್ರಷ್ಟಾಚಾರದ ಪೆಡಂಭೂತ:3 ನೇ ಸ್ಥಾನದಲ್ಲಿ ಕರ್ನಾಟಕ: ಆಡಳಿತ ಪಾರದರ್ಶಕತೆಯ ಬಗ್ಗೆ, ಸುಶಾಸನದ ಬಗ್ಗೆ ಎಷ್ಟೇ ಮಾತನಾಡಿದರೂ, ಭ್ರಷ್ಟಾಚಾರ ಬಹುತೇಕ ಇಲಾಖೆ/ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿದೆ ಎಂಬುದು ಕಟುಸತ್ಯ. 2022ರಲ್ಲಿ ದೇಶದಲ್ಲಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶೇಕಡ 10.5ರಷ್ಟು ಏರಿಕೆ ಆಗಿ, 4,139 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 2021ಕ್ಕೆ ಹೋಲಿಸಿದರೆ ಶೇ.3.2 ಏರಿಕೆಯೊಂದಿಗೆ, 773 ಪ್ರಕರಣಗಳು ದಾಖಲಾಗಿವೆ. ಶೇ.2 ಹೆಚ್ಚಳದೊಂದಿಗೆ ರಾಜಸ್ಥಾನದಲ್ಲಿ 511 ಪ್ರಕರಣಗಳು ಕಂಡುಬಂದಿವೆ. ಮೂರನೇ ಸ್ಥಾನದಲ್ಲಿ ಕರ್ನಾಟಕವಿದ್ದು 389, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ 294, ಹರಿಯಾಣದಲ್ಲಿ 246 ಮತ್ತು ಗುಜರಾತ್​ನಲ್ಲಿ 176 ಪ್ರಕರಣಗಳು ದಾಖಲಾಗಿವೆ.
ಕಳವಳ ಮೂಡಿಸಿದ ಹಠಾತ್ ಸಾವುಗಳು:ಕರೊನಾ ಸಂದರ್ಭದಲ್ಲಿ ಹಠಾತ್ ಸಾವುಗಳು ಆತಂಕಕ್ಕೆ ಕಾರಣವಾಗಿದ್ದವು. ಆದರೆ, ಕರೊನಾ ನಂತರದ ಹೊತ್ತಲ್ಲಿ 2021ಕ್ಕೆ ಹೋಲಿಸಿದರೆ 2022ರಲ್ಲಿ ಆಕಸ್ಮಿಕ ಸಾವುಗಳ ಸಂಖ್ಯೆ ಶೇಕಡ 11.6ರಷ್ಟು ಹೆಚ್ಚಿದೆ. 56,653 ಜನರು ಪ್ರಾಣ ಕಳೆದುಕೊಂಡಿದ್ದು ಈ ಪೈಕಿ 32,410 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 24,243 ಜನರು ಇತರ ಕಾರಣಗಳಿಂದ ಮೃತರಾಗಿದ್ದಾರೆ. ಈ ಪೈಕಿ 45ರಿಂದ 60 ವಯೋಮಾನಕ್ಕೆ ಸೇರಿದವರು 19,456 ಜನರು.
ವೃದ್ಧರ ದಯನೀಯ ಸ್ಥಿತಿ:ವಯೋವೃದ್ಧರ ಮೇಲಿನ ಅಪರಾಧಗಳು ಏರಿಕೆ ಕಂಡಿವೆ. 2022ರಲ್ಲಿ 28,545 ಪ್ರಕರಣಗಳು ದಾಖಲಾಗಿದ್ದು, 2021ಕ್ಕೆ ಹೋಲಿಸಿದರೆ ಶೇ.9.3ರಷ್ಟು ಹೆಚ್ಚು. ಮಕ್ಕಳ ಮೇಲೆ ನಡೆದಿರುವ ಅಪರಾಧಗಳ ಸಂಖ್ಯೆ 1,62,449. 2021ಕ್ಕೆ ಹೋಲಿಸಿದರೆ ಶೇ.8.7ರಷ್ಟು ಹೆಚ್ಚು. ಈ ಪೈಕಿ ಹೆಚ್ಚು ಕೇಸುಗಳು ಅಪಹರಣ (ಶೇ.45.7) ಮತ್ತು ಪೋಕ್ಸೋದ ಅನ್ವಯ ಶೇ.39.7 ಪ್ರಕರಣಗಳು ದಾಖಲಾಗಿವೆ. ಪ್ರತಿ ಲಕ್ಷ ಮಕ್ಕಳಲ್ಲಿ ಅಪರಾಧ ದರ ಶೇ.36.6 ಇದೆ. ಇದು 2021ಕ್ಕಿಂತ ಶೇ.3 ಹೆಚ್ಚು. 2022ರಲ್ಲಿ ಆರ್ಥಿಕ ಅಪರಾಧಗಳು, ಸೈಬರ್ ಅಪರಾಧಗಳು ಕೂಡ ಏರಿಕೆ ಕಂಡಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − nine =
Remember me
