ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಸಚಿವ ಸಂಪುಟದಲ್ಲಿ ಕರ್ನಾಟಕ ಬಿಜೆಪಿಯ ಮೂವರಿಗೆ ಮತ್ತು ಜೆಡಿಎಸ್​ನ ಒಬ್ಬರಿಗೆ ಅವಕಾಶ ಸಿಕ್ಕಿದ್ದು, ಬಿಜೆಪಿಯ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಬಾರೀ ನಿರಾಸೆಯಾಗಿದೆ.
ಹಾಗೆಯೇ ರಾಜ್ಯದಿಂದಲೇ ರಾಜ್ಯಸಭೆ ಪ್ರವೇಶಿಸಿರುವ ಮತ್ತು ರಾಜ್ಯದ ಮತದಾರರಾಗಿರುವ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕ ಕೋಟಾ ಎಂದೂ ಪರಿಗಣಿಸಿದರೆ ಮೋದಿ ಸಂಪುಟದಲ್ಲಿ ರಾಜ್ಯದ ಪಾಲು 4+1 ಆಗಲಿದೆ. ಮುಖ್ಯವಾಗಿ, ತುಮಕೂರು ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಸಂಸದರಾಗಿರುವ ವಿ. ಸೋಮಣ್ಣರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ಈ ಸಲದ ವಿಶೇಷ. ಉಳಿದಂತೆ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಹುಬ್ಬಳ್ಳಿ-ಧಾರವಾಡ ಸಂಸದ ಪ್ರಲ್ಹಾದ್ ಜೋಶಿ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟಕ್ಕೆ ಮತ್ತೊಮ್ಮೆ ತೆಗೆದುಕೊಳ್ಳಲಾಗಿದೆ.
ಮಿತ್ರಪಕ್ಷ ಜೆಡಿಎಸ್​ನಿಂದ ಮಂಡ್ಯ ಸಂಸದ, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೂ ಮಂತ್ರಿ ಸ್ಥಾನ ಒಲಿದುಬಂದಿದ್ದು, ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ದೊರಕಿದೆ. ಪ್ರಮುಖ ಮಿತ್ರಪಕ್ಷಗಳಿಂದ ತಲಾ ಒಬ್ಬರು ಕ್ಯಾಬಿನೆಟ್ ಮಂತ್ರಿಗಳಾಗುತ್ತಿದ್ದಾರೆ. ಅವರಲ್ಲಿ ಎಚ್. ಡಿ.ಕುಮಾರಸ್ವಾಮಿ ಕೂಡ ಇದ್ದಾರೆ. ಕೃಷಿ ಖಾತೆ ಮೇಲೆ ಕಣ್ಣಿಟ್ಟಿರುವ ಎಚ್ಡಿಕೆ, ಈ ಖಾತೆ ನೀಡುವಂತೆ ಸಂದೇಶ ರವಾನಿಸಿದ್ದರೂ, ಪಿಎಂ ಮೋದಿ ಮತ್ತು ಅಮಿತ್ ಷಾ ನಿರ್ಧಾರ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಪ್ರಲ್ಹಾದ್ ಜೋಶಿ ಅವರನ್ನು ಸಂಸದೀಯ ವ್ಯವಹಾರಗಳ ಖಾತೆಯಲ್ಲಿ ಮುಂದುವರಿಸುತ್ತಾರೋ ಅಥವಾ ಹೊಸ ಜವಾಬ್ದಾರಿ ನೀಡುತ್ತಾರೋ ಎಂಬುದು ಗೌಪ್ಯವಾಗಿದೆ.
ಸೋಮಣ್ಣಗೆ ಒಲಿದ ಅದೃಷ್ಟ
ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಬದಲಿಗೆ ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ಕೇಂದ್ರ ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಸೋಮಣ್ಣ ಬೆಂಬಲಿಗರು ಹಷೋಲ್ಲಾಸದಲ್ಲಿದ್ದರೆ, ಅವರ ವಿರೋಧಿ ಬಣಕ್ಕೆ ಹೈಕಮಾಂಡ್ ಆಯ್ಕೆಯ ಲೆಕ್ಕಾಚಾರ ಗೊಂದಲ ಮೂಡಿಸಿದೆ. ತುಮಕೂರು ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬ ಅನುಮಾನದಲ್ಲಿದ್ದ ಸೋಮಣ್ಣ, ಕೊನೆಗೂ ಟಿಕೆಟ್ ಪಡೆದು ಚುನಾವಣೆಯನ್ನೂ ಗೆದ್ದರು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮಂತ್ರಿ ಸ್ಥಾನ ಪಡೆಯುವಲ್ಲೂ ಯಶಸ್ವಿಯಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣಾದಿಂದ ಸ್ಪರ್ಧಿಸಲು ಸೋಮಣ್ಣಗೆ ಮನಸ್ಸಿರಲಿಲ್ಲ. ಆದರೆ ಹೈಕಮಾಂಡ್ ಸೂಚನೆ ಪಾಲಿಸಿದ್ದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಡಿದ್ದರು. ಈ ಪಕ್ಷ ನಿಷ್ಠೆಗೆ ಹೈಕಮಾಂಡ್ ಮಂತ್ರಿ ಸ್ಥಾನದ ಉಡುಗೊರೆ ನೀಡಿದೆ ಎಂದೂ ರಾಜ್ಯದ ಹಲವು ಬಿಜೆಪಿ ಸಂಸದರು ಅಭಿಪ್ರಾಯಪಟ್ಟಿದ್ದಾರೆ.
ಶೆಟ್ಟರ್, ಬೊಮ್ಮಾಯಿಗೆ ಬೇಸರ
ಹರ್ಯಾಣದ ಮಾಜಿ ಸಿಎಂ ಮನೋಹರ ಲಾಲ್ ಖಟ್ಟರ್, ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಮಂತ್ರಿ ಸ್ಥಾನ ಸಿಕ್ಕಿರುವ ಮಧ್ಯೆ ರಾಜ್ಯ ಬಿಜೆಪಿ ಸರ್ಕಾರದ ಮಾಜಿ ಮುಖ್ಯಮಂತ್ರಿಗಳಾದ ತಮಗೆ ಮಂತ್ರಿ ಸ್ಥಾನ ಸಿಗದಿರುವುದು ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್​ಗೆ ಬೇಸರ ತರಿಸಿದೆ. ಬೊಮ್ಮಾಯಿ ನಾಯಕತ್ವದಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆ ಎದುರಿಸಿ, ಸೋಲು ಕಂಡಿತ್ತು. ವಿಧಾನಸಭೆ ಟಿಕೆಟ್ ನೀಡಲಿಲ್ಲ ಎಂದು ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ನಂತರ ಬಿಜೆಪಿಗೆ ವಾಪಸ್ಸಾಗಿ ಬೆಳಗಾವಿ ಕ್ಷೇತ್ರದಿಂದ ಗೆದ್ದರೂ, ಕಾಂಗ್ರೆಸ್ ಸೇರಿದ್ದನ್ನು ಹೈಕಮಾಂಡ್ ಅಷ್ಟು ಸುಲಭದಲ್ಲಿ ಮರೆಯುವುದಿಲ್ಲ ಎಂದು ಬಿಜೆಪಿ ಹಿರಿಯ ಸಂಸದರೊಬ್ಬರು ಅಭಿಪ್ರಾಯಪಡುತ್ತಾರೆ.
ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ್ ಮತ್ತು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಹಿರಿತನದ ಆಧಾರದಲ್ಲಿ ಮಂತ್ರಿ ಸ್ಥಾನದ ನಿರೀಕ್ಷೆ ಇತ್ತು. ಆದರೆ, ಗದ್ದಿಗೌಡರ್​ಗೆ ಅದೃಷ್ಟ ಖುಲಾಯಿಸಿಲ್ಲ. ಬಿ.ವೈ. ರಾಘವೇಂದ್ರ ಸೋದರ ಬಿ.ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದರಿಂದ ಮಂತ್ರಿ ಸ್ಥಾನ ನೀಡಲು ಹೈಕಮಾಂಡ್ ಮನಸ್ಸು ಮಾಡಲಿಲ್ಲ ಎನ್ನಲಾಗಿದೆ. ಇತರೆ ಹಿಂದುಳಿದ ವರ್ಗದ, ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಪಿಸಿ ಮೋಹನ್ ಮತ್ತು ದಲಿತ ಕೋಟಾದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳಗೆ ಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದರು. ಬ್ರಾಹ್ಮಣ ಸಮುದಾಯದ 1, ಒಕ್ಕಲಿಗ 2 ಮತ್ತು ಲಿಂಗಾಯತ ಸಮುದಾಯದ ಒಬ್ಬರಿಗೆ ಮಾತ್ರ ಅದೃಷ್ಟ ಖುಲಾಯಿಸಿದೆ.
ಅವಕಾಶದ ಹಾದಿ
ಜೆಡಿಎಸ್​ನ ಕುಮಾರಸ್ವಾಮಿ ಅವರು ಒಕ್ಕಲಿಗ ಸಮುದಾಯ ದವರಾಗಿದ್ದು, ಬಿಜೆಪಿಯ ಶೋಭಾ ಕರಂದ್ಲಾಜೆ ಕೂಡ ಸಮುದಾಯಕ್ಕೆ ಸೇರಿದ್ದಾರೆ. ಹೀಗಾಗಿ, ಕರ್ನಾಟಕ ಬಿಜೆಪಿಯಿಂದ ಆಯ್ಕೆಯಾಗಿದ್ದ ಏಕೈಕ ಮಹಿಳಾ ಸಂಸದೆಯನ್ನು ಮತ್ತೆ ಮಂತ್ರಿ ಮಾಡುತ್ತಾರಾ ಎಂಬ ಪ್ರಶ್ನೆಗಳೆದ್ದಿದ್ದವು. ಆದರೆ, ಶೋಭಾ ಕಾರ್ಯನಿರ್ವಹಣೆ ಬಗ್ಗೆ ಹೈಕಮಾಂಡ್​ಗೆ ಸಮಾಧಾನವಿದ್ದು, ಮತ್ತೊಂದು ಅವಕಾಶ ನೀಡಲಾಗಿದೆ. ಕಳೆದ ಅವಧಿಯಲ್ಲಿ ಶೋಭಾ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವರಾಗಿದ್ದರು. ಈ ಬಾರಿ ಕ್ಯಾಬಿನೆಟ್ ದರ್ಜೆಯ ಸ್ವತಂತ್ರ ಖಾತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಚ್.ಡಿ. ಕುಮಾರಸ್ವಾಮಿ
ರಾಜ್ಯದಲ್ಲಿ ಸಾರಾಯಿ ನಿಷೇಧ, ರೈತರ ಸಾಲಮನ್ನಾ, ಗ್ರಾಮ ವಾಸ್ತವ್ಯದ ಮೂಲಕ ಮನೆ ಮಾತಾಗಿರುವ ಮಾಜಿ ಸಿಎಂ ಎಚ್ ಡಿ. ಕುಮಾರಸ್ವಾಮಿ ಈಗ ನರೇಂದ್ರ ಮೋದಿ-3.0 ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಗನಾದರೂ ಯಾವುದೇ ಹಮ್ಮು-ಬಿಮ್ಮು ಇಲ್ಲದ ಸರಳ, ಸೀದಾಸಾದ ರಾಜಕಾರಣಿ. ಹಲವು ಟೀಕೆ-ಟಿಪ್ಪಣಿ, ಆರೋಪ-ಪ್ರತ್ಯಾರೋಪ, ರಾಜಕೀಯ ರಗಳೆಗಳ ನಡುವೆಯೂ ಮಾನವೀಯತೆ ಗಣಿಯೂ ಹೌದೆಂಬುದಕ್ಕೆ ಸಾಕಷ್ಟು ಉದಾಹರಣೆ ಇವೆ.
ಹಾಸನ ಜಿಲ್ಲೆ ಹರದನಹಳ್ಳಿಯಲ್ಲಿ 1959ರ ಡಿ.16ರಂದು ಎಚ್.ಡಿ. ದೇವೇಗೌಡ, ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದ ಎಚ್.ಡಿ. ಕುಮಾರಸ್ವಾಮಿ ಬಿಎಸ್ಸಿ ಪದವೀಧರ. ಕನಕಪುರ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದರು. ಬಳಿಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ್ದರು. ಈಗ ಮಂಡ್ಯದಿಂದ ಗೆಲುವು ಸಾಧಿಸಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಹಾಲಿ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಅವರು, ಚಲನಚಿತ್ರ ನಿರ್ವಪಕರಾಗಿ ಹೆಸರು ಮಾಡಿದ್ದರು. ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. 2006-2007 ರವರೆಗೆ ಮೊದಲ ಬಾರಿ ಸಿಎಂ ಆಗಿ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿ ಮಾಡಿ ಸೈ ಎನ್ನಿಸಿಕೊಂಡಿದ್ದರು. 2018-2019ರಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. 2013-2014ರ ಅವಧಿಯಲ್ಲಿ ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. 2018ರಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿದ್ದಾರೆ.
ಶೋಭಾ ಕರಂದ್ಲಾಜೆ
ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ‘ಗೋಬ್ಯಾಕ್’ ಆದರೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ‘ಕಮ್ ಬ್ಯಾಕ್’ ಆದ ಶೋಭಾ ಕರಂದ್ಲಾಜೆ, ಎಲ್ಲ ರಾಜಕೀಯ ವಿಶ್ಲೇಷಣೆ ತಲೆಕೆಳಗು ಮಾಡಿ, ಮೋದಿ 3.0 ಸರ್ಕಾರದಲ್ಲಿ ಮತ್ತೆ ಸಚಿವರಾಗಿದ್ದಾರೆ. ಉಡುಪಿ ಜಿಲ್ಲೆ ಪುತ್ತೂರು ಸಮೀಪದ ಚಾರ್ವಾಕ ಗ್ರಾಮದ ಮೋನಪ್ಪಗೌಡ ಹಾಗೂ ಪೂವಕ್ಕ ದಂಪತಿ ಪುತ್ರಿ, 58 ವರ್ಷ ವಯಸ್ಸಿನ ಶೋಭಾ ಕರಂದ್ಲಾಜೆ, ಎಂ.ಎ. ಸೋಷಿಯಾಲಜಿ ವ್ಯಾಸಂಗ ಪೂರ್ಣಗೊಳಿಸಿದ್ದಾರೆ.
ಬಾಲ್ಯದಿಂದಲೇ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಆಸಕ್ತಿ. ಕ್ರಾಂತಿಕಾರಿ ಮನೋಭಾವ, ಮುನ್ನುಗ್ಗುವ ಸ್ವಭಾವವನ್ನು ಆರ್​ಎಸ್​ಎಸ್ ಗುರುತಿಸಿತು. ಸಂಘ ಪರಿವಾರ, ನಂತರ ಬಿಜೆಪಿಯ ಪೂರ್ಣಾವಧಿ ಕಾರ್ಯಕರ್ತೆಯಾಗಿ ದುಡಿದವರು. ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಪಕ್ಷದ ರಾಜ್ಯ ಸಂಘಟನೆಯಲ್ಲಿ ಬಿಡುವಿಲ್ಲದೆ ಭಾಗಿಯಾದರು. 2004ರಲ್ಲಿ ವಿಧಾನ ಪರಿಷತ್ ಸದಸ್ಯೆ, 2008ರಲ್ಲಿ ಯಶವಂತಪುರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ.ಯಡಿಯೂರಪ್ಪ ಸಂಪುಟದಲ್ಲಿ ಸಚಿವೆಯಾಗಿ ಕೇಂದ್ರ ಸರ್ಕಾರದ ಪುರಸ್ಕಾರ ಪಡೆದು, ರಾಜ್ಯಕ್ಕೆ ಹೆಚ್ಚುವರಿಯಾಗಿ 800 ಕೋಟಿ ರೂ. ಅನುದಾನ ಪಡೆದವರು. ವಿಶ್ವ ಬ್ಯಾಂಕ್ ನೆರವಿನ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗೆ ಕೇಂದ್ರದಿಂದ ಹೆಚ್ಚುವರಿ 1,200 ಕೋಟಿ ರೂ. ಪಡೆದು ಗಮನಸೆಳೆದರು.
ಪ್ರಲ್ಹಾದ ಜೋಶಿ
ಧಾರವಾಡ ಲೋಕಸಭೆ ಕ್ಷೇತ್ರದಿಂದ ಐದನೇ ಬಾರಿ ಸಂಸತ್ ಪ್ರವೇಶಿಸಿರುವ ಪ್ರಲ್ಹಾದ ಜೋಶಿ, ಪಕ್ಷದ ಹಿರಿಯ ನಾಯಕ ಅನಂತಕುಮಾರ್ ಅಕಾಲಿಕ ನಿಧನದಿಂದ ಉಂಟಾದ ನಿರ್ವಾತವನ್ನು ತುಂಬಬಲ್ಲವರು ಎಂದು ಗುರುತಿಸಿ ಅವಕಾಶ ಕಲ್ಪಿಸಲಾಗಿದೆ. ಮೋದಿ 2.0 ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಕಾನೂನು, ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆಗಳನ್ನು ನಿಭಾಯಿಸಿದ್ದರು. ಖಾತೆಗಳ ಕ್ರಿಯಾಶೀಲ ಕಾರ್ಯನಿರ್ವಹಣೆಗಾಗಿ ಎರಡನೇ ಬಾರಿ ಸಂಪುಟ ದರ್ಜೆ ಸಚಿವರಾಗಿದ್ದಾರೆ. ವಿಜಯಪುರದ ವೆಂಕಟೇಶ ಜೋಶಿ ಹಾಗೂ ಮಾಲತಿ ಬಾಯಿ ದಂಪತಿ ಪುತ್ರ, 62ವರ್ಷ ವಯಸ್ಸಿನ ಪ್ರಲ್ಹಾದ ಜೋಶಿ ಕಲಾ ವಿಭಾಗದ ಸ್ನಾತಕ ಪದವೀಧರ. ಪಾಲುದಾರಿಕೆಯಲ್ಲಿ ವಿಭವ ಇಂಡಸ್ಟ್ರೀಸ್ ಉದ್ಯಮದ ಸ್ಥಾಪಕ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಹೋರಾಟ, ಕಾಶ್ಮೀರ ಉಳಿಸಿ ಆಂದೋಲನದಲ್ಲಿ ಪಾಲ್ಗೊಂಡು ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡರು.
ಬಿಜೆಪಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಜೋಶಿ, 2004ರ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಜಯಿಸಿ, ಇಲ್ಲಿಯವರೆಗೆ ಸೋಲಿಲ್ಲದ ಸರದಾರರಾಗಿದ್ದಾರೆ. 2012ರಿಂದ 2016ರವರೆಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪಕ್ಷದ ಸದಸ್ಯತ್ವ ಬಲ ಹೆಚ್ಚಿಸಲು ಒತ್ತು, ಸಂಘಟನಾ ಚಟುವಟಿಕೆಗಳು ರಾಜ್ಯವ್ಯಾಪಿ ಏಕರೂಪದಲ್ಲಿ ನಡೆಯುವಂತೆ ನೋಡಿಕೊಂಡವರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತೀಯ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ, ದೇಶದ ಅತಿ ಉದ್ದನೆಯ ರೈಲ್ವೆ ಪ್ಲಾಟ್​ಫಾಮ್ರ್ ಸೇರಿ ಸುಸಜ್ಜಿತ ರೈಲ್ವೆ ನಿಲ್ದಾಣ ಸೇರಿ ಕ್ಷೇತ್ರದ ಹತ್ತು-ಹಲವು ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರದಲ್ಲಿ ಮಾಡಿದ್ದಾರೆ.
ವಿ.ಸೋಮಣ್ಣ
ತುಮಕೂರು ಕ್ಷೇತ್ರದಿಂದ ಲೋಕಸಭೆಗೆ ಮೊದಲ ಬಾರಿ ಪ್ರವೇಶಿಸಿರುವ ವಿ.ಸೋಮಣ್ಣ, ಮೋದಿ ಮಂತ್ರಿ ಮಂಡಲದಲ್ಲಿ ಅವಕಾಶ ಪಡೆದು ಅಚ್ಚರಿ ಮೂಡಿಸಿದ್ದಾರೆ. ಲಿಂಗಾಯತರ ಕೋಟಾದಲ್ಲಿ ಎಂದು ಮೇಲ್ನೋಟಕ್ಕೆ ಕಂಡುಬಂದರೂ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕೆಂಬ ಸೂಚನೆಗೆ ಓಗೊಟ್ಟ ಅವರ ಪ್ರಯತ್ನಶೀಲತೆಗೆ ವರಿಷ್ಠರ ಪುರಸ್ಕಾರವೆಂದೇ ವಿಶ್ಲೇಷಿಸಲಾಗುತ್ತಿದೆ.
ರಾಮನಗರ ಜಿಲ್ಲೆಯ ವೀರಣ್ಣ ಹಾಗೂ ಕೆಂಪಮ್ಮ ದಂಪತಿ ಪುತ್ರ, 70 ವರ್ಷ ವಯಸ್ಸಿನ ವಿ.ಸೋಮಣ್ಣ ಬಿ.ಎ. ಪದವೀಧರ. ಉತ್ತಮ ಸಂಘಟಕರೂ ಹೌದು. ಲೋಕ ನಾಯಕ ಜಯಪ್ರಕಾಶ ನಾರಾಯಣ ಅವರ ರಾಷ್ಟ ನಿರ್ಮಾಣ ಚಳವಳಿಯಲ್ಲಿ ಧುಮುಕಿ ಜನತಾ ಪರಿವಾರದ ಮೂಲಕ ರಾಜಕೀಯ ರಂಗಕ್ಕೆ ಸೋಮುಣ್ಣ ಕಾಲಿಟ್ಟರು. 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ, ಇದೇ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಮರು ಆಯ್ಕೆ. ಮೂರನೇ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯ, 2008ರಲ್ಲಿ ಗೋವಿಂದರಾಜನಗರ ಕ್ಷೇತ್ರದಲ್ಲಿ ಇದೇ ಪಕ್ಷದಿಂದ ಗೆಲವು. ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. 2009ರ ಉಪ ಚುನಾವಣೆಯಲ್ಲಿ ಸೋತರೂ 2010 ರಿಂದ 2018ರವರೆಗೆ ವಿಧಾನ ಪರಿಷತ್ ಸದಸ್ಯ. ಬಿ.ಎಸ್.ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಸಚಿವ, 2018ರಲ್ಲಿ ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರ ಗೆದ್ದು, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ವಸತಿ ಖಾತೆ ಸಚಿವರಾಗಿದ್ದರು.
‘ನಮೋ’ ಸಂಪುಟದಲ್ಲಿ ಯಾರಿಗೆಲ್ಲ ಸಿಕ್ತು ಸ್ಥಾನ? ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
