ಬೆಂಗಳೂರು:ಉತ್ತರಪ್ರದೇಶದಿಂದ ಕಾರಿನಲ್ಲಿ ಬಂದು ನಗರದಲ್ಲಿ ಸರಣಿ ಮನೆಗಳವು ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಬಂಧಿಸಿ ರುವ ಸಿಸಿಬಿ ಪೊಲೀಸರು, 2.25 ಕೋಟಿ ರೂ. ಬೆಲೆ ಬಾಳುವ 4 ಕೆ.ಜಿ. ಆಭರಣವನ್ನು ಜಪ್ತಿ ಮಾಡಿದ್ದಾರೆ.
ಉತ್ತರ ಪ್ರದೇಶ ಮೂಲದ ಫಯೂಮ್ ಅಲಿಯಾಸ್ ಎಟಿಎಂ ಫಯೂಮ್ (35), ಈತನ ಸಹಚರ ಮುರಸಲೀಂ ಮೊಹಮದ್(42) ಅವರನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ ಅನ್ನಪೂರ್ಣೆಶ್ವರಿನಗರ, ಸಂಜಯನಗರ, ಬ್ಯಾಡರಹಳ್ಳಿ, ನಂದಿನಿ ಲೇಔಟ್ ಸೇರಿ ನಗರದ 13 ಠಾಣೆಗಳಲ್ಲಿ ದಾಖಲಾಗಿದ್ದ 35 ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ಫಯೂಮ್ ವಿರುದ್ಧ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ದರೋಡೆ, ಕೊಲೆ, ಕೊಲೆ ಯತ್ನ ಸೇರಿ 40 ಪ್ರಕರಣ ದಾಖಲಾಗಿದ್ದವು. ತಲೆಮರೆಸಿಕೊಂಡಿದ್ದ ಆತನ ಸುಳಿವು ನೀಡಿದವರಿಗೆ 10 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು. ಆರೋಪಿ 2016ರಲ್ಲಿ ನೊಯಿಡಾ ಜೈಲಿನಲ್ಲಿದ್ದಾಗ ಇತರ ಆರೋಪಿಗಳನ್ನು ಪರಿಚಯಿಸಿಕೊಂಡಿದ್ದ. 2017ರಲ್ಲಿ ಬಿಡುಗಡೆಯಾಗಿ ತನ್ನದೇ ಗ್ಯಾಂಗ್ ಕಟ್ಟಿಕೊಂಡು ದಕ್ಷಿಣ ಭಾರತದಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ. ಸಹಚರರೊಂದಿಗೆ ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯಿಂದ ಕಾರಿನಲ್ಲಿ ಬೆಂಗಳೂರು, ಬೆಳಗಾವಿ, ಗೋವಾದ ಪಣಜಿ, ಹೈದರಾಬಾದ್​ಗೆ ಬಂದು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಎಂದು ವಿವರ ನೀಡಿದರು.
ಕಳ್ಳತನ ಹೇಗೆ?:ಕಳ್ಳತನಕ್ಕಾಗಿಯೇ ಉತ್ತರ ಪ್ರದೇಶದಿಂದ ಕಾರಿನಲ್ಲೇ ಬರುತ್ತಿದ್ದ ಫಯೂಮ್ ಗ್ಯಾಂಗ್​ಸದಸ್ಯರು, ಸ್ಕೂಲ್​ಬ್ಯಾಗ್ ಹಾಕಿಕೊಂಡು ತಲೆಗೆ ಟೋಪಿ ಧರಿಸಿ ಹಗಲಿನಲ್ಲೇ ಮನೆಗಳಿಗೆ ಹೋಗಿ ಕಾಲಿಂಗ್ ಬೆಲ್ ಒತ್ತುತ್ತಿದ್ದರು. ಮನೆ ಮಾಲೀಕರು ಬಾಗಿಲು ತೆರೆದರೆ ಫ್ರಿಜ್ ಅಥವಾ ಮಿಕ್ಸಿ ರಿಪೇರಿ ಮಾಡಲು ಬಂದಿರುವವುದಾಗಿ ಸುಳ್ಳು ಹೇಳುತ್ತಿದ್ದರು. ಒಂದು ವೇಳೆ ಬಾಗಿಲು ತೆರೆಯದಿದ್ದರೆ ಮನೆಯನ್ನು ಗಮನಿಸಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಡೋರ್​ಲಾಕ್ ಮುರಿದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ಕದ್ದ ಚಿನ್ನಾಭರಣವನ್ನು ಹಂಚಿಕೊಂಡು ಮೋಜು ಮಾಡುತ್ತಿದ್ದರು ಎಂದು ಪಂತ್ ತಿಳಿಸಿದರು.
ಆರೋಪಿಗಳ ಸುಳಿವು ನೀಡಿದ ಬೆರಳಚ್ಚು
ಕೆಲ ತಿಂಗಳ ಹಿಂದೆ ಹೈದರಾಬಾದ್​ನಲ್ಲಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ ಫಯೂಮ್ ಮುರಸಲೀಂ ಅಲ್ಲಿನ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಅಂತಾರಾಜ್ಯ ಕಳ್ಳರನ್ನು ಬಂಧಿಸಿದಾಗ ಇತರ ರಾಜ್ಯದ ಪೊಲೀಸ್ ಇಲಾಖೆಗೂ ಈ ಕಳ್ಳರ ಫಿಂಗರ್ ಪ್ರಿಂಟ್ ಮತ್ತಿತರ ಮಾಹಿತಿ ರವಾನಿಸಲಾಗುತ್ತದೆ. ಅದರಂತೆ ಈ ಆರೋಪಿಗಳ ಬಗ್ಗೆ ರಾಜ್ಯ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ರಾಜ್ಯದ ಫಿಂಗರ್ ಪ್ರಿಂಟ್ ವಿಭಾಗದ ಅಧಿಕಾರಿಗಳು ನಗರದಲ್ಲಿ ಈ ಹಿಂದೆ ನಡೆದ ಕೆಲ ಮನೆಗಳ್ಳತನ ಪ್ರಕರಣದಲ್ಲಿ ಪತ್ತೆಯಾದ ಕಳ್ಳರ ಫಿಂಗರ್ ಪ್ರಿಂಟ್​ನ್ನು ಆರೋಪಿಗಳ ಬೆರಳಚ್ಚಿಗೆ ಹೋಲಿಕೆ ಮಾಡಿದಾಗ ಹೊಂದಾಣಿಕೆಯಾಗಿತ್ತು. ಕೂಡಲೇ ಸಿಸಿಬಿ ಪೊಲೀಸರು ಬಾಡಿ ವಾರಂಟ್ ಮೂಲಕ ಹೈದರಾಬಾದ್​ನಿಂದ ನಗರಕ್ಕೆ ಕರೆ ತಂದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.
ಎಟಿಎಂ ಫಯೂಮ್
ಉತ್ತರ ಪ್ರದೇಶದ ನೊಯ್ಡಾ ಜೈಲಿನಲ್ಲಿದ್ದಾಗಲೇ ಫಯೂಮ್ ಬಳಿ ಎಟಿಎಂ ಕಾರ್ಡ್ ಇತ್ತು. ಕಾರಾಗೃಹಕ್ಕೆ ತನ್ನನ್ನು ಭೇಟಿ ಮಾಡಲು ಬರುತ್ತಿದ್ದವರ ಕೈಗೆ ಎಟಿಎಂ ಕಾರ್ಡ್ ಕೊಟ್ಟು ಹಣ ಡ್ರಾ ಮಾಡಿಸಿಕೊಂಡು ಖರ್ಚು ಮಾಡುತ್ತಿದ್ದ. ಹೀಗಾಗಿ ಈತ ಎಟಿಎಂ ಫಯೂಮ್ ಎಂದೇ ಕುಖ್ಯಾತಿ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ದಿಕ್ಕು ತಪ್ಪಿಸಿದ್ದ ಆರೋಪಿ
2018ರ ಜ.24ರಂದು ಅನ್ನಪೂರ್ಣೆಶ್ವರಿನಗರದ ವಾಸಿಯಾಗಿರುವ ಉದ್ಯಮಿ ಕೃಷ್ಣಭಟ್ ಮನೆಗೆ ಬೀಗ ಹಾಕಿ ಫ್ಯಾಕ್ಟರಿಗೆ ಹೋಗಿದ್ದಾಗ ಫಯೂಮ್ ಗ್ಯಾಂಗ್ 800 ಗ್ರಾಂ ಚಿನ್ನಾಭರಣ ದೋಚಿತ್ತು. ಕಳವು ಮಾಡಿದ ಒಡವೆಗಳನ್ನು ಹರಿಯಾಣದ ಗುರುಗ್ರಾಮ ಜೈಲಿನಲ್ಲಿರುವ ಕೊಲೆ ಆರೋಪಿ ಅಶೋಕ್ ಲಾಟಿ ಎಂಬುವನ ಮುಖಾಂತರ ದೆಹಲಿ, ಹರಿಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಮಾರಾಟ ಮಾಡಿರುವುದಾಗಿ ಫಯೂಮ್ ಹೇಳಿಕೆ ನೀಡಿದ್ದ. ಈ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರ ತಂಡ ಚಿನ್ನ ಜಪ್ತಿ ಮಾಡಲು ಆರೋಪಿಗಳೊಂದಿಗೆ ಗುರುಗ್ರಾಮ ಜೈಲಿಗೆ ಹೋಗಿತ್ತು. ಅಲ್ಲಿನ ಜೈಲು ಅಧಿಕಾರಿಗಳ ಬಳಿ ಅಶೋಕ್ ಲಾಟಿ ಬಗ್ಗೆ ವಿಚಾರಿಸಿದಾಗ ಆತ ಒಂದು ವರ್ಷದ ಹಿಂದೆ ಕೊಲೆಯಾಗಿರುವುದಾಗಿ ತಿಳಿಸಿದ್ದರು. ತನಿಖೆಯ ದಿಕ್ಕು ತಪ್ಪಿಸಲು ವಿಚಾರಣೆ ವೇಳೆ ಫಯೂಮ್ ಸುಳ್ಳು ಹೇಳಿದ್ದಾನೆ ಎಂಬುದು ಆಗ ತನಿಖಾಧಿಕಾರಿಗಳಿಗೆ ತಿಳಿಯಿತು. ಅದೇ ಸ್ಥಳದಲ್ಲಿ ಫಯೂಮ್ನ್ನು ಕೂಲಂಕಷವಾಗಿ ವಿಚಾರಣೆ ಮಾಡಿದಾಗ ಕದ್ದ ಚಿನ್ನಾಭರಣದಲ್ಲಿ ತನ್ನ ಪಾಲಿಗೆ ಬಂದ ಒಡವೆಗಳನ್ನು ಉತ್ತರ ಪ್ರದೇಶದ ಮೊರಾದಬಾದ್​ನಲ್ಲಿರುವ ತನ್ನ ಮನೆಯಲ್ಲಿ ಹಾಗೂ ತನ್ನ ಸಹೋದರಿಯ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದ. ನಂತರ ಸಿಸಿಬಿ ಪೊಲೀಸರು ಗುರುಗ್ರಾಮದಿಂದ ಆರೋಪಿಗಳೊಂದಿಗೆ ಮೊರಾದಾಬಾದ್​ಗೆ ತೆರಳಿದ್ದರು. ಸತತ 7 ದಿನ ಮೊರಾದಾಬಾದ್ ಕೊತ್ವಾಲ್ ಠಾಣೆಯ ಪೊಲೀಸ್ ಅಧಿಕಾರಿಗಳೊಂದಿಗೆ ಜಂಟಿಯಾಗಿ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಯ ಮನೆಯಲ್ಲಿದ್ದ 4 ಕೆ.ಜಿ. ಚಿನ್ನಾಭರಣವನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
75 ಸಾವಿರ ರೂ. ಬಹುಮಾನ
ವರ್ಷದ ಆರಂಭದಲ್ಲೇ ಕುಖ್ಯಾತ ಕಳ್ಳರನ್ನು ಬಂಧಿಸಿದ ಸಿಸಿಬಿ ವಿಭಾಗದ ಉಪ ಪೊಲೀಸ್ ಆಯುಕ್ತ ರವಿಕುಮಾರ್ ನೇತೃತ್ವದ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, 75 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
