| ವಿಲಾಸ ಮೇಲಗಿರಿ ಬೆಂಗಳೂರು
ಇಲ್ಲಿ ಸಾಲ ಕಟ್ಟದಿದ್ದರೂ ಸುಸ್ತಿದಾರನಲ್ಲ! ಬಡ್ಡಿ ಕಟ್ಟದಿದ್ದರೂ ಸಹಕಾರ ಸಂಘಗಳಿಗೇನೂ ಚಿಂತೆ ಇಲ್ಲ!!
ಇದು ಸಹಕಾರ ಸಂಘಗಳ ಬುಕ್ ಆಫ್ ಅಡ್ಜಸ್ಟ್​ಮೆಂಟ್ ಗೋಲ್​ಮಾಲ್​ನ ಒಂದು ಸ್ಯಾಂಪಲ್. ರೈತರ ಅಭಿವೃದ್ಧಿಗೆ ನಬಾರ್ಡ್ ಸಾಲ ನೀಡುತ್ತದೆ. ಈ ಸಾಲ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್​ನಿಂದ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ರೈತರನ್ನು ತಲುಪುತ್ತದೆ. ಶೂನ್ಯ ಬಡ್ಡಿದರದ ಸಾಲ ನೀಡಿಕೆ ಘೋಷಣೆಯ ಅನ್ವಯ 365 ದಿನದ ಕಾಲಮಿತಿ ನಿಗದಿಪಡಿಸಿ ಆ ಅವಧಿಯೊಳಗೆ ಸಾಲ ಮರುಪಾವತಿಸುವ ರೈತರ 3 ಲಕ್ಷ ರೂ.ವರೆಗಿನ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ರಿಯಾಯಿತಿಯನ್ನು ಸರ್ಕಾರ ಪಾವತಿಸುತ್ತದೆ. ಆದರೆ ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿ ಮತ್ತಿತರ ಕಾರಣಗಳಿಂದ ರೈತರು ಸಕಾಲಕ್ಕೆ ಸಾಲ ಮರುಪಾವತಿ ಮಾಡದೇ ಇದ್ದರೆ ಶೇ.12-13 ಬಡ್ಡಿ ಪಾವತಿಸಬೇಕಾಗುತ್ತದೆ. ಸರ್ಕಾರದ ಈ ನಿಯಮವೇ ರೈತರ ಸುಲಿಗೆಗೆ ಸಹಕಾರ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್​ಗಳಿಗೆ ರಹದಾರಿಯಾಗಿದೆ.
ಸರ್ವೆಸಾಮಾನ್ಯವಾಗಿ ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದ ಶೇ.40-50 ರೈತರು ನಾನಾ ಕಾರಣಗಳಿಂದ ಸಕಾಲಕ್ಕೆ ಸಾಲ ಮರುಪಾವತಿ ಮಾಡುವುದಿಲ್ಲ. ಆದಾಗ್ಯೂ ಸಹಕಾರ ಸಂಘಗಳಿಗೆ ಶೇ.100 ಸಾಲ ವಸೂಲಿ ಗರಿಮೆ ಸಿಗುತ್ತದೆ. ಅದ್ಹೇಗೆ ಎಂದರೆ, ಬುಕ್ ಆಪ್ ಆಡ್ಜಸ್ಟ್​ಮೆಂಟ್!
ಸಾಲ ಮರುಪಾವತಿಗೆ ನಿಗದಿಪಡಿಸಿದ ಅವಧಿ ಮುಗಿದ ರೈತರಿಂದ ಸಹಕಾರ ಸಂಘಗಳು (ಅಧಿಕಾರಿ/ಸಿಬ್ಬಂದಿ/ಮಂಡಳಿ ಕೆಲ ಸದಸ್ಯರ ಶಾಮೀಲು) 4 ರಿಂದ 5 ಸಾವಿರ ರೂ. ಪಡೆದು ಬುಕ್ ಆಫ್ ಅಡ್ಜಸ್ಟ್​ಮೆಂಟ್ ಮಾಡುತ್ತಾರೆ. ಈ ವಸೂಲಿಯಲ್ಲಿ ಸಂಘ-ಡಿಸಿಸಿ ಬ್ಯಾಂಕ್ ಕೈಜೋಡಿಸಿರುತ್ತವೆ. ಇದು ಸಹಕಾರ ಸಂಘ ಹಾಗೂ ಡಿಸಿಸಿ ಆಡಳಿತ ಮಂಡಳಿಗೂ ಗೊತ್ತಿರುವ ಓಪನ್ ಸಿಕ್ರೆಟ್.
ಕಾಲಮಿತಿಯೊಳಗೆ ಬುಕ್ ಆಫ್ ಅಡ್ಜಸ್ಟ್​ಮೆಂಟ್ ಮಾಡಿ ಸಹಕಾರ ಸಂಘಗಳು ರೈತರ ಹೆಸರಿನಲ್ಲಿ ಸರ್ಕಾರದಿಂದ ಬಡ್ಡಿ ರಿಯಾಯಿತಿ ಲಾಭ ಪಡೆಯುತ್ತವೆ. ಹೀಗಾಗಿ ರೈತರು ಸಕಾಲಕ್ಕೆ ಸಾಲ ಮರುಪಾವತಿ ಮಾಡದೇ ಇದ್ದರೂ, ಬಡ್ಡಿ ಪಾವತಿಸದೇ ಇದ್ದರೂ ಸಹಕಾರ ಸಂಘಗಳಿಗೇನೂ ನಷ್ಟವಿಲ್ಲ! ಸಾಲ ನೀಡಿಕೆ, ಮರುಪಾವತಿಗೆ ಸಂಬಂಧಿಸಿದಂತೆ ಆನ್​ಲೈನ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಹಳೆಯ ದಿನಾಂಕ ನಮೂದಿಸಿ ರಸೀದಿ ಕೊಟ್ಟು ಗೋಲ್‍ಮಾಲ್ ಮಾಡಲಾಗುತ್ತದೆ.
ರೈತರಿಗೇನು ಲಾಭ?:ರೈತ ಸಕಾಲದಲ್ಲಿ ಸಾಲ ಮರುಪಾವತಿ ಮಾಡದೇ ಹೋದರೆ 1 ಲಕ್ಷ ರೂ.ಗೆ ಸುಮಾರು ಶೇ.12 ಬಡ್ಡಿ ಪಾವತಿಸಬೇಕಾಗುತ್ತದೆ. ಅಂದರೆ 1 ಲಕ್ಷ ರೂ. ಸಾಲಕ್ಕೆ 12,000 ರೂ. ಬಡ್ಡಿ ಪಾವತಿಸಬೇಕಾಗುತ್ತದೆ. ಬುಕ್ ಆಫ್ ಅಡ್ಜಸ್ಟ್​ಮೆಂಟ್​ಗೆ 4-5 ಸಾವಿರ ರೂ. ಕೊಟ್ಟರೆ ರೈತರಿಗೆ 7-8 ಸಾವಿರ ರೂ. ಉಳಿತಾಯವಾಗುತ್ತದೆ. ಅಲ್ಲದೆ, ರೈತರಿಗೆ ಸಾಲ ಮರುಪಾವತಿಗೆ ಹಣ ಹೊಂದಿಸುವ ಒತ್ತಡ ಇರುವುದಿಲ್ಲ. ಕಾರಣ ಬಹುತೇಕ ರೈತರು ಲಂಚ ಕೊಟ್ಟು ಬುಕ್ ಆಫ್ ಅಡ್ಜಸ್ಟ್​ಮೆಂಟ್ ಮಾಡಿಸಿಕೊಳ್ಳುತ್ತಾರೆ. ಒಟ್ಟು ಫೈಲ್ ಸಂಖ್ಯೆ ಆಧರಿಸಿ ಡಿಸಿಸಿ ಬ್ಯಾಂಕ್ ಮತ್ತು ಸಹಕಾರ ಸಂಘಗಳು ಲಂಚದ ಹಣ ಹಂಚಿಕೆ ಮಾಡಿಕೊಳ್ಳುತ್ತವೆ ಎಂಬ ಆರೋಪ ಕೇಳಿ ಬರುತ್ತಿವೆ.
ಅಕ್ರಮ ವಹಿವಾಟೇ 750 ಕೋಟಿ ರೂ.
2022-23ನೇ ಸಾಲಿಗೆ ಸರ್ಕಾರ 32,35,987 ರೈತರಿಗೆ ಸುಮಾರು 22,337 ಕೋಟಿ ರೂ. ಸಾಲ ನೀಡುತ್ತದೆ. ಅಂದರೆ, ಒಂದು ಅಂದಾಜಿನ ಪ್ರಕಾರ ಶೇ.40-50 ರೈತರ ಸಾಲ ಬುಕ್ ಆಫ್ ಅಡ್ಜಸ್ಟ್​ಮೆಂಟ್ ಆಗುತ್ತವೆ. ಇದರಿಂದ ಸಹಕಾರ ಸಂಘಗಳ ಲಂಚದ ವಹಿವಾಟೇ ಸರಿ ಸುಮಾರು ವಾರ್ಷಿಕ 750 ಕೋಟಿ ರೂ.ಗಳಾಗುತ್ತದೆ!
ಚುನಾವಣೆಗೂ ಸಹಕಾರಿಸಹಕಾರ ಬ್ಯಾಂಕ್​ಗಳ ಷೇರುದಾರರು 5 ಸರ್ವ ಸದಸ್ಯರ ಮಹಾಸಭೆಗಳ ಪೈಕಿ 2 ಸಭೆಗೆ ಹಾಜರಾಗಬೇಕು. ಸಂಘದ ಕನಿಷ್ಠ ಸೇವೆ ಹಾಗೂ ಸೌಲಭ್ಯಗಳನ್ನು ಬಳಸಿಕೊಂಡಿರಬೇಕು. ಇಲ್ಲದೇ ಹೋದರೆ ಅಂತಹ ಸದಸ್ಯರು ಆ ವರ್ಷ ನಡೆಯುವ ಆಡಳಿತ ಮಂಡಳಿಯ ಸದಸ್ಯರ ಚುನಾವಣೆ ಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿರುವಂತಿಲ್ಲ ಎಂದು ಸಹಕಾರ ಸಂಘಗಳ ಕಾಯ್ದೆ ಹೇಳುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡು ಸಹಕಾರ ಸಂಘಗಳ ಆಡಳಿತ ಮಂಡಳಿಗಳು ತಮಗೆ ಬೇಕಾದವರ ಸಾಲವನ್ನು ಬುಕ್ ಆಫ್ ಅಡ್ಜಸ್ಟ್​ಮೆಂಟ್ ಮಾಡಿ ಸದಸ್ಯರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುತ್ತವೆ. ಆ ಮೂಲಕ ಮಂಡಳಿಗಳ ಸದಸ್ಯರು ಪದೇಪದೆ ಆಯ್ಕೆಯಾಗುತ್ತಾರೆ.
ಅನ್ನದಾತರ ಸಾಲ ಮನ್ನಾದಲ್ಲೂ ಗಿಮಿಕ್ರೈತರನ್ನು ಸಾಲದ ಸುಳಿಯಿಂದ ಪಾರು ಮಾಡುವ ಹಿನ್ನೆಲೆಯಲ್ಲಿ ಸರ್ಕಾರ ಕಾಲ ಕಾಲಕ್ಕೆ ಸಾಲ ಮನ್ನಾ ಮಾಡುತ್ತ ಬಂದಿವೆ. ಇತ್ತೀಚಿನ ವರ್ಷಗಳಲ್ಲಿ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಸಾಲ ಮನ್ನಾ ಮಾಡಲಾಗಿತ್ತು. ರೈತರ ಸಾಲ ಮನ್ನಾ ಆದಾಗ ಸಹಕಾರ ಸಂಘಗಳು ತಕ್ಷಣ ಮರು ಸಾಲ ನೀಡಬೇಕು. ಆದರೆ ಸಾಲ ಮನ್ನಾದ ನೆಪದಲ್ಲಿ ಸಂಘಗಳಲ್ಲಿ ಕೆಲವರು ರೈತರಿಂದ ಸುಲಿಗೆ ಮಾಡುತ್ತಿರುವ ಆರೋಪಗಳೂ ಉಂಟು.
ಆಡಳಿತ ಮಂಡಳಿಗೂ ಭರ್ಜರಿ ಲಾಭಬುಕ್ ಆಫ್ ಅಡ್ಜಸ್ಟ್​ಮೆಂಟ್​ನಿಂದ ಸಹಕಾರ ಸಂಘಗಳ ಆಡಳಿತ ಮಂಡಳಿಗೂ ಭರ್ಜರಿ ಲಾಭವಿರುತ್ತದೆ. ತಮಗೆ ಬೇಕಾದವರಿಗೆ ಸಾಲ ಕೊಡಿಸುವುದು, ಆ ಸಾಲವನ್ನು ಬುಕ್ ಆಫ್ ಅಡ್ಜಸ್​ವೆುಂಟ್ ಮಾಡುವ ಮೂಲಕ ರೈತರನ್ನು ಆಡಳಿತ ಮಂಡಳಿ ಸದಸ್ಯರು ಹಿಡಿತದಲ್ಲಿಟ್ಟುಕೊಳ್ಳುತ್ತಾರೆ. ಇದು ಚುನಾವಣೆಗೆ ಸಹಕಾರಿಯಾಗುತ್ತದೆ. ತಮಗೆ ಬೇಡವಾದವರು, ತಮಗೆ ಮತ ಹಾಕುವುದಿಲ್ಲ ಎಂದು ಖಾತ್ರಿಯಾದರೆ ಅಂಥವರ ಸಾಲವನ್ನು ಬುಕ್ ಆಫ್ ಅಡ್ಜಸ್ಟ್​ಮೆಂಟ್ ಮಾಡದೇ ಸುಸ್ತಿದಾರರನ್ನಾಗಿ ಮಾಡಿ ಮತದಾನದ ಹಕ್ಕನ್ನೇ ಮೊಟಕುಗೊಳಿಸುವ ಹಲವಾರು ಪ್ರಕರಣಗಳೂ ನಡೆಯುತ್ತಿವೆ.
ಆನ್​ಲೈನ್​ನಲ್ಲಿ ಸಹಕಾರ ಮಹಾಸಭೆಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಸಹಕಾರ ಸಂಘಗಳು/ ಬ್ಯಾಂಕ್ ಹಾಗೂ ಸೌಹಾರ್ದ ಸಹಕಾರಿಗಳ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಆನ್​ಲೈನ್ ವೇದಿಕೆಯಲ್ಲಿ ನಿರ್ವಹಿಸಲು ಸಹಕಾರ ಇಲಾಖೆ ಷರತ್ತುಬದ್ಧ ಅನುಮತಿ ನೀಡಿದೆ. ಸಂಘ/ಬ್ಯಾಂಕ್ ಹಾಗೂ ಸೌಹಾರ್ದ ಸಹಕಾರಿಗಳಲ್ಲಿ ಸರ್ವ ಸದಸ್ಯರ ಸಂಖ್ಯೆ ಒಂದು ಸಾವಿರ ಒಳಗಿದ್ದರೆ ವಾರ್ಷಿಕ ಮಹಾಸಭೆ ಭೌತಿಕವಾಗಿ ನಡೆಸುವುದು ಕಡ್ಡಾಯವೆಂದು ತಿಳಿಸಿದೆ. ಸರ್ವ ಸದಸ್ಯರ ಸಂಖ್ಯೆ ಒಂದು ಸಾವಿರ ಮೇಲ್ಪಟ್ಟಿದ್ದರೆ ಭೌತಿಕವಾಗಿ ನಡೆಸಲು ಸಾಧ್ಯವಾಗದಿದ್ದಲ್ಲಿ ವಾರ್ಷಿಕ ಮಹಾಸಭೆಗೆ ಆನ್​ಲೈನ್ ವೇದಿಕೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಆನ್​ಲೈನ್ ಆಗಿ ಸಭೆ ನಡೆಸಲು ಬಯಸುವ ಸಂಘ/ಬ್ಯಾಂಕ್ ಮತ್ತು ಸೌಹಾರ್ದ ಸಹಕಾರಿಗಳು ಹಲವು ನಿರ್ಬಂಧಗಳನ್ನು ಪಾಲಿಸಬೇಕು ಎಂದು ಸೂಚಿಸಿದೆ. ಸರ್ವ ಸದಸ್ಯರ ಸಭೆ ನಡೆಯುವ ದಿನಾಂಕ ಮತ್ತು ವೇಳೆಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸುವುದು, ಸಭೆ ನೋಟಿಸ್ ಇನ್ನಿತರ ದಾಖಲಾತಿಗಳನ್ನು ಸಂಘದ ವೆಬ್​ಸೈಟ್ ಪ್ರಚುರಪಡಿಸುವುದು, ಚಾಲ್ತಿ ಪದ್ಧತಿಯಂತೆ ನೋಟಿಸ್​ಗಳನ್ನು ಅಂಚೆ ಮೂಲಕ ಸಹ ರವಾನಿಸಬೇಕು. ಆನ್​ಲೈನ್ ವೇದಿಕೆ ಸಭೆಯ ನಡವಳಿಗಳನ್ನು ಅಧಿಕೃತವಾಗಿ ದಾಖಲಿಸುವ ತಂತ್ರಜ್ಞಾನ ಅಳವಡಿಕೆ, ಕರೊನಾ ಮುನ್ನೆಚ್ಚರಿಕೆ ನಿಯಮಗಳ ಪಾಲನೆ ಮುಂತಾದ ಷರತ್ತುಗಳನ್ನು ಇಲಾಖೆ ವಿಧಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − two =
Remember me
