|ಬಾಬುರಾವ ಯಡ್ರಾಮಿಕಲಬುರಗಿ
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ 34 ಹಳ್ಳಿ ಜನರು ಕರ್ನಾಟಕ ಸೇರುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಕಲಬುರಗಿ ಮತ್ತು ಬೀದರ್ ಜಿಲ್ಲೆ ಗಡಿಗೆ ಹೊಂದಿಕೊಂಡಿರುವ ಮಹಾ ಗ್ರಾಮಗಳ ಜನತೆ ಮಾತೃಭಾಷೆಯ ಮೂಲ ನೆಲ ಕರ್ನಾಟಕದ ಮಡಿಲು ಸೇರುವ ಧ್ವನಿ ಎತ್ತುತ್ತಿದ್ದಾರೆ. ಕಲಬುರಗಿ ಜಿಲ್ಲೆ ಗಡಿಗೆ ಹೊಂದಿಕೊಂಡಿರುವ ಅಕ್ಕಲಕೋಟ, ಸೊಲ್ಲಾಪುರ ದಕ್ಷಿಣ ತಾಲೂಕಿನ ಸುಮಾರು 30 ಹಳ್ಳಿ ಜನರು ‘ನಮ್ಮ ಹಳ್ಳಿಗಳನ್ನು ಅಭಿವೃದ್ಧಿ ಮಾಡಿ ಅಗತ್ಯ ಮೂಲಸೌಕರ್ಯಗಳು ಕಲ್ಪಿಸಿ, ಇಲ್ಲವಾದರೆ ನಮ್ಮನ್ನು ಕರ್ನಾಟಕಕ್ಕೆ ಸೇರಲು ಬಿಡಿ’ ಎಂದು ಮಹಾರಾಷ್ಟ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಈಗಾಗಲೆ ಒಂದೆರಡು ಹಳ್ಳಿಗಳಲ್ಲಿ ಕರ್ನಾಟಕ ಸೇರುವ ನಿರ್ಣಯ ಕೈಗೊಳ್ಳಲಾಗಿದೆ. ಇನ್ನುಳಿದ 30 ಹಳ್ಳಿಗಳಲ್ಲೂ ಕನ್ನಡಿಗರು ಸಭೆ ನಡೆಸಿ ಇಂಥದ್ದೇ ನಿರ್ಧಾರವನ್ನು ಇನ್ನೆರಡು ದಿನಗಳಲ್ಲಿ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಅಲ್ಲಿನ ಕನ್ನಡಪರ ಸಂಘಟನೆ ಮುಖಂಡರು ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಜತೆ ಸೇರಿ ‘ನಮ್ಮೂರು ಕರ್ನಾಟಕಕ್ಕೆ ಸೇರಲು ಅನುಮತಿ ಕೊಡಿ’ ಎಂದು ಸೊಲ್ಲಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ಎಲ್ಲೆಡೆ ಸಭೆಗಳನ್ನು ನಡೆಸಲಾಗಿದ್ದು, ಎರಡು ದಿನದಲ್ಲಿ ಗ್ರಾಪಂಗಳಲ್ಲಿ ಠರಾವು ಪಾಸ್ ಆಗಲಿದೆ ಎಂದು ಗಡಿ ಕನ್ನಡಿಗರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಅಕ್ಕಲಕೋಟ ತಾಲೂಕಿನ ತಡವಳ ಜಿಲ್ಲಾ ಪಂಚಾಯಿತಿ ಕ್ಷೇತ್ರದ 21 ಹಳ್ಳಿ ಜನರು ಕರ್ನಾಟಕ ಸೇರಲು ನಿರ್ಧಾರ ಕೈಗೊಂಡಿದ್ದಾರೆ. ತೋಳನೂರ, ನಾಗಣಸೂರ, ಬಬಲಾದ, ಬೋರುಟಿ, ಜಕಾಪುರ, ಮುಗಳಿ, ಬಳೂರ್ಗಿ, ಭಾಸಗಿ, ನಾಗೂರ, ತಡವಳ ಮೊದಲಾದ ಹಳ್ಳಿಗಳಲ್ಲಿ ರೈತರು ಹಾಗೂ ಸ್ಥಳೀಯ ಮುಖಂಡರು ಸಭೆಗಳನ್ನು ನಡೆಸಿ ಕರ್ನಾಟಕ ಸೇರುವ ಸಂಬಂಧ ಚರ್ಚೆ ನಡೆಸಿದ್ದಾರೆ.
ಸಾಂಗ್ಲಿಯಲ್ಲೂ ಪ್ರತಿಭಟನೆ:ಸಾಂಗ್ಲಿ ಗ್ರಾಮದ ಪ್ರತಿಭಟನಾನಿರತ ರೈತರು, ಕರ್ನಾಟಕದೊಂದಿಗೆ ತಮ್ಮ ಗ್ರಾಮಗಳನ್ನು ವಿಲೀನ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕರ್ನಾಟಕ ಸಿಎಂ ಬೊಮ್ಮಾಯಿ ಪರ ಘೋಷಣೆ ಕೂಗಿದ್ದಾರೆ. ಗಡಿಯ ಸಮೀಪವಿರುವ ಯಾವುದೇ ಗ್ರಾಮದವರು ಎಲ್ಲಿಯೂ ಹೋಗುತ್ತಿಲ್ಲ ಎಂದು ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್ ಹೇಳಿದ್ದಾರೆ.
ಕನ್ನಡಿಗ- ಮರಾಠಿಗರು ನೆಮ್ಮದಿಯಿಂದ ಇದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ. ಯಾರ ಮಧ್ಯಪ್ರವೇಶದ ಅಗತ್ಯವೂ ಇಲ್ಲ. ಸುಪ್ರೀಂ ಕೋರ್ಟ್​ನಲ್ಲಿ ನಮಗೆ ನ್ಯಾಯ ಸಿಗುತ್ತದೆ. ಕರ್ನಾಟಕದ ಒಂದಿಂಚು ಭೂಮಿ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ. ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ.
|ಪ್ರಲ್ಹಾದ ಜೋಶಿಕೇಂದ್ರ ಸಚಿವ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ನ. 30ರಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ಕೋರ್ಟ್​ನಲ್ಲಿ ನಮ್ಮ ವಾದ, ತಂತ್ರಗಳು ಮತ್ತು ಕ್ರಮಗಳ ಬಗ್ಗೆ ರ್ಚಚಿಸಲಾಗಿದೆ.
|ಬಸವರಾಜ ಬೊಮ್ಮಾಯಿಸಿಎಂ
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಈಗಾಗಲೆ ಇತ್ಯರ್ಥವಾಗಿದ್ದು ಮಹಾಜನ್ ಆಯೋಗದ ವರದಿಯೇ ಅಂತಿಮ. ಮಹಾರಾಷ್ಟ್ರದ ಪುಂಡಾಟಿಕೆಗಳಿಗೆ ರಾಜ್ಯ ಸರ್ಕಾರ ತಕ್ಕ ಉತ್ತರ ಕೊಡಬೇಕು.
|ಸಿದ್ದರಾಮಯ್ಯವಿಪಕ್ಷ ನಾಯಕ
ದಕ್ಷಿಣ ಸೊಲ್ಲಾಪುರ, ಅಕ್ಕಲಕೋಟ ತಾಲೂಕಿನ 40ಕ್ಕೂ ಹೆಚ್ಚಿನ ಹಳ್ಳಿ ಜನರು ಮೊದಲಿನಿಂದಲೂ ಕರ್ನಾಟಕದತ್ತ ಒಲವು ಹೊಂದಿದ್ದಾರೆ. ಅವರೆಲ್ಲ ಇಂತಹ ನಿರ್ಧಾರ ಕೈಗೊಂಡು ಸೊಲ್ಲಾಪುರ ಡಿಸಿಗೆ ಬುಧವಾರ ಇಲ್ಲವೆ ಗುರುವಾರ ಮನವಿ ಸಲ್ಲಿಸಲಿದ್ದಾರೆ.
|ಸೋಮಶೇಖರ ಜಮಶೆಟ್ಟಿಕಸಾಪ ಮಹಾರಾಷ್ಟ್ರ ಘಟಕ ಅಧ್ಯಕ್ಷ
ಗಡಿ ವಿವಾದ ಸೌಹಾರ್ದವಾಗಿ ಬಗೆಹರಿಯಬೇಕು. ಕನ್ನಡ-ಮರಾಠಿ ಭಾಷಾ ಬಾಂಧವ್ಯ ಹಳೆಯದು. ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಜಂಟಿ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ಮಹಾ ಸಿಎಂ ಕಳೆದ ಎಂಟು ದಿನಗಳಲ್ಲಿ ಎರಡು ಸಲ ಸಭೆ ನಡೆಸಿ ಮರಾಠಿಗರ ಸಮಸ್ಯೆ ಆಲಿಸಿದ್ದಾರೆ. ಅದರಂತೆ ಕರ್ನಾಟಕ ಸಿಎಂ ಬೇಗ ಮಹಾ ಕನ್ನಡಿಗರ ಜತೆ ಸಭೆ ನಡೆಸಲು ಮುಂದಾಗಬೇಕು.
|ಮಲಿಕ್ ಜಾನ್ ಶೇಖ್ಅಧ್ಯಕ್ಷ, ಆದರ್ಶ ಕನ್ನಡ ಬಳಗ ಸೊಲ್ಲಾಪುರ
ವಿಠ್ಠಲನ ನೆಲದಲ್ಲೂ ಕನ್ನಡ ಡಿಂಡಿಮ:ಮೊದಲಿನಿಂದಲೂ ಮಹಾರಾಷ್ಟ್ರದವರು ಕನ್ನಡಿ ವಿಠ್ಠಲ (ಕನ್ನಡಿಗ ವಿಠ್ಠಲ) ಅನ್ನುತ್ತಲೇ ಬಂದಿದ್ದಾರೆ. ಗಡಿ ವಿವಾದ ಸಮಯದಲ್ಲೇ ಮಹಾ ಸರ್ಕಾರ ಪಂಢರಾಪುರ ಅಭಿವೃದ್ಧಿಗಾಗಿ ಕೈಗೆತ್ತಿಕೊಂಡಿರುವ ಕಾರಿಡಾರ್ ಯೋಜನೆಗಾಗಿ ವಿಠ್ಠಲ ದೇವಸ್ಥಾನ ಪರಿಸರದಲ್ಲಿರುವ ಅಂಗಡಿ ಮತ್ತು ಮನೆ ತೆರವುಗೊಳಿಸುವ ಕೆಲಸ ಆರಂಭಿಸಿರುವುದು ಸ್ಥಳೀಯರನ್ನು ಕೆರಳಿಸಿದೆ. ಅದರ ಪರಿಣಾಮ ಪಂಢರಾಪುರದಲ್ಲೂ ಕರ್ನಾಟಕ ಸೇರುವ ಕೂಗು ಬಲಗೊಂಡಿದೆ. ಕಾರಿಡಾರ್ ಯೋಜನೆಗೆ ತಕರಾರಿಲ್ಲ, ಆದರೆ ಅಲ್ಲಿದ್ದವರಿಗೆ ಪುನರ್ವಸತಿ ಕಲ್ಪಿಸಿ ಕಾಮಗಾರಿ ಆರಂಭಿಸಿ ಎಂದು ಆಗ್ರಹಿಸಿ ಪಂಢರಾಪುರ ತೀರ್ಥಕ್ಷೇತ್ರ ಬಚಾವೋ ಹೋರಾಟ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಹಾರಾಜ, ಮುಖಂಡ ಆದಿತ್ಯ ಫತ್ತೇಪುರಕರ್ ಅವರು ವಿಠ್ಠಲ ಕನ್ನಡಿಗ ಎಂಬ ಉಲ್ಲೇಖವಿದೆ ಎಂದಿದ್ದಾರೆ. ಮಹಾರಾಷ್ಟ್ರ ಸರ್ಕಾರ ನಮಗೆ ಅನ್ಯಾಯ ಮಾಡಿದರೆ ಕರ್ನಾಟಕ ಸೇರುತ್ತೇವೆ. ಅಲ್ಲದೆ ಮುಂಬರುವ ಆಷಾಢ ಮಾಸದಲ್ಲಿ ಜರುಗುವ ಉತ್ಸವಕ್ಕೆ ಕರ್ನಾಟಕ ಸಿಎಂಗೆ ಆಹ್ವಾನಿಸುತ್ತೇವೆ ಎಂದು ಗುಡುಗಿದ್ದಾರೆ.
ಉಮರಾಣಿ, ಸಿದ್ಧನಾಥದಲ್ಲೂ ಉತ್ಸುಕ:ಮಹಾರಾಷ್ಟ್ರದ ಜತ್ತ ತಾಲೂಕಿನ ಉಮರಾಣಿ ಹಾಗೂ ಸಿದ್ಧನಾಥ ಗ್ರಾಮಗಳಲ್ಲೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಲ್ಲಿನ ಗ್ರಾಮಸ್ಥರು ಕಹಳೆ ಮೊಳಗಿಸಿದ್ದು, ‘ಮೂಲ ಸೌಕರ್ಯ ಕೊಡಿ ಇಲ್ಲವೇ ಕರ್ನಾಟಕಕ್ಕೆ ಬಿಟ್ಟು ಬಿಡಿ’ ಎಂದು ಹೇಳುತ್ತಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಗಡಿ ಕನ್ನಡಿಗರ ಬಗ್ಗೆ ತೋರಿರುವ ಕಾಳಜಿ ಸ್ವಾಗತಾರ್ಹ. ದಶಕಗಳಿಂದ ಈ ಭಾಗದ ಜನರು ಬಳಲುತ್ತಿದ್ದರೂ ಆ ಬಗ್ಗೆ ಕನಿಷ್ಠ ಸೌಜನ್ಯವನ್ನೂ ತೋರದ ಮಹಾರಾಷ್ಟ್ರ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕರ್ನಾಟಕ ರಾಜ್ಯಕ್ಕೆ ಸೇರ್ಪಡೆಗೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಉಮರಾಣಿ ಗ್ರಾಮ ಸರಪಂಚ ವಿಜಯನಾಮ ಹೇಳಿದ್ದಾರೆ. ಇನ್ನು ಸಿದ್ಧನಾಥ ಗ್ರಾಮದಲ್ಲಿ ಸೋಮವಾರ ಗಡಿಕನ್ನಡಿಗರ ಹೋರಾಟ ಸಂಘ ಮತ್ತು ಕನ್ನಡ ಪರ ಸಂಘಟಕರು ಪೂರ್ವಭಾವಿ ಸಭೆ ನಡೆಸಿದ್ದು, ಮುಂದಿನ ಹೋರಾಟದ ಬಗ್ಗೆ ಕೂಲಂಕಷವಾಗಿ ರ್ಚಚಿಸಿದ್ದಾರೆ. ಈಗಾಗಲೆ ಜತ್ತ ತಾಲೂಕಿನ ವಿವಿಧೆಡೆ ಕನ್ನಡಿಗರ ಹೋರಾಟ ಚುರುಕುಗೊಂಡಿದ್ದು, ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಮಾತ್ರವಲ್ಲ, ಎಲ್ಲೆಲ್ಲೂ ಕನ್ನಡ ಭುವನೇಶ್ವರಿಯ ಫೋಟೊ ಕಂಗೊಳಿಸುತ್ತಿವೆ.
ಮಗಳ ಮದುವೆಗೆ ಕೆಲವು ಗಂಟೆಗಳು ಬಾಕಿ ಇರುವಾಗ ನೇಣು ಹಾಕಿಕೊಂಡ ತಂದೆ; ಮದ್ಯಪಾನ ಮಾಡಿದ್ದಕ್ಕೆ ಬೈದಿದ್ದೇ ಕಾರಣ?

ರಾಜ್ಯದಲ್ಲಿ ಒಂದೇ ದಿನ 108 ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ನಿಮ್ಮೂರಿಗೆ ಯಾರು ಇನ್​ಸ್ಪೆಕ್ಟರ್? ಇಲ್ಲಿದೆ ಪೂರ್ತಿ ಪಟ್ಟಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
