ಬೆಂಗಳೂರು:ರಾಜ್ಯದಲ್ಲಿ ಕೋವಿಡ್ 3ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಕೇವಲ 17 ದಿನಗಳಲ್ಲಿ (ಜ.1ರಿಂದ ಜ.17ರವರೆಗೆ) 43,463 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಇದರೊಂದಿಗೆ ಮಕ್ಕಳಲ್ಲಿ ಸೋಂಕು ಪ್ರಮಾಣ ದರ ಶೇ.5.69 ಆಗಿದೆ. ಸೋಂಕು ಉಲ್ಬಣಿಸಿದ ಬೆನ್ನಲ್ಲೆ ಸರ್ಕಾರ ಬೆಂಗಳೂರು ನಗರ ಸೇರಿ ಕೆಲ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಿಸಿ ಆನ್​ಲೈನ್ ತರಗತಿ ನಡೆಸಲು ಸೂಚಿಸಿದೆ. ಆದಾಗಿಯೂ ಕೇವಲ 17 ದಿನಗಳಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಮಕ್ಕಳು ಸೋಂಕಿಗೆ ಒಳಗಾಗಿರುವುದು ಪಾಲಕರು ಆತಂಕ ಸೃಷ್ಟಿಸಿದೆ.
ಸದ್ಯ ರಾಜ್ಯದಲ್ಲಿ ಕೇವಲ 15-18 ವರ್ಷದ ಮಕ್ಕಳಿಗೆ ಮಾತ್ರವೇ ಕೋವಿಡ್ ಲಸಿಕೆ ಮೊಡಲ ಡೋಸ್ ನೀಡಲಾಗುತ್ತಿದ್ದು, ಈ ವಯೋಮಾನದ ಇನ್ನೂ 10 ಲಕ್ಷ ಮಕ್ಕಳು ಲಸಿಕೆ ಪಡೆಯಬೇಕಿದೆ. ಇವರ ಹೊರತಾಗಿ 0-14 ವರ್ಷದ ಮಕ್ಕಳಿಗೆ ಇನ್ನೂ ಲಸಿಕೆಗೆ ಅವಕಾಶ ದೊರೆತಿಲ್ಲ. ಹೀಗಿರುವಾಗ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಪಾಲಕರು ಕಂಗಾಲಾಗಿದ್ದಾರೆ.
ಮಕ್ಕಳ ಚಿಕಿತ್ಸೆಗೆ ಸಜ್ಜಾಗಿವೆ ಆಸ್ಪತ್ರೆಗಳು:ಲಸಿಕೆ ಪಡೆಯದ ಕಾರಣ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ತಜ್ಞರು ಈ ಮೊದಲೇ ಅಂದಾಜಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ ಈಗಾಗಲೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆಗಳಲ್ಲಿ ಸೋಂಕಿತ ಮಕ್ಕಳ ಚಿಕಿತ್ಸೆಗೆ ಹಾಸಿಗೆಗಳನ್ನು ಮೀಸಲಿರಿಸಿದೆ. ಇದರ ಹೊರತಾಗಿ ಜಿಲ್ಲಾಸ್ಪತ್ರೆಗಳಲ್ಲಿ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
2ನೇ ಅಲೆಗಿಂತ ಕಡಿಮೆ ಸೋಂಕು:3ನೇ ಅಲೆಯಲ್ಲಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಆದರೆ ಎರಡನೇ ಅಲೆಗೆ ಹೋಲಿಸಿದರೆ ಈ ಪ್ರಮಾಣ ಕಡಿಮೆ ಇದೆ. ಈ ಕುರಿತು ಕೋವಿಡ್ ವಾರ್ ರೂಂ ನಡೆಸಿರುವ ವಿಶ್ಲೇಷಣೆಯಲ್ಲಿ 2ನೇ ಅಲೆ ಉತ್ತುಂಗಕ್ಕೇರಿದ್ದ ವೇಳೆ ಅಂದರೆ ಕಳೆದ ಮೇ (31 ದಿನಗಳು)ನಲ್ಲಿ 1.01 ಲಕ್ಷಕ್ಕೂ ಅಧಿಕ ಮಕ್ಕಳು ಸೋಂಕಿಗೆ ಒಳಗಾಗಿದ್ದರು. ಆಗ ಮಕ್ಕಳಲ್ಲಿ ಸೋಂಕು ಪ್ರಮಾಣ ದರ ಶೇ.24.61 ವರದಿಯಾಗಿತ್ತು. 3ನೇ ಅಲೆಯಲ್ಲಿ ಕೇವಲ 17 ದಿನಗಳಲ್ಲಿ 43 ಸಾವಿರ ಕೇಸ್ ವರದಿಯಾಗಿದ್ದು, ತಿಂಗಳು ಪೂರ್ಣಗೊಳ್ಳಲು ಇನ್ನೂ 10 ದಿನ ಬಾಕಿ ಇದ್ದು. ಅಷ್ಟರಲ್ಲಿ ಎಷ್ಟು ಪ್ರಕರಣ ವರದಿಯಾಗುತ್ತವೆ ಎಂಬುದನ್ನು ಕಾದುನೋಡಬೇಕಿದೆ.
ವಯಸ್ಕರಲ್ಲಿ ಹೆಚ್ಚಿದ ಸೋಂಕು:ಮಕ್ಕಳು ಹಾಗೂ ವೃದ್ಧರನ್ನು ಪರಿಗಣಿಸಿದರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗುತ್ತಿರುವವರು ವಯಸ್ಕರು ಹಾಗೂ ಮಧ್ಯ ವಯಸ್ಸಿನವರಾಗಿದ್ದಾರೆ. ರಾಜ್ಯದಲ್ಲಿ ಕಳೆದ 17 ದಿನಗಳಲ್ಲಿ 19 ವರ್ಷ ಮೇಲ್ಪಟ್ಟ 2.83 ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಇದರೊಂದಿಗೆ ಸೋಂಕು ಪ್ರಮಾಣ ದರ ಶೇ.13.31 ತಲುಪಿದೆ. ಆದರೆ 2ನೇ ಅಲೆಯಲ್ಲಿ (ಮೇ ತಿಂಗಳಲ್ಲಿ) 9.47 ಲಕ್ಷಕ್ಕೂ ಅಧಿಕ ಮಂದಿ ( ಶೇ. 26.68)ಸೋಂಕಿತರಾಗಿದ್ದರು.
ರಾಜ್ಯದಲ್ಲಿ ಬುಧವಾರ ಒಂದೇ ದಿನ 23,209 ಮಂದಿ ಕರೊನಾ ಸೋಂಕಿತರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಗುಣಮುಖರ ಒಟ್ಟು ಸಂಖ್ಯೆ 30 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 40,499 ಮಂದಿಗೆ ಸೋಂಕು ದೃಢಪಟ್ಟಿದೆ. 21 ಸೋಂಕಿತರು ಸಾವಿಗೀಡಾಗಿದ್ದು, ಮೃತರ ಒಟ್ಟು ಸಂಖ್ಯೆ 38,486ಕ್ಕೆ ಏರಿಕೆಯಾಗಿದೆ. ಸೋಂಕಿತರ ಒಟ್ಟು ಸಂಖ್ಯೆ 33.29 ಲಕ್ಷ ಮೀರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2.67 ಲಕ್ಷ ಇದೆ. ಬೆಂಗಳೂರು ನಗರದಲ್ಲಿ 24,135 ಮಂದಿಗೆ ಸೋಂಕು ತಗುಲಿದೆ. ತುಮಕೂರು 1,804, ಹಾಸನ 1,785, ಮೈಸೂರು 1,341, ಮಂಡ್ಯ 1,340, ದಕ್ಷಿಣ ಕನ್ನಡ 983 ಸೇರಿ ಎಲ್ಲ ಜಿಲ್ಲೆಗಳಲ್ಲೂ ಸೋಂಕು ಪ್ರಕರಣ ವರದಿಯಾಗಿವೆ.
ರ್ಯಾಪಿಡ್ ಆಂಟಿಜನ್ ಟೆಸ್ಟ್​ಗೆ ಸೂಚನೆ:ಕೋವಿಡ್ ಸೋಂಕು ಲಕ್ಷಣಗಳನ್ನು ಹೊಂದಿರುವವರಿಗೆ ಕಡ್ಡಾಯವಾಗಿ ರ್ಯಾಪಿಡ್ ಆಂಟಿಜನ್ ಪರೀಕ್ಷೆ ನಡೆಸುವಂತೆ ಸೂಚಿಸಿರುವ ಆರೋಗ್ಯ ಇಲಾಖೆ ಪರೀಕ್ಷೆ, ಐಸೋಲೇಷನ್ ಹಾಗೂ ಕ್ವಾರಂಟೇನ್ ಕುರಿತು ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಒಂದು ವೇಳೆ ವರದಿ ನೆಗೆಟಿವ್ ಬಂದರೆ ಆರ್​ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ಇನ್ನು ಸೋಂಕಿತ ಕರ್ತವ್ಯ ನಿರ್ವಹಿಸುವ ಸ್ಥಳ ಮತ್ತು ವಾಸಿಸುವ ಮನೆ ಸೇರಿ ಎಲ್ಲ ಪ್ರಾಥಮಿಕ ಸಂರ್ಪತರು, ಸೋಂಕಿನ ಲಕ್ಷಣ ಹೊಂದಿರುವವರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಕಡ್ಡಾಯ ಪರೀಕ್ಷಿಸಬೇಕು. ಸೋಂಕಿತರ ಹೈರಿಸ್ಕ್ ಸಂರ್ಪತರು ಅಂದರೆ, ಆರೋಗ್ಯ ಸಮಸ್ಯೆಯುಳ್ಳವರು, 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ 7 ದಿನ ಹೋಂ ಕ್ವಾರಂಟೈನ್​ನಲ್ಲಿರಬೇಕು ಎಂದು ಸೂಚಿಸಲಾಗಿದೆ.
ಮುಖ್ಯಮಂತ್ರಿ ಕಾರ್ಯತತ್ಪರ:ಸೋಂಕು ಮುಕ್ತರಾಗುವ ಜತೆಗೆ ನಿಗದಿತ ಕ್ವಾರಂಟೈನ್ ಅವಧಿ ಮುಗಿದ ಕಾರಣ ಬುಧವಾರದಿಂದ ಸಿಎಂ ಕಾರ್ಯತತ್ಪರರಾಗಿದ್ದು, ಗೃಹ ಕಚೇರಿ ಕೃಷ್ಣಾದಿಂದ ಕೆಲಸ ಕಾರ್ಯ ನಿರ್ವಹಿಸುವುದಾಗಿ ಬೊಮ್ಮಾಯಿ ತಿಳಿಸಿದರು. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದಿದ್ದು, ಕರೊನಾ ಮರುಪರೀಕ್ಷೆ ವರದಿಯಲ್ಲಿ ನೆಗೆಟಿವ್ ಫಲಿತಾಂಶ ಲಭ್ಯವಾಗಿ ಬೊಮ್ಮಾಯಿ ಸೋಂಕು ಮುಕ್ತರಾಗಿರುವುದು ಖಚಿತಪಟ್ಟಿದೆ. 10 ದಿನಗಳ ಕ್ವಾರಂಟೈನ್ ಮುಗಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಭೇಟಿಯಾಗಿ 20 ನಿಮಿಷಗಳ ಮಾತುಕತೆ ನಡೆಸಿದ್ದಾರೆ. ಸೋಂಕಿನಿಂದ ಗುಣಮುಖ, ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದಂತೆ ಎಂದಿನಂತೆ ಕೆಲಸದಲ್ಲಿ ತೊಡಗಿರುವ ಬೊಮ್ಮಾಯಿ, ಮಧ್ಯಾಹ್ನ ‘ಕಾವೇರಿ’ ನಿವಾಸಕ್ಕೆ ಧಾವಿಸಿ ಯಡಿಯೂರಪ್ಪ ಅವರೊಂದಿಗೆ ವಿಚಾರ ವಿನಿಮಯ ನಡೆಸಿದರು. ಬಿಎಸ್​ವೈ ಜತೆಗೆ ಮುಖತಃ ಮಾತನಾಡದೆ ಬಹಳ ದಿನಗಳಾಗಿದ್ದವು. ಇದೊಂದು ಸೌಜನ್ಯದ ಭೇಟಿಯಾಗಿದ್ದು, ಮಾತುಕತೆ ವೇಳೆ ಆಡಳಿತ, ಅಭಿವೃದ್ಧಿ, ರಾಜಕೀಯ ವಿಚಾರಗಳು ಪ್ರಸ್ತಾಪವಾದವು ಎಂದು ಹೇಳಲಾಗಿದೆ.
ಅಶೋಕ್ ನಿವಾಸದಲ್ಲಿ ಭೋಜನ:ರೇಸ್​ಕೋರ್ಸ್ ರಸ್ತೆಯಲ್ಲಿರುವ ಅಪಾರ್ಟ್​ವೆುಂಟ್​ವೊಂದರ ಕಂದಾಯ ಸಚಿವ ಆರ್.ಅಶೋಕ್ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಮಧ್ಯಾಹ್ನದ ಭೋಜನ ಮಾಡಿದ್ದು, ಔಪಚಾರಿಕ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಸೋಂಕು 41 ಸಾವಿರದ ಗಡಿ ದಾಟಿ ಹೋಗಿರುವುದು ಎಚ್ಚರಿಕೆಯ ಸಂದೇಶ. ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ ಸರ್ಕಾರ ಇನ್ನೂ ನೈಟ್ ಕರ್ಪ್ಯೂ, ವೀಕೆಂಡ್ ಕರ್ಫ್ಯೂ ಬಗ್ಗೆ ಗೊಂದಲದಲ್ಲಿ ಸಿಲುಕಿರುವುದು ವಿಷಾದದ ಸಂಗತಿ.
|ಎಚ್.ಡಿ.ಕುಮಾರಸ್ವಾಮಿಮಾಜಿ ಸಿಎಂ
ಕೋವಿಡ್ ದೃಢಪಟ್ಟು ಮನೆ ಆರೈಕೆಯಲ್ಲಿರುವವರು ಸೋಂಕು ಲಕ್ಷಣ ಹೊಂದಿಲ್ಲದಿದ್ದರೆ 7 ದಿನಗಳ ಬಳಿಕ ಗುಣಮುಖ ಎಂದು ಪರಿಗಣಿಸಬಹುದಾಗಿದ್ದು, ಅಂತಹವರಿಗೆ ಮತ್ತೊಮ್ಮೆ ಪರೀಕ್ಷೆಗೊಳಗಾಗುವ ಅಗತ್ಯವಿಲ್ಲ ಎಂದು ಸೂಚಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಸೋಂಕಿಗೆ ಒಳಗಾದವರ ಪೈಕಿ ಶೇ.95 ಮಂದಿ ಮನೆ ಆರೈಕೆಯಲ್ಲಿದ್ದು ಏಳು ದಿನಗಳ ನಂತರ ಸೋಂಕು ಲಕ್ಷಣಗಳು ಇಲ್ಲದಿದ್ದರೆ, ದೇಹದ ಉಷ್ಣಾಂಶ ಸಾಮಾನ್ಯವಾಗಿದ್ದು, ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ.94 ಇರಬೇಕು. ಪ್ರತಿ ನಿಮಿಷಕ್ಕೆ ಉಸಿರಾಟ ದರ 24ಕ್ಕಿಂತ ಕಡಿಮೆ ಇದ್ದರೆ ಗುಣಮುಖರು ಎಂದು ಪರಿಗಣಿಸಬೇಕು. ಸಂಬಂಧಪಟ್ಟ ಆರೋಗ್ಯ ಕೇಂದ್ರ ವ್ಯಾಪ್ತಿಯ ವೈದ್ಯರು ಗುಣಮುಖ ಎಂದು ಪ್ರಮಾಣಪತ್ರ ನೀಡಬೇಕು ಎಂದು ಸೂಚಿಸಲಾಗಿದೆ. ಮನೆ ಆರೈಕೆಯಲ್ಲಿರುವವರಿಗೆಂದು ಹೋಂ ಐಸೋಲೇಷನ್ ಕಿಟ್ ನೀಡಲಾಗುತ್ತದೆ. ಜಿಲ್ಲಾಡಳಿತ ಗಳು, ಬಿಬಿಎಂಪಿ ಸೋಂಕಿತರಿಗೆ ಕಿಟ್ ತಲುಪಿಸಲು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದೆ.
ಕರೊನಾ ನಿರೋಧಕ ಲಸಿಕೆ ಎರಡು ಡೋಸ್ ಹಾಕಿಸಿಕೊಂಡವರಿಗೆ ಸೋಂಕು ತಗುಲಿದ್ದರೂ ಅದರ ತೀವ್ರತೆ ಕಡಿಮೆಯಾಗಿದೆ. ಎರಡು ಡೋಸ್ ಹಾಕಿಸಿಕೊಂಡವರು ಸೋಂಕಿಗೆ ಒಳಗಾಗಲ್ಲವೆಂದು ಯಾರೂ ಹೇಳಿಲ್ಲವೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಕರೊನಾ ಮೊದಲ, ಎರಡನೇ ಈಗ ಪ್ರವೇಶಿಸಿರುವ ಮೂರನೇ ಅಲೆಗೂ ಇರುವ ವ್ಯತ್ಯಾಸವೇ ಇದಕ್ಕೆ ನಿದರ್ಶನ. ಎರಡೂ ಅಲೆಗಳಲ್ಲಿ ಸೋಂಕು ತೀವ್ರತೆ, ಪಾಸಿಟಿವಿಟಿ ದರ ಮತ್ತು ಮರಣ ಪ್ರಮಾಣ ಹೆಚ್ಚಿದ್ದವು. ಈಗ ಮರಣ ಪ್ರಮಾಣ ತಗ್ಗಿದ್ದು, ಸೋಂಕಿಗೆ ಒಳಗಾದವರು 4-5 ದಿನಗಳಲ್ಲಿ ಚೇತರಿಸಿಕೊಳ್ಖುತ್ತಿದ್ದಾರೆ. ಇದೊಂದು ಸಮಾಧಾನಕರ ಬೆಳವಣಿಗೆಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಮಕ್ಕಳೇ ಗುರಿ ಸಹಜ:ಲಸಿಕೆ ಹಾಕದ ಕಾರಣಕ್ಕೆ ಈ ಬಾರಿ ಮಕ್ಕಳೇ ಸೋಂಕಿಗೆ ಗುರಿಯಾಗಿರುವುದು ಸಹಜ. ಆದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಸೋಂಕು ಗಂಭೀರ ಸ್ಥಿತಿಗೆ ತಲುಪಿಲ್ಲ ಎನ್ನುವುದು ಗಮನಾರ್ಹ. ಸದ್ಯಕ್ಕೆ ಚಾಲ್ತಿಯಲ್ಲಿರುವ 15-17 ವಯೋಮಿತಿ ಮಕ್ಕಳಿಗೆ ಲಸಿಕೆ ಅಭಿಯಾನದಲ್ಲಿ ಶೇ.68 ಪ್ರಗತಿ ಸಾಧಿಸಲಾಗಿದೆ. ಉಳಿದ ಶೇ.32 ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ವಿತರಿಸಲಾಗುವುದು. ಬೂಸ್ಟರ್ ಡೋಸ್ ಲಸಿಕೆ ವಿತರಣೆ ವೇಗ ಹೆಚ್ಚಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕೋವಿಡ್ ಪರೀಕ್ಷೆಯಲ್ಲಿ ಸುಳ್ಳು ಮಾಹಿತಿ ನೀಡಿದರೆ ಲ್ಯಾಬ್​ಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳ ಲಾಗುವುದು. ವೀಕೆಂಡ್ ಕರ್ಫ್ಯೂ ಸಡಿಲಿಕೆ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ, ಜನರ ಜೀವನ-ಜೀವ ಉಳಿಸಲು ಸರ್ಕಾರ ಬದ್ಧವಾಗಿದೆ.
|ಡಾ.ಕೆ.ಸುಧಾಕರ್ಆರೋಗ್ಯ ಸಚಿವ
ಬೆಂಗಳೂರು: ಕರೊನಾ ಮೂರನೇ ಅಲೆ ಅಬ್ಬರ ಹಾಗೂ ಸೋಂಕು ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ನಿರ್ಬಂಧಗಳನ್ನು ಶುಕ್ರವಾರ ಮರು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು. ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಕರೊನಾ ಮೂರನೇ ಅಲೆಯಲ್ಲಿ ಸೋಂಕು ಸಾಮಾನ್ಯ ಜ್ವರದಂತೆ ಬಂದು ಹೋಗುತ್ತಿದೆ. ನಿಯಮಗಳ ಪಾಲನೆ ಜತೆಗೆ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಸಿಗಬೇಕು ಎನ್ನುವುದು ಜನರ ಭಾವನೆಯಾಗಿದೆ. ಯಾವುದಕ್ಕೂ ತಜ್ಞರು ನೀಡಲಿರುವ ವರದಿಯೇ ಅಂತಿಮ ಆಗಲಿದೆ.ವಸ್ತುಸ್ಥಿತಿ ಪರಾಮಶಿಸಿ ವರದಿ ನೀಡಲು ತಜ್ಞರಿಗೆ ಕೇಳಿದ್ದು, ಶುಕ್ರವಾರದ ಸಭೆಯಲ್ಲಿ ಈ ವರದಿ ಆಧರಿಸಿ ತಜ್ಞರು, ಸಚಿವರು ಹಾಗೂ ಅಧಿಕಾರಿಗಳ ಜತೆಗೆ ರ್ಚಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು. ಬೇರೆ ದೇಶಗಳು ಹಾಗೂ ವಿವಿಧ ರಾಜ್ಯಗಳ ಪರಿಸ್ಥಿತಿ ಅವಲೋಕಿಸಿರುವ ತಜ್ಞರು, ರಾಜ್ಯದಲ್ಲಿ ತಡವಾಗಿ ಮೂರನೇ ಅಲೆ ಪ್ರವೇಶಿರುವ ಕಾರಣ ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಸೋಂಕು ಪ್ರಕರಣಗಳು ಏರುಗತಿ ಕಾಣಬಹುದು ಎಂದು ಅಂದಾಜಿಸಿದ್ದಾರೆ. ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ ಆಸ್ಪತ್ರೆಗಳ ಮೇಲೆ ಒತ್ತಡ ತಗ್ಗಿದೆ. ಹೀಗಾಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಬಲಪಡಿಸಬೇಕು. ಶೇ.95 ಸೋಂಕಿತರು ಮನೆಯಲ್ಲೇ ಪ್ರತ್ಯೇಕವಾಗಿದ್ದಾರೆ. ಅಂತಹವರ ಮೇಲೆ ತೀವ್ರ ನಿಗಾ, ಟೆಲಿ ಟ್ರಯಾ ಜಿಂಗ್ ಮತ್ತು ಔಷಧ ಕಿಟ್​ಗಳ ವಿತರಣೆ ವ್ಯವಸ್ಥೆ ಮಾಡಬೇಕು ಎಂದು ಡಿಸಿ, ಜಿಪಂ ಸಿಇಒ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ತಾರತಮ್ಯವಿಲ್ಲದೆ ಕ್ರಮ:ನಿರ್ಬಂಧ ಉಲ್ಲಂಘಿಸಿದವರ ವಿರುದ್ಧ ದಾವೆ ಹೂಡಬೇಕು ಎಂದು ಕಾಂಗ್ರೆಸ್ ದೂರು ಕೊಡುವ ಅವಶ್ಯಕತೆ ಇಲ್ಲ. ಸರ್ಕಾರವೇ ಸ್ವಯಂಪ್ರೇರಿತರಾಗಿ ಈ ಕ್ರಮ ವಹಿಸುತ್ತಿದ್ದು, ಸಚಿವ-ಶಾಸಕರು, ಪಕ್ಷ, ಸಂಘ-ಸಂಘಟನೆ ಭೇದವಿಲ್ಲದೆ ಮೊಕದ್ದಮೆ ಹೂಡುವುದಕ್ಕೆ ನಿರ್ದೇಶಿಸಿದ್ದು, ಮುಖ್ಯ ಕಾರ್ಯದರ್ಶಿ ಈಗಾಗಲೆ ಆದೇಶ ಹೊರಡಿಸಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಶಾಸಕರು ಸೇರಿ ದಂತೆ ಯಾರ್ಯಾರ ಅಭಿಪ್ರಾಯಗಳು ಏನಿವೆಯೋ ಗೊತ್ತಿಲ್ಲ. ಸಚಿವ ಸಂಪುಟ ಪುನರ್​ರಚನೆ ಬೀದಿಯಲ್ಲಿ ರ್ಚಚಿಸುವ ವಿಷಯವಲ್ಲ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಎರಡೂ ಡೋಸ್ ಲಸಿಕೆ ಪಡೆದಿದ್ರೂ ಇಲ್ಲಿದೆ ಒಂದು ಆತಂಕಕಾರಿ ವಿಷಯ!

ಹೆಣ್ಣೂರಲ್ಲೇ ಹೆಣ್ಣಿಗೆ ಅನ್ಯಾಯ!; ದೂರು ನೀಡಲು ಹೋದರೆ ಲಂಚ ಕೇಳಿದ, ಮಂಚಕ್ಕೂ ಕರೆದ ಪೊಲೀಸ್ ಇನ್​ಸ್ಪೆಕ್ಟರ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + eighteen =
Remember me
