ಆಗ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು 1975ರ ಜೂನ್ 25-26 ರಂದು ದೇಶಾದ್ಯಂತ ತುರ್ತು ಪರಿಸ್ಥಿತಿ ಘೊಷಿಸಿ ಮೊದಲು ಮಾಡಿದ ಕೆಲಸವೆಂದರೆ ಆರ್​ಎಸ್​ಎಸ್ ಚಟುವಟಿಕೆಗಳನ್ನು ನಿಷೇಧಿಸಿ ಕಚೇರಿಗಳ ಮೇಲೆ ದಾಳಿಮಾಡಿ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು, ಸಾವಿರಾರು ಮಂದಿ ನಾಯಕರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದು. ಅದೇ ರೀತಿ ಆರ್​ಎಸ್​ಎಸ್ ರಾಜಕೀಯ ಘಟಕವಾದ ಜನಸಂಘದ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್​ಕೃಷ್ಣ ಅಡ್ವಾಣಿ ಸಹಿತ ನೂರಾರು ಮಂದಿಯನ್ನು ಬಂಧಿಸಿ ಜೈಲಿಗೆ ಹಾಕಲಾಯಿತು.
ತುರ್ತಪರಿಸ್ಥಿತಿ ಘೊಷಣೆಯಾದ ವಾರದಲ್ಲಿಯೇ ಪೊಲೀಸರು ರಾಷ್ಟ್ರೀಯ ಭದ್ರತಾ ಕಾನೂನಿನಡಿಯಲ್ಲಿ ನನ್ನನ್ನು ಬಂಧಿಸಿ ಒಂದುವಾರ ಕಾಲ ಶಿವಮೊಗ್ಗದಲ್ಲಿ ಇರಿಸಿ ನಂತರ ಬಳ್ಳಾರಿ ಜೈಲಿಗೆ ಕಳಿಸಿದರು. ನಾನು ಬಳ್ಳಾರಿ ಜೈಲಿಗೆ ಹೋಗುವ ಮೊದಲು ಹಿರಿಯ ರಾಜಕೀಯ ನಾಯಕರಾದ ಎ.ಕೆ.ಸುಬ್ಬಯ್ಯ ಹಾಗೂ ನಾಗಪ್ಪ ಆಳ್ವ ಅವರು ಬಂಧಿತರಾಗಿದ್ದರು. ಆರಂಭದಲ್ಲಿ ಜೈಲಿನ ಊಟ ತಿನ್ನಲಾರದಷ್ಟು ಕೆಟ್ಟದಾಗಿತ್ತು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದೇ ಕಷ್ಟವಾಯಿತು. ನಂತರದ ದಿನಗಳಲ್ಲಿ, ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಮಂಗಳೂರು ಮತ್ತು ಹುಬ್ಬಳ್ಳಿ ಧಾರವಾಡದಿಂದ 70 ಮಂದಿಯನ್ನು ಬಂಧಿಸಿ ಬಳ್ಳಾರಿ ಜೈಲಿಗೆ ತರಲಾಯಿತು. ಜೈಲಿನಲ್ಲಿ ನಮಗೆ ಕಳಪೆ ಊಟ ನೀಡುವುದನ್ನು ಪ್ರಶ್ನಿಸಿದ ಹಿರಿಯ ನಾಯಕರು ‘ನಮ್ಮ ಪಾಲಿನ ರೇಷನನ್ನು ನಮಗೆ ನೀಡಿ. ನಾವೇ ಅಡುಗೆ ಮಾಡಿಕೊಳ್ಳುತ್ತೇವೆ’ ಎಂಬ ಬೇಡಿಕೆಯಿಟ್ಟಾಗ ಜೈಲಿನ ಅಧಿಕಾರಿಗಳು ಒಪ್ಪಿದರು. ನಂತರ ನಾವು ಸ್ಟೋರ್ ರೂಮಿನಲ್ಲಿ ಅಡುಗೆ ಮಾಡಿಕೊಳ್ಳುವ ಕಾಯಕ ಆರಂಭಿಸಿದೆವು. ಇದರಿಂದ ಗುಣಮಟ್ಟದ ಊಟ ತಿಂಡಿ ಸಿಗುವಂತಾಯಿತು. ಊಟದ ಉಸ್ತುವಾರಿಯನ್ನು ನರಸಿಂಹ ನಾಯಕ ವಹಿಸಿಕೊಂಡು.
ತುರ್ತು ಪರಿಸ್ಥಿತಿಯ ವಿರುದ್ಧ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿನಿತ್ಯ ನಡೆಯುತ್ತಿದ್ದ ಹೋರಾಟ ಮತ್ತು ಸತ್ಯಾಗ್ರಹಗಳಲ್ಲಿ ವಿದ್ಯಾರ್ಥಿ ಪರಿಷತ್ತಿನ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗುತ್ತಿದ್ದರು. ಅವರಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ಬಂಧಿಸಿ ಬಳ್ಳಾರಿ ಜೈಲಿಗೆ ಕಳಿಸಲಾಯಿತು. ಇವರಲ್ಲಿ ಹೆಚ್ಚಿನವರು ಪದವಿ ವಿದ್ಯಾರ್ಥಿಗಳಾಗಿದ್ದರಿಂದ ಅವರಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೆ. ಉಳಿದ ಸಮಯ ಉಪನ್ಯಾಸ, ಅಣಕು ಸಂಸತ್ ಅಧಿವೇಶನ, ಹಿರಿಯ ನಾಯಕರ ಭಾಷಣ ಹಾಗೂ ಓದಿನಲ್ಲಿ ಕಳೆಯುತ್ತಿತ್ತು. ಈ ನಡುವೆ, ಆರ್​ಎಸ್​ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರು ಕೈಬರಹದ ಪತ್ರಿಕೆ ಹೊರತರುತ್ತಿದ್ದರು. ಆ ಪತ್ರಿಕೆಗೂ ಬರೆಯುತ್ತಿದ್ದೆವು.
ಬಳ್ಳಾರಿ ಜೈಲಿನ ಅಧಿಕಾರಿಗಳು ದಿನಬಳಕೆಯ ಟೂತ್​ಪೇಸ್ಟ್, ಸೋಪು, ಎಣ್ಣೆ ನೀಡಿಕೆಯಲ್ಲಿ ತಾರತಮ್ಯ ಮಾಡಿದ್ದರಿಂದ ಒಮ್ಮೆ ಜೈಲಿನ ಸಿಬ್ಬಂದಿ ಮತ್ತು ಬಂಧಿತರ ನಡುವೆ ಘರ್ಷಣೆ ನಡೆದು ಲಾಠಿ ಪ್ರಹಾರದಲ್ಲಿ ಹಲವರು ಗಾಯಗೊಂಡರು. ಇದರಿಂದ ಕೆರಳಿದ ಹಿರಿಯ ನಾಯಕರು ಅಧಿಕಾರಿಗಳೊಂದಿಗೆ ಸಭೆನಡೆಸಿ ಜೈಲಿನಲ್ಲಿ ಪಾರದರ್ಶಕತೆ ತರುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಹಿರಿಯ ಅಧಿಕಾರಿಗಳು ಜೈಲಿನ ಕಾರ್ಯನಿರ್ವಹಣೆಯಲ್ಲಿ ಆಮೂಲಾಗ್ರ ಸುಧಾರಣೆ ತಂದರು.
ನಮ್ಮನ್ನು ಜೈಲಿಗೆ ಹಾಕಿದ್ದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟಿನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ಸಮಯದಲ್ಲಿ ಎರಡು ಬಾರಿ ನಮ್ಮನ್ನು ಬೆಂಗಳೂರಿಗೆ ಕರೆತರಲಾಗಿತ್ತು. ಆ ಸಮಯದಲ್ಲಿ ಒಂದೊಂದು ತಿಂಗಳು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇದ್ದೆವು. ಹಿರಿಯ ನಾಯಕರಾದ ವಾಜಪೇಯಿ, ಅಡ್ವಾಣಿ, ಎಚ್.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ, ಮಧು ದಂಡವತೆ, ಪಿ.ಜಿ.ಆರ್. ಸಿಂಧ್ಯಾ ಸಹಿತ ಹಲವು ನಾಯಕರು ಅಲ್ಲಿ ಇದ್ದರು. ಅಲ್ಲಿ ಒಂದು ತಿಂಗಳ ವಾಸ್ತವ್ಯದ ಅವಧಿಯಲ್ಲಿ ದೇವೇಗೌಡರ ಅಭಿಲಾಷೆಯಂತೆ ಹಿಂದಿ ಕಲಿಸಿದೆ.
ಈ ನಡುವೆ ಸುಪ್ರೀಂ ಕೋರ್ಟ್ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಗೆ ಅವಕಾಶವಿಲ್ಲ ಎಂದು ತೀರ್ಪು ನೀಡಿದ್ದರಿಂದ ನಮ್ಮಲ್ಲಿ ನಿರಾಶೆ ಮತ್ತು ಹತಾಶೆ ಮೂಡಿತು. ಇನ್ನೂ ಎಷ್ಟು ಕಾಲ ಜೈಲಿನಲ್ಲಿ ಇರಬೇಕೋ? ನಮ್ಮನ್ನೇ ನಂಬಿದ ಸಂಸಾರದ ಕಥೆಯೇನು ಎಂಬ ಚಿಂತೆ ಕಾಡತೊಡಗಿತ್ತು. ಏಕೆಂದರೆ ಮನೆಯಲ್ಲಿ ತಾಯಿ, ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳಿದ್ದರು. ಮನೆಗೆ ಆದಾಯದ ಮೂಲ ನಾನೇ ಆಗಿದ್ದರಿಂದ ದಿನ ಕಳೆದಂತೆ ಮನೆಯ ಚಿಂತೆ ನಮ್ಮನ್ನು ಹೈರಾಣುಮಾಡಿತು. ಈ ನಡುವೆ 1977 ಮಾರ್ಚ್​ನಲ್ಲಿ ಚುನಾವಣೆ ಘೊಷಣೆ ಮಾಡಿದ ಸುದ್ದಿ ನಮ್ಮಲ್ಲಿ ಆಶಾಭಾವನೆ ಮೂಡಿಸಿತು. ಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಯಿತು. ಚುನಾವಣೆ ಫಲಿತಾಂಶ ಬಂದಾಗ ಪ್ರಧಾನಮಂತ್ರಿ ಇಂದಿರಾ ಗಾಂಧಿ ಸೋತು ಅವರ ಪಕ್ಷ ಉತ್ತರ ಭಾರತದಲ್ಲಿ ನೆಲಕಚ್ಚಿತು. ನಾವು ಜೈಲಿನಲ್ಲಿಯೇ ಕಾಂಗ್ರೆಸ್ ಸೋಲಿನ ಸಂಭ್ರಮಾಚರಣೆ ಮಾಡಿದೆವು. ತುರ್ತು ಪರಿಸ್ಥಿತಿ ಹೇರಿ ಸ್ವಾತಂತ್ರ್ಯಹರಣ ಮಾಡಿದ್ದಕ್ಕೆ ಜನರು ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದರು. ಚುನಾವಣಾ ಫಲಿತಾಂಶ ಬಂದ ಕೆಲ ದಿನಗಳಲ್ಲಿ ಬಳ್ಳಾರಿ ಜೈಲಿನಿಂದ ನಮ್ಮನ್ನು ಬಿಡುಗಡೆ ಮಾಡಲಾಯಿತು.
ಸಂವಿಧಾನ ಇದೆ ಎಂಬ ಕಾರಣಕ್ಕೆ ಮಾತ್ರ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ರಕ್ಷಣೆಯಾಗುತ್ತದೆ ಎಂಬುದು ತಪ್ಪು ನಂಬಿಕೆಯಾಗುತ್ತದೆಂಬ ಪಾಠವನ್ನು ದೇಶವು ತುರ್ತು ಪರಿಸ್ಥಿತಿಯಿಂದ ಕಲಿತಿದೆ. ದೇಶದ ಅಧಿಕಾರದ ಚುಕ್ಕಾಣಿ ಹಿಡಿವ ನಾಯಕ ಸ್ವಾರ್ಥಿ, ಭ್ರಷ್ಟಾಚಾರಿ ಹಾಗೂ ಸರ್ವಾಧಿಕಾರಿ ಮನೋಭಾವದವನಾದರೆ, ಸಂವಿಧಾನದಲ್ಲಿ ನೀಡಿದ ಅಧಿಕಾರಗಳನ್ನೇ ಬಳಸಿಕೊಂಡು ತುರ್ತು ಪರಿಸ್ಥಿತಿ ಹೇರಿ ಜನರ ಸ್ವಾತಂತ್ರ್ಯ ಮೊಟಕುಗೊಳಿಸಿ ಸರ್ವಾಧಿಕಾರಿ ಆಡಳಿತ ನಡೆಸಬಹುದು ಎಂಬುದನ್ನು ಇಂಧಿರಾ ಗಾಂಧಿಯವರು ತೋರಿಸಿಕೊಟ್ಟಿದ್ದಾರೆ. ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿಸ್ವಾತಂತ್ರ್ಯ ಸಹಿತ ಎಲ್ಲಾರೀತಿಯ ಹಕ್ಕು ನೀಡಿದೆ ಎಂದು ಮೈಮರೆತು ಕುಳಿತರೆ ಆಗದು. ಸದಾಕಾಲ ಜಾಗೃತರಾಗಿದ್ದು ದೇಶದ ಸಂವಿಧಾನದ ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ರಾಷ್ಟ್ರೀಯ ಮನೋಭಾವ, ರಾಷ್ಟ್ರನಿಷ್ಠೆ, ಪ್ರಾಮಾಣಿಕತೆ, ಜಾಗೃತಿ, ಸಂಘಟನೆ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯ.
(ಲೇಖಕರು ಹಿರಿಯ ಶಿಕ್ಷಣ ತಜ್ಞ, ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
