ಬೆಂಗಳೂರು: ಕರೊನಾ ಕಾರಣಕ್ಕೆ ದೇಶಾದ್ಯಂತ ಲಾಕ್​ಡೋನ್ ಘೋಷಣೆ ಆದ ಬಳಿಕ ಅತ್ಯಗತ್ಯ ಉತ್ಪನ್ನಗಳ ಉದ್ಯಮ ಹೊರತುಪಡಿಸಿ ಕೃಷಿ, ಕೈಗಾರಿಕಾ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ರಾಜ್ಯ ಸರ್ಕಾರಕ್ಕೆ ಪ್ರತಿನಿತ್ಯ 485 ಕೋಟಿ ರೂ. ನಷ್ಟವಾಗುತ್ತಿರುವ ಅಂದಾಜಿದೆ. ಕರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದು ಲಾಕ್​ಡೌನ್ ಹಿಂಪಡೆದರೂ ಈ ಕ್ಷೇತ್ರದ ಚೇತರಿಕೆಗೆ ತಿಂಗಳುಗಳೇ ಬೇಕೆಂಬುದು ಮತ್ತೊಂದು ವಾದ.
ಸರಕು ಮತ್ತು ಸೇವೆ ರಫ್ತಿನಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿರುವ ಕರ್ನಾಟಕದ ಆಯಾತ ನಿರ್ಯಾತ ಬಹುತೇಕ ಬಂದ್ ಆಗಿದೆ. 2018-19ರಲ್ಲಿ ಕರ್ನಾಟಕ ದಿಂದ 11,654 ಕೋಟಿ ರೂ. ಮೌಲ್ಯದ ಕೃಷಿ ಉತ್ಪನ್ನ ಸೇರಿದಂತೆ ಒಟ್ಟು 6.58 ಲಕ್ಷ ಕೋಟಿ ರೂ. ಮೌಲ್ಯದ ಉತ್ಪನ್ನ ರಫ್ತಾಗಿವೆ. ಒಟ್ಟಾರೆ ರಾಜ್ಯದ ಉತ್ಪನ್ನ, ರಫ್ತು, ತೆರಿಗೆ ಪರಿಗಣಿಸಿದರೆ ಪ್ರತಿನಿತ್ಯ ರಾಜ್ಯದ ಆದಾಯಕ್ಕೆ 485 ಕೋಟಿ ರೂ. ನಷ್ಟವಾಗುತ್ತದೆ ಎಂಬುದು ತಜ್ಞರ ಲೆಕ್ಕಾಚಾರ.
ಕಳೆದ ಬಾರಿಯ ಬಜೆಟ್ ಇನ್ನಿತರ ಅಂಶಗಳನ್ನು ಪರಿಗಣಿಸಿ ಹೇಳುವುದಾದರೆ, ರಾಜ್ಯ ಸರ್ಕಾರಕ್ಕೆ ಪ್ರತಿದಿನ 485 ಕೋಟಿ ರೂ. ನಷ್ಟವಾಗುತ್ತಿದೆ. ರಾಜ್ಯದ ಒಟ್ಟು ಮಾರಾಟ ತೆರಿಗೆ 1.18 ಲಕ್ಷ ಕೋಟಿ ರೂ.ಗಳಾಗಿದೆ. ಅದನ್ನು ನೋಡಿದರೆ ನಿತ್ಯ 326 ಕೋಟಿ ರೂ. ತೆರಿಗೆ ನಷ್ಟ ಆಗುತ್ತಿದೆ. ಜತೆಗೆ ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ಮತ್ತು ಜಿಎಸ್​ಟಿಯಿಂದ 1,118 ಕೋಟಿ ರೂ. ಸಂಗ್ರಹವಾಗುವುದು ನಿಂತಂತಾಗಿದೆ. ಉಳಿದಂತೆ ರಫ್ತಿನಿಂದ ಸಂಗ್ರಹಿಸಲಾಗುತ್ತಿದ್ದ 454 ಕೋಟಿ ರೂ. ಕೂಡ ಬರದಂತಾಗಿದೆ ಎಂದು ಲೆಕ್ಕಪರಿಶೋಧಕ ಎನ್.ನಿತ್ಯಾನಂದಮಾಹಿತಿ ನೀಡಿದ್ದಾರೆ.
ಎಂಎಸ್​ಎಂಇಗೆ ಹೆಚ್ಚು ಸಂಕಷ್ಟ: ಕರ್ನಾಟಕದಲ್ಲಿ ಶೇ.11ಕ್ಕೂ ಹೆಚ್ಚು ನೌಕರಿ ನೀಡಿರುವುದು ಉತ್ಪಾದನಾ ವಲಯ. ಅದರಲ್ಲೂ ಪ್ರಮುಖ ಪಾಲು ಎಂಎಸ್​ಎಂಇಗಳದ್ದೆ. ಇದರಲ್ಲೂ ಸುಮಾರು ಶೇ.10 ಕಟ್ಟಡ ಕಾರ್ವಿುಕರೇ ಇದ್ದಾರೆ. ಲಾಕ್​ಡೌನ್ ಕಾರಣಕ್ಕೆ ಈ ಉದ್ಯಮ ಸಂಪೂರ್ಣ ಸ್ತಬ್ಧವಾಗಿದೆ. ಕರ್ನಾಟಕದಿಂದ ಮುಖ್ಯವಾಗಿ ಸಿದ್ಧ ಉಡುಪು, ಯಂತ್ರೋಪಕರಣಗಳ ಭಾಗಗಳು, ಔಷಧ ಉತ್ಪನ್ನಗಳು, ಗ್ರಾನೈಟ್, ವಿದ್ಯುತ್ ಉಪಕರಣಗಳು, ದಂತ ವೈದ್ಯಕೀಯ ಉಪಕರಣಗಳು, ವೈದ್ಯಕೀಯ ಉಪಕರಣಗಳು, ಪಾಲಿಮರ್ ಉತ್ಪನ್ನಗಳು ವಿದೇಶಗಳಿಗೆ ರಫ್ತಾಗುತ್ತವೆ.
ಕಾಗದ ಉದ್ಯಮಕ್ಕೆ ಹೊಡೆತ: ಆಮದಿನಲ್ಲಿ ಮುಖ್ಯವಾಗಿ ಕಾಗದ ಉದ್ಯಮಕ್ಕೆ ಹೆಚ್ಚು ಹೊಡೆತ ಬಿದ್ದಿದೆ. ಮುದ್ರಣ ಕಾಗದ ಆಮದು ಸಾಧ್ಯವಿಲ್ಲ. ರಾಸಾಯನಿಕಗಳು, ಪ್ಲೇಟ್, ಬಿಡಿ ಭಾಗಗಳು, ಕಂಪ್ಯೂಟರ್ ಬಿಡಿ ಭಾಗಗಳ ಆಮದು ಸ್ಥಗಿತವಾಗಿದೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ(ಎಫ್​ಕೆಸಿಸಿಐ) ಅಧ್ಯಕ್ಷ ಸಿ.ಆರ್. ಜನಾರ್ದನ ಅವರು, ‘ಈಗ ಬಂದರುಗಳು, ವಿಮಾನಯಾನ ಸರಕು ಸಾಗಣೆಯೂ ಬಂದ್ ಆಗಿರುವುದರಿಂದ ಎಲ್ಲ ಆಮದು-ರಫ್ತಿಗೆ ತೊಂದರೆ ಆಗಿದೆ. ಆದರೆ ಲಾಕ್​ಡೌನ್​ನಿಂದಾಗಿ ಅನೇಕ ಉತ್ತಮ ವಿಚಾರಗಳೂ ನಡೆದಿವೆ. ಚೀನಾದ ಹೋಲಿಕೆಯಲ್ಲಿ ಭಾರತದ ನೌಕರರು, ಕಾರ್ವಿುಕರು, ಸಣ್ಣ ಕೈಗಾರಿಕೆಗಳು ಎಷ್ಟು ನಂಬಿಕಸ್ಥರು ಎಂಬುದು ಇಡೀ ವಿಶ್ವಕ್ಕೆ ತಿಳಿಯುತ್ತಿದೆ. ಕಡಿಮೆ ದರದ ಕಾರಣಕ್ಕೆ ಚೀನಾ ಸರಕಿಗೆ ಮುಗಿಬೀಳುತ್ತಿದ್ದ ಅಂತಾರಾಷ್ಟ್ರೀಯ ವ್ಯಾಪಾರ ಜಗತ್ತಿಗೆ ಭಾರತ ನೆಚ್ಚಿನ ತಾಣವಾಗಲಿದೆ. ಏ.14ಕ್ಕೆ ಆಗಲಿ ಅಥವಾ ಮುಂದೆಯೇ ಲಾಕ್​ಡೌನ್ ತೆರವಾಗಲಿ, ನಂತರದ 15 ದಿನದಲ್ಲಿ ಭಾರತದ ಕೈಗಾರಿಕಾ ಕ್ಷೇತ್ರ ಸಾಮಾನ್ಯ ಸ್ಥಿತಿಗೆ ಮರಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಕೃಷಿ ರಫ್ತಿಗೆ ಸಂಕಟ
ಕರ್ನಾಟಕದಲ್ಲಿ ಪ್ರಮುಖವಾಗಿ ಮೈಸೂರು ಹಾಗೂ ಬೆಳಗಾವಿಯಿಂದ ದಾಳಿಂಬೆ ರಫ್ತಾಗುತ್ತದೆ. ಕೊಡಗು, ಹಾಸನ, ಚಿಕ್ಕಮಗಳೂರಿನಿಂದ ಕಾಫಿ, ಚಿಕ್ಕಮಗಳೂರಿನಿಂದ ಕರಿಮೆಣಸು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಫ್ತಾಗುತ್ತದೆ. ಈರುಳ್ಳಿ, ಮೆಣಸಿನಕಾಯಿಯಂತಹ ಅನೇಕ ಉತ್ಪನ್ನಗಳು ದೇಶೀಯ ಮಾರುಕಟ್ಟೆಯನ್ನು ಪ್ರಮುಖವಾಗಿ ಪ್ರಭಾವಿಸುತ್ತವೆ. ಹೆಚ್ಚು ಕಾಲ ಇಡಲು ಸಾಧ್ಯವಾಗದಂತಹ ಈರುಳ್ಳಿ ಮುಂತಾದ ಉತ್ಪನ್ನಗಳನ್ನು ಬೆಳೆದವರಿಗೆ ರಾಜ್ಯದ ಹೊರಗಿನ ಮಾರುಕಟ್ಟೆ ಇಲ್ಲವಾಗಿದೆ.
ಐಟಿಗೂ ಹೊಡೆತ
ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂದೇ ಕರೆಯಲ್ಪಡುವ ಬೆಂಗಳೂರಿನಿಂದ ಅಗಾಧ ಪ್ರಮಾಣದಲ್ಲಿ ಮಾಹಿತಿ ತಂತ್ರಜ್ಞಾನ ರಫ್ತಾಗುತ್ತದೆ. ದೇಶದ ಶೇ.40ಕ್ಕೂ ಹೆಚ್ಚು ಐಟಿ ರಫ್ತು ಕರ್ನಾಟಕದಿಂದ ಆಗುತ್ತದೆ. ಕರ್ನಾಟಕದಿಂದ ವಿವಿಧ ರಾಜ್ಯ ಹಾಗೂ ದೇಶಕ್ಕೆ ಆಗುವ ಒಟ್ಟು ರಫ್ತಿನಲ್ಲಿ ಐಟಿ ಪಾಲು ಶೇ.60ರಷ್ಟಿದೆ. ಲಾಕ್​ಡೌನ್ ಸಮಯದಲ್ಲಿ ಸಾಫ್ಟ್​ವೇರ್ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿವೆ. ಸಾಮಾಜಿಕ ಜಾಲತಾಣ ಆಧರಿತ, ಬಿಪಿಒದಂತಹ ಕಾರ್ಯಗಳಿಗೆ ಮನೆಯಿಂದಲೇ ಕೆಲಸ ಸಾಧ್ಯ. ಆದರೆ ಸಂಶೋಧನೆ ಮತ್ತು ಅಭಿವೃದ್ಧಿಯಂತಹ ಕಾರ್ಯಗಳು ಪೂರ್ಣ ಪ್ರಮಾಣದ ವೇಗದಲ್ಲಿ ನಡೆಯುವುದಿಲ್ಲ. ಪ್ರಮುಖ ಸಾಫ್ಟ್​ವೇರ್ ಕಂಪನಿಗಳಾದ ಟಿಸಿಎಸ್, ಇನ್ಪೋಸಿಸ್, ಎಚ್​ಸಿಎಲ್​ನಂತಹ ಸಂಸ್ಥೆಗಳಿಗೆ ಅಮೆರಿಕ ಹಾಗೂ ಯುರೋಪ್ ದೇಶಗಳೇ ಗ್ರಾಹಕರು. ಆ ದೇಶಗಳಲ್ಲೂ ಕರೊನಾ ಕಾರಣಕ್ಕೆ ತಂತ್ರಜ್ಞಾನದ ಬಳಕೆ ಕಡಿಮೆಯಾಗಿದೆ. ಒಟ್ಟಾರೆ ಕ್ಷೇತ್ರ ಈ ವರ್ಷ ಶೇ.2ರಿಂದ ಶೇ.7ವರೆಗೆ ನಷ್ಟ ಅನುಭವಿಸುವ ಆತಂಕ ಎದುರಾಗಿದೆ. ಕಂಪ್ಯೂಟರ್ ಹಾರ್ಡ್​ವೇರ್ ಉದ್ಯಮವೂ ಸಂಕಷ್ಟ ಎದುರಿಸುತ್ತಿದೆ.
11,654 ಕೋಟಿ  ರೂ. ಮೌಲ್ಯದ ಕೃಷಿ ವಸ್ತು ರಫ್ತು
ಕೃಷಿ ಉತ್ಪನ್ನಗಳ ಪೈಕಿ ಕರ್ನಾಟಕದಿಂದ ಪ್ರಮುಖವಾಗಿ ಕಾಫಿ ಉತ್ಪನ್ನಗಳು, ರೇಷ್ಮೆ ಉತ್ಪನ್ನಗಳು, ಗೋಡಂಬಿ, ಕೃಷಿ ಮತ್ತು ಸಂಸ್ಕರಿತ ಉತ್ಪನ್ನಗಳು, ಸಾಂಬಾರ ಪದಾರ್ಥ, ಬೆಂಗಳೂರು ಗುಲಾಬಿ, ಈರುಳ್ಳಿ, ತೊಂಡೆಕಾಯಿ ರಫ್ತಾಗುತ್ತವೆ.1993-94ರಲ್ಲಿ ವಾರ್ಷಿಕ 496 ಕೋಟಿ ರೂ. ಮೌಲ್ಯದ ಉತ್ಪನ್ನ ರಫ್ತು ಮಾಡುತ್ತಿದ್ದ ಕರ್ನಾಟಕ 2018-19ರಲ್ಲಿ 11,654 ಕೋಟಿ ರೂ. ಮೌಲ್ಯದ ಕೃಷಿ ವಸ್ತು ರಫ್ತು ಮಾಡಿದೆ. ಮುಖ್ಯವಾಗಿ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಮೆಕ್ಸಿಕೊ, ಸಿಂಗಾಪುರ, ಶ್ರೀಲಂಕಾ, ಟರ್ಕಿ, ಮಧ್ಯಪ್ರಾಚ್ಯ, ಮಲೇಷಿಯಾ, ಮಾರಿಷಸ್, ಬಾಂಗ್ಲಾದೇಶ, ಜಪಾನ್, ಇಂಡೋನೇಷ್ಯಾ, ಸ್ಪೇನ್, ಕೆನಡಾ, ಹಾಲೆಂಡ್, ಇಟಲಿ, ಕೊರಿಯಾ, ಬೆಲ್ಜಿಯಂ, ರಷ್ಯಾ, ಜರ್ಮನಿ, ನ್ಯೂಜಿಲೆಂಡ್, ಇಸ್ರೇಲ್, ಚೀನಾ ಹಾಗೂ ಫ್ರಾನ್ಸ್​ಗೆ ಕೃಷಿ ಉತ್ಪನ್ನಗಳು ರಫ್ತಾಗುತ್ತವೆ.
11,654 ಕೋಟಿ ರೂ. ಮೌಲ್ಯದ ಕೃಷಿ ವಸ್ತು ರಫ್ತು
ಕೃಷಿ ಉತ್ಪನ್ನಗಳ ಪೈಕಿ ಕರ್ನಾಟಕದಿಂದ ಪ್ರಮುಖವಾಗಿ ಕಾಫಿ ಉತ್ಪನ್ನಗಳು, ರೇಷ್ಮೆ ಉತ್ಪನ್ನಗಳು, ಗೋಡಂಬಿ, ಕೃಷಿ ಮತ್ತು ಸಂಸ್ಕರಿತ ಉತ್ಪನ್ನಗಳು, ಸಾಂಬಾರ ಪದಾರ್ಥ, ಬೆಂಗಳೂರು ಗುಲಾಬಿ, ಈರುಳ್ಳಿ, ತೊಂಡೆಕಾಯಿ ರಫ್ತಾಗುತ್ತವೆ.1993-94ರಲ್ಲಿ ವಾರ್ಷಿಕ 496 ಕೋಟಿ ರೂ. ಮೌಲ್ಯದ ಉತ್ಪನ್ನ ರಫ್ತು ಮಾಡುತ್ತಿದ್ದ ಕರ್ನಾಟಕ 2018-19ರಲ್ಲಿ 11,654 ಕೋಟಿ ರೂ. ಮೌಲ್ಯದ ಕೃಷಿ ವಸ್ತು ರಫ್ತು ಮಾಡಿದೆ. ಮುಖ್ಯವಾಗಿ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಮೆಕ್ಸಿಕೊ, ಸಿಂಗಾಪುರ, ಶ್ರೀಲಂಕಾ, ಟರ್ಕಿ, ಮಧ್ಯಪ್ರಾಚ್ಯ, ಮಲೇಷಿಯಾ, ಮಾರಿಷಸ್, ಬಾಂಗ್ಲಾದೇಶ, ಜಪಾನ್, ಇಂಡೋನೇಷ್ಯಾ, ಸ್ಪೇನ್, ಕೆನಡಾ, ಹಾಲೆಂಡ್, ಇಟಲಿ, ಕೊರಿಯಾ, ಬೆಲ್ಜಿಯಂ, ರಷ್ಯಾ, ಜರ್ಮನಿ, ನ್ಯೂಜಿಲೆಂಡ್, ಇಸ್ರೇಲ್, ಚೀನಾ ಹಾಗೂ ಫ್ರಾನ್ಸ್​ಗೆ ಕೃಷಿ ಉತ್ಪನ್ನಗಳು ರಫ್ತಾಗುತ್ತವೆ.
ಭಾರತದಿಂದ ರಫ್ತಾಗುವ ಉತ್ಪನ್ನ ಅಮೆರಿಕ-ಮುತ್ತು, ರತ್ನಗಳು, ನಾಣ್ಯ, ಮೀನು, ಸೀಗಡಿ, ಮೃದ್ವಂಗಿಗಳು, ಸಿದ್ಧ ಉಡುಪು, ಕಬ್ಬಿಣ ಮತ್ತು ಅಲ್ಯುಮಿನಿಯಂ ಉತ್ಪನ್ನಗಳು
ಯುಎಇ- ಅಲ್ಯುಮಿನಿಯಂ ಮತ್ತು ಕಬ್ಬಿಣ ಉತ್ಪನ್ನಗಳು, ಪ್ಲಾಸ್ಟಿಕ್ ಉತ್ಪನ್ನಗಳು, ಹಣ್ಣುಗಳು, ಸಿಟ್ರಸ್ ಹಣ್ಣಿನ ಉತ್ಪನ್ನ, ಮಾಂಸ, ಗಡಿಯಾರಗಳು.
ಚೀನಾ-ಮುತ್ತು, ರತ್ನಗಳು, ನಾಣ್ಯ, ತಾಮ್ರದ ಉತ್ಪನ್ನಗಳು, ಹತ್ತಿ
ಬ್ರಿಟನ್-ರಬ್ಬರ್ ಉತ್ಪನ್ನ, ಪಾದರಕ್ಷೆ, ಆರ್ಗ್ಯಾನಿಕ್
ಕೆಮಿಕಲ್ಸ್, ಖನಿಜ ತೈಲ
ವಿಯೆಟ್ನಾಮ್ ಮೀನು, ಸೀಗಡಿ, ಮೃದ್ವಂಗಿಗಳು, ರಾಸಾಯನಿಕ ಉತ್ಪನ್ನಗಳು, ಔಷಧ ಉತ್ಪನ್ನಗಳು
ಇಟಲಿ- ಅಲ್ಯುಮಿನಿಯಂ ಉತ್ಪನ್ನಗಳು, ಮೀನು, ಸೀಗಡಿ, ಮೃದ್ವಂಗಿಗಳು, ಯಂತ್ರೋಪಕರಣ, ಅಣು ರಿಯಾಕ್ಟರ್​ಗಳು, ಬಾಯ್ಲರ್​ಗಳು
ಈ ಎಲ್ಲವನ್ನು ಸರಿಪಡಿಸಲು ಕನಿಷ್ಠ 6 ತಿಂಗಳು ಬೇಕು. ಸರ್ಕಾರಕ್ಕೆ ಅತಿದೊಡ್ಡ ಸವಾಲು ಲಾಕ್​ಡೌನ್ ಮುಗಿದ ನಂತರ ಶುರುವಾಗಲಿದೆ. ಹಲವು ಕ್ಷೇತ್ರಗಳನ್ನು ಹೊಸದಾಗಿ ಆರಂಭಿಸಬೇಕಾದ ಅವಶ್ಯಕತೆಯಿದೆ. ಪ್ರಮುಖವಾಗಿ ಕೃಷಿ, ಕೈಗಾರಿಕೆ, ರಫ್ತು ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಲಿದೆ. ಅಮೆರಿಕ, ಚೀನಾ, ಜರ್ಮನಿ, ಇಟಲಿಯಂತಹ ದೇಶಗಳಿಂದ ಸದ್ಯಕ್ಕೆ ಯಾವುದೇ ವಸ್ತುಗಳನ್ನು ತರಲಾಗದು. ಅಲ್ಲದೆ, ಐರೋಪ್ಯ ರಾಷ್ಟ್ರಗಳು, ಅಮೆರಿಕಕ್ಕೆ ವಿಮಾನಯಾನ ಮತ್ತು ಜಲ ಸಾರಿಗೆ ವ್ಯವಸ್ಥೆ ಆರಂಭಿಸುವುದಿಲ್ಲ. ಹೀಗಾಗಿ ಕೈಗಾರಿಕೆ, ಕೆಮಿಕಲ್ ಕ್ಷೇತ್ರಗಳಿಗೆ ಬೇಕಾಗುವ ವಸ್ತುಗಳು ಸಮರ್ಪಕವಾಗಿ ಸಿಗದಂತಾಗಲಿದೆ.
| ಎನ್.ನಿತ್ಯಾನಂದ ಲೆಕ್ಕಪರಿಶೋಧಕ
ಕೋವಿಡ್​ 19 ನಿರ್ವಹಣೆಗೆ ಎಲ್ಲ ರಾಜ್ಯಗಳಿಗೆ 11,092 ಕೋಟಿ ರೂ. ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − five =
Remember me
