ಬೆಂಗಳೂರು:ವಸತಿ ಯೋಜನೆಯಡಿ ಪರಿಶಿಷ್ಟ ಜಾತಿಯವರು ಮನೆ ಕಟ್ಟಿಕೊಳ್ಳಲು ನಿಗದಿತ ಮೊತ್ತವನ್ನು 1.75 ಲಕ್ಷ ರೂ.ಗಳಿಂದ ಐದು ಲಕ್ಷ ರೂ.ಗಳಿಗೆ ಏರಿಸಲು ಸಮಾಜ ಕಲ್ಯಾಣ ಇಲಾಖೆ ತೀರ್ಮಾನಿಸಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಇಲಾಖೆ ಅಧಿಕಾರ ಸ್ವೀಕರಿಸಿದ ಬಳಿಕ ನಡೆಸಿದ ಅಧಿಕಾರಿಗಳ ಮೊದಲ ಸಭೆಯಲ್ಲಿ ಮೂರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈ ಪೈಕಿ ಮನೆ ನಿರ್ವಣದ ವೆಚ್ಚ ಪರಿಷ್ಕರಣೆಯೂ ಸೇರಿದೆ. ಎಲ್ಲ ದರಗಳು ಏರಿಕೆಯಾಗಿದ್ದು, 1.75 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಸಿಕೊಳ್ಳಲು ಕಷ್ಟವಾಗಲಿದೆ. ಹೀಗಾಗಿ ನಿಗದಿತ ಮೊತ್ತ ಐದು ಲಕ್ಷ ರೂ.ಗೆ ಹೆಚ್ಚಿಸಲಾಗುವುದು. ಪರಿಷ್ಕೃತ ಮೊತ್ತಕ್ಕೆ ಅನುಮತಿ ಕೋರಿ ಮುಖ್ಯಮಂತ್ರಿ ಹಾಗೂ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಭೆ ಬಳಿಕ ಪೂಜಾರಿ ಸುದ್ದಿಗಾರರಿಗೆ ತಿಳಿಸಿದರು.
ಪರಿಶಿಷ್ಟ ಜಾತಿಯವರು ಶೌಚಗೃಹ ಕಟ್ಟಿಸಿಕೊಳ್ಳಲು ಗ್ರಾಮ ಪಂಚಾಯಿತಿಯಿಂದ ತಲಾ 15,000 ರೂ. ಸಹಾಯಧನ ನೀಡಲಾಗುತ್ತದೆ. ಇದರೊಂದಿಗೆ ಇಲಾಖೆಯಿಂದಲೂ 10,000 ರೂ. ನೆರವು ನೀಡಲು ನಿರ್ಧರಿಸಿದ್ದು, ಈ ಕ್ರಮದಿಂದಾಗಿ ಉತ್ತಮ ಗುಣಮಟ್ಟದ ಶೌಚಗೃಹ ಕಟ್ಟಿಸಿಕೊಳ್ಳಲು ಸಾಧ್ಯ ಎಂದರು.
ಆದ್ಯತಾ ಪಟ್ಟಿ:ಮುಂದಿನ ಒಂದು ವರ್ಷದವರೆಗೆ ಅನಗತ್ಯ ಹಾಗೂ ತುರ್ತ, ಅನಿವಾರ್ಯವಲ್ಲದ ವೆಚ್ಚಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಕುಡಿಯುವ ನೀರು ಪೂರೈಕೆ, ವಿದ್ಯುತ್ ಸೌಲಭ್ಯ ಮತ್ತು ಶಿಕ್ಷಣ ಮೊದಲ ಆದ್ಯತಾ ಪಟ್ಟಿಗೆ ಸೇರಿಸಲಾಗಿದೆ. ಪರಿಶಿಷ್ಟ ಜಾತಿಯವರು ಗೌರವ, ಸ್ವಾಭಿಮಾನ ಹಾಗೂ ಉತ್ತಮ ಗುಣಮಟ್ಟದ ಬದುಕು ಕಟ್ಟಿಕೊಳ್ಳಲು ಹೆಚ್ಚಿನ ಒತ್ತು, ನಿರ್ಲಕ್ಷಿತ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಕಲ್ಪಿಸುವುದು ಸರ್ಕಾರದ ದೃಢ ಸಂಕಲ್ಪವಾಗಿದೆ ಎಂದು ಹೇಳಿದರು.
ಹಕ್ಕುಪತ್ರಕ್ಕಾಗಿ ಸಮೀಕ್ಷೆ: ಬಹು ಕಾಲದಿಂದಲೂ ಖಾಸಗಿ ಜಮೀನಿನಲ್ಲಿ ವಾಸವಿರುವ ಮನೆ, ನಿವೇಶನರಹಿತ ಸಾವಿರಾರು ಎಸ್ಸಿ ಕುಟುಂಬಗಳು ಹಕ್ಕುಪತ್ರಗಳಿಂದ ವಂಚಿತವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಆಯಾ ಜಿಲ್ಲಾಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ, ವಾಸಿಸುವವರಿಗೆ ಹಕ್ಕುಪತ್ರ ನೀಡುವುದಕ್ಕೆ ಅನುಕೂಲವಾಗಲಿದ್ದು, ಇದಕ್ಕಾಗಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಮುಂದಿನ ಸೋಮವಾರ ಇಲಾಖೆ ಅಧಿಕಾರಿಗಳ ಜತೆಗೆ ಮತ್ತೊಮ್ಮೆ ಸಭೆ ನಡೆಸಲಿದ್ದು, ಅದಕ್ಕೂ ಮುನ್ನ ಸಮೀಕ್ಷಾ ವರದಿ ಸಲ್ಲಿಸಲು ತಿಳಿಸಲಾಗಿದೆ. ವರದಿ ಕೈಸೇರಿದ ಬಳಿಕವಷ್ಟೇ ಹಕ್ಕುಪತ್ರ ವಂಚಿತ ಕುಟುಂಬಗಳ ನಿಖರ ಅಂಕಿ-ಅಂಶಗಳು ತಿಳಿಯಲಿವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.
ಜಲಾಶಯಗಳು ಹಾಗೂ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣಗಳು, ನ್ಯಾಯಾಲಯ ನೀಡಿದ ತೀರ್ಪಿನ ಪ್ರಕಾರ ರಾಜ್ಯಕ್ಕೆ ಲಭ್ಯ ನೀರು ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಒತ್ತು ನೀಡಬೇಕು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೂಚಿಸಿದ್ದಾರೆ.
ಕರ್ನಾಟಕ ನೀರಾವರಿ ನಿಗಮದ ಕಚೇರಿಯಲ್ಲಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಮೊದಲ ಸಭೆ ನಡೆಸಿದ ಅವರು, ಪ್ರಗತಿ ಪರಿಶೀಲಿಸಿದರು. ರಾಜ್ಯದಲ್ಲಿ 140 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿಗೆ ಯೋಗ್ಯವಾಗಿದ್ದರೆ, 40.66 ಲಕ್ಷ ಹೆಕ್ಟೇರ್ ಜಮೀನು ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆ ಯೋಜಿತ ನೀರಾವರಿ ಕ್ಷೇತ್ರವಾಗಿದೆ. ಈ ಪೈಕಿ 29.18 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ ಎಂದರು.
ಪ್ರಸಕ್ತ ಆರ್ಥಿಕ ವರ್ಷಕ್ಕೆ ಇಲಾಖೆಗೆ 18,702 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದರಲ್ಲಿ 5,053 ಕೋಟಿ ರೂ. ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಸಕಾಲಕ್ಕೆ ಮುಗಿಸಿದರೆ ನೀರಾವರಿ ಯೋಜನೆಗಳನ್ನು ಸಮರ್ಪಕ, ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಲಿದೆ ಎಂದು ಕಾರಜೋಳ ತಿಳಿಸಿದರು.
ಹೊಂಡ, ಕೆರೆಗಳಿಗೆ ಆದ್ಯತೆ:ಕೆರೆಗಳ ಭರ್ತಿ, ಕೃಷಿ ಹೊಂಡಗಳ ನಿರ್ವಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಸೂಕ್ತ. ಸರ್ಕಾರಕ್ಕೆ ಹೆಚ್ಚಿನ ಹೊರೆ ಬೀಳುವುದಿಲ್ಲ. ನೀರಿನ ಸದ್ಬಳಕೆ ಹಾಗೂ ರೈತರಿಗೆ ಅನುಕೂಲವಾಗಲಿದೆ. ನೀರು ನಿರ್ವಹಣಾ ವೆಚ್ಚ ತಗ್ಗುವ ಜತೆಗೆ ಕೃಷಿ ಯೋಗ್ಯ ಜಮೀನಿನ ಫಲವತ್ತತೆ ಸಂರಕ್ಷಣೆ ಹಾಗೂ ಅಂತರ್ಜಲವೃದ್ಧಿಗೆ ನೆರವಾಗಲಿದೆ ಎಂದು ಸಲಹೆ ನೀಡಿದರು. ಕೃಷಿ ಹೊಂಡಗಳ ಒಳಭಾಗದಲ್ಲಿ ಉತ್ತಮಗುಣಮಟ್ಟದ ಶೀಟ್ ಅಳವಡಿಸುವುದರಿಂದ ನೀರು ಇಂಗುವಿಕೆ ತಪ್ಪಲಿದೆ. ರೈತರ ಜಮೀನಿಗೆ ನೀರುಣ್ಣಿಸಿ, ಅವರ ಬದುಕು ಹಸನಾಗಿಸುವುದು ಇಲಾಖೆ ಗುರಿಯಾಗಿದ್ದು, ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟ ಹಾಗೂ ಕಾಲಮಿತಿ ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯವೆಂದು ಕಾರಜೋಳ ತಿಳಿಸಿದರು.
ಪ್ರಾಮಾಣಿಕ ಹಾಗೂ ದಕ್ಷ ಕೆಲಸಕ್ಕೆ ರಾಜ್ಯ ಪೊಲೀಸ್ ಇಲಾಖೆ ಹೆಸರುವಾಸಿಯಾಗಿದ್ದು, ಇಲಾಖೆಗೆ ಇನ್ನಷ್ಟು ಶಕ್ತಿ ತುಂಬಲು ಕ್ರಮವಹಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ವಿಕಾಸಸೌಧದಲ್ಲಿ ಇಲಾಖೆ ಉನ್ನತಾಧಿಕಾರಿಗಳ ಜತೆ ಸುದೀರ್ಘ ಸಭೆ ನಡೆಸಿ, ವಸ್ತುಸ್ಥಿತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇಲಾಖೆಯಲ್ಲಿನ ನ್ಯೂನತೆ ಸರಿಪಡಿಸಿಕೊಂಡು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕೆ ಹೆಚ್ಚಿನ ಒತ್ತು ನೀಡಲು ಸಲಹೆ ನೀಡಲಾಗಿದೆ. ಯಾರೋ ಕೆಲವು ಅಧಿಕಾರಿಗಳು ಎಸಗುವ ಲೋಪಕ್ಕೆ ಇಡೀ ಇಲಾಖೆಯನ್ನು ಹೊಣೆ ಮಾಡುವುದು ಸರಿಯಲ್ಲ. ಜನರ ಜೀವ, ಆಸ್ತಿಪಾಸ್ತಿ ರಕ್ಷಣೆ ಜತೆಗೆ ನೆಮ್ಮದಿಯ ಜೀವನಕ್ಕೆ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಸಿಎಂ ಜತೆಗೆ ಚರ್ಚೆ: ಇಲಾಖೆ ಬಲವರ್ಧನೆ, ಮೇಲ್ದರ್ಜೆಗೆ ಏರಿಸುವುದು, ಆಧುನಿಕ ತಂತ್ರಜ್ಞಾನ ಬಳಕೆಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಅಧಿಕಾರಿಗಳು ಮುಂದಿಟ್ಟಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ರ್ಚಚಿಸುವೆ. ಇಲಾಖೆಯಲ್ಲಿ ಈ ಹಿಂದೆ 23,000 ಹುದ್ದೆಗಳು ಖಾಲಿ ಇದ್ದವು. ಅದೀಗ 16,000ಕ್ಕೆ ಇಳಿದಿದ್ದು, ಈಗಾಗಲೆ ನೇಮಕ ಆಗಿರುವ 4,000 ಸಿಬ್ಬಂದಿ ಶೀಘ್ರವೇ ಕರ್ತವ್ಯಕ್ಕೆ ಹಾಜರಾಗುವರು. ಅಲ್ಲದೆ, ಬಹುತೇಕ ಸಬ್ ಇನ್ಸೆಪೆಕ್ಟರ್ ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ವಿವರಿಸಿದರು.
ಜೀರೋ ಟ್ರಾಫಿಕ್ ಬೇಡ:ಸುಗಮ ಸಂಚಾರ ಹಾಗೂ ದೈನಂದಿನ ಕರ್ತವ್ಯವನ್ನು ಪೊಲೀಸರು ಸುಸೂತ್ರವಾಗಿ ನಿಭಾಯಿಸುವ ದೃಷ್ಟಿಯಿಂದ ತಮಗೆ ‘ಜೀರೊ ಟ್ರಾಫಿಕ್’ ಒದಗಿಸಿ ಸಂಚಾರಕ್ಕೆ ರಹದಾರಿ ಕಲ್ಪಿಸುವುದು ಬೇಡವೆಂದು ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ. ಇಲಾಖೆ ಉನ್ನತಾಧಿಕಾರಿಗಳ ಸಭೆಯಲ್ಲಿ ಸ್ವಯಂ ಪ್ರೇರಿತವಾಗಿ ಈ ವಿಷಯ ಪ್ರಸ್ತಾಪಿಸಿದ್ದು, ಎಲ್ಲ ಕಾಲಕ್ಕೂ ಈ ವ್ಯವಸ್ಥೆ ಏರ್ಪಾಟು ಮಾಡುವುದು ಸರಿಯಲ್ಲ. ತೀರಾ ಅಗತ್ಯವೆನಿಸಿದರೆ ನಾನೇ ಕೇಳಿ ಪಡೆಯುವುದಾಗಿ ಹೇಳಿದರೆಂದು ಮೂಲಗಳು ಮಾಹಿತಿ ನೀಡಿವೆ. ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗೃಹ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಸಹ ಯಾವುದೇ ವ್ಯವಸ್ಥೆ ಪಡೆದಿರಲಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊನೆಗೂ ಸರ್ಕಾರಿ ನಿವಾಸಕ್ಕೆ ತೆರಳುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಈಗ ಅವರು ಬೆಂಗಳೂರಿನ ಆರ್.ಟಿ.ನಗರದ ಸ್ವಂತ ನಿವಾಸದಲ್ಲಿದ್ದಾರೆ. ಅಲ್ಲಿ ಜನ ಮತ್ತು ವಾಹನ ದಟ್ಟಣೆಯಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ನಿವಾಸಕ್ಕೆ ತೆರಳಲು ತೀರ್ವನಿಸಿದ್ದಾರೆ. ಬೆಂಗಳೂರಿನ ರೇಸ್​ಕೋರ್ಸ್ ರಸ್ತೆಯಲ್ಲಿರುವ ಮೂರು ನಿವಾಸಗಳಲ್ಲಿ ಈಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಥವಾ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಇರುವ ಮನೆಯ ಪೈಕಿ ಒಂದನ್ನು ಮುಖ್ಯಮಂತ್ರಿ ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಅಮಾವಾಸ್ಯೆ ಎಂದರೆ ಸಾಕು ಈ ಮನೆಯವರಿಗೇನೋ ದುಗುಡ; ಮಾಟ-ಮಂತ್ರ ಮಾಡಿಸುತ್ತಿರುವುದ್ಯಾರು ಎಂಬುದಿನ್ನೂ ನಿಗೂಢ..

ನಗರಸಭೆ ಸದಸ್ಯೆ ಮನೆ ಮೇಲೆ ದಾಳಿ, 25ಕ್ಕೂ ಹೆಚ್ಚು ಜನರಿದ್ದ ಪುಂಡರ ತಂಡ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
