ಬೆಂಗಳೂರು:ರಾಜ್ಯ ಸರ್ಕಾರ ವಿಧಾನಪರಿಷತ್​ಗೆ ಐವರನ್ನು ಆಯ್ಕೆ ಮಾಡಿದ್ದು, ಪ್ರತಿ ಆಯ್ಕೆ ಹಿಂದೆಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿಯ ಹಲವು ಲೆಕ್ಕಾಚಾರ ಅಡಗಿದೆ. ಬಿಜೆಪಿ ಪ್ರಬಲಗೊಳಿಸಲು ಸಿ.ಪಿ.ಯೋಗೇಶ್ವರ್​ಗೆ ಸ್ಥಾನ ಕಲ್ಪಿಸಿದರೆ, ಸರ್ಕಾರ ರಚನೆಗೆ ಸಹಕಾರ ನೀಡಿದ್ದಕ್ಕೆ ಅಡಗೂರು ಎಚ್.ವಿಶ್ವನಾಥ್​ಗೆ ಮಣೆ ಹಾಕಲಾಗಿದೆ. ಮಹಿಳಾ ಕೋಟಾ, ಪಕ್ಷ ನಿಷ್ಠೆ ಭಾರತಿ ಶೆಟ್ಟಿ ಅವರಿಗೆ ಅವಕಾಶ ಒದಗಿಸಿದರೆ, ಸಂಘ-ಪರಿವಾರದ ಹಿನ್ನೆಲೆ, ಸಿದ್ದಿ ಸಮುದಾಯ ಪ್ರಾತಿನಿಧ್ಯ ಶಾಂತಾರಾಮ ಸಿದ್ದಿಅವರನ್ನು ಮೇಲ್ಮನೆ ಹತ್ತಿಸಿದೆ. ಇನ್ನು ಶಿಕ್ಷಣ ಕ್ಷೇತ್ರದ ಸಾಧನೆ ಡಾ. ತಳವಾರ ಸಾಬಣ್ಣ ಅವರನ್ನು ಈ ಸ್ಥಾನಕ್ಕೆ ತಲುಪಿಸಿದೆ.
ಅಡಗೂರು ವಿಶ್ವನಾಥ್
ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ ಶಾಸಕರ ಪೈಕಿ ಇವರೂ ಒಬ್ಬರಾಗಿದ್ದರು. ಬಿಜೆಪಿ ಸರ್ಕಾರಕ್ಕೆ ಅಗತ್ಯವಾದಷ್ಟು ಶಾಸಕರ ಕೊರತೆ ಇದ್ದ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಗಟ್ಟಿ ಹೆಜ್ಜೆ ಇಟ್ಟು, ಉಳಿದ ಪಕ್ಷಾಂತರಿಗಳ ಆತ್ಮಸ್ಥೈರ್ಯ ಹೆಚ್ಚಿಸಿದ್ದರು. ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಹಠ ಮಾಡಿ ಕಣಕ್ಕಿಳಿದು ಸೋಲುಂಡರು. ಇನ್ನೇನು ರಾಜಕೀಯ ಕೊನೆಗಾಲ ಎಂಬ ಮಾತಿದ್ದಾಗಲೇ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವನಾಥ್ ಕೈ ಹಿಡಿದಿದ್ದಾರೆ. ವಲಸೆ ಬಂದು ಸಚಿವರಾದವರು ನಿರಂತರವಾಗಿ ಸಿಎಂ ಮೇಲೆ ವಿಶ್ವನಾಥ್ ಪರ ಒತ್ತಡ ತರುತ್ತಿದ್ದರು.
ರಾಜಕೀಯ ಹಾದಿ:ಡಿ.ದೇವರಾಜ ಅರಸು ಪ್ರಭಾವದಿಂದ 1978ರಲ್ಲಿ ಚುನಾವಣಾ ಅಖಾಡ ಪ್ರವೇಶಿಸಿದ ಎಚ್.ವಿಶ್ವನಾಥ್ 10 ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, 4 ನಾಲ್ಕು ಬಾರಿ ಗೆದ್ದಿದ್ದಾರೆ. 1978ರಲ್ಲಿ ಕೆ.ಆರ್.ನಗರ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಗೆಲುವು, 1983, 1985 ನಡೆದ ಎರಡು ಚುನಾವಣೆಯಲ್ಲೂ ನಂಜಪ್ಪ ವಿರುದ್ಧ ಸೋಲುಂಡಿದ್ದಾರೆ. 1989ರಲ್ಲಿ ನಂಜಪ್ಪ ವಿರುದ್ಧ ಗೆದ್ದು ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಚಿವರಾಗಿ ಕನ್ನಡ ಮತ್ತು ಸಂಸ್ಕೃತಿ, ಅರಣ್ಯ ಖಾತೆ ನಿಭಾಯಿಸಿದ್ದರು. 1994ರಲ್ಲಿ ಮತ್ತೆ ಸೋತ ಅವರು, 1999ರಲ್ಲಿ ಗೆದ್ದು ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಸಹಕಾರ, ಶಿಕ್ಷಣ ಸಚಿವರಾಗಿ ಕೆಲಸ ನಿರ್ವಹಿಸಿದರು. 2004ರಲ್ಲಿ ಮಂಚನಹಳ್ಳಿ ಮಹದೇವ್, 2008ರಲ್ಲಿ ಸಾ.ರಾ.ಮಹೇಶ್ ವಿರುದ್ಧ ಸೋಲು ಕಂಡರು. 2009ರಲ್ಲಿ ಮೈಸೂರು-ಕೊಡಗು ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲುಂಡರೆ, 2018ಜೆಡಿಎಸ್​ನಿಂದ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿದರು. ಕುಮಾರಸ್ವಾಮಿ ವಿರುದ್ಧ ಮುನಿದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2019ರಲ್ಲಿ ಬಿಜೆಪಿಯಿಂದ ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಜಿತರಾದರು. ಈಗ ಮೇಲ್ಮನೆಗೆ ಆಯ್ಕೆಯಾಗುವ ಮೂಲಕ ಸಚಿವ ಸ್ಥಾನಾಕಾಂಕ್ಷಿಯಾಗಿದ್ದಾರೆ.
ಬಿಜೆಪಿ ಬಲ ಹೆಚ್ಚಳ
ನಾಮ ನಿರ್ದೇಶಿತ ಐವರು ಸದಸ್ಯರು ಸೇರಿ ವಿಧಾನ ಪರಿಷತ್​ನಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 18ರಿಂದ 27ಕ್ಕೆ ಏರಿಕೆಯಾಗಿದ್ದು, ಮತ್ತಷ್ಟು ಬಲ ವೃದ್ಧಿಯಾಗಿದೆ. 38 ಸ್ಥಾನ ಹೊಂದಿದ್ದ ಕಾಂಗ್ರೆಸ್ ಬಲ 28ಕ್ಕೆ ಕುಗ್ಗಿದೆ. ಜೆಡಿಎಸ್ ಬಲ 17ರಿಂದ 14ಕ್ಕೆ ಇಳಿದಿದೆ. 75 ಸದಸ್ಯರಿರುವ ಮೇಲ್ಮನೆಯಲ್ಲಿ 11 ಕಾಂಗ್ರೆಸ್, ಮೂವರು ಜೆಡಿಎಸ್, ಓರ್ವ ಬಿಜೆಪಿ ಮತ್ತು ಓರ್ವ ಪಕ್ಷೇತರ ಸದಸ್ಯ ಸೇರಿ 16 ಸದಸ್ಯರು ಇತ್ತೀಚೆಗೆ ನಿವೃತ್ತಿಯಾಗಿದ್ದರು.
ಸಿ.ಪಿ.ಯೋಗೇಶ್ವರ್
2018ರ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಜಂಟಿಯಾಗಿ ಸಿ.ಪಿ. ಯೋಗೇಶ್ವರ್ ಅವರನ್ನು ಹಠ ಹಿಡಿದು ಸೋಲಿಸಿದ್ದರು. ಬಳಿಕ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರವೂ ರಚನೆಯಾಯಿತು. ತಮ್ಮ ಸೋಲಿನ ಸೇಡಿಗೆ ಕಾಯುತ್ತಿದ್ದ ಸಿಪಿವೈ ಮೈತ್ರಿ ಸರ್ಕಾರದ ಪತನಕ್ಕೆ 2 ಬಾರಿ ಯತ್ನಿಸಿದ್ದರು. ಜತೆಗೆ ಬಿಜೆಪಿಗೆ ಕೆಲವು ಶಾಸಕರನ್ನು ಕರೆತರಲು ಪ್ರಯತ್ನಿಸಿದ್ದರು. ಇದೀಗ ಪರಿಷತ್ ಅವಕಾಶ ಪಡೆದುಕೊಂಡಿದ್ದಾರೆ. ರಾಜಕೀಯವಾಗಿ ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ಬಿಜೆಪಿಯ ಪ್ರತಿನಿಧಿಯಾಗಿ ಪ್ರಬಲರಾಗಿ ಬೆಳೆಸುವ ಉದ್ದೇಶ ಬಿಜೆಪಿಯದ್ದು.
ರಾಜಕೀಯ ಹಾದಿ: ಸಮಾಜಸೇವೆ ಮೂಲಕ ರಾಜಕೀಯ ಪ್ರವೇಶಿಸಿದ ಸಿ.ಪಿ.ಯೋಗೇಶ್ವರ್, 1999ರಲ್ಲಿ ಮೊದಲ ಬಾರಿಗೆ ಚನ್ನಪಟ್ಟಣ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು. ನೀರಾವರಿ ಯೋಜನೆಗಳ ಮೂಲಕ ಕ್ಷೇತ್ರದಲ್ಲಿ ಮನೆಮಾತಾದ ಅವರು, 2004, 2008ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2008ರಲ್ಲಿ ಬಿಜೆಪಿ ಸೇರಿ 2009 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲುಂಡಿದ್ದರು. ಬಳಿಕ 2011ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಅರಣ್ಯ ಸಚಿವರಾಗಿದ್ದರು. 2013ರಲ್ಲಿ ಬಿಜೆಪಿಗೆ ಗುಡ್​ಬೈ ಹೇಳಿ ಮತ್ತೆ ಕಾಂಗ್ರೆಸ್ ಸೇರ್ಪಡೆ, ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ, ಎಸ್​ಪಿಯಿಂದ ಸ್ಪರ್ಧಿಸಿ ವಿಜೇತರಾಗಿದ್ದರು. 2018ರ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸೋಲುಂಡಿದ್ದರು. ಇದಾದ ನಂತರ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಇದೀಗ ಪರಿಷತ್​ಗೆ ನಾಮ ನಿರ್ದೇಶನಗೊಳ್ಳುವ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.
ಭಾರತಿ ಶೆಟ್ಟಿ
ಒಂದು ಬಾರಿ ಈಗಾಗಲೆ ವಿಧಾನಪರಿಷತ್ ಸದಸ್ಯೆ ಆಗಿದ್ದವರು. ಬಿಎಸ್​ವೈ ನಿಷ್ಠೆ ಅವರಿಗೆ ಅವಕಾಶ ತಂದುಕೊಟ್ಟಿದೆ. ಜತೆಗೆ ಸಂಘ ಪರಿವಾರದಲ್ಲೂ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದಾರೆ. ಶೋಭಾ ಕರಂದ್ಲಾಜೆ ಸಂಸದರಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮಹಿಳಾ ದನಿ ಮಂಕಾಗಿತ್ತು. ಇದೀಗ ಭಾರತಿ ಶೆಟ್ಟಿ ಅವರಿಗೆ ಅವಕಾಶ ಕಲ್ಪಿಸುವ ಮೂಲಕ ಈ ದನಿ ದೊಡ್ಡದು ಮಾಡುವ ಉದ್ದೇಶ ಪಕ್ಷದ್ದು ಮತ್ತು ಬಿಎಸ್​ವೈ ಅವರದ್ದೂ ಆಗಿದೆ.
ರಾಜಕೀಯ ಹಾದಿ:ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ರಾಜಕೀಯ ಛಾಪು ಮೂಡಿಸಿದ ಭಾರತಿ ಶೆಟ್ಟಿ ಎರಡನೇ ಬಾರಿಗೆ ಪರಿಷತ್ ಪ್ರವೇಶಿಸಿದ್ದಾರೆ. ಈ ಹಿಂದೆ 2008ರಿಂದ 2014ರ ಅವಧಿಗೆ ಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದರು. ಭಾರತಿ ಶೆಟ್ಟಿ, ತಂದೆ ಗಣಪ ಶೆಟ್ಟಿ ಆರ್​ಎಸ್​ಎಸ್ ಸ್ವಯಂಸೇವಕರಾಗಿದ್ದರೆ, ತಾಯಿ ಸರಸ್ವತಿ ಶೆಟ್ಟಿ ರಾಷ್ಟ್ರ ಸೇವಿಕಾ ಸಮಿತಿಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದರು. ಕಳೆದ 42 ವರ್ಷಗಳಿಂದ ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದಾರೆ. ಬಿಜೆಪಿ ಸಾಗರ ಮಂಡಲಕ್ಕೆ ಮೂರು ಬಾರಿ ಅಧ್ಯಕ್ಷೆಯಾಗಿದ್ದ ಭಾರತಿ ಶೆಟ್ಟಿ, ರಾಜ್ಯದಲ್ಲೇ ಈ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಜ್ಯಪಾಲರ ಭೇಟಿಮಾಡಿದ ಸಿಎಂ
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬುಧವಾರ ರಾಜ್ಯಪಾಲ ವಿ.ಆರ್.ವಾಲಾರನ್ನು ಭೇಟಿ ಮಾಡಿ ವಿಧಾನ ಪರಿಷತ್ ನಾಮ ನಿರ್ದೇಶನ ಸೇರಿ ವಿವಿಧ ವಿಚಾರಗಳ ಬಗ್ಗೆ ರ್ಚಚಿಸಿದರು. ಕರೋನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಅಧಿವೇಶನ ನಡೆಯದ ಕಾರಣ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಸೇರಿ ಹಲವು ಪ್ರಮುಖ ತಿದ್ದುಪಡಿ ವಿಧೇಯಕಗಳನ್ನು ಕಳಿಸಲಾಗಿತ್ತು. ರಾಜ್ಯಪಾಲರು ಸಹಿಹಾಕಿ ಹಿಂದಿರುಗಿಸಿದ್ದರು. ಈ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಲು ಸಿಎಂ ರಾಜಭವನಕ್ಕೆ ತೆರಳಿದ್ದರು ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ಎರಡು ನಿಮಿಷ ಮಾತ್ರ ಸಿಎಂ ಮತ್ತು ರಾಜ್ಯಪಾಲರ ನಡುವೆ ಚರ್ಚೆ ನಡೆದಿದ್ದು, ಕರೋನಾ ನಿರ್ವಹಣೆ ಕುರಿತಂತೆಯೂ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಬಿಎಸ್​ವೈ ವಿವರಿಸಿದರು ಎನ್ನಲಾಗಿದೆ.
ಡಾ. ತಳವಾರ ಸಾಬಣ್ಣ
ಶೈಕ್ಷಣಿಕ, ಸಾಂಸ್ಕೃತಿಕ, ಸಾಮರಸ್ಯ ಚಟುವಟಿಕೆಯಲ್ಲಿ ತೊಡಗಿಕೊಂಡ ಡಾ.ತಳವಾರ್ ಸಾಬಣ್ಣ ಅವರನ್ನು ಶಿಕ್ಷಣ ಕ್ಷೇತ್ರದಿಂದ ಆಯ್ಕೆ ಮಾಡಿದ್ದು ಪಕ್ಷದ ನಾಯಕರಿಗೂ ಅಚ್ಚರಿ ಎನಿಸಿದೆ. ಕಲಬುರಗಿ ಜಿಲ್ಲೆ ಕೋಲಿ ಸಮಾಜದವರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಲಿ ಸಮಾಜ ಪ್ರಭಾವಿಯಾಗಿದ್ದು ಬಿಜೆಪಿಯ ಬೆನ್ನಿಗೆ ನಿಂತಿರುವುದು ಇತ್ತೀಚಿನ ಚುನಾವಣೆಗಳಲ್ಲಿ ಕಾಣಿಸಿದೆ. ಪಕ್ಷವೂ ಆ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುತ್ತ ಬಂದಿದೆ. ಉತ್ತರ ಕರ್ನಾಟಕ ಭಾಗದ ಸಂಘದ ಪ್ರಮುಖರು ಇವರ ಹೆಸರನ್ನು ಶಿಫಾರಸು ಮಾಡಿದ್ದಾರೆ.
ಹಿನ್ನೆಲೆ:ಅಂಬಿಗರ ಸಮುದಾಯಕ್ಕೆ ಸೇರಿದ ಪ್ರೊ.ಸಾಬಣ್ಣ ತಳವಾರ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ 23 ವರ್ಷಗಳಿಂದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಭಂಕೂರ ಗ್ರಾಮದವರಾಗಿದ್ದು ಅರ್ಥಶಾಸ್ತ್ರ ವಿಷಯದಲ್ಲಿ ಗುಲ್ಬರ್ಗ ವಿವಿಯಿಂದ ಎಂ.ಎ., ಪಿಎಚ್.ಡಿ ಗಳಿಸಿದ್ದಾರೆ. ಅವರ ಪತ್ನಿ ಟಿ.ಹನುಮಕ್ಕ ಬೆಳಗಾವಿ ತಾಲೂಕಿನ ದೇಸೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಾಂತಾರಾಮ ಸಿದ್ದಿ
ಸಿದ್ದಿ ಸಮುದಾಯ ಪಶ್ಚಿಮಘಟ್ಟದ ವನವಾಸಿಗಳು. ಇತ್ತೀಚಿನ ವರ್ಷಗಳಲ್ಲಿ ಹೊರ ಪ್ರಪಂಚಕ್ಕೆ ತೆರೆದುಕೊಳ್ಳುತ್ತಿದೆ. ಕೆಲವೇ ಮಂದಿ ಹೊರ ಪ್ರಪಂಚದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮುದಾಯದವರು ಶಾಸನಸಭೆಯಲ್ಲಿ ಪ್ರತಿನಿಧಿಸಬೇಕೆಂಬ ಆಶಯ ಪಕ್ಷದ್ದು. ಈ ಮೂಲಕ ಪಕ್ಷದ ಇಮೇಜ್ ಹೆಚ್ಚಿಸಿಕೊಳ್ಳುವ ಆಶಯ. ರಾಜ್ಯಸಭೆಗೆ ಅಚ್ಚರಿ ಹೆಸರು ಕಳಿಸಿದಂತೆ ಈಗ ಪರಿಷತ್​ನಲ್ಲೂ ವಿಭಿನ್ನತೆ ಮೆರೆದಿದೆ. ಮೂರು ದಶಕಗಳಿಂದ ಪಶ್ಚಿಮಘಟ್ಟದ ವನವಾಸಿಗಳ ನಡುವೆ ಕೆಲಸ ಮಾಡುತ್ತಿರುವ ಶಾಂತಾರಾಮ ಸಿದ್ದಿ ಸಂಘ-ಪರಿವಾರದ ನೆಚ್ಚಿನ ಹೆಸರು.
ಹಿನ್ನೆಲೆ:ಸಿದ್ದಿ ಸಮುದಾಯದ ಪ್ರಥಮ ಪದವೀಧರ ಶಾಂತಾರಾಮ ಸಿದ್ದಿ. ಅತಿ ಹಿಂದುಳಿದ ಬುಡಕಟ್ಟು ಜನಾಂಗದಿಂದ ಬಂದ ಇವರು, ಸಂಘ ಪರಿವಾರದ ವನವಾಸಿ ಕಲ್ಯಾಣ ಸಂಸ್ಥೆಯ ಮೂಲಕ ರಾಜ್ಯದ ಆರು ಜಿಲ್ಲೆಗಳಲ್ಲಿ ಬುಡಕಟ್ಟು ಜನರಿಗಾಗಿ 8 ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಪ್ರಾಮಾಣಿಕವಾಗಿ ದುಡಿಯುತ್ತಿ ದ್ದಾರೆ. ವನವಾಸಿ ಕಲ್ಯಾಣ ಸಂಘ ಸೇರಿಕೊಂಡು ಚಿಪಗೇರಿಯಲ್ಲಿ 10 ವಿದ್ಯಾರ್ಥಿಗಳ ಮೊದಲ ವಸತಿ ನಿಲಯ ಪ್ರಾರಂಭಿಸಿದೆ. ಇಂದು ವನವಾಸಿ ಕಲ್ಯಾಣ ಸಂಘ ರಾಜ್ಯದ 10 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನುತ್ತಾರೆ ಅವರು. ಪಶ್ಚಿಮ ಘಟ್ಟದ ಕಾಡಿನಲ್ಲೇ ಕಳೆದು ಹೋಗಿರುವ ಸಿದ್ದಿ ಸಮುದಾಯಕ್ಕೆ ಮೊದಲ ಬಾರಿಗೆ ಸರ್ಕಾರದ ಮಟ್ಟದಲ್ಲಿ ದೊಡ್ಡ ಹುದ್ದೆ ಸಿಕ್ಕಿದಂತಾಗಿದೆ.
ದೆಹಲಿ ಮಾಂಸದಡ್ಡೆಯ ಕರಾಳತೆ; 12ರ ಬಾಲೆಗೆ ಡ್ರಗ್ಸ್​ ನೀಡಿ ವೇಶ್ಯಾವಾಟಿಕೆ; 6 ವರ್ಷಗಳ ನರಕದ ಬಳಿಕ ಸಿಕ್ತು ನ್ಯಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + two =
Remember me
